ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 19 ಮೇ 2017, 19:30 IST
ಅಕ್ಷರ ಗಾತ್ರ

1. ನನ್ನ ಹೆಸರು ಲಕ್ಷ್ಮಿ, ನನಗೆ ಇಬ್ಬರು ಹೆಣ್ಣುಮಕ್ಕಳು. ನಾನು ನನ್ನ ಪತಿಯಿಂದ  ದೂರವಾಗಿ ಮೂರು ವರ್ಷಗಳಾಗಿವೆ. ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದೇನೆ. ನನಗೆ ಯಾರ ಸಹಾಯವೂ ಇಲ್ಲ. ನನ್ನ ದೊಡ್ಡ ಮಗಳ ಬಗ್ಗೆ ನಿಮಗೆ ಪ್ರಶ್ನೆ ಕೇಳುತ್ತಿದ್ದೇನೆ. ಅವಳಿಗೆ 12 ವರ್ಷ, ಋತುಮತಿಯಾಗಿದ್ದಾಳೆ. ಅವಳಿಗೆ ತುಂಬಾ ಕೋಪ. ಯಾರ ಬಳಿಯೂ ಹೊಂದಾಣಿಕೆ ಇಲ್ಲ. ಓದಿನಲ್ಲಿ ಆಸಕ್ತಿ ಕಡಿಮೆ. ಬಾಯಿ ಜಾಸ್ತಿ. ಹಾಸಿಗೆಯಲ್ಲಿ ತಿಂಗಳಿಗೆ 5ರಿಂದ 6 ಸಲ ಮೂತ್ರ ಮಾಡಿಕೊಳ್ಳುತ್ತಾಳೆ. ಮನೆಯ ಕೆಲಸದಲ್ಲಿ ಹಿಂಜರಿಯುತ್ತಾಳೆ. ತುಂಬಾ ನಿದ್ದೆ. ಎಷ್ಟು ಹೇಳಿದರೂ ಕೇಳುವುದಿಲ್ಲ, ನನಗೆ ಅವಳ ಭವಿಷ್ಯದ ಬಗ್ಗೆ ಚಿಂತೆ. ಹೇಗೆ ಇವಳನ್ನು ಸರಿಪಡಿಸಬಹುದು. ಕೌನ್ಸಿಲಿಂಗ್ ಕೊಡಿಸಬಹುದೇ? ಕೌನ್ಸಿಲಿಂಗ್ ವೆಚ್ಚ ಭರಿಸಲು ಕಷ್ಟವಾಗುತ್ತದೆ. ಪರಿಹಾರ ತಿಳಿಸಿ.

ಲಕ್ಷ್ಮಿ, ನನಗೆ ನಿಮ್ಮ ಸಂಕಟ ಅರ್ಥವಾಗುತ್ತದೆ. ಆದರೆ ನಿಮ್ಮ ಮಗಳಲ್ಲಿ ಹಾರ್ಮೋನ್‌ಗಳ ಏರುಳಿತದಿಂದ ಈ ಎಲ್ಲಾ ಬದಲಾವಣೆಗಳಾಗುತ್ತಿವೆ. ಸಮಯ ಸರಿದಂತೆ ಅವಳು ಸರಿಹೋಗುತ್ತಾಳೆ. ಅವಳು ದೊಡ್ಡವಳಾದ ಹಾಗೆ ಅವಳಿಗೆ ಅವಳ ಜವಾಬ್ದಾರಿಗಳ ಅರಿವಾಗುತ್ತದೆ, ಆಗ  ವರ್ತನೆಯಲ್ಲೂ ತನ್ನಂತಾನೇ ಬದಲಾವಣೆಯಾಗುತ್ತದೆ. ಆತಂಕ ಪಡಬೇಡಿ. ನಿಮ್ಮ ಮಗಳು ಹಾಸಿಗೆಯಲ್ಲಿ ಮೂತ್ರ ಮಾಡುವ ಬಗ್ಗೆ  ಮನೋವೈದ್ಯರ ಬಳಿ ಸರಿಯಾದ ಕಾರಣ ತಿಳಿದುಕೊಳ್ಳಿ. ಹಾಗೇ, ಅವಳಿಗೆ ಕೌನೆಲ್ಸಿಂಗ್ ನೀಡುವುದರಿಂದ ಕೂಡ ಅವಳ ವರ್ತನೆಯನ್ನು ಬದಲಾಯಿಸಲು ಇನ್ನಷ್ಟು ಸಹಾಯವಾಗಬಹುದು.

2. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಮನೆಯಲ್ಲಿ ಎಲ್ಲರೂ ಒಪ್ಪಿದ್ದಾರೆ. ಆದರೆ ಅಪ್ಪ ಬೇಡ ಎನ್ನುತ್ತಿದ್ದಾರೆ. ಯಾರು ಹೇಳಿದರೂ ಕೇಳುತ್ತಿಲ್ಲ. ಮೇಡಂ; ನನಗೆ ಸಲಹೆ ನೀಡಿ.

ನಿಮ್ಮ ತಂದೆ ನಿಮ್ಮ ಮದುವೆಗೆ ಯಾಕೆ ಒಪ್ಪುತ್ತಿಲ್ಲ ಎಂಬುದನ್ನು ನೇರವಾಗಿ ಅವರ ಬಳಿ ಮಾತನಾಡಿ ತಿಳಿದುಕೊಳ್ಳಿ. ಅವರು ಮದುವೆಗೆ ಒಪ್ಪಿಗೆ ಸೂಚಿಸದಿರಲು ಯಾಕೆ  ಹಿಂಜರಿಯುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ಅವರ ಮನವೊಲಿಸಲು ಪ್ರಯ್ನತಿಸಿ. ಎಲ್ಲವೂ ಒಳ್ಳೆಯದಾಗುತ್ತದೆ, ನಾನು ಸಂತೋಷವಾಗಿರುತ್ತೇನೆ ಎಂದು ನಿಮ್ಮ ತಂದೆಗೆ ಭರವಸೆ ನೀಡಿ. ಮನೆಯ ಹಿರಿಯರ ಬಳಿ ಅವರೊಂದಿಗೆ ಮಾತನಾಡಲು ಹೇಳಿ. ಖಂಡಿತ ಅವರು ಮದುವೆಗೆ ಒಪ್ಪುತ್ತಾರೆ. ಅಥವಾ ನಿಮ್ಮ ಮನೆಯವರೆಲ್ಲರ ಬೆಂಬಲ ನಿಮಗಿದ್ದರೆ ನೀವು ನಿಮ್ಮ ಮುಂದಿನ ಹೆಜ್ಜೆ ಇರಿಸಬಹುದು.

3. ನನ್ನ ಹೆಸರು ಸುಕನ್ಯಾ, ನನಗೆ 1997ರಲ್ಲಿ ಮದುವೆಯಾಗಿ, 19 ಮತ್ತು16 ವರ್ಷದ ಮಕ್ಕಳಿದ್ದಾರೆ. ನನ್ನ ಸಮಸ್ಯೆ ಎಂದರೆ ನನ್ನ ಗಂಡ ಅನುಮಾನದ ಜೀವಿ. ಎಲ್ಲರ ಮೇಲೆ ಅನುಮಾನ ಪಡುತ್ತಾರೆ. ನನ್ನ ಮೇಲೂ ಅನುಮಾನಪಟ್ಟುಕೊಂಡು ಮನೆಗೆ ಏನು ತಂದು ಹಾಕುತ್ತಿರಲಿಲ್ಲ. ಇದರಿಂದ ಬೇಸತ್ತ ನಾನು ನನ್ನ ಮಕ್ಕಳು ಚೆನ್ನಪಟ್ಟಣಕ್ಕೆ ಬಂದು ನೆಲೆಸಿದೆವು. ಇಲ್ಲಿಗೂ ಬಂದ ನನ್ನ ಗಂಡ ನನ್ನ ಚಿಕ್ಕ ಮಗನ ಮೇಲೆ ಕಲ್ಲು ಎತ್ತಿ ಹಾಕಲು ನೋಡಿದರು; ದೊಡ್ಡ ಮಗನಿಗೆ ದೊಣ್ಣೆಯಿಂದ ಹೊಡೆದು ಗಾಯ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಮತ್ತೇ ಯಾವಾಗ ಬಂದು ಏನು ಮಾಡುತ್ತಾರೋ ಎಂಬ ಭಯದಲ್ಲಿ  ಬದುಕುತ್ತಿದ್ದೇವೆ. ನನಗೆ ಜೀವನ ಸಾಕಾಗಿದೆ, ನಿಮ್ಮನ್ನೇ ನಂಬಿದ್ದೇನೆ. ದಯವಿಟ್ಟು ಉತ್ತರ ತಿಳಿಸಿ.

ಅನುಮಾನದ ವ್ಯಕ್ತಿಗಳನ್ನು ಎದುರಿಸುವುದು ತುಂಬ ಕಷ್ಟ. ನೀವು ನಿಮ್ಮ ತಂದೆ–ತಾಯಿ, ಅತ್ತೆ–ಮಾವಂದಿರ ಬಳಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಹಿರಿಯರ ಸಹಾಯ ಕೇಳಿ; ನಿಮ್ಮ ಗಂಡನೊಂದಿಗೆ ಮಾತನಾಡಲು ಹೇಳಿ. ನಿಮ್ಮ ಗಂಡನಿಗೆ ವೈದ್ಯರ ಸಹಾಯ ಬೇಕು ಎಂದೆನಿಸಿದರೆ ಮನೋವೈದ್ಯರನ್ನು ಸಂಪರ್ಕಿಸಿ. ಅವರ ಮಾನಸಿಕ ಸ್ಥಿತಿ ಸರಿಯಿದ್ದು ಅವರು ಹೀಗೆ ವರ್ತಿಸುತ್ತಿದ್ದರೆ ನೀವು ಕಾನೂನು ಸಲಹೆಯನ್ನು ಪಡೆಯುವುದು ಉತ್ತಮ.

ಸುನೀತಾ ರಾವ್‌
ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT