ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ಬಾಡಿಗೆ: ನಗರಸಭೆಗೂ ಪಾಲು ಸಿಗಲಿ

Last Updated 17 ಮೇ 2017, 5:47 IST
ಅಕ್ಷರ ಗಾತ್ರ

ಮಂಡ್ಯ: ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಂದ ಬರುವ ಬಾಡಿಗೆ ಹಣದಲ್ಲಿ ₹ 10,000 ನಗರಸಭೆಗೆ ಸಿಗಬೇಕು ಎಂದು ಮಂಗಳವಾರ ಇಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಅರುಣ್‌ಕುಮಾರ್‌ ‘ಕ್ರೀಡಾಂಗಣದಲ್ಲಿ ಕಲೆ, ಕ್ರೀಡಾ ಚಟುವಟಿಕೆಗಳಲ್ಲದೆ ವಾಣಿಜ್ಯ ಚಟುವಟಿಕೆಗಳಿಗೂ ಬಾಡಿಗೆ ನೀಡಲಾಗುತ್ತಿದೆ. ಸಂಘಟಕರು ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಚೆಲ್ಲಾಡಿ ಪರಿಸರ ಹಾಳುಮಾಡುತ್ತಿದ್ದಾರೆ. ಅದನ್ನು ನಗರಸಭೆ ಪೌರ ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದಾರೆ. ಇದರಿಂದಾಗಿ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಕ್ರೀಡಾಂಗಣ ಸ್ವಚ್ಛ ಮಾಡಿದ್ದಕಾಗಿ ನಗರಸಭೆಗೂ ಬಾಡಿಗೆ ಸಿಗಬೇಕು. ಈ ಬಗ್ಗೆ ಈಗಲೇ ಠರಾವು ಪಾಸು ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಚಂದ್ರಕುಮಾರ್‌ ‘ಪ್ರತಿನಿತ್ಯ ಬೆಳಿಗ್ಗೆ ನಾನು ಕ್ರೀಡಾಂಗಣದಲ್ಲಿ ವಾಕಿಂಗ್‌ ಮಾಡುತ್ತೇನೆ. ಚೆಲ್ಲಾಡಿರುವ ವಸ್ತುಗಳನ್ನು ಕಂಡು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಯಾರೋ ಮಾಡಿದ ಮಾಲಿನ್ಯಕ್ಕೆ ನಾವು ಜವಾಬ್ದಾರರಾಗಬೇಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೆಂಡರ್‌ ಇಲ್ಲದೇ ಬಿಲ್‌: ಸದಸ್ಯ ಅನಿಲ್‌ಕುಮಾರ್‌ ಮಾತನಾಡಿ ‘ಸ್ವಚ್ಛ ಭಾರತ ಅಭಿಯಾನದಡಿ ಗೋಡೆ ಬರಹಕ್ಕಾಗಿ ₹ 95 ಸಾವಿರ ಬಿಲ್‌ ನೀಡಿದ್ದಾರೆ. ಇದಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಸಭೆಯಲ್ಲಿ ಅನುಮೋದನೆ ಪಡೆದಿಲ್ಲ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ‘ಒಂದು ಲಕ್ಷಕ್ಕಿಂತ ಕಡಿಮೆ ಹಣ ಇರುವ ಕಾಮಗಾರಿಗೆ ಟೆಂಡರ್‌ ಕರೆಯುವ ಅವಶ್ಯಕತೆ ಇಲ್ಲ. ಅದರಂತೆ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ನಗರದ ವಿವಿಧೆಡೆ ಅಮೃತ್‌ ಯೋಜನೆ ಅಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ ಎಂಬ ಒಂದೇ ಒಂದು ಕಾರಣದಿಂದ ನಡೆಯುತ್ತಿದ್ದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ರಸ್ತೆಯನ್ನು ಎಲ್ಲೆಂದರಲ್ಲಿ ಅಗೆಯಲಾಗಿದ್ದು  ವಾಹನ ಚಾಲಕರು ಬಿದ್ದು ಗಾಯಗೊಳ್ಳತ್ತಿದ್ದಾರೆ’ ಎಂದು ಸದಸ್ಯ ಅನಿಲ್‌ಕುಮಾರ್ ದೂರಿದರು.

ಬಡಾವಣೆಗಳಲ್ಲಿ ಸೌಲಭ್ಯ ಇಲ್ಲ: ಸದಸ್ಯ ಎಂ.ಜೆ.ಚಿಕ್ಕಣ್ಣ ಮಾತನಾಡಿ ‘ಮುಡಾ ವತಿಯಿಂದ ಅವೈಜ್ಞಾನಿಕವಾಗಿ ಬಡಾವಣೆ ನಿರ್ಮಾಣವಾಗುತ್ತಿವೆ. ಸಾಹುಕಾರ್‌ ಚನ್ನಯ್ಯ ಹಾಗೂ ವಿವೇಕಾನಂದ ಬಡಾವಣೆಗಳನ್ನು ಇನ್ನೂ ನಗರಸಭೆಗೆ ಹಸ್ತಾಂತರ ಮಾಡಿಲ್ಲ. ಅಲ್ಲಿಗೆ ಸೂಕ್ತವಾದ ರಸ್ತೆ ಕೂಡ ಇಲ್ಲ. ಹೀಗಾಗಿ ಜನರು ಅಲ್ಲಿ ಮನೆ ನಿರ್ಮಾಣ ಮಾಡಲು ಹಿಂಜರಿಯುತ್ತಿದ್ದಾರೆ’ ಎಂದು ದೂರಿದರು. ಇದಕ್ಕೆ ಉತ್ತರ ನೀಡಿದ  ಮುಡಾ ಅಧಿಕಾರಿ ಮಧುಸೂದನ್‌ ‘ಪೂರ್ಣ ಮೂಲ ಸೌಲಭ್ಯ ಒದಗಿಸಲು ಮುಡಾ ಬಳಿ ಅಷ್ಟೊಂದು ಹಣ ಇಲ್ಲ. ಸಾಹುಕಾರ್‌ ಚನ್ನಯ್ಯ ಬಡಾವಣೆ ಅಭಿವೃದ್ಧಿಗಾಗಿ ₹ 20 ಲಕ್ಷ ಪ್ರಸ್ತಾವ ಕಳುಹಿಸಲಾಗಿದ್ದು ಅನುದಾನ ಬಿಡುಗಡೆಯಾದ ತಕ್ಷಣ ಸೌಲಭ್ಯ ಒದಗಿಸಲಾಗುವುದು’ ಎಂದರು.

‘ಮುಡಾ ಅಭಿವೃದ್ಧಿ ಮಾಡಿರುವ ಬಡಾವಣೆಗಳಲ್ಲಿ ಸಸಿ ನೆಡುವ ಅಧಿಕಾರ ನಗರಸಭೆಗೆ ಇಲ್ಲ. ಲೇಔಟ್‌ಗಳಲ್ಲಿ ಹಸಿರು  ವಾತಾವರಣ ಮೂಡಿಸಲು ಮುಡಾ ವತಿಯಿಂದಲೇ ಸಸಿ ನೆಡಿಸಬೇಕು’ ಎಂದು ಸದಸ್ಯ ಮಹೇಶ್‌ ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.

ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವಂತೆ 7 ವರ್ಷಗಳಿಂದಲೂ ಒತ್ತಾಯಿಸಲಾಗುತ್ತಿದೆ. ಆದರೂ ಸೆಸ್ಕ್‌ ಸಿಬ್ಬಂದಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಕಂಬ ಸ್ಥಳಾಂತರ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಕೆ.ಶಿವಪ್ರಕಾಶ್‌ಬಾಬು ಇದ್ದರು.

**

ಸದಸ್ಯನನ್ನು ‘ನಾಯಿ’ ಎಂದ  ಅಧ್ಯಕ್ಷ

ಮಂಡ್ಯ: ನಗರಸಭೆ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಸದಸ್ಯರೊಬ್ಬರನ್ನು ‘ನಾಯಿಯ ರೀತಿ ಎಗರಬೇಡ’ ಎಂದು ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಜರಿದದ್ದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.

ಸದಸ್ಯ ಅನಿಲ್‌ಕುಮಾರ್‌ ಮಾತನಾಡಿ, ‘ಗ್ರಾಮೀಣ ವ್ಯಾಪ್ತಿಯಲ್ಲಿ ನಡೆದ ಯುವಜನ ಮೇಳಕ್ಕೆ ನಗರಸಭೆಯಿಂದ ₹ 25,000 ಹಣ ನೀಡಲಾಗಿದೆ. ಈ ರೀತಿ ಹಣ ಕೊಡಲು ಯಾವ ಕಾನೂನಿನಲ್ಲಿ ಅವಕಾಶವಿದೆ’ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹಣ ನೀಡಲಾಗಿದೆ ಎಂದು ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ ಉತ್ತರಿಸಿದರು. ಇದರಿಂದ ತೃಪ್ತರಾಗದ ಅನಿಲ್‌ಕುಮಾರ್‌, ‘ಕೇಳಿದವರಿಗೆಲ್ಲ ಹಣ ಕೊಟ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ‘ನಾಯಿಯ ರೀತಿ ಎಗರಬೇಡ. ನೀನು ಹೀಗೇ ಆಡುತ್ತಿದ್ದರೆ ನಿನ್ನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ಪೀಠದತ್ತ ತೆರಳಿದ ಅನಿಲ್‌ಕುಮಾರ್‌ ಮೇಜು ಕುಟ್ಟಿ  ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷರು ‘ನಾಯಿ’ ಶಬ್ದ ಬಳಸಿದ್ದಕ್ಕೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ವಿಷಾದ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದರು.

**

ಪ್ಲಾಸ್ಟಿಕ್‌ ಫ್ಲೆಕ್ಸ್‌ನಲ್ಲಿ ಅಧ್ಯಕ್ಷರ ಚಿತ್ರ

‘ನಗರದ ವಿವಿಧೆಡೆ ಪ್ಲಾಸ್ಟಿಕ್‌ ಫ್ಲೆಕ್ಸ್‌ ರಾರಾಜಿಸುತ್ತಿವೆ. ಯಾವುದೇ ಅನುಮತಿ ಪಡೆಯದೇ ಫ್ಲೆಕ್ಸ್‌ ಹಾಕಿದ್ದಾರೆ. ಅದರಲ್ಲಿ ಅಧ್ಯಕ್ಷರು ಹಾಗೂ ಹಲವು ಸದಸ್ಯರ ಫೋಟೊ ಹಾಕಿದ್ದಾರೆ. ಇದಕ್ಕೆ ಅವರ ಬೆಂಬಲವಿದೆ’ ಎಂದು ಸದಸ್ಯ ಅನಿಲ್‌ಕುಮಾರ್‌ ಆರೋಪಿಸಿದರು. ಆದರೆ ಇದನ್ನು ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ನಿರಾಕರಿಸಿದರು.

ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣ ಅಸಾಧ್ಯ. ಆದರೆ, ಅನಧಿಕೃತವಾಗಿ ಫ್ಲೆಕ್ಸ್‌ ಹಾಕುವವರಿಗೆ ದಂಡ ಹಾಕಿ ನಗರಸಭೆಗೆ ಆದಾಯ ಬರುವಂತೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT