ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ನಲುಗಿದ ತೋಟಗಾರಿಕಾ ಕ್ಷೇತ್ರ

Last Updated 18 ಮೇ 2017, 7:00 IST
ಅಕ್ಷರ ಗಾತ್ರ

ಶಿರಸಿ: ನಗರದ ಹೊರವಲಯದಲ್ಲಿರುವ ತೆರಕನಳ್ಳಿಯ ತೋಟಗಾರಿಕಾ ಕ್ಷೇತ್ರ ಬಿರು ಬಿಸಿಲಿಗೆ ಸೊರಗಿ ನಿಂತಿದೆ. ಕ್ಷೇತ್ರದಲ್ಲಿ ನಾಟಿ ಮಾಡಿರುವ ಹೊಸ ತಳಿಯ ಗಿಡಗಳು, ಉದ್ಯಾನ ನೀರಿಲ್ಲದೇ ಬಡವಾಗಿವೆ.

ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಏಜೆನ್ಸಿಯ ತೋಟಗಾರಿಕಾ ಕ್ಷೇತ್ರದ ಅಡಿಯಲ್ಲಿ ಪಾರ್ಕ್ ಮತ್ತು ಗಾರ್ಡನ್ ಯೋಜನೆ ಅಡಿಯಲ್ಲಿ ತೆರಕನಳ್ಳಿಯಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ.

20 ಎಕರೆಯ ವಿಸ್ತಾರ ಪ್ರದೇಶದಲ್ಲಿ ಒಂದೆಡೆ ಕಸಿ ಕಾಳುಮೆಣಸು, ಮಾವು, ಗೇರು ಗಿಡಗಳ ನರ್ಸರಿಯಿದೆ. ಇನ್ನೊಂದೆಡೆ ಎರಡು ಎಕರೆ ಯಲ್ಲಿ ಉದ್ಯಾನ ಮೈದಳೆದಿದೆ. ಸುಮಾರು ಒಂಬತ್ತು ಎಕರೆಯಲ್ಲಿ ಆರು ತಳಿಗಳ ಹಲಸು, ರಂಬುಟಾನ್, ಮ್ಯಾಂಗೋಸ್ಟಿನ್ ಸಸ್ಯಗಳನ್ನು ಮೂರು ವರ್ಷಗಳ ಹಿಂದೆ ನಾಟಿ ಮಾಡಲಾಗಿದೆ. ಬೆಳವಣಿಗೆಯ ಹಂತದಲ್ಲಿರುವ ಈ ಗಿಡಗಳು ನೀರಿಲ್ಲದೇ ಸಾಯುವ ಸ್ಥಿತಿಗೆ ತಲುಪಿವೆ.

ಉದ್ಯಾನದ ಹಸಿರು ಹುಲ್ಲಿನ ಹಾಸು ಸಂಪೂರ್ಣ ಒಣಗಿ ಹೋಗಿದೆ. ಜೆನಿಫರಸ್, ಸೈಪ್ರಸ್, ಕ್ರಿಸ್‌ಮಸ್ ಗಿಡಗಳಲ್ಲಿ ಕೆಲವು ಸತ್ತು ಹೋಗಿವೆ, ಬಹಳಷ್ಟು ಗಿಡಗಳು ಅಂತೂ ಇಂತೂ ಜೀವ ಹಿಡಿದುಕೊಂಡು ನಿಂತಿವೆ. ಉದ್ಯಾನದಲ್ಲಿರುವ  ಹಸಿರು ಹುಲ್ಲಿನ ಹಾಸು ನಿರ್ವಹಣೆಗೆ ಇರುವ ₹ 1 ಲಕ್ಷ ಅನುದಾನವನ್ನು ಪರಿವರ್ತಿಸಿಕೊಂಡಿರುವ ತೋಟಗಾರಿಕಾ ಇಲಾಖೆ ಇದನ್ನು ಟ್ಯಾಂಕರ್ ನೀರಿಗೆ ಖರ್ಚು ಮಾಡಿ ಸಸ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

‘ತೋಟಗಾರಿಕಾ ಕ್ಷೇತ್ರದಲ್ಲಿರುವ ನರ್ಸರಿ ಸಸ್ಯಗಳ ನಿರ್ವಹಣೆ ಪ್ರತ್ಯೇಕ ಒಂದು ಬೋರ್‌ವೆಲ್ ಇದೆ. ಇದರ ನೀರು ನರ್ಸರಿಗೆ ಮಾತ್ರ ಸಾಕಾಗುತ್ತದೆ. ಇನ್ನುಳಿದ ಸಸ್ಯಗಳಿಗೆ ಪ್ರತಿದಿನ ಎರಡು ಟ್ಯಾಂಕರ್‌ಗಳಲ್ಲಿ ನೀರನ್ನು ಕೊಂಡೊಯ್ದು ಬಾವಿಗಳಿಗೆ ತುಂಬಿಸಿ ಡ್ರಿಪ್ ಮೂಲಕ ನೀಡಲಾಗುತ್ತದೆ. ಗಿಡಗಳಿಗೆ ಈ ನೀರು ಸಾಕಾಗದು. ಕೇವಲ ಜೀವ ಹಿಡಿದಿಟ್ಟುಕೊಳ್ಳುವಷ್ಟು ನೀರನ್ನು ಡ್ರಿಪ್ ಒದಗಿಸುತ್ತದೆ’ ಎನ್ನುತ್ತಾರೆ ಉದ್ಯಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅಣ್ಣಪ್ಪ ನಾಯ್ಕ.

‘ಹಾಲಿ ಇರುವ ಬೋರ್‌ವೆಲ್ ಆಳಗೊಳಿಸಲು ಕ್ರಮವಹಿಸಲಾಗಿದೆ. ಬಾವಿಯನ್ನು 10 ಅಡಿ ಆಳ ಮಾಡಲಾಗಿದೆ. ಹೊಸದಾಗಿ ಒಂದು ಬೋರ್‌ವೆಲ್ ಹಾಗೂ ಕೆರೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಹಿಂದೆಯೇ ₹ 10 ಲಕ್ಷ ಮೊತ್ತದಲ್ಲಿ ಕೃಷಿಹೊಂಡ ನಿರ್ಮಿಸಿ ಮಳೆ ನೀರನ್ನು ಇಲ್ಲಿಯೇ ಇಂಗಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾರ್ಕ್ ಮತ್ತು ಉದ್ಯಾನ ಯೋಜನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಮಂಜೂರು ಆಗಿದ್ದ ಉದ್ಯಾನದ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದ ನಿಧಾನಗತಿಯ ಕೆಲಸ, ಕಳಪೆ ಕಾಮಗಾರಿ ಈ ವಿಳಂಬಕ್ಕೆ ಕಾರಣವಾಗಿದೆ. ಈಗಾಗಲೇ ಮಾಡಿರುವ ಡ್ರಿಪ್ ಕೆಲಸ ಕಳಪೆಯಾಗಿದ್ದು, ಪುನರ್ ನಿರ್ಮಾಣಕ್ಕೆ ಸೂಚಿಸಲಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿಯ ಬೇಸಿಗೆ ತೋಟಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಶೇ 20ರಷ್ಟು ಗಿಡಗಳು, ಹಾನಿಯಾಗಿವೆ. ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಡಿಯಲ್ಲಿ ರಾಂಬುಟಾನ್. ಮ್ಯಾಂಗೋಸ್ಟಿನ್. ಸ್ಥಳೀಯ ಜಾತಿಯ ಹಲಸು, ಜಿಲ್ಲಾ ಪಂಚಾಯ್ತಿ ಯೋಜನೆಯಡಿಯಲ್ಲಿ ರೈತರಿಗೆ ಬೇಕಾಗುವ ಸಸ್ಯೋತ್ಪಾದನೆ, ಕಸಿ ಕಾಳುಮೆಣಸು, ಕೋಕೊ. ಮಾವು ಸಸಿಗಳನ್ನು ಇಲ್ಲಿಯೇ ಬೆಳೆಸುವುದರಿಂದ ಜಲಮೂಲ ಅಭಿವೃದ್ಧಿಗೆ ಆದ್ಯತೆ ನೀಡಿ, ಮುಂದಿನ ಬೇಸಿಗೆಯಲ್ಲಿ ಆಗುವ ತೊಂದರೆ ತಪ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅಣ್ಣಪ್ಪ ನಾಯ್ಕ ಹೇಳಿದರು.

**

ತೋಟಗಾರಿಕಾ ಕ್ಷೇತ್ರದಲ್ಲಿ ಒಂದು ಎಕರೆಯಲ್ಲಿ ಕೆರೆ ನಿರ್ಮಿಸಲು ₹ 20 ಲಕ್ಷದ ಪ್ರಸ್ತಾವವನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ
-ಅಣ್ಣಪ್ಪ ನಾಯ್ಕ,
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT