ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ನಿದ್ದೆಗೆಡೆಸಿದ ‘ಕಂಟ್ರಿ ಪಿಸ್ತೂಲ್’ ಸದ್ದು

Last Updated 19 ಮೇ 2017, 6:44 IST
ಅಕ್ಷರ ಗಾತ್ರ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಗಾಗ್ಗೆ ಕಂಟ್ರಿ ಪಿಸ್ತೂಲ್‌ ಬಳಸಿ ನಡೆಯುತ್ತಿರುವ ಶೂಟೌಟ್‌ ಪ್ರಕರಣ ಒಂದೆಡೆ ಪೊಲೀಸ ರನ್ನು ಬೆಂಬಿಡದ ಭೂತದಂತೆ ಕಾಡಿದರೆ, ಸಾಮಾನ್ಯ ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಸಾಂಸಾರಿಕ, ಕೌಟುಂಬಿಕ, ದಾಯಾದಿ ಕಲಹ ಸೇರಿದಂತೆ ಹಣಕಾಸು ವೈಮನಸ್ಸು, ಹಳೆ ದ್ವೇಷ ಪ್ರಕರಣ ಗಳಲ್ಲೂ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡುವ ಯತ್ನಗಳು ಪ್ರಸ್ತುತ ಸಹ ಜಿಲ್ಲೆಯ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆತಂಕ ಮೂಡಿಸಿವೆ.

ಜಿಲ್ಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಬಳಕೆ ದಶಕಗಳಿಂದಲೂ ಎಗ್ಗಿಲ್ಲದೆ ನಡೆದಿದೆ. ರಾಜ್ಯದಲ್ಲೇ ಭೀಮಾ ತೀರ ಬಂದೂಕು ಸಂಸ್ಕೃತಿಯಿಂದ ಕುಖ್ಯಾತಿ ಪಡೆದಿದೆ. ಚಡಚಣ, ಇಂಡಿ, ಆಲಮೇಲ ಪಟ್ಟಣ ಸೇರಿದಂತೆ ಇಂಡಿ–ಸಿಂದಗಿ ತಾಲ್ಲೂಕಿನ ಕುಗ್ರಾಮಗಳಲ್ಲೂ ಕಂಟ್ರಿ ಪಿಸ್ತೂಲ್‌ನ ಕಾರುಬಾರು ಇಂದಿಗೂ ಮುಂದುವರಿದಿದೆ.

ರಾಜ್ಯದ ವಿವಿಧೆಡೆ ನಡೆಯುವ ಶೂಟೌಟ್‌ ಪ್ರಕರಣಗಳಿಗೆ ಇಲ್ಲಿಂದಲೇ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಾಗುವುದು ಹಲವು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ದಿನದಿಂದ ದಿನಕ್ಕೆ ತನ್ನ ಕಬಂಧಬಾಹು ಚಾಚಿಕೊಳ್ಳುತ್ತಿರುವ ದಂಧೆ ಮಟ್ಟಹಾಕಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ದೂರು ಪ್ರಜ್ಞಾವಂತರ ವಲಯದಿಂದ ಕೇಳಿ ಬರುತ್ತಿದೆ.

ಎರಡ್ಮೂರು ದಶಕಗಳಿಂದಲೂ ‘ಕಂಟ್ರಿ ಪಿಸ್ತೂಲ್‌’ನ ಕಾರುಬಾರು ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದರೂ, ಬೇರು ಸಹಿತ ನಿರ್ಮೂಲನೆಗೊಳಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.

‘ಬಂದೂಕು ಸಂಸ್ಕೃತಿ ಹಾಸು ಹೊಕ್ಕಿದ್ದ ಭೀಮಾ ತೀರದ ಹಳ್ಳಿಗಳಲ್ಲಿ ಇಂದಿಗೂ ‘ಕಂಟ್ರಿ ಪಿಸ್ತೂಲ್‌’ ಮಾರಾಟ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸು ತ್ತಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದ ಕೆಲ ಭಾಗಗಳಿಗೆ ತೆರಳುವ ಇಲ್ಲಿನ ಮಾರಾಟಗಾರರು ಅತ್ಯಂತ ಕನಿಷ್ಠ ಬೆಲೆಗೆ ಪಿಸ್ತೂಲ್‌ ಖರೀದಿಸಿ ತಂದು, ಇಲ್ಲಿ ಅಪರಾಧ ಕೃತ್ಯ ಎಸಗುವವರಿಗೆ ₹ 10000ದಿಂದ 50000ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಇಂದಿಗೂ ಬಹುತೇಕರು ಇದೇ ದಂಧೆಯಲ್ಲಿ ತಲ್ಲೀನರಾಗಿದ್ದಾರೆ. ಪೊಲೀಸರಿಗೆ ಮಾಹಿತಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲ್ಲ. ಜಿಲ್ಲೆಯ ವಿವಿಧೆಡೆ ಶೂಟೌಟ್‌ ನಡೆದಾಗ ಎರಡ್ಮೂರು ಕಡೆ ದಾಳಿ ನಡೆಸಿ, ಪಿಸ್ತೂಲ್‌, ಗುಂಡು, ವ್ಯಕ್ತಿ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಗಷ್ಟೇ ಸೀಮಿತವಾಗುತ್ತಾರೆ.

ಅಕ್ರಮ ಶಸ್ತ್ರಾಸ್ತ್ರ ಎಲ್ಲಿಂದ ಇಲ್ಲಿಗೆ ಬಂತು ಎಂಬ ಮಾಹಿತಿಯಿದ್ದರೂ ಬೆನ್ನತ್ತಲು ಮುಂದಾಗಲ್ಲ. ಆರೋಪಿ ಗಳನ್ನು ಬಂಧಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸಲ್ಲ. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಬಹುತೇಕರು ರಾಜ ಕಾರಣಿಗಳ ಸಖ್ಯ ಹೊಂದಿರುವುದು ಒಂದೆಡೆಯಾದರೆ, ಖಡಕ್‌ ಐಪಿಎಸ್‌ ಅಧಿಕಾರಿ ಜಿಲ್ಲಾ ಪೊಲೀಸ್ ಇಲಾಖೆಯ ಚುಕ್ಕಾಣಿ ಹಿಡಿಯದಿರುವುದು ಸಹ ದಂಧೆ ಹೆಚ್ಚಲು ಪ್ರಮುಖ ಕಾರಣ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿ ಸದ ಪ್ರಜ್ಞಾವಂತರೊಬ್ಬರು ‘ಪ್ರಜಾವಾಣಿ’ ಬಳಿ ವಿಶ್ಲೇಷಿಸಿದರು.

ಮಾಹಿತಿಗಳ ಸಂಗ್ರಹ..
‘ಕಂಟ್ರಿ ಪಿಸ್ತೂಲ್‌ನ ಸದ್ದಡ ಗಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಸಿಂದಗಿ, ಇಂಡಿ ತಾಲ್ಲೂಕುಗಳಲ್ಲಿ 15 ವರ್ಷ ಗಳಿಂದ ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಬಳಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದ 300 ಆರೋಪಿಗಳ ಚಲನವಲನದ ಮೇಲೆ ನಿಗಾ ಇಟ್ಟಿದೆ.

ಇವರ ವಿರುದ್ಧ ರೌಡಿ ಶೀಟ್‌ ತೆರೆದು ಆಗ್ಗಿಂದಾಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಭೇದಿಸಲಿಕ್ಕಾಗಿಯೇ ವಿಶೇಷ ಪಡೆ ರಚಿಸಿ, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಶೀಘ್ರದಲ್ಲೇ ಇತಿಶ್ರೀ ಹಾಕುವ’ ವಿಶ್ವಾಸವನ್ನು ಉತ್ತರ ವಲಯ ಐಜಿಪಿ ಕೆ.ರಾಮಚಂದ್ರರಾವ್ ವ್ಯಕ್ತಪಡಿಸಿದರು.

*

ಜಿಲ್ಲೆಯಲ್ಲಿ 25 ವರ್ಷ ಗಳಿಂದ ಅಕ್ರಮ ಶಸ್ತ್ರಾಸ್ತ್ರ ದಂಧೆ ನಡೆಯುತ್ತಿದೆ. ನಿಯಂತ್ರ ಣಕ್ಕೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿ ದೆ. ಹಲವು ಪ್ರಕರಣ ದಾಖಲಾಗಿವೆ
ಎಸ್‌.ಎನ್‌.ಸಿದ್ಧರಾಮಪ್ಪ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

*

ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಲು ಪೊಲೀಸರ ವಿಶೇಷ ತಂಡ ರಚಿಸಲಾ ಗಿದೆ. ಬೇರು ಮಟ್ಟದಲ್ಲಿ ನಿರ್ಮೂಲನೆ ಗೊಳಿಸಲು ಕ್ರಮ ಕೈಗ                             ಕೆ.ರಾಮಚಂದ್ರರಾವ್ ಐಜಿಪಿ, ಉತ್ತರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT