ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಸಹಿತ ಮಳೆ; ಜನಜೀವನ ಅಸ್ತವ್ಯಸ್ತ

Last Updated 18 ಮೇ 2017, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆಯಿಂದಲೇ ಮಳೆ ಸುರಿದು, ಜನಜೀವನ ಅಸ್ತವ್ಯಸ್ತಗೊಂಡಿತು.

ಬುಧವಾರ ಸಂಜೆಯಿಂದ ತಡರಾತ್ರಿಯವರೆಗೆ ಮಳೆಯಾಗಿತ್ತು. ಆದರೆ, ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲು ಇತ್ತು.
ಸಂಜೆ 5 ಗಂಟೆಯ ನಂತರ ಮೋಡ ಕವಿದ ವಾತಾವರಣ ಕಂಡುಬಂತು. ಬಳಿಕ ಜೋರಾದ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು. ಇದರಿಂದ ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟ ಜನ, ತೊಂದರೆ ಅನುಭವಿಸಿದರು.

ನಾಗರಬಾವಿಯ ಎರಡು ಕಡೆ ಮರಗಳು ನೆಲಕ್ಕುರುಳಿವೆ. ಜೆ.ಪಿ. ನಗರದ ಐಟಿಐ ಲೇಔಟ್‌, ಜಯನಗರದ 7ನೇ ಹಂತ, ವಿದ್ಯಾರಣ್ಯಪುರದ ಕೆ.ಜಿ. ನಗರ, ರಾಜರಾಜೇಶ್ವರಿ ನಗರ ಬಳಿಯ   ಪಟ್ಟಣಗಿರಿ ಹಾಗೂ ಗ್ಲೋಬಲ್‌ ನಗರದಲ್ಲಿ ತಲಾ ಒಂದು ಮರ ಉರುಳಿಬಿದ್ದಿವೆ.
ಮರಗಳು ಬಿದ್ದ ರಸ್ತೆಯಲ್ಲೆಲ್ಲ ವಾಹನ  ಸಂಚಾರ ಬಂದ್‌ ಆಗಿತ್ತು. ಈ ಬಗ್ಗೆ ದೂರುಗಳು ಬಂದಿದ್ದರಿಂದ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಹೋಗಿ ರಾತ್ರಿಯಿಡೀ ಮರಗಳ ತೆರವು ಕಾರ್ಯಾಚರಣೆ ನಡೆಸಿದರು.

ಕೆಲವೆಡೆ ವಿದ್ಯುತ್‌ ಕಂಬಗಳು ಉರುಳಿಬಿದ್ದಿದ್ದರಿಂದ, ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಈ ಸಮಸ್ಯೆಗೆ ಸಂಬಂಧಪಟ್ಟಂತೆ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ  ಬೆಸ್ಕಾಂ ಸಹಾಯವಾಣಿಗೆ 3,715 ದೂರುಗಳು ಬಂದಿದ್ದವು.
ಸೂಲಿಬೆಲೆಯಲ್ಲಿ ಮನೆಗಳಿಗೆ ಹಾನಿ: ಈ. ಮುತ್ಸಂದ್ರದಲ್ಲಿ ಬುಧವಾರ ರಾತ್ರಿ ಮಳೆ ಸುರಿದ ವೇಳೆ ಜೋರಾಗಿ ಬೀಸಿದ ಗಾಳಿಗೆ ಹತ್ತು ಮನೆಗಳಿಗೆ ಹಾನಿಯಾಗಿದೆ.

ಮನೆಯ ಚಾವಣಿಗೆ ಹಾಕಲಾಗಿದ್ದ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಜತೆಗೆ ಹಲಸಿನ ಮರ ಹಾಗೂ ಮೂರು ತೆಂಗಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮ ಅವೆಲ್ಲ ಸುಟ್ಟು ಹೋದವು. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ವಲಿಜಾನ್, ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಮನೆ ಮೇಲೆ ಉರುಳಿಬಿದ್ದ ಮರ: ಕೆ.ಆರ್.ಪುರ ಹಾಗೂ ಸುತ್ತಮುತ್ತ ಗುರುವಾರ ಗಾಳಿಸಹಿತ ಭಾರಿ ಮಳೆಯಾಗಿದೆ. ರಾಮಮೂರ್ತಿ ನಗರ ಸಮೀಪದ   ಕಲ್ಕೆರೆ ಗ್ರಾಮದಲ್ಲಿ ರಮೇಶ್‌ ಎಂಬುವರಿಗೆ ಸೇರಿದ ಮನೆ ಮೇಲೆ ಅರಳಿ ಮರ ಉರುಳಿ ಬಿದ್ದಿದೆ.

ಇದರಿಂದ ಮನೆಯ ಚಾವಣಿಯ ಶೀಟುಗಳು ಹಾಗೂ ಗೋಡೆಗೆ ಹಾನಿ ಆಗಿದೆ. ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
‘ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಅರಳಿ ಮರ ಬೀಳುತ್ತಿದ್ದಂತೆ   ಚಾವಣಿಗೆ ಹಾಕಿದ್ದ ಶೀಟುಗಳು ಒಡೆದವು. ಈ ವೇಳೆ ಭಾರಿ ಶಬ್ದ ಕೇಳಿಬಂತು. ತಕ್ಷಣ ಮನೆಯಿಂದ ಹೊರಗೆ ಓಡಿದೆ’ ಎಂದು ರಮೇಶ್‌ ಅವರ ಮಗಳು ತಿಳಿಸಿದರು.

ಕೆ.ಆರ್.ಪುರ, ರಾಮಮೂರ್ತಿ ನಗರ, ಟಿನ್‌ ಫ್ಯಾಕ್ಟರಿ ಬಳಿ ಭಾರಿ ಮಳೆಯಾದ್ದರಿಂದ ಸಂಚಾರ ದಟ್ಟಣೆ  ಉಂಟಾಗಿತ್ತು.

ದಾಖಲೆ ಮಳೆ
‘ನಗರ ಹಾಗೂ ಸುತ್ತಮುತ್ತ ಗುರುವಾರ ಮತ್ತು ಬುಧವಾರ ದಾಖಲೆ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು.

‘ಕೆಂಗೇರಿ ವ್ಯಾಪ್ತಿಯಲ್ಲಿ 10.1 ಸೆಂ.ಮೀ, ಜಿಗಣಿ– 5.8 ಸೆ.ಮೀ, ತಾವರೆಕೆರೆ– 6.5 ಸೆಂ.ಮೀ ಹಾಗೂ ರಾಜರಾಜೇಶ್ವರಿ ನಗರ– 6.6 ಸೆಂ.ಮೀ ಮಳೆಯಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT