ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರಿಗೆ ಗೊ.ರು.ಚ ದತ್ತಿನಿಧಿ ಪ್ರಶಸ್ತಿ ಪ್ರದಾನ

Last Updated 18 ಮೇ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು:  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಚನ ಹಾಗೂ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರಿಗೆ ‘ಗೊ.ರು.ಚನ್ನಬಸಪ್ಪ ದತ್ತಿನಿಧಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

‘ಗೊ.ರು.ಚ ಶರಣ ಪ್ರಶಸ್ತಿ’ಯನ್ನು ಕೊಪ್ಪಳ ಜಿಲ್ಲೆಯ ಡಾ. ವೀರಣ್ಣ ಬಸಪ್ಪ ರಾಜೂರ, ‘ಗೊ.ರು.ಚ ಜಾನಪದ ಪ್ರಶಸ್ತಿ’ಯನ್ನು ಉತ್ತರ ಕನ್ನಡ ಜಿಲ್ಲೆಯ ಡಾ. ಎನ್‌.ಆರ್‌.ನಾಯಕ್‌, ‘ಗೊ.ರು.ಚ ಶರಣ ಸಾಹಿತ್ಯ ಗ್ರಂಥ’ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಡಾ. ಸಂಗಮೇಶ ಸವದತ್ತಿಮಠ (ಗ್ರಂಥ: ವಚನ ವಿಷಯ ವಿವರಣ ಸಂಪುಟ) ಹಾಗೂ ತುಮಕೂರು ಜಿಲ್ಲೆಯ ಎಚ್‌.ಎಸ್‌.ಸಿದ್ಧಗಂಗಪ್ಪ (ಗ್ರಂಥ: ಜಾನಪದ ಸಂಶೋಧನಾ ತೆನೆಗಳು) ಅವರಿಗೆ ನೀಡಿ ಗೌರವಿಸಲಾಯಿತು.

ಶರಣ ಪ್ರಶಸ್ತಿ ಹಾಗೂ ಜಾನಪದ ಪ್ರಶಸ್ತಿಯು ತಲಾ ₹ 25,000 ನಗದು ಹಾಗೂ ಸಾಹಿತ್ಯ ಗ್ರಂಥ ಪ್ರಶಸ್ತಿಯು ತಲಾ ₹ 10,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಸಂಗಮೇಶ ಸವದತ್ತಿಮಠ ಮಾತನಾಡಿ, ‘ವಿಶ್ವವಿದ್ಯಾಲಯಗಳಲ್ಲಿ ಬಸವ ಪೀಠ ಒಂದಿದ್ದರೆ ಸಾಕು. ಅದರಲ್ಲೇ ಎಲ್ಲ ಶರಣರ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಬಹುದು. ಆದರೆ, ಜಾತಿ ಆಧಾರಿತ ಶರಣರ ಪೀಠಗಳನ್ನು ಸ್ಥಾಪಿಸುತ್ತಿರುವುದು ವಿಷಾದದ ಸಂಗತಿ’ ಎಂದರು.

ಅಂತರಂಗ ಪರಿಶೀಲಿಸಿಕೊಳ್ಳಿ: ‘ಚಲನಶೀಲವಾಗಿದ್ದ ವೀರಶೈವ ಅಥವಾ ಲಿಂಗಾಯತ ಸಮಾಜವು ಶರಣ ಚಳವಳಿ ನಂತರ ಜಡವಾಯಿತು. ಈಗಲೂ ವೀರಶೈವ ಸಮಾಜದಲ್ಲಿ ಜಾತಿಭೇದ ಇದೆ. ವಧು, ವರರ ಕೊಡುಕೊಳ್ಳುವಿಕೆ ಆಯಾ ಜಾತಿಗಳಲ್ಲಿ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಅಂತರಂಗದ ಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಹೇಳಿದರು.

‘ಗುರುಪೀಠ, ವಿರಕ್ತಪೀಠಗಳಿಗೆ ಮೊದಲಿನಿಂದಲೂ ತಿಕ್ಕಾಟ ಇದೆ. ಸಾವಿರಾರು ವರ್ಷಗಳ ಹಿಂದೆ ರೇಣುಕಾ ಇದ್ದರು ಎಂದು ಪ್ರತಿಪಾದನೆ ಮಾಡುತ್ತಾರೆ. ರೇಣುಕಾ ಯುಗಮಾನೋತ್ಸವ, ಬಸವ ಜಯಂತಿಯನ್ನು ಆಚರಿಸುತ್ತಾರೆ. ಆದರೆ, ರೇಣುಕಾ ಎಂಬ ವ್ಯಕ್ತಿ ಇರಲಿಲ್ಲ, ಅದು ಕಲ್ಪಿತ’ ಎಂದರು.

‘ವೃಷಭ ಹೇಗೆ ಬಸವರಾಗಿ ಅವತರಿಸಿದರೋ ಹಾಗೆಯೇ ರೇಣುಕಾ ರೇವಣರಾಗಿ ಅವತರಿಸಿದರು. ವೃಷಭ, ರೇಣುಕಾ ಇದ್ದದ್ದು ಕೈಲಾಸದಲ್ಲಿ. ಈ ಲೋಕದಲ್ಲಿ ಇದ್ದವರು ಬಸವ, ರೇವಣ. ಇಲ್ಲಿ ವಿರಕ್ತ ಪೀಠಗಳು, ಗುರುಪೀಠಗಳು ಹೆಚ್ಚು ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲವೂ ಒಂದೇ’ ಎಂದರು.

‘ಯಾವುದು ಬಡವರಿಗಾಗಿ ಶ್ರಮಿಸುತ್ತಿದೆಯೋ, ಜಾತಿಭೇದ ಇಲ್ಲದೆ ಒಳಕ್ಕೆ ಬಿಟ್ಟುಕೊಳ್ಳುತ್ತಿದೆಯೋ, ಉತ್ತರಾಧಿಕಾರಿ ನೇಮಕ ಮಾಡಿಕೊಳ್ಳುತ್ತಿದೆಯೋ ಅದು ಶ್ರೇಷ್ಠವಾದ ಮಠ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT