ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೌಶಲ ತರಬೇತಿ: ವಿದೇಶದಲ್ಲೂ ಉದ್ಯೋಗ’

Last Updated 17 ಮೇ 2017, 7:39 IST
ಅಕ್ಷರ ಗಾತ್ರ

ಹಾವೇರಿ: ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ ಅಡಿಯಲ್ಲಿ ನೋಂದಣಿ ಮಾಡಿದವರಿಗೆ ವಿದೇಶದಲ್ಲೂ ಉದ್ಯೋಗ ಪಡೆಯುವ ಸಾಧ್ಯತೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಇಲ್ಲಿನ ದೇವರಾಜು ಅರಸು ಭವನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದಲ್ಲಿ  ‘ಕೌಶಲ ವೆಬ್ ಪೋರ್ಟಲ್’  ಉದ್ಘಾಟಿಸಿ ಅವರು ಮಾತನಾಡಿದರು. ‘ಯುವಜನತೆಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ ಮುಖ್ಯಮಂತ್ರಿಗಳು ‘ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ ಹಾಗೂ ‘ಕೌಶಲ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿದ್ದಾರೆ’ ಎಂದ ಅವರು, ‘ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಸಾಧ್ಯವಿಲ್ಲ.

ಅದಕ್ಕಾಗಿ ಅವರ ಕೌಶಲವನ್ನು ಅಭಿವೃದ್ಧಿ ಪಡಿಸಿ ಖಾಸಗಿ ಹಾಗೂ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ. ಇಲ್ಲಿ ಭತ್ಯೆ ಸಹಿತ ಉಚಿತ ತರಬೇತಿ ದೊರೆಯಲಿದೆ’ ಎಂದರು.‘ರಾಜ್ಯ ಸರ್ಕಾರದ ಈ ಯೋಜನೆಯು ನಿರುದ್ಯೋಗಿ ಯುವಜನತೆಗೆ ವರವಾಗಿದೆ. ಅವರ ಆಸಕ್ತಿಗೆ ಅನುಗುಣವಾಗಿ ಉದ್ಯೋಗದ ಅವಕಾಶ ಸಿಗಲಿದೆ. ಇನ್ನು ಒಂದೇ ಸೂರಿನಲ್ಲಿ ಎಲ್ಲ ತರಬೇತಿಗಳು ಲಭ್ಯವಾಗಲಿವೆ’ ಎಂದರು. 

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಸ್ವಂತ ಹೊಲ ಹೊಂದಿದ ಕೆಲವು ಪದವೀಧರರು ಉದ್ಯೋಗವೂ ಸಿಗದೇ, ಒಕ್ಕಲುತನವೂ ಮಾಡಲಾಗದೇ ಅತಂತ್ರರಾಗಿದ್ದಾರೆ. ಅವರು ಒಕ್ಕಲುತನದ ಕೌಶಲ ಪಡೆದು ಯಶಸ್ವಿ ಕೃಷಿಕರಾಗುವ ಸಾಧ್ಯತೆಯೂ ಇಲ್ಲಿದೆ. ವ್ಯಕ್ತಿಗೆ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಿದರೆ, ಎಲ್ಲ ಸೌಲಭ್ಯಗಳನ್ನೂ ಕೊಟ್ಟ ಫಲವಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾತನಾಡಿ, ‘ಯುವಜನತೆಯೇ ದೇಶದ ಶಕ್ತಿ. ದೇಶದಲ್ಲಿ ಶೇ 65ರಿಂದ 70ರಷ್ಟು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಖರ್ಚು–ವೆಚ್ಚ ಹೆಚ್ಚಳದಿಂದ ಕೃಷಿ ಲಾಭದಾಯಕ ಆಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದಕತೆ ಹೆಚ್ಚಿಲ್ಲ. ಹೀಗಾಗಿ ‘ಕೌಶಲ’ ಪಡೆದು ಉದ್ಯೋಗ ಗಳಿಸುವುದು ಉತ್ತಮ ಮಾರ್ಗ’ ಎಂದರು.

‘ಕೌಶಲ ಪಡೆದವರಿಗೆ ಉದ್ಯೋಗ ಪಡೆಯಲು ಇಂಗ್ಲಿಷ್‌ ಸಂವಹನ ಕಲೆ, ವಿದ್ಯಾರ್ಹತೆ ಮತ್ತಿತರ ನಿಬಂಧನೆಗಳಿಲ್ಲ. ಕಲಿಕಾ ಸಾಮರ್ಥ್ಯ, ಬದ್ಧತೆ, ಉತ್ಸಾಹದ ಮೂಲಕ ಮೇಲೆ ಬರಬಹುದು. ಈ ಪೈಕಿ ಹಲವು ಕೌಶಲಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆಯಿದ್ದು, ಉತ್ತಮ ಸಂಬಳ ಗಳಿಸಬಹುದು’ ಎಂದರು.

‘ಜಿಲ್ಲೆಯಲ್ಲಿ ಜವಳಿ, ಶಿಕ್ಷಣ, ಮಾಹಿತಿ–ತಂತ್ರಜ್ಞಾನ ಮತ್ತು ಕೃಷಿ ಸಂಬಂಧಿ ಕೌಶಲಗಳಿಗೆ ಅವಕಾಶಗಳು ಹೆಚ್ಚಿವೆ’ ಎಂದರು. ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಾ. ವೀರಣ್ಣ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ರುದ್ರಣ್ಣ ಗೌಡರ, ತಹಶೀಲ್ದಾರ್ ಜೆ.ಬಿ. ಮಜ್ಜಗಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಸ್. ಆರ್. ಪಾಟೀಲ್, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಶಂಕರ ಜಿ. ಕೊರವರ, ಶಿಕ್ಷಕ ನಾಗರಾಜ ನಡುವಿನಮಠ ಮತ್ತಿತರರು ಇದ್ದರು.

‘ಅಕ್ಕಿಗಿಂತ, ಅನ್ನ ದಾರಿಯೇ ಮುಖ್ಯ’

ಹಾವೇರಿ: ‘ನಮ್ಮಂತವರಿಗೆ ಅಕ್ಕಿ ನೀಡುವುದಕ್ಕಿಂತ, ಅನ್ನದ ದಾರಿಯನ್ನು ತೋರುವುದೇ ಒಳ್ಳೆಯ ಕೆಲಸ...’ ಇದು ತಾಲ್ಲೂಕಿನ ಹೊಸಳ್ಳಿಯ ರೂಪಾ ಮಡಿವಾಳರ ಮಾತು.
ನಗರದ ದೇವರಾಜ ಅರಸು ಭವನದಲ್ಲಿ ನಡೆಯುತ್ತಿರುವ ‘ಕೌಶಲ ಕರ್ನಾಟಕ ನೋಂದಣಿ ಅಭಿಯಾನ’ಕ್ಕೆ ಹೆಸರು ನೋಂದಾಯಿಸಲು ಮುಂಜಾನೆ 9.30ಕ್ಕೂ ಮೊದಲೇ ಬಂದಿದ್ದ ಅವರು, ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ಸ್ವಂತ ಕಾಲಿನ ಮೇಲೆ ನಿಂತು ಜೀವನ ನಡೆಸಬೇಕು ಎಂಬುದು ನಮ್ಮ ಆಸೆ. ಸರ್ಕಾರ ಅಕ್ಕಿ ಮತ್ತಿತರ ಸೌಲಭ್ಯ ನೀಡಿರುವುದು ಕಷ್ಟದ ಕಾಲದಲ್ಲಿ ಬಹಳ ನೆರವಾಗಿದೆ. ಆದರೆ, ಅದನ್ನೇ ಅವಲಂಬಿಸಬಾರದು. ನಮ್ಮ ಅನ್ನದ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ಯಾರ ಹಂಗಿಗೂ ಸಿಗಬಾರದು’ ಎಂದು ಅಭಿಪ್ರಾಯಪಟ್ಟರು.

ಹೊಸಳ್ಳಿಯ ವೆಂಕಟೇಶ್ ಮಡಿವಾಳರ ಮತ್ತು ರೂಪಾ ಹೊಸಳ್ಳಿ ದಂಪತಿ ಎಸ್ಸೆಸ್ಸೆಲ್ಸಿ ಪೂರೈಸಿದ್ದಾರೆ. ವೆಂಕಟೇಶ್ ಸದ್ಯ ಹೆಸ್ಕಾಂನ ವಿದ್ಯುತ್ ಲೈನ್‌ನಲ್ಲಿ ದಿನಗೂಲಿಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ‘ಸ್ವಾವಲಂಬನೆ’ಯ ಜೀವನ ನಡೆಸಬೇಕು ಎಂಬ ಹಂಬಲ. ಹೀಗಾಗಿ ಬೆಳಿಗ್ಗೆಯೇ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ಬಂದು, ಹೆಸರು ನೋಂದಾಯಿಸಲು ಕಾಯುತ್ತಿದ್ದರು.

‘ಕೌಶಲ ತರಬೇತಿ’ ಕುರಿತು ನಮ್ಮ ಗ್ರಾಮದಲ್ಲಿ ಈಚೆಗೆ ಡಂಗೂರ ಹೊರಡಿಸಿದ್ದರು. ಆ ಮೂಲಕ ಮಾಹಿತಿ ಪಡೆದು, ನಾನು ಮತ್ತು ಪತಿ ಹೆಸರು ನೋಂದಾಯಿಸಲು ಬಂದೆವು. ಹೆಚ್ಚಿನ ಒತ್ತಡ(ನೂಕುನುಗ್ಗಲು) ಇರಬಹುದು ಎಂಬ ಕಾರಣಕ್ಕೆ ಬೆಳಿಗ್ಗೆ ಬೇಗ ಬಂದಿದ್ದೇವೆ. ಅವರು(ಪತಿ) ನನ್ನನ್ನು ಇಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ’ ಎಂದರು.

‘ನನಗೆ ಮತ್ತು ಪತಿಗೆ ದುಡಿದು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಇಚ್ಛೆ ಇದೆ. ಯಾರ ಹಂಗೂ ಬೇಡ. ನಾವೇ ಕೆಲಸ ಮಾಡಿಕೊಂಡು ಜೀವನ ನಡೆಸಬೇಕು. ಶ್ರೀಮಂತರಾಗಲಿ, ಅಧಿಕಾರಿಗಳಾಗಲಿ, ಮಧ್ಯವರ್ತಿಗಳಾಗಲಿ... ಯಾರ ಮುಂದೆಯೂ ಕೈಚಾಚಿ ನಿಲ್ಲಬಾರದು...’ ಎಂದರು.

ಕೃಷಿ ಅಥವಾ ವಿದ್ಯುತ್ ಇಲಾಖೆಯ ಕೌಶಲ ಆಯ್ಕೆ ಮಾಡಲು ಬಂದಿದ್ದ ರೂಪಾ, ತಜ್ಞರ ಸಲಹೆ ಮೇರೆಗೆ ಬ್ಯುಟೀಷಿಯನ್, ವಿನ್ಯಾಸಕಾರ, ಪ್ರಸಾದನ ಕಲೆಯ ತರಬೇತಿ ಆಯ್ಕೆ ಮಾಡಿಕೊಂಡರು. ಪತಿ, ಎಲೆಕ್ಟ್ರಿಕಲ್‌ಗೆ ಸಂಬಂಧಿಸಿದ ತರಬೇತಿ ಆಯ್ಕೆ ಮಾಡಿಕೊಂಡರು.

‘ನಮ್ಮ ಅನ್ನವನ್ನು ನಾವೇ ದುಡಿಯಬೇಕು. ಅದಕ್ಕಾಗಿ ಅನ್ನದ ಮಾರ್ಗ ಬೇಕಾಗಿದೆ ಹೊರತು ‘ಅಕ್ಕಿ’ ಅಲ್ಲ. ‘ಅಕ್ಕಿ’ ತಾತ್ಕಾಲಿಕ. ‘ಅನ್ನದ ಮಾರ್ಗ’ವೇ ಶಾಶ್ವತ’ ಎಂಬುದನ್ನು ಅವರು ದೃಢವಾಗಿ ಹೇಳುತ್ತಿದ್ದರು. ‘ನನ್ನ ಪತಿ, ಅತ್ತೆ, ತವರು ಮನೆಯವರೆಲ್ಲ ‘ತರಬೇತಿ’ ಪಡೆಯಲು ಬೆಂಬಲಿಸಿದ್ದಾರೆ’ ಎಂದರು.

ಹಾವೇರಿ ಜಿಲ್ಲೆಯ ವಿವರ

528 ತರಬೇತಿಗೆ ಲಭ್ಯ ಇರುವ ‘ಕೌಶಲ’

5 ಒಬ್ಬರು ಆಯ್ಕೆ ಮಾಡಬೇಕಾದ ‘ಕೌಶಲ’

8 ಲಕ್ಷ ಜಿಲ್ಲೆಯಲ್ಲಿ ಯುವಜನತೆಯ ಅಂದಾಜು ಸಂಖ್ಯೆ

50 ಸಾವಿರ ಜಿಲ್ಲೆಯಲ್ಲಿ ಉದ್ಯೋಗವಕಾಶ ಕಲ್ಪಿಸುವ ಗುರಿ

*

ಜಿಲ್ಲಾ, ತಾಲ್ಲೂಕು ಮಟ್ಟ, ಬಾಪೂಜಿ ಸೇವಾ ಕೇಂದ್ರಗಳ ಜೊತೆಗೆ ಅಂತರ್ಜಾಲದ ಮೂಲಕ ನೋಂದಣಿ ಮಾಡಬಹುದು. ಇದೇ 23ರ ತನಕ ‘ನೋಂದಣಿ’ ನಡೆಯಲಿದೆ
ಡಾ.ವೆಂಕಟೇಶ್ ಎಂ.ವಿ.
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT