ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉನ್ನತಿಗೆ ತೊಡಕಾದ ತ್ಯಾಗ

Last Updated 17 ಮೇ 2017, 8:47 IST
ಅಕ್ಷರ ಗಾತ್ರ

ಬೆಳಗಾವಿ: ಮಹಿಳಾ ಉನ್ನತಿಗೆ ಆಕೆಯಲ್ಲಿರುವ ಮುಗ್ಧತೆ ಹಾಗೂ ತ್ಯಾಗ ತೊಡಕಾಗಿ ಪರಿಣಮಿಸಿವೆ. ಈ ಗುಣಗಳಿಂದ ವೈಯಕ್ತಿಕವಾಗಿಯೂ ಅಭಿವೃದ್ಧಿ ಸಾಧಿಸುವಂತೆ ಆಗಬೇಕೇ ಹೊರತು, ಸುಟ್ಟುಕೊಳ್ಳುವಂತಿರಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಸಲಹೆ ನೀಡಿದರು.

ರಾಜ್ಯ ಮಹಿಳಾ ಆಯೋಗ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ ಹಾಗೂ ಇಂದಿನ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು’ ಕುರಿತ ವಿಭಾಗಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರು ಸಮಾನತೆಗಾಗಿ ಹಿಂದಿನಿಂದಲೂ ಹೋರಾಡುತ್ತಲೇ ಇದ್ದಾಳೆ. ಇದು ನಮ್ಮ ರಾಜ್ಯ, ದೇಶದಲ್ಲಿ ಮಾತ್ರವಲ್ಲ. ಇಡೀ ವಿಶ್ವದಲ್ಲಿಯೇ ಕಂಡುಬರುತ್ತಿದೆ. ಹೆಣ್ಣು ಅಬಲೆಯಲ್ಲ, ಸಬಲೆ. ಇಡೀ ಕುಟುಂಟ ಕಟ್ಟಬಲ್ಲಳು. ಆಧಾರವಾಗಿ ನಿಲ್ಲಬಲ್ಲಳು. ಆರ್ಥಿಕ ಸಬಲೀಕರಣದ ತುಡಿತಗಳಿವೆ.

ಕೈಗಾರಿಕೆ, ಸಂಶೋಧನೆ ಕ್ಷೇತ್ರದಲ್ಲಿಯೂ ಸಾಧಿಸುತ್ತಿದ್ದಾಳೆ. ಅಂತರಿಕ್ಷದಲ್ಲಿಯೂ ವಿಹರಿಸುತ್ತಿದ್ದಾಳೆ. ಇದರೊಂದಿಗೆ ಲೆಕ್ಕಕ್ಕೇ ಸಿಗದಷ್ಟು ಸಮಸ್ಯೆಗಳು ಹಾಗೂ ಸವಾಲುಗಳಿವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಮುಗ್ದತೆ ಯಿಂದ ಹೊರಬರಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರತಿಪಾದಿಸಲು ಶಿಕ್ಷಣ ಬೇಕು: ‘ಹಕ್ಕುಗಳನ್ನು ಪಡೆಯಲು, ಪ್ರತಿಪಾದಿಸಲು ಶಿಕ್ಷಣ ಬೇಕಾಗುತ್ತದೆ. ಓದುವುದಕ್ಕೆ ಆಗದಿದ್ದರೂ ಇಂತಹ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ವಿಷಯಗಳನ್ನು ತಿಳಿದುಕೊಳ್ಳಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಕೊಡಿ ಎಂದು ಅಧಿಕಾರಿಗಳನ್ನು ಕೇಳಬೇಕು. ಆಗ ಅವರೂ ಎಚ್ಚೆತ್ತುಕೊಳ್ಳುತ್ತಾರೆ. ಮಹಿಳೆಯರ ದನಿ ಜೋರಾಗಿರಬಹುದು ನಿಜ. ಆದರೆ, ಹಕ್ಕುಗಳನ್ನು ಕೇಳುವುದನ್ನು ನಿಲ್ಲಿಸಬಾರದು’ ಎಂದು ತಿಳಿಸಿದರು.

‘ಮಹಿಳೆಯರ ಮೇಲೆ ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಲಿಂಗ ಸಮಾನತೆ ಬೇಕು. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬರುವವರೆಗೂ ಮಹಿಳೆ ಪರಾವಲಂಬಿಯೇ ಆಗಿರುತ್ತಾಳೆ. ಹೀಗಾಗಿ, ಮಹಿಳೆಯರು ಸ್ವಾವಲಂಬಿಯಾಗಲು ಸಜ್ಜಾಗಬೇಕು’ ಎಂದು ಕಿವಿಮಾತು ಹೇಳಿದರು.

ಸರ್ಕಾರಕ್ಕೆ ಪ್ರಸ್ತಾವ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ‘ಮಹಿಳಾ ದೌರ್ಜನ್ಯದ ವಿವಿಧ ರೂಪಗಳು ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿವೆ. ಇವುಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು. ಇಲ್ಲಿ ವ್ಯಕ್ತವಾಗುವ ಸಲಹೆ, ಸೂಚನೆ ಆಧರಿಸಿ ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಂಜಯ ಪಾಟೀಲ ಇತರರು ಇದ್ದರು.

ಮಹಾರಾಷ್ಟ್ರದ ಗಡಿ!
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಭಾಷಣದ ವೇಳೆ, ‘ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ’ ಎಂದು ಎರಡು ಬಾರಿ ಹೇಳಿದ್ದು ನೆರೆದಿದ್ದವರು ಹುಬ್ಬೇರುವಂತೆ ಮಾಡಿತು.

*

ಮಹಿಳೆ ಇನ್ನೂ ಎಷ್ಟು ತುಳಿತಕ್ಕೆ ಒಳಗಾಗಬೇಕು ಎಂದು ಸಮಾಜ ಬಯಸುತ್ತಿದೆ? ಇದು ನಾಗರಿಕ ಸಮಾಜದ ಲಕ್ಷಣವಲ್ಲ. ಆಕೆಯನ್ನು ಮಾನವೀಯತೆಯಿಂದ ಕಾಣಬೇಕು
ಉಮಾಶ್ರೀ
ಸಚಿವೆ

*

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ನೋವಾಗುತ್ತದೆ ಹಾಗೂ ಆತಂಕವಾಗುತ್ತದೆ. ನಾವು ಯಾವ ರಾಜ್ಯದಲ್ಲಿದ್ದೇವೆ ಎನಿಸುತ್ತಿದೆ!

ನಾಗಲಕ್ಷ್ಮೀಬಾಯಿ
ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT