ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷದ ಬಾಲಕನಿಗೆ ಪುರುಷನ ಗುಣಲಕ್ಷಣ!

Last Updated 17 ಮೇ 2017, 6:49 IST
ಅಕ್ಷರ ಗಾತ್ರ

ರಾಮನಗರ: ಈ ಹುಡುಗನ ವಯಸ್ಸು ಇನ್ನೂ ಮೂರು ವರ್ಷ. ಆದರೂ ಧ್ವನಿ ಮಾತ್ರ ದೊಡ್ಡ ಗಂಡಸಿನ ಹಾಗೆ! ಇನ್ನು ಶರೀರದ ಕೆಲವು ಅಂಗಗಳು ಈತನ ವಯಸ್ಸಿಗೂ ಮೀರಿ ಬೆಳೆದು ಮುಜುಗರ ಹುಟ್ಟಿಸುವಂತಿವೆ.

ಇಂತಹ ವಿಚಿತ್ರವಾದ ಸಮಸ್ಯೆಗೆ ತುತ್ತಾಗಿರುವುದು ನಗರದ ಸಿಂಗ್ರಿಭೋವಿದೊಡ್ಡಿ ಗ್ರಾಮದ ಬಾಲಕ ಹರೀಶ್‌ (ಹೆಸರು ಬದಲಿಸಲಾಗಿದೆ). ಒಂದೂವರೆ ವರ್ಷದಿಂದ ಈ ಮಗುವನ್ನು ಈ ತೊಂದರೆ ಕಾಡುತ್ತಿದೆ. ಆಸ್ಪತ್ರೆಗಳಿಗೆ ಅಲೆದಾಡಿದರೂ ಸದ್ಯಕ್ಕೆ ಪರಿಹಾರ ದೊರೆಯುವ ಸಾಧ್ಯತೆಗಳು ಕಡಿಮೆ, ಹುಡುಗನಿಗೆ 14 ವರ್ಷ ತುಂಬುವವರೆಗೂ ಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ. ದುಬಾರಿ ಚಿಕಿತ್ಸಾ ವೆಚ್ಚ ಭರಿಸಲಾರದೇ ಕುಟುಂಬದವರು ಪರದಾಡುತ್ತಿದ್ದಾರೆ.

ಅಪರೂಪದ ಕಾಯಿಲೆ: ಹುಡುಗನಿಗೆ ತಗುಲಿರುವ ಈ ಕಾಯಿಲೆಯನ್ನು ವೈದ್ಯರು ‘central precausious puberty’ ಎಂದು ಗುರುತಿಸಿದ್ದಾರೆ. ಕನ್ನಡದಲ್ಲಿ ಇದನ್ನು ಹದಿಹರೆಯದ ವಯಸ್ಸಿನ ಗುಣ ಲಕ್ಷಣಗಳು ಎಂದು ಕರೆಯಲಾಗುತ್ತಿದೆ. ಎರಡರಿಂದ ಮೂರು ವರ್ಷದ ಸಣ್ಣ ಮಕ್ಕಳಲ್ಲಿ ಹದಿಹರೆಯದ ಲಕ್ಷಣ, ವರ್ತನೆಗಳು ಕಂಡುಬರುತ್ತವೆ. ಪ್ರತಿ ಮೂರರಿಂದ ನಾಲ್ಕು ಲಕ್ಷಕ್ಕೆ ಒಬ್ಬರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ, ಇದು ಬೆಳಕಿಗೆ ಬರುವುದೂ ಅಪರೂಪ. ರಾಜ್ಯದ ಮಟ್ಟಿಗೆ ಇದೊಂದು ಅಪರೂಪದ ಪ್ರಕರಣ’ ಎನ್ನುತ್ತಾರೆ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯ ಕ್ರಮದ ವೈದ್ಯಾಧಿಕಾರಿ ರಾಘವೇಂದ್ರ.

‘ಮಗು ಹುಟ್ಟಿದಾಗ ಯಾವ ತೊಂದರೆಯೂ ಇರಲಿಲ್ಲ. ಆದರೆ ಕ್ರಮೇಣ ಆತನ ದೈಹಿಕ ಲಕ್ಷಣಗಳಲ್ಲಿ ಬದಲಾವಣೆಗಳು ಆಗತೊಡಗಿದವು. ಮೈತುಂಬ ರೋಮಗಳು ಮೂಡಿ, ಧ್ವನಿ ಗಡುಸಾಗತೊಡಗಿತು. ಆತನ ಮರ್ಮಾಂಗವೂ ದೊಡ್ಡದಾಗತೊಡಗಿತು. ಹೀಗಾಗಿ ಗಾಬರಿಗೊಂಡ ನಾವು ಮೊದಲು ಸ್ಥಳೀಯ ವೈದ್ಯರಲ್ಲಿ ತೋರಿಸಿ ಅವರ ಸಲಹೆಯ ಮೇರೆಗೆ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ತೋರಿಸಿದೆವು. ವೈದ್ಯರು ಆತನಿಗೆ ಆಗಿರುವ ಸಮಸ್ಯೆ ಬಗ್ಗೆ ಹೇಳಿ, ಚಿಕಿತ್ಸೆ ಆರಂಭಿಸಿದರು’ ಎಂದು ಆತನ ತಾಯಿ ವಿವರಿಸುತ್ತಾರೆ.

ಚುಚ್ಚುಮದ್ದಿನ ಪರಿಣಾಮ ಮೈ ಮೇಲಿನ ಸದ್ಯ ದಟ್ಟ ರೋಮಗಳು ಉದುರಿವೆ. ಆರಂಭದಲ್ಲಿ ಈತನಿಗೆ ಅಧಿಕ ರಕ್ತದೊತ್ತಡದ ಸಮಸ್ಯೆಯೂ ಇದ್ದು, ಈಗ ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿ ಇದೆ. ಆದರೆ ಧ್ವನಿ ಮಾತ್ರ ಅಷ್ಟೇ ಗಡುಸಾಗಿದೆ.

ಗೃಹಬಂಧನ: ಹಾರ್ಮೋನಿನ ವ್ಯತ್ಯಾಸದಿಂದಾಗಿ ಕೆಲವೊಮ್ಮೆ ವಯಸ್ಸಿಗೆ ಮೀರಿದ ಲೈಂಗಿಕ ಕಾಮನೆಗಳು ಉದ್ರೇಕಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಆತನನ್ನು ಹೆಚ್ಚು ಹೊರಗೆ ಬಿಡಬೇಡಿ. ಬಿಟ್ಟರೂ ಗಂಡುಮಕ್ಕಳ ಜೊತೆಗೇ ಇರುವಂತೆ ನೋಡಿಕೊಳ್ಳಿ ಎಂದು ವೈದ್ಯರು ಪೋಷಕರಿಗೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಷಕರು ಮಗನನ್ನು ಆದಷ್ಟು ಮನೆಯೊಳಗೆ ಸಲಹುತ್ತಿದ್ದಾರೆ. ಇದೀಗ ಆತನಿಗೆ ಮೂರು ವರ್ಷ ತುಂಬಿದ್ದು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸಬೇಕಿದೆ. ಆದರೆ ಆತನ ವರ್ತನೆಯಿಂದ ಮತ್ತೇನಾದರೂ ಸಮಸ್ಯೆ ಆದಲ್ಲಿ ಏನು ಎಂಬ ಚಿಂತೆ ಈ ಕುಟುಂಬದ್ದಾಗಿದೆ.

ತಿಂಗಳಿಗೆ ₹ 9 ಸಾವಿರ ವೆಚ್ಚ: ಈತನಿಗೆ ನೀಡುವ ಇಂಜೆಕ್ಷನ್‌ವೊಂದರ ಬೆಲೆಯೇ ₹ 9 ಸಾವಿರದಷ್ಟಿದೆ. ಕಾಯಿಲೆ ಕಾಣಿಸಿ ಕೊಂಡಾಗಿನಿಂದ ಈವರೆಗೆ ಆತನ ಚಿಕಿತ್ಸೆಗೆಂದೇ ಪೋಷಕರು ಸುಮಾರು ₹ 4 ಲಕ್ಷ ವ್ಯಯಿಸಿದ್ದಾರೆ. ಈ ಬಾಲಕನ ತಂದೆ ವೃತ್ತಿಯಲ್ಲಿ ಖಾಸಗಿ ಬಸ್‌ ಚಾಲಕ ರಾಗಿದ್ದು, ತಿಂಗಳಿಗೆ ಸಿಗುವ ₹ 10 ಸಾವಿರ ವೇತನವನ್ನೇ ಕುಟುಂಬ ನೆಚ್ಚಿಕೊಂಡಿದೆ. ಅದರಲ್ಲಿ ಬಹುಪಾಲು ಚಿಕಿತ್ಸೆಗೆಂದೇ ವ್ಯಯವಾಗುತ್ತಿದೆ. ದಿಕ್ಕು ತೋಚದ ಪೋಷಕರು ದಾನಿಗಳು, ಸಂಘ–ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.  ಆಸಕ್ತರು ಮೊಬೈಲ್ ಸಂಖ್ಯೆ 89706–80530 ಸಂಪರ್ಕಿಸಬಹುದು. ಇಲ್ಲವೇ ಆಶಾ ಅವರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉಳಿತಾಯ ಖಾತೆ ಸಂಖ್ಯೆ 64126752577 (ಐಎಫ್ಎಸ್‌ಸಿ– ಎಸ್‌ಬಿಎಂವೈ 0040796) ಕ್ಕೆ ನೆರವು ನೀಡಬಹುದು.

**

ಉಚಿತ ಚಿಕಿತ್ಸೆ ಸಿಗದು

18 ವರ್ಷದ ಒಳಗಿನ ಮಕ್ಕಳ ಆರೋಗ್ಯದ ಕಾಳಜಿ ವಹಿಸಲೆಂದೇ ಸರ್ಕಾರವು ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಜಾರಿಗೆ ತಂದಿದೆ. ಈ ಯೋಜನೆಯ ಅಡಿ ಮಕ್ಕಳ ಬಹುತೇಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದೆ. ಆದರೆ ಆರ್‌ಬಿಎಸ್‌ಕೆ ಸೇರಿದಂತೆ ಯಾವುದೇ ಸರ್ಕಾರಿ ಯೋಜನೆಗಳಲ್ಲೂ ಈ ಹುಡುಗನ ಚಿಕಿತ್ಸಾ ವೆಚ್ಚ ಭರಿಸಲು ಆಗದು. ಹೀಗಾಗಿ ದಾನಿಗಳು ಇಲ್ಲವೇ ಸಂಘ–ಸಂಸ್ಥೆಗಳು ಮುಂದೆ ಬರಬೇಕು ಎಂದು ವೈದ್ಯರು ಹೇಳುತ್ತಾರೆ.

***

ಈ  ಕಾಯಿಲೆ ಅತ್ಯಂತ  ಅಪರೂಪ. 14 ವರ್ಷದವರೆಗೂ ಪ್ರತಿ ತಿಂಗಳು ಇಂಜೆಕ್ಷನ್‌ ಕೊಡಿಸುತ್ತಲೇ ಇರಬೇಕಾಗುತ್ತದೆ. ಪರ್ಯಾಯ ಚಿಕಿತ್ಸಾ ವಿಧಾನ ಸದ್ಯಕ್ಕೆ ಲಭ್ಯವಿಲ್ಲ.
–ಡಾ. ರಾಘವೇಂದ್ರ
ವೈದ್ಯಾಧಿಕಾರಿ, ಆರ್‌ಬಿಎಸ್‌ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT