ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಶಿಕ್ಷಣ ಅವಕಾಶಗಳ ‘ಗಣಿ’

Last Updated 20 ಮೇ 2017, 5:59 IST
ಅಕ್ಷರ ಗಾತ್ರ

ಕಲಬುರ್ಗಿ: ಎಸ್ಸೆಸ್ಸೆಲ್ಸಿ ನಂತರ ತಮ್ಮ ಮಕ್ಕಳು ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಬಹುಪಾಲು ಪಾಲಕರ ಬಯಕೆ; ಮಕ್ಕಳೂ ಅಷ್ಟೇ. ವಿಜ್ಞಾನ ವ್ಯಾಸಂಗ ಮಾಡಿದರೆ ಅವಕಾಶಗಳು ಹೆಚ್ಚು ಎಂಬುದು ಎಲ್ಲರ ನಂಬಿಕೆ.

ಪಿಯುಸಿಯಲ್ಲಿ ವಿಜ್ಞಾನ ಪೂರೈಸುವ ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪಥಿ, ಆಯುರ್ವೇದ, ಯುನಾನಿ, ಎಂಜಿನಿಯರಿಂಗ್‌, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ, ಪಶು ವಿಜ್ಞಾನ ಕೋರ್ಸ್‌ಗಳಿಗೆ ಸೇರಬಹುದು. ಅಷ್ಟೇ ಏಕೆ, ನರ್ಸಿಂಗ್‌, ಲ್ಯಾಬ್‌ ಟೆಕ್ನಿಷಿಯನ್‌ನಂತಹ ಅರೆ ವೈದ್ಯಕೀಯ ಕೋರ್ಸ್‌ಗಳನ್ನೂ ಆಯ್ದುಕೊಳ್ಳಬಹುದು. ಬಿಎಸ್ಸಿ ಮಾಡಿ ಎಂಎಸ್ಸಿ ಮೂಲ ವಿಜ್ಞಾನ ವಿಷಯಗಳ ವ್ಯಾಸಂಗ ಮಾಡಬಹುದು. ಬಯೋಟೆಕ್ನಾಲಜಿ, ಬಯೋಇನ್ಫಾರ್ಮೆಟಿಕ್ಸ್‌, ಮೈಕ್ರೊ ಬಯಾಲಜಿ, ಸಂಶೋಧನಾ ಕ್ಷೇತ್ರಗಳಲ್ಲೂ ತೊಡಗಬಹುದು.

‘ವಿಜ್ಞಾನ ಶಿಕ್ಷಣ ಅವಕಾಶಗಳ ಗಣಿ ಇದ್ದಂತೆ. ವಿಜ್ಞಾನ ವಿದ್ಯಾರ್ಥಿಗಳು ಪಾಠ–ಪ್ರಾಯೋಗಿಕ ತರಗತಿಯಲ್ಲಿ ಹೆಚ್ಚು ಅವಧಿ ವ್ಯಯಿಸಬೇಕಾಗುತ್ತದೆ, ಪರಿಶ್ರಮವನ್ನೂ ಪಡಬೇಕಾಗುತ್ತದೆ. ಇದು ಅವರಲ್ಲಿ ಶಿಸ್ತು ರೂಪಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈ ಶಿಸ್ತು ಮತ್ತು ಪರಿಶ್ರಮ ಎರಡೂ ಅವರ ನೆರವಿಗೆ ಬರುತ್ತವೆ’ ಎನ್ನುವುದು ಗಣಿತ ವಿಷಯದಲ್ಲಿ ಎಂಎಸ್ಸಿ ಪೂರೈಸಿರುವ ಇಲ್ಲಿಯ ಸರ್ವಜ್ಞ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಅವರ ವಿವರಣೆ.

‘ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ಗಣಿತ, ವಿಜ್ಞಾನ ಬೋಧಿಸಲು ಬಿಎಸ್ಸಿ, ಬಿ.ಇಡಿ ಪೂರೈಸಿದವರು ಇಲ್ಲ. ಪದವಿಪೂರ್ವ ಕಾಲೇಜುಗಳಲ್ಲಿಯೂ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಇಷ್ಟಪಟ್ಟು ವಿಜ್ಞಾನ ಕಲಿತರೆ ಅದು ಎಂದೂ ನಿಮ್ಮ ಕೈಬಿಡುವುದಿಲ್ಲ. ಎಂಜಿನಿಯರಿಂಗ್‌ ಪೂರೈಸಿದವರು ಬ್ಯಾಂಕಿಂಗ್‌ ಕ್ಷೇತ್ರದತ್ತ ಹೆಚ್ಚು ವಾಲುತ್ತಿದ್ದಾರೆ. ಅಲ್ಲಿಯೂ ಅವರಿಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ’ ಎನ್ನುತ್ತಾರೆ ಅವರು.

‘ನೀಟ್‌ ಮತ್ತು ಐಐಟಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲಿಕ್ಕಾಗಿ ನ್ಯಾಷನಲ್‌ ಕೌನ್ಸಿಲ್‌ ಆಫ್‌ ಎಜ್ಯುಕೇಶನಲ್‌ ರೀಸರ್ಚ್‌ ಅಂಡ್‌ ಟ್ರೈನಿಂಗ್‌ (ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು ಪಿಯುಸಿ ವಿಜ್ಞಾನ ಕೋರ್ಸ್‌ಗಳಲ್ಲಿ ಅಳವಡಿಸಲಾಗಿದೆ. ಪ್ರೌಢಶಾಲೆಯ ಹಂತದಲ್ಲಿ ಇಂಗ್ಲಿಷ್‌, ವಿಜ್ಞಾನ, ಗಣಿತದಲ್ಲಿ ಬಹಳ ಹಿಂದಿರುವ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಷಯ ಆಯ್ದುಕೊಂಡರೆ ಸ್ವಲ್ಪ ಕಷ್ಟವಾಗಬಹುದು. ಆರಂಭದಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಬೋಧಿಸಿದರೆ ಅವರಿಗೆ ಸ್ವಲ್ಪ ಅನುಕೂಲವಾಗುತ್ತದೆ. ಇದೆಲ್ಲ ನೆಪಮಾತ್ರ, ನಾನು ಕಲಿತೇ ತೀರುತ್ತೇನೆ ಎಂಬ ಛಲ ಇದ್ದರೆ ಇಂತಹ ವಿದ್ಯಾರ್ಥಿಗಳೂ ಸಹ ಸಾಧನೆ ಮಾಡಬಹುದು. ಇದು ನಾನು ಅನುಭವದಿಂದ ಹೇಳುತ್ತಿರುವ ಮಾತು’ ಎನ್ನುತ್ತಾರೆ ಅವರು.

‘ವಿಜ್ಞಾನ ಕೋರ್ಸ್‌ಗಳು ಹಣವಂತರಿಗೆ ಮಾತ್ರ ಎಂಬ ಮಾತು ಇದೆ ನಿಜ. ಆದರೆ, ಉನ್ನತ ವ್ಯಾಸಂಗಕ್ಕೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಶೈಕ್ಷಣಿಕ ಸಾಲ ನೀಡುತ್ತವೆ. ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತದೆ. ಆ ಬಗ್ಗೆ ನಮ್ಮ ಮಕ್ಕಳಿಗೆ ಅರಿವಿಲ್ಲ’ ಎನ್ನುತ್ತಾರೆ ಅವರು.

‘ವ್ಯಕ್ತಿತ್ವ ವಿಕಸನ ಎಂಬುದು ಗುಣಮಟ್ಟದ ಶಿಕ್ಷಣದ ಭಾಗ. ಬರೀ ಪಠ್ಯ ಬೋಧನೆಗೆ ಸೀಮಿತವಾಗದೆ ಕಾಲೇಜುಗಳವರೂ ವಿದ್ಯಾರ್ಥಿಗಳಿಗೆ  ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ನೈತಿಕ ಶಿಕ್ಷಣ ನೀಡಬೇಕು’ ಎನ್ನುವುದು ಅವರ ಸಲಹೆ.

**

ವಿವಿಧ ಕೋರ್ಸ್‌ಗಳು

ಮಕ್ಕಳು ಇಷ್ಟಪಡುವ ಕೋರ್ಸ್‌ಗೆ ಅವರನ್ನು ಸೇರಿಸಿ. ಇದನ್ನೇ ಕಲಿಯಬೇಕು ಎಂದು ಒತ್ತಡ ಹೇರಬೇಡಿ. ಕಡಿಮೆ ಅಂಕ ಗಳಿಸಿರುವೆ ಎಂದು ಹೀಯಾಳಿಸಬೇಡಿ. ಅವರಲ್ಲಿ ಆತ್ಮವಿಶ್ವಾಸ ಬೆಳೆಸಿ.

-ಚನ್ನಾರೆಡ್ಡಿ ಪಾಟೀಲ, ಸಂಸ್ಥಾಪಕ ಅಧ್ಯಕ್ಷ, ಸರ್ವಜ್ಞ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT