ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಆಸ್ಪತ್ರೆಗಳಿಗೆ ಬೀಗ: ರೈತರ ಪರದಾಟ

Last Updated 20 ಮೇ 2017, 5:14 IST
ಅಕ್ಷರ ಗಾತ್ರ

ಲಿಂಗಸುಗೂರು: ವೃಂದ ಮತ್ತು ನೇಮಕಾತಿ ನಿಯಮ ಅಧಿಸೂಚನೆ ಪ್ರಕಟಿಸುವಂತೆ ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆ ನೌಕರರು ಚಿಕಿತ್ಸಾಲಯಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿರುವುದರಿಂದ ರೈತರು ಪರದಾಡುವಂತಾಗಿದೆ.

ತಾಲ್ಲೂಕಿನ 20 ಪಶು ಚಿಕಿತ್ಸಾಲಯಗಳು, 2 ಪಶು ಆಸ್ಪತ್ರೆಗಳಿಗೆ ನಾಲ್ಕು ದಿನಗಳಿಂದ ಬೀಗ ಹಾಕಿರುವ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಸಹಾಯಕ ನಿರ್ದೇಶಕರ ಕಚೇರಿಗೂ ಬೀಗ ಹಾಕಿದ್ದು, ತಾಲ್ಲೂಕಿನ ರೈತರು, ಕುರಿಗಾರರು ಜಾನುವಾರು, ಕುರಿ, ಮೇಕೆ ಸಮೇತ ಆಸ್ಪತ್ರೆಗೆ ಅಲೆದು ಸುಸ್ತಾಗಿದ್ದಾರೆ.

‘ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಮತ್ತು ಕುರಿ, ಮೇಕೆಗಳಿಗೆ ಚಪ್ಪೆರೋಗ, ಗಂಟಲು ಬೇನೆ, ಕರಳು ಬೇನೆ, ಸಿಡಿರೋಗ ಸೇರಿದಂತೆ ವಿವಿಧ ರೋಗಗಳು ಹೆಚ್ಚುತ್ತಿವೆ. ಆಸ್ಪತ್ರೆಗಳಿಗೆ ತೆರಳಿದರೆ ಚಿಕಿತ್ಸೆ ನೀಡುವವರಿಲ್ಲ. ಸಹಾಯಕ ನಿರ್ದೇಶಕರ ಕಚೇರಿಗೂ ಬೀಗ ಹಾಕಿರುವುದರಿಂದ ಯಾರ ಬಳಿ
ಸಮಸ್ಯೆ ಹೇಳಬೇಕು’ ಎಂದು ರೈತ ಸಂಘದ ಅಮರಯ್ಯ ಗೋನಾಳಮಠ ಪ್ರಶ್ನಿಸಿದರು.

‘ಪಶು ಆಸ್ಪತ್ರೆಗೆ 4 ದಿನದಿಂದ ಬರುತ್ತಿದ್ದು, ಯಾಕೆ ಬೀಗ ಹಾಕಿದೆ ಎಂಬುದು ತಿಳಿದಿಲ್ಲ. ಮೇಕೆಗಳು ವಾಂತಿ ಮಾಡಿಕೊಂಡು ಅಶಕ್ತವಾಗಿ ಬಳಲುತ್ತಿವೆ. ಕರಳು ಬೇನೆಯಿಂದ ಕುರಿ, ಮೇಕೆ ಸಾವನ್ನಪ್ಪುತಿದ್ದರೂ ಕೇಳುವವರು ಇಲ್ಲ’ ಎಂದು ಕುರಿಗಾರ ಖೇಮಣ್ಣ ಹೇಳಿದರು.

‘ಪಶು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಬೇಡಿಕೆ ಈಡೇರಿಸಲು ಸರ್ಕಾರ ವಿಳಂಬ ಮಾಡಿದರೆ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಿ’ ಎಂದು ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಒತ್ತಾಯಿಸಿದರು.

‘ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸಲು ಮೀನಾಮೇಷ ನಡೆಸುತ್ತಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ’ ಎಂದು ಪಶು ವೈದ್ಯಕೀಯ ಪರೀಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸೂಗಪ್ಪ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT