ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಇಂದಿನಿಂದ ಸಭೆ

ಶ್ರೀನಗರದಲ್ಲಿ ಮಂಡಳಿ ಸಭೆ
Last Updated 17 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉಪ್ಪಿನಿಂದ ಕಾರ್‌ವರೆಗೆ ಖರೀದಿಸುವ ಸರಕುಗಳು ಮತ್ತು ಮೊಬೈಲ್‌ ಕರೆಗಳಿಂದ ಹಿಡಿದು ಹೋಟೆಲ್‌ಗಳಿಗೆ ಪಾವತಿಸುವ ತೆರಿಗೆ ದರಗಳನ್ನು ಶ್ರೀನಗರದಲ್ಲಿ ನಾಳೆಯಿಂದ ನಡೆಯಲಿರುವ ಎರಡು ದಿನಗಳ ಜಿಎಸ್‌ಟಿ ಮಂಡಳಿ ಸಭೆ  ನಿರ್ಧರಿಸಲಿದೆ.

ಈಗಾಗಲೇ ನಿರ್ಧರಿಸಿರುವ ಶೇ 5, 12, 18 ಮತ್ತು ಶೇ 28ರ ತೆರಿಗೆ ಹಂತಗಳಲ್ಲಿ ಸೇರ್ಪಡೆ ಮಾಡಬಹುದಾದ ಸರಕು ಮತ್ತು ಸೇವೆಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಈ ದರಗಳೇ ಜುಲೈ 1ರಿಂದ ದೇಶದಾದ್ಯಂತ  ಜಾರಿಗೆ ಬರಲಿವೆ.

ಈ ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಯು ಗರಿಷ್ಠ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ನೆರವಾಗಲಿದೆ. ಸರ್ಕಾರಗಳ ಹಣಕಾಸು ಪರಿಸ್ಥಿತಿ ಸುಧಾರಿಸಲೂ ನೆರವಾಗಲಿದೆ.

ಸದ್ಯಕ್ಕೆ ಸೇವಾ ತೆರಿಗೆಯಿಂದ ವಿನಾಯ್ತಿ ಪಡೆದಿರುವ ಮೂಲ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಕೈಬಿಡಲು ಸಾಧ್ಯತೆ ಇದೆ. ಜಿಎಸ್‌ಟಿ ಜಾರಿಗೊಳಿಸುವ ಮೊದಲ ವರ್ಷವೇ ಜನರಿಗೆ ಯಾವುದೇ ಆಘಾತ ನೀಡದಿರಲು ಸರ್ಕಾರ ನಿರ್ಧರಿಸಿದೆ.

ಸದ್ಯಕ್ಕೆ ಸೇವಾ ತೆರಿಗೆಗೆ ಒಳಪಡದ ಪಟ್ಟಿಯಲ್ಲಿ ಧಾರ್ಮಿಕ ಯಾತ್ರೆ, ಆರೋಗ್ಯ ರಕ್ಷಣೆ, ಶಿಕ್ಷಣ, ಪತ್ರಿಕೋದ್ಯಮ ಚಟುವಟಿಕೆ, ಕೌಶಲ ಅಭಿವೃದ್ಧಿ ಒಳಗೊಂಡಂತೆ 60ಕ್ಕೂ ಹೆಚ್ಚು ಸೇವೆಗಳು ತೆರಿಗೆಯಿಂದ ವಿನಾಯ್ತಿ ಪಡೆದಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮಹತ್ವವನ್ನು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ  ಈ ಸಭೆಯನ್ನು ಶ್ರೀನಗರದಲ್ಲಿ ನಡೆಸಲಾಗುತ್ತಿದೆ.

ಶ್ರೀನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಚಾರದ ಕಾರಣಕ್ಕೆ ಸಭೆಗೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು, ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT