ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ತಪ್ಪಿದ ಪಕ್ಷದ ಸಂಘಟನೆ, ಸಂಸ್ಕಾರ

Last Updated 17 ಮೇ 2017, 5:27 IST
ಅಕ್ಷರ ಗಾತ್ರ

ಶಿವಮೊಗ್ಗ: ಪಕ್ಷದ ಸಂಘಟನೆ ಹಾಗೂ ಸಂಸ್ಕಾರ ದಿಕ್ಕು ತಪ್ಪಿದೆ. ಸಂಘಟನಾ ದೌರ್ಬಲ್ಯ ಕಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕಿನ ಕುಂಸಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗಳು ಕಾಲಕಾಲಕ್ಕೆ ಬರುತ್ತವೆ. ಆದರೆ, ಪಕ್ಷದ ಸಂಘಟನೆ  ಎಂದಿಗೂ ನಿಲ್ಲಬಾರದು. ಹೋರಾಟಗಳಿಂದ ವಿಮುಖವಾಗಿರುವ ಕಾಂಗ್ರೆಸ್ ಸದೃಢಗೊಳಿಸುವುದೇ  ಮುಂದಿನ ಗುರಿ. ಪಕ್ಷವನ್ನು  ಬಲಪಡಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು   ಸಚಿವರು ಹೇಳಿದರು.

ಸದ್ಯ ಕಾಂಗ್ರೆಸ್‌ನಲ್ಲಿರುವ ನಿಷ್ಕ್ರಿಯತೆ ಕಿತ್ತೊಗೆಯಬೇಕಿದೆ. ಸದಸ್ಯತ್ವ ನೋಂದಣಿ, ಪಂಚಾಯ್ತಿ ಸಮಿತಿ ಸೇರಿದಂತೆ ಎಲ್ಲಾ ವರ್ಗಗಳ ಸಮಿತಿ ರಚನೆಯಾಗಬೇಕು. ರಾಜ್ಯದ ಎಲ್ಲ ವರ್ಗದವರ ವಿಶ್ವಾಸ ಗಳಿಸುವತ್ತ ಪಕ್ಷದ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಕರೆ ನೀಡಿದರು.

‘ಸಚಿವರಾದ ನಂತರ ಎರಡು ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಆರ್ಎಸ್ಎಸ್ ಕಾರ್ಯಕರ್ತರಂತೆ ಕೆಲಸ ಮಾಡುವವರು ಪಕ್ಷದಲ್ಲಿ ಯಾರೂ ಇಲ್ಲ. ಇದು ಸಾಮೂಹಿಕವಾಗಿ ಬೆಳೆದ ಪಕ್ಷ. ಪ್ರಜಾಪ್ರಭುತ್ವ ಸ್ಥಾಪನೆಯಾಗಲು ಕಾಂಗ್ರೆಸ್ ಕಾರಣ. ಆದರೆ, ನಮ್ಮಲ್ಲೇ ಸಂಘಟನೆ ಕೊರತೆ ಕಾಣುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರದ ಮೂಲಕ ಅಧಿಕಾರದಲ್ಲಿರದ ಸಮಯದಲ್ಲಿ ಹೋರಾಟದ ಮುಖಾಂತರ ಸಂಘಟನೆ ಬೆಳೆಸಬೇಕು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಶ್ರಮಿಸಬೇಕು. ಕೆಲವು ಬಾರಿ ಕಾರಣಗಳಿಲ್ಲದೇ ಸೋಲು ಎದುರಾಗುತ್ತದೆ. ಆದರೆ, ಸೋಲುಗಳಿಗೆ ಅಂಜಬಾರದು’ ಎಂದರು.

ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ಸಮಾವೇಶ ನಡೆಸಿದರೆ ಸಾಕಷ್ಟು ಸಂಖ್ಯೆಯ ಜನರು ಸೇರುತ್ತಾರೆ. ಆದರೆ, ಸೇರುವ ಎಲ್ಲರೂ ಪಕ್ಷಕ್ಕೆ ಮತ ಹಾಕುವುದಿಲ್ಲ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಹುಡುಕಬೇಕಾದ ಸ್ಥಿತಿ ಪಕ್ಷಕ್ಕೆ ಬಂದಿದೆ. ಹೀಗಾದರೆ ಪಕ್ಷ ಕಟ್ಟುವುದು ಹೇಗೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಮಾತನಾಡಿ, ‘ಪ್ರತಿ ಪಂಚಾಯ್ತಿ ಮಟ್ಟದಲ್ಲೂ ಸಮಿತಿ ರಚನೆಯಾಗಬೇಕು. ಅರಣ್ಯ ಹಕ್ಕುಪತ್ರ, ನಿವೇಶನ ಸಮಸ್ಯೆಗಳ ಕುರಿತು ಗಮನಹರಿಸಬೇಕು. ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕರಿಯಣ್ಣ, ಮುಖಂಡರಾದ ಎಸ್.ಪಿ. ದಿನೇಶ್, ರವಿಕುಮಾರ್, ವಿಜಯಲಕ್ಷ್ಮೀ ಪಾಟೀಲ್, ಸುಧಾ ನಾಗರಾಜ್, ಎಂ.ಬಿ. ರಾಜಪ್ಪ, ಬಲದೇವಕೃಷ್ಣ, ಪಲ್ಲವಿ, ರವಿಕಲಾ ಉಡ್ಡಪ್ಪ, ರಾಮಪ್ಪ, ಸಂಜೀವಪ್ಪ ಉಪಸ್ಥಿತರಿದ್ದರು.

*

ಪಕ್ಷದ ಮುಖಂಡರಾಗುವುದು, ಕಾರ್ಯಕ್ರಮಗಳಿಗೆ ಜನ ಕರೆತರುವುದು ದೊಡ್ಡ ಸಾಧನೆ ಅಲ್ಲ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಜನ ಸೇವೆ ಮಾಡಬೇಕು.
–ಕಾಗೋಡು ತಿಮ್ಮಪ್ಪ,
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT