ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ ಬಂದ್‌, ಪ್ರಯಾಣಿಕರ ಪರದಾಟ

Last Updated 18 ಮೇ 2017, 7:13 IST
ಅಕ್ಷರ ಗಾತ್ರ

ಹಳಿಯಾಳ: ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ದಲಿತರ ಕಾಲೊನಿಯ ಪಕ್ಕದಲ್ಲಿಯೇ ನಿವೇಶನ ನೀಡಬೇಕೆಂದು ಆಗ್ರಹಿಸಿ ಬುಧವಾರದಂದು ದಲಿತ ಸಂಘಟನೆಯ ಒಕ್ಕೂಟದ ವತಿಯಿಂದ ಹಳಿಯಾಳ ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಸಂಪೂರ್ಣ ಹಳಿಯಾಳ ಬಂದ್ ಮಾಡಲಾಯಿತು.

ಬೆಳಿಗ್ಗೆಯಿಂದಲೇ ಅಂಗಡಿಗಳು, ಹೋಟೆಲ್‌ ಬಂದ್‌ ಆಗಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸಾರಿಗೆ ಸಂಚಾರ ಕೆಲ ಕಾಲ ಬಂದ್‌ ಆಗಿತ್ತು. ಪರ ಊರಿಗೆ ತೆರಳುವ ಹಾಗೂ ದೂರದಿಂದ ಬಂದ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.

ಹೂವು, ಹಣ್ಣು, ತರಕಾರಿ, ರಸ್ತೆ ಮೇಲೆ ವ್ಯಾಪಾರ ಮಾಡುವ ವ್ಯಾಪಾರಸ್ಥರು ಸಹ ಯಾವುದೇ ವ್ಯಾಪಾರ ವಹಿವಾಟು ಮಾಡದೇ ಸಂಪೂರ್ಣ ಬಂದ್ ಆಗಿತ್ತು. ಬ್ಯಾಂಕ್‌, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್‌ ಕಾರ್ಯಾಲಯದ ಹತ್ತಿರ ದಲಿತ ಸಂಘಟನೆಯ ವತಿಯಿಂದ ನಡೆಸಲಾಗುತ್ತಿರುವ ಧರಣಿ ಬಳಿ ದಲಿತ ಮುಖಂಡರು, ಕಾರ್ಯಕರ್ತರು ಸೇರಿ ಅಲ್ಲಿಂದ ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಇಂದಿರಾನಗರ, ಬಸ್ ಸ್ಟ್ಯಾಂಡ್‌ ಮಾರ್ಗ, ಕಿಲ್ಲಾ ಮಾರ್ಗದಿಂದ, ಬಸವರಾಜ ಗಲ್ಲಿ ಹಾಗೂ ಮುಖ್ಯ ರಸ್ತೆವರಗೆ ಬೈಕ್ ರ್‍ಯಾಲಿ ನಡೆಸಿದರು. ಪುನಃ ಧರಣಿ ನಿರತರ ಬಳಿ ಮರಳಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು.

ನಂತರ ದಲಿತ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಮಾತನಾಡಿ ‘ಮೇ 10ರಿಂದ ತಹಶೀಲ್ದಾರ್‌ ಕಾರ್ಯಾಲಯದ ಆವರಣದ ಮುಂದೆ ಅಂಬೇಡ್ಕರ್‌ ಭವನಕ್ಕಾಗಿ ಧರಣಿಯನ್ನು ಕೈಗೊಂಡಿದ್ದರೂ ಯಾವುದೇ ಅಧಿಕಾರಿಯಾಗಲಿ, ಪುರಸಭೆಯ ಅಧ್ಯಕ್ಷರಾಗಲಿ ತಮ್ಮನ್ನು ಭೇಟಿಯಾಗಿಲ್ಲ. ಮೇ 18ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಳಿಯಾಳದಲ್ಲಿ ಆಗಮಿಸಲಿದ್ದಾರೆ. ಅಂದು ತಮ್ಮ ಬೇಡಿಕೆಯಂತೆ ದಲಿತ ಕಾಲೊನಿಯ ಬಳಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಮಂಜೂರಾತಿ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಉಗ್ರರೂಪ ತಾಳಲಿದೆ’ ಎಂದರು.

ಮುಖಂಡರಾದ ಮೇಘರಾಜ ಮೇತ್ರಿ, ಬಡೇಸಾಬ ಕಕ್ಕೇರಿ, ಮಾರುತಿ ಕಲಭಾವಿ, ಸಂತೋಷ ಘಟಕಾಂಬಳೆ, ಯಲ್ಲಪ್ಪಾ ಹೋನ್ನೋಜಿ, ಮತ್ತೈಯ್ಯಾ ಮಾದರ, ರಮೇಶ ಮಾದರ, ಅನೂಪ ಮಾದರ, ರಾಮು ಮೇತ್ರಿ, ಮಾರುತಿ ಕುರಿಯರ, ಪ್ರಕಾಶ ಗೌಡಪ್ಪನವರ, ಕುಮಾರ ಕಲಭಾವಿ, ಮಂಜುಳಾ ಮಾದರ, ಸುಮಿತ್ರಾ ಚಲವಾದಿ, ಶಾಂತವ್ವಾ ಮಾದರ, ತಿಪ್ಪಮ್ಮಾ ಮಾದರ, ಬಸ್ಸಮ್ಮಾ ಮಾದರ, ಮಂಜುನಾಥ ಗಜಾಕೋಶ, ಸವಿತಾ ಮಾದರ, ನಾರವ್ವಾ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT