ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರ ಮೇಲೆ ಕ್ರಮಕ್ಕೆ ಆಗ್ರಹ

Last Updated 18 ಮೇ 2017, 7:02 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಸ್ಥಳೀಯ ಹೋಟೆಲ್‌ಗಳು ಮತ್ತು ಗೂಡಂಗಡಿಗಳ ಮಾಲೀಕರು ಆಹಾರ ಪದಾರ್ಥದ ರುಚಿ ಹೆಚ್ಚಿಸಲು ಯಥೇಚ್ಛವಾಗಿ ಮೊನೊ ಸೋಡಿಯಂ ಗ್ಲುಟಾಮೇಟ್ (ಎಂಎಸ್‌ಜಿ) ಬಳಸುತ್ತಿದ್ದು, ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾಯಿ ಪರಿವರ್ತನ ಆರೋಗ್ಯ ಸೇವಾ ಸಂಸ್ಥೆಯು ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಅವರನ್ನು ಒತ್ತಾಯಿಸಿದೆ.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಮ್ಮದ್‌ ಹನೀಫ್ ಸುತಗಟ್ಟಿ ಅವರಿಗೆ ಬುಧವಾರ ಸಂಸ್ಥೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿ ಈ ಒತ್ತಾಯವನ್ನು ಮಾಡಿದರು.

ಇದಕ್ಕೂ ಮೊದಲು ಸಂಸ್ಥೆಯ ಅಧ್ಯಕ್ಷ ದೀಪಕ ಮುತ್ತೂರ ಪತ್ರಕರ್ತರೊಂದಿಗೆ ಮಾತನಾಡಿ ‘ಎಂಎಸ್‌ಜಿ ಮಾರಾಟ ಮತ್ತು ಬಳಕೆಯನ್ನು ಈಗಾಗಲೇ ಸರ್ಕಾರ ನಿಷೇಧಿಸಿದೆ. ಆದರೆ ಪಟ್ಟಣದ ಕೆಲ ಅಂಗಡಿಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ ಇದನ್ನು ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ’ ಎಂದು ತಿಳಿಸಿದರು.

‘ಹೋಟೆಲ್‌ಗಳಲ್ಲಿ ಆಹಾರ ಸಿದ್ಧಪಡಿಸುವ ಸಂದರ್ಭದಲ್ಲಿ ರುಚಿ ಹೆಚ್ಚಿಸುವ ಉದ್ದೇಶದಿಂದ ಇದನ್ನು ಉಪಯೋಗ ಮಾಡುತ್ತಿರುವವರಿಗೆ ಆರೋಗ್ಯದ ಮೇಲೆ ಇದು ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದು ತಿಳಿದಂತಿಲ್ಲ’ ಎಂದರು.

‘ಎಂಎಸ್‌ಜಿ ಬಳಸಿದ ಆಹಾರ ಪದಾರ್ಥ ಸೇವಿಸಿದರೆ ತಲೆನೋವು, ಅರ್ಧ ತಲೆನೋವು, ನರಗಳ ದೌರ್ಬಲ್ಯ, ಅಶಕ್ತತೆ, ಮುಖ, ಕುತ್ತಿಗೆಯಲ್ಲಿ ಉರಿತ, ಪಾರ್ಕಿನ್‌ಸನ್, ಅಲರ್ಜಿ, ಹೃದಯದ ತೊಂದರೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಮಹಿಳೆಯರಲ್ಲಿ ಸಂತಾನ ಹೀನತೆ, ಹೊಟ್ಟೆ ನೋವು, ಥೈರಾಯಿಡ್ ಸಮಸ್ಯೆಗಳು, ಮಧುಮೇಹ, ಸ್ಥೂಲಕಾಯ, ಅಸ್ತಮಾ, ಕಣ್ಣಿನ ತೊಂದರೆ, ಅನಿದ್ರತೆಯಂತಹ ಹಲವಾರು ಸಮಸ್ಯೆಗಳು ಕಂಡು ಬರುತ್ತವೆ.

ತಕ್ಷಣಕ್ಕೆ ಇವು ಕಾಣಿಸದಿದ್ದರೂ ದೀರ್ಘ ಕಾಲದ ಸೇವನೆ ತುಂಬ ಅಪಾಯಕಾರಿ ಎಂಬ ಅಭಿಪ್ರಾಯ ಆರೋಗ್ಯಾಧಿಕಾರಿಯಿಂದ ವ್ಯಕ್ತವಾಗಿದೆ’ ಎಂದು ಪರಿಣಾಮಗಳ ಬಗ್ಗೆ ಅವರು ಎಚ್ಚರಿಸಿದರು.

‘ಸಾರ್ವಜನಿಕರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲ ಅಂಗಡಿ, ಮುಂಗಟ್ಟು ಮತ್ತು ಉಪಾಹಾರ ಮಂದಿರಗಳಿಗೆ ತೆರಳಿ ಇದರ ಬಳಕೆ ನಿಷೇಧಿಸಬೇಕು ಮತ್ತು ಪುನ: ಬಳಕೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ರಾಜಶೇಖರ ಕೋಟಿ, ಎಂ. ಎಂ. ರಾಜೀಬಾಯಿ ಇತರರು ಇದ್ದರು.

**

ಬಾಯಿ ರುಚಿ ಹೆಚ್ಚಿಸುವ ಉದ್ದೇಶದಿಂದ  ಬಹುತೇಕ ಹೊಟೆಲ್‌ಗಳು ಎಂಎಸ್‌ಜಿ ಉಪಯೋಗಿಸುತ್ತಿದ್ದು, ದೀರ್ಘ ಕಾಲದ ಬಳಕೆಯ ಅಪಾಯ ಗಾಬರಿ ಹುಟ್ಟಿಸುತ್ತದೆ
-ದೀಪಕ ಮುತ್ತೂರ, ಸಾಯಿ ಪರಿವರ್ತನ ಸಂಸ್ಥೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT