ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠೆಯ ಕೊಳದಲ್ಲಿ ‘ಮುಳುಗಿದ’ ಜನಪ್ರತಿನಿಧಿಗಳು

Last Updated 17 ಮೇ 2017, 6:28 IST
ಅಕ್ಷರ ಗಾತ್ರ

ಕೊಪ್ಪಳ:  ಬೇಸಿಗೆ ಮುಗಿಯುತ್ತಿದ್ದರೂ ಈಜುಕೊಳ ಬಳಕೆಗೆ ಸಿಗುವುದು ಜನರ ಪಾಲಿಗೆ ಮರೀಚಿಕೆಯಾಗಿದೆ. ‘ಸ್ಥಳೀಯ ಜನಪ್ರತಿನಿಧಿಗಳ ಪ್ರತಿಷ್ಠೆ ಮತ್ತು ಪ್ರಚಾರದ ಲಾಲಸೆ, ಚುನಾವಣಾ ದೃಷ್ಟಿ ಉದ್ಘಾಟನೆ ಮುಂದೂಡಿಕೆಗೆ ಕಾರಣವಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಬಾರಿಯ ಸುಡು ಬೇಸಿಗೆಯ ತಾಪ ನಿವಾರಿಸಲು ಈಜುಕೊಳ ಬಳಕೆಗೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿಬಿಟ್ಟಿದೆ’ ಎಂದು ಈಜುಪ್ರಿಯರು ಅಸಹನೆ ವ್ಯಕ್ತಪಡಿಸಿದ್ದಾರೆ.

ಎಲ್ಲ ಕಾಮಗಾರಿ ಮುಗಿದಿದ್ದರೂ ಸಣ್ಣಪುಟ್ಟ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಬಾಕಿ ಇರಿಸಿ ಉದ್ಘಾಟನೆಯನ್ನು ಮುಂದೂಡಲಾಗುತ್ತಿದೆ ಎಂಬ ಆರೋಪಗಳು ಕ್ರೀಡಾ ಇಲಾಖೆಯಿಂದಲೇ ಕೇಳಿಬಂದಿದೆ.

ಏಕೆ ಮುಂದೂಡಿಕೆ?: ಅಧಿಕಾರಿಯೊಬ್ಬರು ಹೇಳುವ ಪ್ರಕಾರ ‘ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಕೊಳ ಉದ್ಘಾಟನೆಗೆ ಸ್ಥಳೀಯ ಶಾಸಕರನ್ನು ಕೇಳಿ ದಿನಾಂಕ ನಿಗದಿಪಡಿಸಿ ಎಂದು ಸೂಚಿಸಿದರು.

ಅದರಂತೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರ ಬಳಿ ದಿನಾಂಕ ನಿಗದಿಗೆ ಕೋರಿದೆವು. ಅವರು ಆ ದಿನಾಂಕ ನಿಗದಿಪಡಿಸುವುದು ನನಗೆ ಬಿಡಿ. ಮುಖ್ಯಮಂತ್ರಿಯವರನ್ನು ಜಿಲ್ಲೆಗೆ ಕರೆಸಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಜತೆ ಈಜುಕೊಳದ ಉದ್ಘಾಟನೆಯನ್ನೂ ಮಾಡಿಸುತ್ತೇನೆ.

ಈಗ ಬೇರೆ ಕೆಲಸ ಬೇಕಾದಷ್ಟಿದೆ ಎಂದು ಬೆಂಬಲಿಗರ ಮುಂದೆ ಜೋರಾಗಿ ಹೇಳಿದರು. ನಾವು ಅಸಹಾಯಕರಾಗಬೇಕಾಯಿತು’ ಎಂದು ಅಳಲು ತೋಡಿಕೊಂಡರು.

‘ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಕ್ರೀಡಾಂಗಣ ಮೇಲ್ವಿಚಾರಣಾ ಸಮಿತಿಯ ಸಭೆಯಲ್ಲಿ ಈಜುಕೊಳ ನಿರ್ವಹಣೆ ಬಗ್ಗೆ ಚರ್ಚೆ ಆಗಿದೆ. ಖಾಸಗಿಯವರಿಗೆ ನಿರ್ವಹಣಾ ಟೆಂಡರು ಕೊಡುವುದು, ದರ ನಿಗದಿ, ಅಧಿಕಾರಿಗಳನ್ನೇ ಮೊದಲು ಸದಸ್ಯರನ್ನಾಗಿಸಿ ಸಾಂಕೇತಿಕ ಚಂದಾ ಸಂಗ್ರಹಿಸುವ ಕುರಿತೂ ನಿರ್ಣಯಿಸಲಾಗಿದೆ.ಆದರೆ ಜನಪ್ರತಿನಿಧಿಗಳ ಮೇಲಾಟದಿಂದ ಸುಸಜ್ಜಿತ ಈಜುಕೊಳ ಸೌಲಭ್ಯದ ಬಳಕೆ ದೂರ ಉಳಿದಿದೆ’ ಎಂದು ಇದೇ ಅಧಿಕಾರಿ ಬೇಸರಿಸಿದರು.

‘ನನೆಗುದಿಗೆ ಬಿದ್ದ ಕಾಮಗಾರಿ ಕೊನೆಗೂ ಮುಕ್ತಾಯವಾಗಿದೆ. ಬಳಕೆಗೆ ಸಿಕ್ಕಿಲ್ಲ. ಇನ್ನೇನು ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ಕೆಲಕಾಲ ಕಳೆದರೆ ಈಜುಪ್ರಿಯರು ಕೆರೆ ಕಟ್ಟೆ, ಕಾಲುವೆ, ಹಿನ್ನೀರು ಪ್ರದೇಶಕ್ಕೆ ಹೋಗುತ್ತಾರೆ. ಆಮೇಲೆ  ಇಲ್ಲಿಗೆ ಯಾರು ಬರುತ್ತಾರೆ?’ ಎಂದು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಕ್ರಿಕೆಟ್‌ ಆಡಲು ಬರುವ ಪ್ರವೀಣ್‌ ಪ್ರಶ್ನಿಸಿದರು.

ಕ್ಷುಲ್ಲಕ ಪ್ರತಿಷ್ಠೆ ಏಕೆ? 
‘ಪ್ರತಿನಿತ್ಯ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ‘ಅಭಿವೃದ್ಧಿ’ಯ ಪ್ರಚಾರ ಆಗುತ್ತಿರುವುದು ಸಾಲದೇ? ಕ್ಷುಲ್ಲಕ ಪ್ರತಿಷ್ಠೆಗೆ ಒಳ್ಳೆಯ ಸೌಲಭ್ಯವೊಂದನ್ನು ಜನರಿಂದ ದೂರವಿಡುವುದು ಸರಿಯಲ್ಲ.

ಈಜುಕೊಳ ಉದ್ಘಾಟನೆಗೂ ಮುಖ್ಯಮಂತ್ರಿ ಬರಬೇಕೇ? ಯಾವುದೇ ಸೌಲಭ್ಯ ಸರಿಯಾದ ಸಮಯಕ್ಕೆ ಜನರಿಗೆ ತಲುಪುವುದೇ ನಿಜವಾದ ಅಭಿವೃದ್ಧಿ ಎಂಬುದು ಪ್ರಚಾರಪ್ರಿಯ ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ’ ಎಂದು ನಗರದ ಹಿರಿಯ ನಾಗರಿಕ ಗೋವಿಂದರಾವ್‌ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.

*

ಸಣ್ಣಪುಟ್ಟ ಕೆಲಸಗಳನ್ನು ಬೇಕೆಂದೇ ಬಾಕಿ ಇರಿಸಿ ಉದ್ಘಾಟನೆ ಮುಂದೂಡಲಾಗುತ್ತಿದೆ. ಇಷ್ಟು ವರ್ಷ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಸಾಲದೆ?
ಪ್ರವೀಣ್‌, ಕ್ರೀಡಾಪಟು ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT