ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲೇ ಬೈಸಿಕಲ್‌ ವಿತರಿಸಲು ಶಿಕ್ಷಣ ಇಲಾಖೆ ಕ್ರಮ: ಭರದಿಂದ ಸಾಗಿದೆ ಬೈಸಿಕಲ್‌ ಜೋಡಣೆ

ಅಕ್ಷರ ಗಾತ್ರ

ಲಿಂಗಸುಗೂರು: ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಬೈಸಿಕಲ್‌, ಸಮವಸ್ತ್ರ, ಶೂ ಸೇರಿದಂತೆ ಸೌಲಭ್ಯಗಳನ್ನು ಶೈಕ್ಷಣಿಕ ವರ್ಷದ ಕೊನೆಗೆ ಹಂಚಿಕೆ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

2015–16, 2016– 17ನೇ ಅವಧಿಯಲ್ಲಿ ಶೈಕ್ಷಣಿಕ ವರ್ಷ ಭಾಗಶಃ ಪೂರ್ಣಗೊಂಡಿದ್ದರೂ ಕೆಲವು ವಿಷಯಗಳ ಪಠ್ಯ ಪುಸ್ತಕ ಕೊರತೆ ಎದ್ದುಕಾಣುತಿತ್ತು. ಸಮವಸ್ತ್ರ ಖರೀದಿಯಲ್ಲಿ ಶಿಕ್ಷಕರು ರಾಜಕೀಯ ಒತ್ತಡದಿಂದ ಬೇಸತ್ತು ಹೋಗಿದ್ದರು.

2017– 18ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನೋಂದಣಿ ಆಗಬಹುದಾದ ಮಕ್ಕಳ ಸಂಖ್ಯೆ ಆಧರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಈಗಾಗಲೆ 418546 ಪಠ್ಯಪುಸ್ತಕ (ಉಚಿತ), 111244 ಪಠ್ಯಪುಸ್ತಕ (ಮಾರಾಟ), 57730 ಸಮವಸ್ತ್ರ, 4567 ಬೈಸಿಕಲ್‌ ಹಾಗೂ ಶಾಲಾವಾರು ಬೂಟ್‌ ಮತ್ತು ಸಾಕ್ಸ್‌ ಪೂರೈಕೆಗೆ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಿದೆ.

‘ಲಿಂಗಸುಗೂರು ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಕಚೇರಿ ಮತ್ತು ಮುದಗಲ್‌ ಪಟ್ಟಣದ ಸೆಕ್ರೆಡ್‌ ಹಾರ್ಟ್‌ ಶಾಲೆ ಆವರಣದಲ್ಲಿ ಬೈಸಿಕಲ್‌ ಜೋಡಣೆ ಕಾರ್ಯ ಆರಂಭಗೊಂಡಿದೆ. ಈಗಾಗಲೆ ಶೇ 65ರಷ್ಟು ಪಠ್ಯಪುಸ್ತಕ, ಸಮವಸ್ತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೋದಾಮಿಗೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 29ರಂದು ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದೆ. ಆರಂಭದ ದಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಬೈಸಿಕಲ್‌, ಸಮವಸ್ತ್ರ, ಪಠ್ಯಪುಸಕ್ತ ತಲುಪಿಸುವ ಪ್ರಯತ್ನ ನಡೆದಿದೆ. ಶೂ ಮತ್ತು ಸಾಕ್ಸ್‌ ಖರೀದಿಗೆ  ಸರ್ಕಾರ ಆಯಾ ಶಾಲಾ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಹಣ ಹಾಕಲಿದೆ’ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

‘ಕಳೆದ ವರ್ಷ ಪ್ರಾಥಮಿಕ ಶಾಲೆಗಳಿಗೆ 303 ಶಿಕ್ಷಕರು ಹಾಗೂ ಪ್ರೌಢ ವಿಭಾಗದಲ್ಲಿ 53 ಶಿಕ್ಷಕರ ಕೊರತೆ ಇತ್ತು. ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ವರ್ಷ ಇನ್ನೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿಲ್ಲ’ ಎಂದು ಇಲಾಖೆ ಸಿಬ್ಬಂದಿ ಹೇಳಿದರು.

‘ಈ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿಯೆ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ. ಎಲ್ಲ ಪ್ರಕ್ರಿಯೆ ಭಾಗಶಃ ಪೂರ್ಣಗೊಂಡಿವೆ. ಜೂನ್‌ ಮೊದಲ ವಾರ ಹಂಚಿಕೆ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT