ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ

Last Updated 17 ಮೇ 2017, 5:47 IST
ಅಕ್ಷರ ಗಾತ್ರ

ಬೀದರ್: ನಗರದ ಕೋಟೆಯೊಳಗಿನ ಕ್ಯಾಂಟೀನ್‌ ಆವರಣದಲ್ಲಿ ಸೋಮವಾರ ರಾತ್ರಿ ತಾಲ್ಲೂಕಿನ ಮಂದಕನಳ್ಳಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತುಕೊಯ್ದು ಕೊಲೆ ಮಾಡಲಾಗಿದೆ.

ಬೀದರ್ ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಪತಿ, ಮಂದಕನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ಅಡವೆಪ್ಪ ಹರಗೆ (45) ಕೊಲೆಯಾದವರು. ರಮೇಶ, ಸೋಮವಾರ ಸಂಜೆ 4ಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಮಂದಕನಳ್ಳಿಯ ಫಯಾಜುದ್ದೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಿಯಾಜು ದ್ದೀನ್‌, ಫಿರಾಜುದ್ದೀನ್‌ ಹಾಗೂ ಅಲ್ಲಾವುದ್ದೀನ್ ಸೇರಿ ಕೊಲೆ ಮಾಡಿರುವ ಸಂಶಯ ಇದೆ ಎಂದು ರಮೇಶ ಪತ್ನಿ ಬೇಬಿ ಹರಗೆ ಬೀದರ್‌ನ ಟೌನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ರಮೇಶ, ಬೀದರ್‌ ಹಾಗೂ ಮಂದಕನಳ್ಳಿ ಗ್ರಾಮದ ಕೆಲವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದರು.  ಹಳೆಯ ವೈಷಮ್ಯದಿಂದ ರಮೇಶ ಕೊಲೆಯಾಗಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಸಿಪಿಐ ಶರಣಬಸವೇಶ್ವರ ಭಜಂತ್ರಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಭಟನೆಗೆ ಯತ್ನ: ರಮೇಶನ ಮರಣೋತ್ತರ ಪರೀಕ್ಷೆ ನಂತರ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶವ ಇಟ್ಟು ಪ್ರತಿಭಟನೆಗೆ ಪ್ರಯತ್ನಿಸಿದರು.

‘ಕೊಲೆ ಬೆದರಿಕೆ ಬರುತ್ತಿರುವ ಬಗ್ಗೆ ರಮೇಶ ಪೊಲೀಸ್‌ ಅಧಿಕಾರಿಗಳಿಗೆ ದೂರು ನೀಡಿದ್ದರು. ಮಾನವ ಹಕ್ಕುಗಳ ಆಯೋಗಕ್ಕೂ ಮನವಿಪತ್ರ ಸಲ್ಲಿಸಿದ್ದರು. ಅವರಿಗೆ ರಕ್ಷಣೆ ಒದಗಿಸುವಂತೆ ಹೈಕೋರ್ಟ್‌ ಆದೇಶವನ್ನೂ ನೀಡಿತ್ತು. ಪೊಲೀಸರು ಸಕಾಲದಲ್ಲಿ ರಕ್ಷಣೆ ನೀಡದ ಕಾರಣ ರಮೇಶ ಕೊಲೆಗೀಡಾಗಬೇಕಾಯಿತು’ ಎಂದು ರಾಜಕುಮಾರ ಹಾಗೂ ಕಲ್ಯಾಣರಾವ್‌ ಭೋಸ್ಲೆ ದೂರಿದರು.

ದಲಿತರಿಗೆ ರಕ್ಷಣೆ ಒದಗಿಸಬೇಕೆಂದು ಬಾಬು ಪಾಸ್ವಾನ್, ಮಾರುತಿ ಬೌದ್ಧೆ, ಅರುಣ ಕುದರೆ, ಶಿವಕುಮಾರ ನೀಲಿಕಟ್ಟೆ ಒತ್ತಾಯಿಸಿದರು. ಆರೋಪಿಗಳನ್ನು ಬಂಧಿಸುವ ಕುರಿತು ಪ್ರಕಾಶ ನಿಕಮ್ ಭರವಸೆ ನೀಡಿದ ಬಳಿಕ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸುವುದು ಕೈಬಿಟ್ಟರು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರದಿಂದ ಮಂದಕನಳ್ಳಿ ಗ್ರಾಮದ ವರೆಗೆ ಶವ ಸಾಗಿಸುವ ವರೆಗೂ  ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ತನಿಖೆ ಆರಂಭ
ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಹಾಗೂ ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ ಅವರು ಕೋಟೆಯೊಳಗಿನ ಕ್ಯಾಂಟೀನ್‌ ಆವರಣಕ್ಕೆ ಮಂಗಳವಾರ ಭೇಟಿ ನೀಡಿ ರಮೇಶ ಹರಗೆ ಕೊಲೆಯಾದ ಸ್ಥಳ ಪರಿಶೀಲಿಸಿದರು.

ಬೆರಳಚ್ಚು ತಜ್ಞರು ಸ್ಥಳದಲ್ಲಿ ಬೆರಳಚ್ಚು ಪಡೆದರು. ಕ್ಯಾಂಟೀನ್‌  ಆವರಣದಲ್ಲಿ ದೊರೆತ ತಲವಾರ  ಹಾಗೂ ಜಂಬೆ ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT