ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮನಕಲ್ಲು: ನಿತ್ರಾಣಗೊಂಡ ಕರಡಿಯ ರಕ್ಷಣೆ

Last Updated 20 ಮೇ 2017, 4:42 IST
ಅಕ್ಷರ ಗಾತ್ರ

ಕಡೂರು: ನಿತ್ರಾಣಗೊಂಡು ಕಲ್ಲುಪೊಟರೆಯೊಳಗೆ ಬಿದ್ದಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿ, ಬನ್ನೇರುಘಟ್ಟ ಉದ್ಯಾನಕ್ಕೆ  ಶುಕ್ರವಾರ ರವಾನಿಸಿದ್ದಾರೆ.

ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಜಮ್ಮನಕಲ್ಲು ಗುಡ್ಡದ ಬಳಿಯ ಕಲ್ಲುಪೊಟರೆಯೊಳಗೆ ಸುಮಾರು 12 ವರ್ಷ ವಯಸ್ಸಿನ ಕರಡಿ ಇರುವುದನ್ನು ಅಲ್ಲಿನ ಕ್ರಷರ್ ಕೆಲಸಗಾರರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಡೂರು ವಲಯ ಅರಣ್ಯಾಧಿಕಾರಿ ಮೋಹನ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಕರಡಿ ಸುತ್ತ ಬಲೆ ಹರಡಿತು. ನಂತರ ಸ್ಥಳೀಯರ ಸಹಕಾರದಿಂದ ಹಲಸಿನ ಹಣ್ಣು, ಬಾಳೆ ಹಣ್ಣಿನ ಗೊನೆ, ನೀರನ್ನು ಹತ್ತಿರ ಇಟ್ಟರೂ ಅದು ತಿನ್ನಲಿಲ್ಲ.

ಶಿವಮೊಗ್ಗ ವನ್ಯಜೀವಿ ಘಟಕದ ಸಕ್ರೆಬೈಲು ಕ್ಯಾಂಪ್‌ನ ಅರಿವಳಿಕೆ ತಜ್ಞ ಡಾ.ವಿನಯ್ ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದರು. ಕರಡಿ ನಿತ್ರಾಣ ಗೊಂಡಿದ್ದರೂ ಪ್ರತಿರೋಧ ತೋರುವ ಸಾಧ್ಯತೆ ಇದ್ದುದರಿಂದ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು.

ಈ ವೇಳೆ ಕರಡಿ ಒಂದೆರೆಡು ಬಾರಿ ಎದ್ದು ನಿಲ್ಲಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. 15 ನಿಮಿಷ ಬಳಿಕ ಅದನ್ನು ಬೋನಿಗೆ ಹಾಕಲಾಯಿತು. ಕರಡಿಯ ದೇಹದ ಉಷ್ಣಾಂಶ ಕಾಪಾಡಲು ನೀರು ಸುರಿಯಲಾಯಿತು.

ಮೂರ್ನಾಲ್ಕು ದಿನಗಳ ಹಿಂದೆ ಈ ಕರಡಿ ಕಲ್ಲುಪೊಟರೆಯೊಳಕ್ಕೆ ಬಿದ್ದಿರ ಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸೀಮಾ, ಅರಣ್ಯ ಇಲಾಖೆ ವಿಚಕ್ಷಣ ದಳದ ರವಿ, ಸಿಬ್ಬಂದಿ ರಾಮಾನಾಯ್ಕ, ಗೋಪಾಲ್ ಇದ್ದರು.

**

ಕರಡಿ ನಿತ್ರಾಣಗೊಂಡಿದ್ದು ಸೂಕ್ತ ಚಿಕಿತ್ಸೆಯ ನಂತರ ಉಪ ಅರಣ್ಯಸಂರಕ್ಷಣಾಧಿಕಾರಿಯ ಅನುಮತಿ ಪಡೆದು ಬನ್ನೇರುಘಟ್ಟ ಉದ್ಯಾನಕ್ಕೆ ಸ್ಥಳಾಂತರಿಸಲಾಗುವುದು.
ಎಚ್.ಸೀಮಾ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT