ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಟ್ಟಿಗೆ ಬದುಕೂ ಅರಳುತ್ತಿದೆ...

Last Updated 16 ಮೇ 2017, 19:30 IST
ಅಕ್ಷರ ಗಾತ್ರ
ಒಮ್ಮೆ ಕೆಲವು ನಿಮಿಷಗಳ ಕಾಲ ಸುಮ್ಮನೇ ಕುಳಿತುಕೊಂಡು ಯೋಚಿಸಿ. ಪ್ರತಿದಿನ ನಾವು ಮಾಡಲೇಬೇಕಾದ, ಮಾಡುತ್ತಿರುವ ಕೆಲಸಗಳಲ್ಲಿ ಎಷ್ಟನ್ನು ಖುಷಿಯಿಂದ ಮಾಡುತ್ತೇವೆ. ಪೂರ್ತಿಯಾಗಿ ನಮ್ಮ ಗಮನ, ಸಾಮರ್ಥ್ಯವನ್ನು ಅರ್ಪಿಸಿಕೊಂಡು ಮಾಡುತ್ತೇವೆ?
 
ನಾವು ಯಾವುದೇ ಕೆಲಸ ಮಾಡಿದರೂ ಪ್ರೀತಿಯಿಂದ, ಪೂರ್ತಿ ಏಕಾಗ್ರತೆಯಿಂದ ಮಾಡಬೇಕಲ್ಲವೇ? ಆದರೆ ವಾಸ್ತವ ಹಾಗಿರುವುದಿಲ್ಲ. ಬಹಳ ಸಲ ನಾವು ಮಾಡುವ ಕೆಲಸದ ಗುಣಮಟ್ಟದ ಬಗ್ಗೆ ನಾವು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅವಸರದಲ್ಲಿ ಅಥವಾ ಯಾರದೋ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಹೇಗೋ ಮಾಡಿ ಮುಗಿಸಿಬಿಟ್ಟಿರುತ್ತೇವೆ. 
 
ಹೀಗೆ ಮಾಡುವಾಗೆಲ್ಲ ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿರುತ್ತೇವೆ. ಅಷ್ಟೇ ಅಲ್ಲ, ನಮ್ಮೊಳಗೆ ನಿರಂತರವಾಗಿ ಒತ್ತಡದ ಭಾವವನ್ನು ಶೇಖರಿಸಿಕೊಳ್ಳುತ್ತಾ ಇರುತ್ತೇವೆ. ಈ ಕೆಲಸವನ್ನು ನಾನು ಮಾಡಬಾರದಿತ್ತು ಎಂದುಕೊಳ್ಳುತ್ತಾ ಮಾಡಿದ ಕೆಲಸ ಮುಗಿದುಹೋದರೂ, ಅದರಿಂದ ಅನುಭವಿಸಿದ ಅತೃಪ್ತಿ, ಒತ್ತಡ, ದಣಿವುಗಳು ಹಾಗೆಯೇ ಉಳಿದುಕೊಂಡುಬಿಡುತ್ತವೆ.
 
ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ, ಕಾಳಜಿಯಿಂದ, ಆತ್ಮಸಾಕ್ಷಿಗೆ ಒಪ್ಪುವ ರೀತಿಯಲ್ಲಿ ಮಾಡುವುದು ಅಷ್ಟೊಂದು ಕಷ್ಟದ ಸಂಗತಿಯೇ? ಖಂಡಿತ ಅಲ್ಲ. ನಿಮ್ಮ ಹೃದಯವನ್ನು ನಿರ್ಮಲವಾಗಿರಿಸಿಕೊಳ್ಳಿ, ಆಗ ಅದು ಅಷ್ಟೇ ವಿಶಾಲವೂ ಆಗುತ್ತದೆ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ, ಆಗ ಅದು ತನ್ನ ಹೊಳಪಿನ ಮೂಲಸ್ಥಿತಿಯನ್ನು ಪಡೆದುಕೊಳ್ಳುತ್ತದೆ. ಚೈತನ್ಯದ ಸೆಲೆಗಳನ್ನು ಸದಾ ಜೀವಂತವಾಗಿರಿಸಿಕೊಳ್ಳಿ, ಆಗ ಅವು ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಪ್ರತಿಫಲಿಸುತ್ತವೆ. 
 
ಹಂಚಿದಷ್ಟೂ ದ್ವಿಗುಣವಾಗುವುದು
ನಮ್ಮ ಮನಸ್ಸಿಗೊಂದು ವಿಶಿಷ್ಟ ಗುಣವಿದೆ. ಪ್ರತಿಭೆ, ಸಮಯ, ಹಣ, ಸಾಮರ್ಥ್ಯ, ಶುಭಾಶಯ, ಮಾತು, ವಾತ್ಸಲ್ಯ, ಶಕ್ತಿ, ಅಧಿಕಾರ – ಹೀಗೆ ನಮ್ಮಲ್ಲಿರುವ ಯಾವುದೇ ಸಂಗತಿಗಳನ್ನು ವಿನಯ ಮತ್ತು ಪ್ರಾಮಾಣಿಕತೆಯಿಂದ ಇತರರೊಂದಿಗೆ ಹಂಚಿಕೊಂಡರೂ ಅದು ನಮ್ಮೊಳಗೆ ದ್ವಿಗುಣಗೊಳ್ಳುತ್ತದೆ. ಹಾಗೆಯೇ ನಮ್ಮೊಳಗೆ ನಿರಂತರವಾಗಿ ನುಗ್ಗುತ್ತಿರುವ ನಕಾರಾತ್ಮಕ ಯೋಚನೆಗಳನ್ನು ನಿಯಂತ್ರಿಸಿಕೊಂಡು ಪ್ರತಿದಿನ ಧ್ಯಾನದ ಮೂಲಕ ಪ್ರಕೃತಿಯಲ್ಲಿನ ಮೌನ ಮತ್ತು ಸ್ಥಿರತೆಯನ್ನು ಅನುಭವಿಸಿದಷ್ಟೂ ಮನಸ್ಸಿನ ಹೊಳಪು ಹೆಚ್ಚುತ್ತಾ ಹೋಗುತ್ತದೆ. 
 
ಗುರುಗಳೊಬ್ಬರು ಹೇಳಿದ ಮಾತು ಹೀಗಿದೆ: ‘ಸ್ಥಿತಪ್ರಜ್ಞತೆ ಎಂದರೆ ಬದುಕನ್ನು ಕಳೆದುಕೊಳ್ಳುವುದಲ್ಲ, ಬದಲಿಗೆ ಬದುಕನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು’.
 
ದೈನಂದಿನ ಜಂಜಡಗಳಲ್ಲಿ ತೊಡಗಿಕೊಳ್ಳುತ್ತಲೇ ಇಂಥ ಸ್ಥಿತಪ್ರಜ್ಞ ಸ್ಥಿತಿಯನ್ನು ಗಳಿಸಿಕೊಳ್ಳುವುದು ಹೇಗೆ? ಇದಕ್ಕೆ ಡಾ. ವಾಯ್ನೆ ಡೈಯರ್‌ ‘ನಿಮ್ಮ ಅಹಂಭಾವವನ್ನು ಪಕ್ಕಕ್ಕೆ ಸರಿಸಿದಾಗಲೇ ಬದುಕಿನ ಪಾವಿತ್ರ್ಯ ಗೋಚರಿಸುತ್ತದೆ’ ಎನ್ನುತ್ತಾರೆ. ಎಷ್ಟು ಸರಳವಾಗಿದೆಯಲ್ಲವೇ ಈ ಮಾತು? ಅಷ್ಟೇ ಗಹನವೂ ಆಗಿದೆ. 
 
ಕೆಲಸದಲ್ಲಿ ಪ್ರೀತಿಯಿರಲಿ 
ಯಾವುದೋ ಒಂದು ಕೆಲಸ ಮಾಡಬೇಕಾದಾಗ ನಾವು ಮೊದಲು ಯೋಚಿಸುವುದು ‘ಈ ಕೆಲಸ ನಮ್ಮ ಘನತೆಗೆ ಸರಿಹೊಂದುತ್ತದೆಯೇ?’ ಎಂದು. ಸರಿ ಹೊಂದುವುದಿಲ್ಲ ಎನಿಸಿದ ತಕ್ಷಣ ‘ಇದು ನನ್ನ ಕೆಲಸ ಅಲ್ಲ’ ಎಂದು ಕೈತೊಳೆದುಕೊಂಡುಬಿಡುತ್ತೇವೆ. ಈ ವರ್ತನೆಗೆ ಮುಖ್ಯ ಕಾರಣ ನಮ್ಮ ಅಹಂಭಾವ.
ಇದರ ಬದಲಿಗೆ ‘ನಾನು ಯಾವುದೇ ಕೆಲಸ ಮಾಡಿದರೂ ನನ್ನೆಲ್ಲ ಪ್ರೀತಿ ಮತ್ತು ಪ್ರತಿಭೆಯನ್ನು ಆ ಕೆಲಸಕ್ಕೆ ಧಾರೆ ಎರೆಯುತ್ತೇನೆ’ ಎಂದು ಯೋಚಿಸಿ ನೋಡಿ. ಆ ಕ್ಷಣವೇ ನಮ್ಮ ಮನಸ್ಸು ವಿಶ್ವಾತ್ಮಕತೆಯೊಂದಿಗೆ ಸೇರಿಹೋಗಿರುತ್ತದೆ. ಮರುಕ್ಷಣವೇ ಜಗತ್ತನ್ನೆಲ್ಲ ಆವರಿಸಿದ ಶ್ರೇಷ್ಠ ಸೌಖ್ಯದ ಭಾಗವೇ ಆಗಿಬಿಟ್ಟಿರುತ್ತೇವೆ. 
 
ಇದನ್ನು ಅನುದಿನದ ಕೆಲಸ ಕಾರ್ಯಗಳಲ್ಲಿ ಅನ್ವಯಿಸಿಕೊಳ್ಳುವುದು ಹೇಗೆ?
ಎಲ್ಲಕ್ಕಿಂತ ಮೊದಲ ಸಮಯಪಾಲನೆಯ ಶಿಸ್ತನ್ನು ರೂಢಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ನಿಮ್ಮ ಸ್ಥಳದಲ್ಲಿ ಹಾಜರಿರಿ. ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮಗಳು ಆಗುತ್ತವೆಯೋ ಎಂಬ ಆತಂಕವನ್ನು ಬಿಟ್ಟು ಈ ಕ್ಷಣದ ಪರಿಹಾರಗಳನ್ನು ಕಂಡುಕೊಳ್ಳಿ. 
 
ಅರ್ಥಹೀನ ಕೆಲಸವೆಂಬುದಿಲ್ಲ
ಜಗತ್ತಿನ ಯಾವುದೇ ಕೆಲಸವೂ ಅರ್ಥಹೀನವಲ್ಲ. ಎಲ್ಲಿಯೋ ಯಾವುದೋ ರೂಪದಲ್ಲಿ ನಿಮ್ಮ ಕೆಲಸದ ಫಲವನ್ನು ಯಾವುದೋ ಮನುಷ್ಯ ಉಣ್ಣುತ್ತಿರುತ್ತಾನೆ. ಆ ಸಾರ್ಥಕ್ಯದ ಮೌನಸಂಗೀತವನ್ನು ಆಲಿಸಿ. ಅದನ್ನು ಸಿಹಿಉತ್ಸಾಹದ ಸೆಲೆಯನ್ನಾಗಿ ಬದಲಾಯಿಸಿಕೊಳ್ಳಿ.
 
ಈ ಖುಷಿಯ ರೇಖೆಯ ಮೂಲಕವೇ ದುಗುಡ, ಮಾನಸಿಕ ಒತ್ತಡ, ನಿರರ್ಥಕ ಭಾವಗಳನ್ನು ಹೊಡೆದೋಡಿಸಿ. ಆಗ ಮೈ ಮನಸ್ಸುಗಳನ್ನು ಆಹ್ಲಾದವೊಂದು ಆವರಿಸುತ್ತದೆ. ಆವರಿಸುತ್ತದೆ. ಆವರಿಸುತ್ತಲೇ ಇರುತ್ತದೆ...ಹೀಗೆಯೇ ನಾವು ಮನುಷ್ಯರು ಒಬ್ಬರನ್ನೊಬ್ಬರು ಎತ್ತಿಹಿಡಿದುಕೊಂಡು ಮುಂದೆ ಸಾಗುವುದು. 
 
ಬದುಕಿಗೆ ಬೇರಿನ ಪಾಠ
ಕ್ಯಾಲಿಫೋರ್ನಿಯಾದಲ್ಲಿನ ರೆಡ್‌ವುಡ್‌ ಮರಗಳ ಈ ಕಥೆಯನ್ನು ನೀವು ಈಗಾಗಲೇ ಕೇಳಿರಬಹುದು. ತುಂಬ ದೊಡ್ಡ, ಎತ್ತರದ ಮರಗಳು ಅವು. ಆರು ಅಡಿಗಳ ಮನುಷ್ಯ ಮುನ್ನೂರು ಅಡಿ ಎತ್ತದ ರೆಡ್‌ವುಡ್‌ ಮರದ ಮುಂದೆ ನಿಂತರೆ ಎಷ್ಟು ಕುಬ್ಜನಾಗಿ ಕಾಣಿಸಬಹುದು ಒಮ್ಮೆ ಯೋಚಿಸಿ.
 
ಅದಷ್ಟೇ ಅಲ್ಲ ವಿಷಯ, ಈ ರೆಡ್‌ಹುಡ್‌ ಮರಗಳು ಬೇರುಗಳನ್ನು ಭೂಮಿಯಲ್ಲಿ ಇಳಿಬಿಡುವ ವಿನ್ಯಾಸದಲ್ಲಿಯೇ ಮನುಷ್ಯನಿಗೊಂದು ಬದುಕಿನ ಪಾಠವಿದೆ.
ಅವುಗಳ ಬೇರು ಭೂಮಿಯಲ್ಲಿ ತುಂಬ ಆಳದವರೆಗೆ ಇಳಿಯುವುದೇ ಇಲ್ಲ.  ಭೂಮಿಯ ಮೇಲ್ಮೈನಲ್ಲಿರುವ ತೇವವನ್ನು ಹೀರಿಕೊಳ್ಳಲಿಕ್ಕಾಗಿ ಮೇಲ್ಮಣ್ಣಿನಲ್ಲಿಯೇ ಹರಡಿಕೊಂಡಿರುತ್ತವೆ. ಮರದ ನಾಲ್ಕೂ ದಿಕ್ಕುಗಳಿಗೆ ವ್ಯಾಪಕವಾಗಿ ಬೇರುಗಳು ಹರಡಿಕೊಳ್ಳುತ್ತವೆ.
 
ಒಂದು ಮರದ ಬೇರು ಪಕ್ಕದಲ್ಲಿನ ಇನ್ನೊಂದು ಮರದ ಬೇರಿನೊಟ್ಟಿಗೆ ಹೆಣೆದುಕೊಳ್ಳುತ್ತವೆ. ಯಾವಾಗಲಾದರೂ ಬಿರುಗಾಳಿ, ಚಂಡಮಾರುತ ಈ ಕಾಡಿಗೆ ಅಪ್ಪಳಿಸಿದಾಗ ಒಂದು ಮರವನ್ನು ಇನ್ನೊಂದು ಮರ, ಅದನ್ನು ಮತ್ತೊಂದು ಮರ – ಹೀಗೆ ಇಡೀ ಕಾಡೇ ಬೇರುಗಳ ಮೂಲಕ ಬೆಸೆದುಕೊಂಡು ಗಟ್ಟಿಯಾಗಿ ನಿಲ್ಲುತ್ತವೆ. ಇಡೀ ಕಾಡಿನಲ್ಲಿ ಒಂದೇ ಒಂದು ಮರವೂ ನೆಲಕ್ಕುರುಳುವುದಿಲ್ಲ. ಹೀಗೆ ಒಬ್ಬರಿಗೊಬ್ಬರು ಬದುಕುವುದಕ್ಕೆ, ಗಟ್ಟಿಯಾಗಿ ನಿಂತುಕೊಳ್ಳುವುದಕ್ಕೆ ಸಹಾಯ ಮಾಡುವುದು ಮನುಷ್ಯಜೀವನಕ್ಕೂ ಅತ್ಯಂತ ಅಗತ್ಯವಾದ ಮೌಲ್ಯವಲ್ಲವೇ?
 
ನಮ್ಮ ಕೆಲಸದ ವಿಷಯದಲ್ಲಿಯೂ ಈ ತತ್ವವನ್ನು ಅನ್ವಯ ಮಾಡಿಕೊಳ್ಳಬಹುದು. ಪರಸ್ಪರ ಕೈಜೋಡಿಸಿಕೊಳ್ಳುವುದು, ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ಸಹಾಯ ಮಾಡುವುದು ಒಟ್ಟಾರೆ ಪರಿಣಾಮವನ್ನು ಸಾಕಷ್ಟು ಸುಧಾರಿಸಬಲ್ಲದು. 
 
ಒಮ್ಮೆ ಕಚೇರಿಯೊಂದರ ಲಿಫ್ಟ್‌ ಕೆಟ್ಟು ಮಧ್ಯಕ್ಕೆ ನಿಂತಿತು. ಒಳಗೆ ಪೂರ್ತಿ ಕತ್ತಲು. ಸರಿಯಾದ ಗಾಳಿಯ ಸಂಚಾರವೂ ಇರಲಿಲ್ಲ. ಒಳಗಿನಿಂದ ಮಹಿಳೆಯ ಕೂಗು ಕೇಳಿ ಜನರೆಲ್ಲ ಅಲ್ಲಿ ಓಡಿದರು.
 
ಒಬ್ಬರು ಕೇಳಿದರು ‘ನೀವಲ್ಲಿ ಆರಾಮಾಗಿದ್ದೀರಾ? ಯಾವುದೇ ತೊಂದರೆ ಇಲ್ವಾ?’
ಅತ್ತ ಕಡೆಯಿಂದ ಉತ್ತರ ಬಂತು.
‘ನಾನು ಕ್ಷೇಮವಾಗಿದ್ದೇನೆ’
‘ನೀವೊಬ್ಬರೇ ಇದ್ದೀರಾ’
‘ಇಷ್ಟು ಹೊತ್ತು ಒಬ್ಬಳೇ ಇದ್ದೆ. ಈಗಲ್ಲ. ನೀವೆಲ್ಲ ನನ್ನ ಜೊತೆ ಇದ್ದೀರಲ್ಲ?’
 
ಹಲವು ಮನಸ್ಸುಗಳು ಸೇರುವ ಖುಷಿ ಇಂಥದ್ದು. ಅದು ಜೀವ ಉಳಿಸುವಂಥದ್ದು. ಹಾಗೆಯೇ ನಮ್ಮ ಸಾಮರ್ಥ್ಯವನ್ನೂ ಬೆಳೆಸುವಂಥದ್ದು. ಖುಷಿಯೆಂಬುದು ಹಂಚಿದಷ್ಟೂ ಬೆಳೆಯುವಂಥದ್ದು. ಹಂಚುವ ಉದಾರತೆಯನ್ನು ನಾವು ಗಳಿಸಿಕೊಳ್ಳಬೇಕಷ್ಟೆ. ಯಾಕೆಂದರೆ ಅದು ನಮ್ಮ ಅಗತ್ಯವೂ ಆಗಿರುತ್ತದೆ.
ಭರತ್ ಮತ್ತು ಶಾಲನ್ ಸವೂರ್‌
****
ಬದುಕು ಸ್ಪಂದಿಸುವ ಬಗೆ
* ನೀವು ಮಾಡುವ ಪ್ರತಿಯೊಂದು ಕೆಲಸದ ಮೂಲಕವೂ ನಿಮ್ಮ ಬದುಕಿನ ದಾರಿಯನ್ನು ರೂಪಿಸಿಕೊಳ್ಳುತ್ತಿದ್ದೀರಿ, ನಿಮ್ಮೊಳಗಿನ ಅಪರಿಮಿತ ಚೈತನ್ಯವನ್ನು ತೆರೆದುಕೊಳ್ಳುತ್ತಿದ್ದೀರಿ ಎನ್ನುವುದು ನೆನಪಿರಲಿ. ಅದೊಂದು ಅನಂತ ಚೈತನ್ಯ.  ಆದರೆ ಆ ಚೈತನ್ಯ ರೂಪುಗೊಳ್ಳುವುದು ಪ್ರತಿಯೊಂದು ಕ್ಷಣಗಳಿಂದ.

* ನೀವು ಉಸಿರಾಡಿದಾಗ ನಿಮ್ಮೊಂದಿಗೆ ಬದುಕೂ ಉಸಿರಾಡುತ್ತದೆ. ನೀವು ಬರೆದಾಗ ಬದುಕೂ ನಿಮ್ಮೊಂದಿಗೆ ಬರೆಯುತ್ತದೆ. ಅದ್ಭುತ ಕಾಫಿಯ ಪರಿಮಳವನ್ನು ನೀವು ಆಸ್ವಾದಿಸುವಾಗ ಬದುಕೂ ನಿಮ್ಮೊಂದಿಗೇ ಆ ಕಾಫಿಯ ಪರಿಮಳ ಮತ್ತು ಬಿಸಿತನವನ್ನು ಆಸ್ವಾದಿಸುತ್ತಿರುತ್ತದೆ. ನೀವು ಅರಳಿದಂತೆಲ್ಲ ಬದುಕೂ ಅರಳುತ್ತಿರುತ್ತದೆ.

* ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳು ತುಂಬಿಕೊಂಡರೆ  ಆ ಕ್ಷಣವೇ ಬದುಕು ಮುದುರಿಕೊಳ್ಳಲಾರಂಭಿಸುತ್ತದೆ.

* ಈ ಅರಳುವಿಕೆ ಮತ್ತು ಮುದುರುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ. ಹಾಗೆ ಗಮನಿಸುವ ಎಚ್ಚರವನ್ನು ಬೆಳೆಸಿಕೊಳ್ಳಿ.

* ಯಾವುದೇ ಕೆಲಸ ಇರಲಿ. ಅದು ನಿಮ್ಮಲ್ಲಿಗೆ ಕಗ್ಗತ್ತಲ ಜಾಗಕ್ಕೆ ಬೆಳಕಿನ ರೇಖಿನಂತೆ ಬರುತ್ತದೆ. ಅದು ನಮ್ಮ ಮನಸ್ಸು, ದೇಹ, ಚೈತನ್ಯಗಳನ್ನು ಬಡಿದೆಬ್ಬಿಸುತ್ತದೆ. ಆ ಕ್ಷಣದಲ್ಲಿ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾದರೆ ಬದುಕಿನ ಕತ್ತಲೆಲ್ಲವೂ ಬೆಳಕಾಗಿ ಮಾರ್ಪಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT