ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ, ನೋವು ತಂದ ವರುಣನ ಆಟ

Last Updated 20 ಮೇ 2017, 5:37 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿ ಪ್ರದೇಶಗಳಲ್ಲಿ ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆ, ಹಳ್ಳ ಕೊಳ್ಳಗಳು ತುಂಬಿ ಹರಿದವು.

ತಾಲ್ಲೂಕಿನಲ್ಲಿನ ಹಳ್ಳಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬಾಂದಾರ ಗಳು ತುಂಬಿದವು. ಆದರೆ ಈ ಖುಷಿಯ ನಡುವೆ ಬಾಂದಾರಗಳ ಅಕ್ಕಪಕ್ಕದಲ್ಲಿ ನೀರು ಹರಿದು ಹೊಲಗಳಿಗೆ ನುಗ್ಗಿದ್ದ ರಿಂದ ಬದುವುಗಳು ಕಿತ್ತಿ ಹೋಗಿವೆ. ಹೊಲದಲ್ಲಿನ ಮಣ್ಣು ಕೊಚ್ಚಿ ಹೋಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಲ್ಲಿಗೆ ಸಮೀಪದ ದೊಡ್ಡೂರು, ಗೊಜನೂರು, ಯಳವತ್ತಿ, ಮಾಗಡಿ, ರಾಮಗಿರಿ, ಶಿಗ್ಲಿ, ಬಸಾಪೂರ, ಅಕ್ಕಿಗುಂದ, ಬಟ್ಟೂರು, ಪುಟಗಾಂವ್‌ ಬಡ್ನಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗೊಜನೂರು ಹಾಗೂ ಮಾಗಡಿ ಗ್ರಾಮಗಳಿಂದ ಹರಿಯುವ ದೊಡ್ಡ ಹಳ್ಳ ಬಟ್ಟೂರು, ಪುಟಗಾಂವ್‌ ಬಡ್ನಿ, ಹುಲ್ಲೂರು, ಬೂದಿಹಾಳ, ಕೊಕ್ಕರಗುಂದಿ ಮೂಲಕ ಹೆಬ್ಬಾಳ ಹತ್ತಿರ ನೀರು ತುಂಗಭದ್ರಾ ನದಿ ಸೇರುತ್ತದೆ.

ಮಳೆ ನೀರು ತಡೆದು ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಹಳ್ಳಕ್ಕೆ 18 ಕಡೆ ಚೆಕ್‌ ಡ್ಯಾಂ ಕಟ್ಟಲು ಶಾಸಕ ರಾಮಕೃಷ್ಣ ದೊಡ್ಡಮನಿ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅನುದಾನ ಕೂಡ ಬಿಡುಗಡೆ ಮಾಡಿಸಿಕೊಂಡಿದ್ದರು.

2016ರಿಂದ ಈವರೆಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ₹ 14 ಕೋಟಿ ವೆಚ್ಚದಲ್ಲಿ ಹಳ್ಳಕ್ಕೆ 12 ಕಡೆ  ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಬಿದ್ದ ಮಳೆಗೆ ಚೆಕ್‌ ಡ್ಯಾಂಗಳ ಪಕ್ಕದಲ್ಲಿ ನಿರ್ಮಿಸಿದ್ದ ಮಣ್ಣಿನ ತಡೆ ಗೋಡೆಗಳು ಕಿತ್ತು ಹೋಗಿವೆ. ಇದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದೆ.

ಕೆಲವೆಡೆ ಜಮೀನು ಗಳಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ.  ಬಟ್ಟೂರು ಗ್ರಾಮದ ಹತ್ತಿರ ನಿರ್ಮಿಸಿದ್ದ ಚೆಕ್‌ ಡ್ಯಾಂ ಕೊಚ್ಚಿ ಹೋದ ಪರಿಣಾಮ ಗ್ರಾಮದ ನಿಂಗಪ್ಪ ಹರಿಜನ, ಬಸನಗೌಡ ಪಾಟೀಲ, ಶಂಕ್ರಪ್ಪ ದಾನಿ, ನಿಂಗಪ್ಪ ಬಟ್ಟೂರ ರೈತರ ಜಮೀನುಗಳಿಗೆ ನೀರು ನುಗ್ಗಿ ಹೊಲಗಳ ಬದುವುಗಳು ಹಾಳಾಗಿವೆ. ಹಳ್ಳದ ಸಮೀಪ ಇಟ್ಟಿದ್ದ ಪಂಪ್‌ಸೆಟ್‌ಗಳೂ ನೀರಿನ ರಭಸಕ್ಕೆ ತೇಲಿ ಹೋಗಿವೆ.

‘ಚೆಕ್‌ ಡ್ಯಾಂ ಆದಾಗ ಭಾಳ ಖುಷಿ ಆಗಿತ್ತು. ಆದರ ಈಗ ಡ್ಯಾಂ ಹಾಳಾಗಿ ನೀರು ನಮ್ಮ ಹೊಲಗಳಿಗೆ ಬಂದು ಹೊಲಾ ಕೂಡ ಹಾಳ ಆಗ್ಯಾವು’ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಪರಿಹಾರ ಕೊಡಬೇಕ್ರಿ...
‘ನಮ್ಮೂರಿನ ಚೆಕ್‌ ಡ್ಯಾಂ ಕಟ್ಟಿದ್ದು ಚಲೋ ಆಗಿತ್ತು. ಆದರ ಈಗ ಡ್ಯಾಂ ಒಡದ ನೀರ ನಮ್ಮ ಹೊಲಕ್ಕ ನುಗ್ಗಿ ಹೊಲಾನ ಹಾಳ ಮಾಡೇತ್ರಿ. ಹಿಂಗಾದರ ನಾವು ಬಡ ರೈತರು ಹೊಲ ಹ್ಯಂಗ ರಿಪೇರಿ ಮಾಡಸಬೇಕ್ರಿ.

ಸರ್ಕಾರ ನಮ್ಗ ಸೂಕ್ತ ಪರಿಹಾರ ನೀಡಬೇಕು’ ಎಂದು  ಸಂಕದಾಳ ಗ್ರಾಮದ ರೈತ ಯಲ್ಲಪ್ಪಗೌಡ ಪಾಟೀಲ ಹಾಗೂ ಗೊಜನೂರು ಗ್ರಾಮದ ಮಂಜುನಾಥಗೌಡ ಸಂದಿಗೋಡ, ಫಕ್ಕೀರೇಶ ದನದಮನಿ ಆಗ್ರಹಿಸಿದ್ದಾರೆ.

* *

ಚೆಕ್‌ ಡ್ಯಾಂಗಳ ಅಕ್ಕಪಕ್ಕದಲ್ಲಿ ನಿರ್ಮಿಸಿದ್ದ ಬದುವುಗಳು  ಗಟ್ಟಿ ಆಗಿರಲಿಲ್ಲ. ಹೀಗಾಗಿ ದೊಡ್ಡ ಮಳೆಗೆ ಅವು ಕಿತ್ತು ಹೋಗಿದ್ದು ಮತ್ತೆ ಅವುಗಳನ್ನು ದುರಸ್ತಿ ಮಾಡುತ್ತೇವೆ
ಎಂ.ಜಿ. ಪಾಟೀಲ
ಸಣ್ಣ ನೀರಾವರಿ ಇಲಾಖೆಯ ಎಇಇ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT