ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹21.45 ಕೋಟಿ ಬಜೆಟ್‌ಗೆ ಅಸ್ತು

Last Updated 20 ಮೇ 2017, 5:57 IST
ಅಕ್ಷರ ಗಾತ್ರ

ಸೇಡಂ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸುರೇಖಾ ರಾಜಶೇಖರ ಪುರಾಣಿಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು 2017–18ನೇ ಸಾಲಿನ ₹21.45 ಕೋಟಿ ವೆಚ್ಚದ ಬಜೆಟ್‌ಗೆ ಅನುಮೋದನೆ ನೀಡಿತು.

ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಾಹಕ ಅಧಿಕಾರಿ ಗುರುನಾಥ ಶೆಟಗಾರ ಮಾತನಾಡಿ, ‘ತಾಲ್ಲೂಕು ಪಂಚಾಯಿತಿಗೆ ₹21.45 ಕೋಟಿ ಅನುದಾನ ಸರ್ಕಾರದಿಂದ ಮಂಜೂ­ರಾಗಿದೆ. ಇದಕ್ಕೆ ಸದಸ್ಯರ ಅಂಗಿಕಾರ ಪಡೆದು ಹಂಚಿಕೆ ಮಾಡಲಾಗುವುದು. ಸರ್ವ ಸದಸ್ಯರ ಗಮನಕ್ಕೆ ತರಲಾಗು ತ್ತಿದ್ದು, ಅನುಮೋದನೆ ಅಗತ್ಯವಿದೆ’ ಎಂದರು. ಇದಕ್ಕೆ ತಾಲ್ಲೂಕು ಪಂಚಾ ಯಿತಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಇದಕ್ಕೆ ಆಕ್ಷೇಪಣೆ ಎತ್ತಿದಾಗ ಗುರುನಾಥ ಅವರು ಸ್ಪಷ್ಟೀಕರಣ ನೀಡಿದರು. ನಂತರ ಎಲ್ಲ ಸದಸ್ಯರು ಸರ್ವಾನುಮತದಿಂದ ಬಜೆಟ್‌ಗೆ ಅನುಮೋದನೆ ನೀಡಿದರು.

‘ಸಹಾಯಕ ಕೃಷಿ ನಿರ್ದೇಶಕ ವೈ.ಹಂಪಣ್ಣ ಮಾತನಾಡಿ, ‘ಕಳೆದ ವರ್ಷ ಸಾಮಾನ್ಯ ಯೋಜನೆಯಲ್ಲಿ ₹56.75 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ 335 ರೈತರಿಗೆ ವಿವಿಧ ರೈತ ಉಪಯೋಗಿ ಯಂತ್ರಗಳನ್ನು ನೀಡಲಾ ಗಿದ್ದು, ಒಟ್ಟು ₹55 ಲಕ್ಷ ಅನುದಾನದನ್ನು ಖರ್ಚು ಮಾಡಲಾಗಿದೆ. ಅಲ್ಲದೆ ಎಸ್‌ಸಿಪಿ ಯೋಜನೆಯಡಿಯಲ್ಲಿ ₹80.44 ಲಕ್ಷ ಬಿಡುಗಡೆಯಾಗಿದೆ. ₹88.44 ಲಕ್ಷ ಖರ್ಚು ಮಾಡಲಾಗಿದೆ. ಅಲ್ಲದೆ ಟಿಎಸ್‌ಪಿ ಯೋಜನೆಯಲ್ಲಿ ₹11.79 ಲಕ್ಷ ಬಿಡುಗಡೆಯಾಗಿದ್ದು, ₹9.90 ಲಕ್ಷ ಹಣವನ್ನು ಖರ್ಚು ಮಾಡಲಾಗಿದೆ’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನಬಸ್ಸಪ್ಪ ಹಾಗರಗಿ ಮಾತನಾಡಿ, ‘ಈ ವರ್ಷ ರೈತರಿಗೆ ರಸಗೊಬ್ಬರ ಹಾಗೂ ಬೀಜಗಳನ್ನು ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರದಿಂದ ಬಂದ ಯೋಜನೆಗಳನ್ನು ರೈತರಿಗೆ ಸತಾಯಿಸಿದೇ ನೀಡಬೇಕು’ ಎಂದರು.

‘ತೊಗರಿ 3,609 ಕ್ವಿಂಟಲ್, ಹೆಸರು 525 ಕ್ವಿಂಟಲ್, ಉದ್ದು 431 ಕ್ವಿಂಟಲ್, ಸೂರ್ಯಕಾಂತಿ 52 ಕ್ವಿಂಟಲ್, ಹೈಬ್ರಿಡ್ ಜೋಳ 5.2 ಕ್ವಿಂಟಲ್, ಮೆಕ್ಕೆಜೋಳ 60 ಕ್ವಿಂಟಲ್, ಸಜ್ಜೆ 8 ಕ್ವಿಂಟಲ್ ಸೇರಿದಂತೆ ತಾಲ್ಲೂಕಿಗೆ ಮುಂಗಾರು ಬಿತ್ತನೆಗೆ 4,690 ಕ್ವಿಂಟಲ್ ವಿವಿಧ ಬೀಜಗಳು ಬೇಕು. ಸಂಗ್ರಹದ ವ್ಯವಸ್ಥೆ ಮಾಡಿ ಕೊಳ್ಳಲಾಗುತ್ತಿದೆ. ರಸಗೊಬ್ಬರ ಸಮಸ್ಯೆ ಯಾಗದಂತೆ ನೋಡಿಕೊಳ್ಳಲಾಗು ವುದು’ ಎಂದು ತಿಳಿಸಿದರು.

ಸಿಡಿಪಿಒ ಅಶೋಕ ರಾಜನ ಮಾತ ನಾಡಿ,‘ತಾಲ್ಲೂಕಿನಲ್ಲಿ 5ಬಾಲ್ಯವಿವಾಹ ಗಳನ್ನು ತಡೆಗಟ್ಟಲಾಗಿದೆ. ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳ ಲಾಗಿದೆ’ ಎಂದು ಸಭೆಗೆ ವಿವರಿಸಿದರು. ‘ಬಾಲ್ಯ ವಿವಾಹ ತಡೆಗೆ ಸದಸ್ಯರು, ಗ್ರಾಮ ಪಂಚಾಯಿತಿ, ಪಿಡಿಒಗಳು ಸಹಕರಿಸ­ಬೇಕು’ ಎಂದು ಮನವಿ ಮಾಡಿದರು.

‘ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಬೇಕು. ಸಂಬಂಧಪಟ್ಟ ಇಲಾಖೆಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡಬೇಕು. ತಾಲ್ಲೂಕಿನಲ್ಲಿ ನಡೆಯುತ್ತಿ­ರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೇ ಇರುವುದಿಲ್ಲ. ಕೇವಲ ಕಾಟಾಚಾರಕ್ಕಾಗಿ ಮಾತ್ರ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ’ ಎಂದು ಕೆಲ ಸದಸ್ಯರು ಆರೋಪಿಸಿದರು.

ಗೊಂಚಲು ಗ್ರಾಮಗಳ ಆಯ್ಕೆ: ತಾಲ್ಲೂಕು ಪಂಚಾಯಿತಿ ಸದಸ್ಯರ ಸೂಚನೆ ಮೇರೆಗೆ ಏಳು ಗ್ರಾಮಗಳನ್ನು ಗೊಂಚಲು ಗ್ರಾಮಗಳಾಗಿ ಆಯ್ಕೆ ಮಾಡಲಾಯಿತು. ತಾಲ್ಲೂಕಿನ ಕಾನಗಡ್ಢಾ, ಇಟಕಾಲ, ಹಣಮನಳ್ಳಿ, ದುಗನೂರು, ಕೊತ್ತಪಲ್ಲಿ, ಬಿಲಕಲ್ ಹಾಗೂ ಮದನಾ ಅವು ಆಯ್ಕೆಯಾಗಿವೆ.

ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ವೆಂಕಟರಾಮರೆಡ್ಡಿ ಹೈಯ್ಯಾಳ, ಚೆನ್ನಬಸ್ಸಪ್ಪ ಹಾಗರಗಿ, ಪ್ರೀತಿ ಮೈಲ್ವಾರ, ಸಿದ್ದಮ್ಮ ಶಾಮಪ್ಪ, ಅನವೇಶರೆಡ್ಡಿ, ವೆಂಕಟರಾವ ಮಿಸ್ಕಿನ್, ಸುನಿತಾ ಪರಶು­ರಾಮ, ರಾಮುಲು ನಾಯಕ, ಇಂದ್ರಾ­ದೇವಿ, ಪದ್ಮಮ್ಮ ರವಿಂದ್ರ, ಮಲ್ಲಿಕಾ­ರ್ಜುನರೆಡ್ಡಿ, ನಾಗರೆಡ್ಡಿ ದೇಶಮುಖ, ದೇವಮ್ಮ, ಚೆನ್ನಬಸ್ಸಪ್ಪ ಇದ್ದರು.

**

ಕುಂಟು ನೆಪ ಹೇಳ್ಬೇಡ್ರಿ...

‘ಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಸಮರ್ಪಕವಾಗಿ ಉತ್ತರಿಸಬೇಕು. ಕುಂಟುನೆಪ ಹಾಗೂ ಚಾಡಿ ಹೇಳುವುದನ್ನು ಬಿಡಬೇಕು. ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಭೆಯಲ್ಲಿ ವಚನ, ಕಥೆ ಪುರಾಣಗಳನ್ನು ಹೇಳುತ್ತಾ ಹೋದರೆ ಪ್ರಗತಿ ಕೆಲಸಗಳು ಯಾವಾಗ ಮುಗಿಯುತ್ತವೆ. ಮುಂದಿನ ಸಭೆಯಲ್ಲಿ ಇಂತಹ ಯಾವುದೇ ನೆಪಗಳಿಗೆ ಆಸ್ಪದ ಇಲ್ಲ. ಸಿಡಿಪಿಒ ಅವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಸಂಖ್ಯೆಯನ್ನು ಪರಿಶೀಲಿಸಬೇಕು. ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ಖರ್ಚು ಮಾತ್ರ ಹೆಚ್ಚುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ ಎಚ್ಚರಿಸಿದರು.

**

ಕೋಡ್ಲಾ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡದ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸಿಡಿಪಿಒ ಹೇಳಿದ್ದನ್ನೇ  ಹೇಳುತ್ತಿದ್ದಾರೆ.
-ಪ್ರೀತಿ ಮೈಲ್ವಾರ
ತಾಲ್ಲೂಕು ಪಂಚಾಯಿತಿ ಸದಸ್ಯೆ

**

ಸಭೆಯಲ್ಲಿ ಚರ್ಚಿಸುವ ಸಮಸ್ಯೆಗಳನ್ನು ಅಧಿಕಾರಿಗಳು ಬರೆದುಕೊಳ್ಳಬೇಕು. ನಂತರ ಆ ಸಮಸ್ಯೆ ಪರಿಹರಿಸಬೇಕು. ಆಗ ಸಭೆಯ ಮಹತ್ವ ಹೆಚ್ಚುತ್ತದೆ.
-ಸುರೇಖಾ ರಾಜಶೇಖರ ಪುರಾಣಿಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT