ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ, ಮಧು–ವೇ, ನೆನಪುಗಳ ಒಡವೆ!

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಎಚ್‌. ರಮೇಶ ಕೆದಿಲಾಯ
ಕಥೆಗಾರ ಜಯಂತ ಕಾಯ್ಕಿಣಿ ತಮ್ಮ ಕಥೆಯೊಂದರಲ್ಲಿ ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತವೆ. ಅಂಕೋಲಾ, ಕಾರವಾರ ಕಡೆಗಳಲ್ಲಿ ಮದುವೆ ಸಂದರ್ಭದಲ್ಲಿ ಕಸೂತಿ ಹಾಕಿ ಮಾಡಿದ ದಿಂಬಿನ ಕವರೋ, ಇನ್ನೇನೋ ಕೊಡುವ ಕ್ರಮವಿದೆ. ಹೀಗಾಗಿ ಯಾರ ಮನೆಗೆ ಹೋದರೂ ಇನ್ನೊಬ್ಬರ ಮದುವೆಗೆ ಉಡುಗೊರೆ ಕೊಡಲು ಕಸೂತಿ ಕೆಲಸ ನಡೆಯುತ್ತಿರುತ್ತದೆ ಎಂದು ಕಾಯ್ಕಿಣಿ ಹೇಳುತ್ತಾರೆ.
 
ಹಿಂದಿನ ಮದುವೆ ಸಂಭ್ರಮವೇ ಹಾಗಲ್ಲವೆ? ಆಗ ಮದುವೆ ಒಂದು ಮನೆಗೆ ಸೀಮಿತವಾಗಿರುತ್ತಿರಲಿಲ್ಲ! ಅದು ಪಕ್ಕದ ಮನೆಗೂ ಹರಡಿ, ಅದರಾಚೆಗೂ ವಿಸ್ತರಿಸಿ ಒಂದಿಡೀ ಹಳ್ಳಿಗೆ ಆವರಿಸಿಬಿಡುತ್ತಿತ್ತು! ಈ ಮನೆಯ ಅಂಗಳಕ್ಕೆ ಹಾಕಿದ ಚಪ್ಪರ ಪಕ್ಕದ ಮನೆಗೂ ಚಾಚುತ್ತಿತ್ತು. ಇಲ್ಲಿರುವ ಸಂಭ್ರಮಗಳೆಲ್ಲಾ ಅಲ್ಲಿಯೂ ಇರುತ್ತಿದ್ದವು. ಎಲ್ಲಿಯವರೆಗೆ ಎಂದರೆ, ಮದುವೆ ಮನೆಗೆ ಬಂದ ಹತ್ತಿರದ ನೆಂಟರು ಆ ಮನೆಗೆ ಹೋಗಿ ಮಲಗುವಷ್ಟು. ಪಕ್ಕದ ಮನೆಯವರು ಹತ್ತು ದಿನಗಳ ಮೊದಲೇ – ‘ಯಾವ ಸಂಕೋಚವೂ ಬೇಡ, ನಮ್ಮಲ್ಲಿ ಇರಬಹುದು’ ಎಂದಿರುತ್ತಾರೆ. ಅವರಿಗೆ ಮದುವೆಯ ಭಾರವನ್ನು ಒಂದಿಷ್ಟಾದರೂ ಹೊರುವ ಆಸೆ! 
 
ಮದುವೆಯ ಹಿಂದು–ಮುಂದಿನ ದಿನಗಳಲ್ಲಿ ನೆರೆಹೊರೆಯ ಮನೆಗಳಲ್ಲಿ ಒಲೆ ಉರಿಯುತ್ತಿರಲಿಲ್ಲ. ಅವರೆಲ್ಲಾ ಮದುವೆ ಮನೆಗೇ ಬಂದು ಊಟ ಮಾಡಬೇಕು. ಇದೇನು ಲಿಖಿತ ಸಂವಿಧಾನವಲ್ಲ! ಇದು ಮೌಖಿಕ ಆಮಂತ್ರಣ! ಈ ಹೇಳಿಕೆಯೂ ಕೇವಲ ಔಪಚಾರಿಕವಷ್ಟೇ! ಹೇಳದಿದ್ದರೂ ಊಟಕ್ಕೆ ಬರುವ ಎಲ್ಲಾ ಸ್ವಾತಂತ್ರ್ಯವೂ ಅವರಿಗಿದೆ! ಅಷ್ಟೇ ಏಕೆ, ಅವರ ಮನೆಗೆ ಆ ದಿನಗಳಲ್ಲಿ ಯಾರಾದರೂ ನೆಂಟರು ಬಂದರೆ ಅವರನ್ನೂ ಮದುವೆಗೆ ಕರೆದುಕೊಂಡು ಬರಲೇಬೇಕು. ಹೀಗೆಂದು ನೆಂಟರಿಗೆ ಪ್ರತ್ಯೇಕ ಹೇಳಿಕೆ ನೀಡುವ ಅಗತ್ಯವೇ ಇರಲಿಲ್ಲ!
 
ಈಗ ಇವೆಲ್ಲಾ ‘ಹೀಗೂ ಉಂಟೆ?’ ಎಂದು ಅನಿಸಿದರೆ ಆಶ್ಚರ್ಯವಿಲ್ಲ! ಹೇಳಿಕೆ ನೀಡಿ ಫೋನ್‌ ಮಾಡಲು ಮರೆತರೆ ಮದುವೆಗೆ ಬಾರದಿರುವವರೂ ಇದ್ದಾರೆ. ಹೀಗಿರುವಾಗ ಅವರಲ್ಲಿಗೆ ಬಂದ ನೆಂಟರನ್ನು ಕರೆತರುವ ಸಂದರ್ಭ ಬರುವುದೇ ಇಲ್ಲ! ಕೆಲವರಂತೂ ಮನೆಗೇ ಹೋಗಿ ಹೇಳಿಕೆ ಕೊಡಬೇಕೆನ್ನುವ ನಿರೀಕ್ಷೆಯಲ್ಲಿರುತ್ತಾರೆ! ನೀವು ಹೋಗಲಿಲ್ಲವೋ ಅವರು ಬರುವುದಿಲ್ಲ! ಆತ್ಮೀಯತೆ ಕೇವಲ ಪ್ರದರ್ಶನವಾದಾಗ, ಸಂಬಂಧ ನೆಪವಾದಾಗ, ಸ್ನೇಹ ಕೃತಕವಾದಾಗ ಹೀಗಾಗುತ್ತದೆ! 
 
ಸಂಬಂಧಿಗಳೊಂದಿಗೆ ಅಥವಾ ಆಪ್ತಸ್ನೇಹಿತರೊಂದಿಗೆ ಮಗಳ ಮದುವೆ ನಿಶ್ಚಯವಾಗಿದೆಯೆಂದು ಹೇಳಿ ನೋಡಿ, ಮೊಟ್ಟಮೊದಲು ಅವರಿಗಾಗುವುದು ಗಾಬರಿಯೇ ಹೊರತು ನಿಜವಾದ ಆನಂದವಲ್ಲ! ಹಣ ಸಾಲ ಕೇಳಿದರೆ? ಎನ್ನುವ ಗಾಬರಿ! ಒಂದೆರಡು ದಿನಗಳ ಬಗ್ಗೆ ಕಾರು ಕೇಳಿದರೆ? ಎನ್ನುವ ದಿಗಿಲು! ಮನೆಗೆ ನೆಂಟರನ್ನು ಕಳುಹಿಸಿದರೆ ಹೇಗೆ ನಿರಾಕರಿಸುವುದು ಎನ್ನುವ ಉಭಯಸಂಕಟ. ನೂರರಲ್ಲಿ ತೊಂಬತ್ತೊಂಬತ್ತು ಸಲ ಇವಾವುದೂ ಆಗುವುದೇ ಇಲ್ಲ. ಹೀಗಿದ್ದೂ ಅಲ್ಲೊಂದು ಚಿಂತೆ ಹುಟ್ಟುವುದಕ್ಕೆ ಅತೀ ಸ್ವಾರ್ಥವೇ ಕಾರಣ.
 
ಈಗ ಬೇರೆಯವರ ಮನೆಯಲ್ಲಿ ತಂಗುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಈಗ ಹೋಟೆಲಿನಲ್ಲಿ ರೂಮ್ ಮಾಡಿಕೊಡುವ ಕಾಲ! ಸಾಮಾನ್ಯ ರೂಮ್ ಮಾಡಿಕೊಟ್ಟರೆ – ‘ಎ.ಸಿ. ಇರಲಿಲ್ಲವೇ?’ ಎಂದು ಕೇಳುವ ಕಾಲದಲ್ಲಿ ನಾವಿದ್ದೇವೆ. ‘ಲಿಫ್‌್ಟ ಇಲ್ಲದೆ ಮೆಟ್ಟಿಲು ಹತ್ತಿ ಹತ್ತಿ ಸಾಕಾಯ್ತು’ ಎಂದು ಅಕ್ಕನೇ ತಂಗಿಯ ಮದುವೆಗೆ ಬಂದಾಗ ಹೇಳುವ ಮಟ್ಟಿಗೆ ನಮ್ಮ ಮನಃಸ್ಥಿತಿ ಬದಲಾಗಿದೆ! ಬಂದವರಿಗೆ ಅವರವರ ಸುಖ ಮುಖ್ಯವಾಗುತ್ತದೆಯೇ ಹೊರತು ಮದುವೆಯ ಸಖ್ಯವಲ್ಲ!
 
ನಿಜ ಹೇಳಬೇಕೆಂದರೆ, ಮದುವೆಯೆನ್ನುವ ಒಂದು ಭವ್ಯ ಕೌಟುಂಬಿಕ ಸಮಾಗಮ. ಎಲ್ಲೆಲ್ಲೋ ಚದುರಿಹೋಗಿರುವ ಕುಟುಂಬ ಸದಸ್ಯರೆಲ್ಲಾ ಒಂದೇ ಕಡೆ ಸೇರುವ ಮಧುರ ಸಮಾವೇಶ. ದೂರದ ಅಮೆರಿಕಾದಲ್ಲಿರುವ ಸೋದರಮಾವನನ್ನು ನೋಡಿ ಮಾತನಾಡಿಸಲು ಅಲ್ಲಿಗೇ ಹೋಗುವ ಅಗತ್ಯವಿಲ್ಲ. ಅವರೆಲ್ಲ ಮದುವೆ ಚಪ್ಪರಕ್ಕೆ ಬಂದು ತಮ್ಮ ಅನುಭವವನ್ನು ಹಂಚಿಕೊಳ್ಳಲು, ಊರಲ್ಲಿರುವ ಎಲ್ಲರನ್ನೂ ಮಾತನಾಡಿಸಲು ಇದೊಂದು ಒಳ್ಳೆಯ ಅವಕಾಶ!
 
ದೆಲ್ಲಿಯಲ್ಲಿರುವ ಅಣ್ಣ ಅತ್ತಿಗೆಯೋ, ಇಲ್ಲೇ ಪಕ್ಕದ ಕೇರಳದಲ್ಲಿರುವ ಚಿಕ್ಕಮ್ಮನೋ, ಇನ್ನೂ ಹತ್ತಿರದ ಉಡುಪಿಯಲ್ಲಿರುವ ದೊಡ್ಡಮ್ಮನೋ ಮದುವೆಮನೆಯಲ್ಲೋ, ಕಲ್ಯಾಣ ಮಂಟಪದಲ್ಲೋ ಲವಲವಿಕೆಯಿಂದ ಓಡಾಡಿಕೊಂಡಿರುವುದಕ್ಕೆ ಇದಕ್ಕಿಂತ ಒಳ್ಳೆಯ ಸಂದರ್ಭ ಇನ್ನೊಂದಿಲ್ಲ! ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡವರು ಸಂಬಂಧದ ಸಾಂಗತ್ಯದಲ್ಲಿ ಗೆಲ್ಲುತ್ತಾರೆ. ಅದುಬಿಟ್ಟು, ‘ಊಟ ಚೆನ್ನಾಗಿರಲಿಲ್ಲ, ಜೋಡಿಯೂ ಅಷ್ಟಕಷ್ಟೇ, ಕೊಟ್ಟ ಸೀರೆ ಏನೂ ಒಳ್ಳೆಯದಿಲ್ಲ’ ಎಂದೆಲ್ಲ ಟೀಕಿಸುತ್ತಾ ಕುಳಿತವರು ಸಂಬಂಧಗಳ ಸಾಮ್ರಾಜ್ಯದಲ್ಲಿ ಸೋತು ಹೊರಗೇ ಉಳಿಯುತ್ತಾರೆ.
 
‘ಮರಳಿ ಮಣ್ಣಿಗೆ’ ಎನ್ನುವಂತೆ ಮತ್ತೆ ಆ ಕಾಲಕ್ಕೆ ಹೋದರೆ ಕಾಣಸಿಗುವುದು ಮದುವೆಯ ಹಿಂದಿನ ರಾತ್ರಿಯೇ ನಡೆಯುವ ಸಿದ್ಧತೆಗಳ ಸಂಭ್ರಮ! ಇದಕ್ಕೆ ತುಂಬಾ ಹಿಂದಕ್ಕೆ ಹೋಗುವ ಅಗತ್ಯವಿಲ್ಲ. ಎಂಬತ್ತರ ದಶಕದಲ್ಲೂ ಮದುವೆಗಳು ಮನೆಯಲ್ಲೇ ಆಗುತ್ತಿದ್ದವು ಎನ್ನಬಹುದೋ ಏನೋ! ಆಗ ಮನೆಯಿಡೀ ಹೆಂಗಸರು ಮಕ್ಕಳಿಂದ, ಅತಿಥಿಗಳಿಂದ ತುಂಬಿ ತುಳುಕಿ, ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಷ್ಟು ಗಿಜಿಬಿಜಿ ಇರುತ್ತಿತ್ತು. ಈ ನಡುವೆ ರಾತ್ರೆಯ ಊಟವಾದ ಕೂಡಲೇ ತರಕಾರಿ ಹೆಚ್ಚುವ ಕಾರ್ಯ ಶುರುವಾಗುತ್ತಿತ್ತು. ಇದು ಕೇವಲ ಅಡುಗೆಭಟ್ಟರಿಗೆ ಸೀಮಿತವಾಗಿರಲಿಲ್ಲ.
 
ನೆರೆಹೊರೆಯ ಗಂಡಸರು, ಹೆಂಗಸರು, ಭಾವ, ಮಾವ, ದೊಡ್ಡಮ್ಮ, ಚಿಕ್ಕಪ್ಪ ಎಂದು ಬಂದವರೆಲ್ಲಾ ಸೇರಿ – ಅಲಸಂದೆ, ತೊಂಡೆ, ಸೌತೆ, ಸುವರ್ಣಗೆಡ್ಡೆ, ಕುಂಬಳಕಾಯಿಗಳನ್ನು ಪ್ರೀತಿಯಿಂದ ತುಂಡು ಮಾಡಿ ದೊಡ್ಡ ದೊಡ್ಡ ಪಾತ್ರೆಗಳಿಗೆ ಹಾಕುತ್ತಿದ್ದ ದೃಶ್ಯವನ್ನು ಹೀಗೆಯೇ ಎಂದು ವರ್ಣಿಸುವಂತಿಲ್ಲ! ಮರುದಿನ ಮದುವೆಯೂಟ ಮಾಡುತ್ತಿರುವಾಗ ಯಾರೋ ಒಬ್ಬರು, ‘ಸುವರ್ಣಗೆಡ್ಡೆಯ ಪಲ್ಯ ತುಂಬಾ ಚೆನ್ನಾಗಿದೆ’ ಎಂದರೆ, ಇನ್ನೊಂದು ಸಾಲಿಗೆ ಸಾರು ಬಡಿಸುತ್ತಿರುವ ಭಾವ ‘ನಾನೇ ಹೆಚ್ಚಿದ್ದು’ ಎಂದು ಗಟ್ಟಿಯಾಗಿ ಹೇಳಿ ನಗುವಿನ ಅಲೆ ಎಬ್ಬಿಸಿದ್ದೂ ಒಂದು ಸುಂದರ ನೆನಪೇ ಅಲ್ಲವೆ?
 
ಮಧ್ಯರಾತ್ರಿಯ ತನಕವೂ ಹರಟೆ ಮತ್ತು ತರಕಾರಿ ಹೆಚ್ಚುವ ಕೆಲಸ ಮುಂದುವರಿಯುತ್ತಿತ್ತು! ಮತ್ತೆಲ್ಲಿಯ ನಿದ್ದೆ! ಶಾಸ್ತ್ರಕ್ಕೆ ನಿದ್ದೆ ಎನ್ನುತ್ತಾರಲ್ಲಾ ಹಾಗೆ! ಚಾವಡಿಯಲ್ಲಿ ಮಲಗುವವರೆಷ್ಟು ಮಂದಿಯೋ? ಚಪ್ಪರದ ಕೆಳಗೇ ಜಮಖಾನೆ ಹಾಸಿ ನಿದ್ದೆಗೆ ಜಾರುವವರೆಷ್ಟು ಮಂದಿಯೋ? ಯಾರೂ ಅದರ ಲೆಕ್ಕವಿಟ್ಟವರೇ ಇಲ್ಲ. ಬೆಳ್ಳಂಬೆಳಗ್ಗೆ 5 ಗಂಟೆಗೇ ಮತ್ತೆ ಏಳಬೇಕಲ್ಲ? ಆಯಾಸವಾಗುತ್ತಿರಲಿಲ್ಲವೆ? ಆಗುತ್ತಿತ್ತು. ಆದರೆ ಗೊತ್ತಾಗುತ್ತಿರಲಿಲ್ಲ! ಅಥವಾ ಸಂಭ್ರಮಾಚರಣೆಯಲ್ಲಿ ದಣಿವು ಮರೆಯಾಗಿಬಿಡುತ್ತಿತ್ತೋ ಏನೋ!
 
ಈಗ ಮನೆಯಲ್ಲಿ ಮದುವೆ ಮಾಡುವ ಪ್ರಸಂಗ ಇಲ್ಲವೇ ಇಲ್ಲ. ‘ಮದುವೆ, ಅದೂ  ಮನೆಯಲ್ಲಿ ಮಾಡುತ್ತಿದ್ದರೆ?’ ಎಂದು ಈಗಿನ ಮಕ್ಕಳು ಆಶ್ಚರ್ಯದಿಂದ ನಮ್ಮ ಮುಖ ನೋಡಿಯಾರು. ಮದುವೆ ಕಲ್ಯಾಣಮಂಟಪಕ್ಕೆ ವರ್ಗಾವಣೆಗೊಂಡ ಬಳಿಕ ಎಲ್ಲವೂ ಬದಲಾಗಿಬಿಟ್ಟಿತು! ಊಟ–ತಿಂಡಿಯ ವ್ಯವಸ್ಥೆಯನ್ನು ಹೊರಗಿನವರಿಗೆ ವಹಿಸಿಕೊಡುವ ಪದ್ಧತಿ ಬಂದ ಮೇಲೆ ತರಕಾರಿ, ಬೇಳೆ, ಸಕ್ಕರೆ, ಬೆಲ್ಲ, ಅಕ್ಕಿ ತರಲು ಮಾರುಕಟ್ಟೆಗೆ ಹೋಗುವುದೂ ನಿಂತೇಬಿಟ್ಟಿತು. ಎಲ್ಲವೂ ಸುಲಭವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎರಡೂ ಕಡೆಯವರೂ ಅತಿಥಿಗಳಂತೆ ಕಲ್ಯಾಣಮಂಟಪಕ್ಕೆ ಹೋದರಾಯ್ತು. ಉಳಿದದ್ದೆಲ್ಲಾ ಅದರಷ್ಟಕ್ಕೇ ನಡೆದುಬಿಡುತ್ತದೆ. ಈಗ ಈ ಪರಿಸ್ಥಿತಿಯೂ ಒಗ್ಗಿಹೋಗಿ ಅದರಲ್ಲೂ ನಾವು ಸಂತೋಷವನ್ನು, ಖುಷಿಯನ್ನು ಅರಸತೊಡಗಿದ್ದೇವೆ! ಮದುವೆಗೂ ಮೊದಲೇ ರಿಸೆಪ್ಷನ್ ನಡೆಯುವುದು ಸಾಧ್ಯವೆಂದಾದರೆ ಏನೂ ಅಸಾಧ್ಯವಾಗಿ ಉಳಿಯುವುದಿಲ್ಲ.
 
ಈಗ ಉಡುಗೊರೆ ಇದ್ದೂ ಇಲ್ಲದಂತ ಸ್ಥಿತಿಯಲ್ಲಿ ನಾವಿದ್ದೇವೆ. ‘ಆಶೀರ್ವಾದವೇ ಉಡುಗೊರೆ’ ಎಂದು ಕರೆಯೋಲೆಯಲ್ಲಿ ಪ್ರಕಟಿಸಿದರೂ ಹತ್ತಿರದ ನೆಂಟರು ಏನಾದರೂ ಕೊಟ್ಟೇಕೊಡುತ್ತಾರೆ. ಆದರೆ ಉಡುಗೊರೆಯ ಹಿಂದೆ ಆ ದಿನಗಳಲ್ಲಿದ್ದ ಆತ್ಮೀಯತೆಯೂ ಈಗ ಕಣ್ಮರೆಯಾಗಿದೆ! ಹಿಂದೆ, ಅಕ್ಕನೋ ತಂಗಿಯೋ ‘ನಾನು ಸ್ಟೀಲ್ ಪಾತ್ರೆಗಳ ಸೆಟ್ ಕೊಡುತ್ತೇನೆ’ ಎಂದು ತಿಂಗಳ ಮೊದಲೇ ಹೇಳಿಬಿಡುತ್ತಿದ್ದಳು.

ಹತ್ತಿರದ ಬೇರೆ ನೆಂಟರು ಅದೇ ರೀತಿಯ ಉಡುಗೊರೆ ಮಾಡದಿರಲಿ ಎನ್ನುವ ಉದ್ದೇಶ ಅದರ ಹಿಂದೆ ಇತ್ತು! ಹಾಗೆಯೇ ಇನ್ನೊಬ್ಬರು ಕುಕ್ಕರ್ ಕೊಡುತ್ತೇನೆಂದೋ, ಮತ್ತೊಬ್ಬರು ಬೆಡ್‌ಶೀಟ್‌ಗಳನ್ನು ನೀಡುತ್ತೇನೆಂದೋ ಹೇಳುತ್ತಿದ್ದರು. ಅಂತೂ ಮದುಮಗ, ಮದುಮಗಳಿಗೆ ಮನೆಗೆ ಬೇಕಾದ ಬಹುತೇಕ ವಸ್ತುಗಳು ಸಿಗುತ್ತಿದ್ದವು. ಒಗ್ಗರಣೆ ಡಬ್ಬಿಯೂ ಉಡುಗೊರೆಯಾಗಿ ಸಿಕ್ಕಿದ್ದೂ ಇದೆ! ಇವುಗಳಿಗೆಲ್ಲಾ ಒಂದು ಭಾವನಾತ್ಮಕ ಸಂಬಂಧವೂ ಇರುತ್ತಿತ್ತು. ಮೂವತ್ತೈದು ವರ್ಷಗಳ ಹಿಂದೆ ಮದುವೆಯಲ್ಲಿ ಸಿಕ್ಕಿದ ಕುಕ್ಕರನ್ನು ಇನ್ನೂ ಹಾಗೆಯೇ ಇಟ್ಟುಕೊಂಡವರೂ ಇದ್ದಾರೆ. ಮನೆಗೆ ಹೊಸ ಕುಕ್ಕರ್‌ಗಳು ಬಂದಿರಬಹುದು. ಆದರೆ ಹೊಸದನ್ನು ಕೊಂಡುಕೊಳ್ಳುವಾಗಲೂ ಆ ಹಳೆಯ ಕುಕ್ಕರನ್ನು ವಿನಿಯಮ ಮಾಡದೆ ಇಟ್ಟುಕೊಂಡಿರುವುದು ಅಕ್ಕನೋ ದೊಡ್ಡಮ್ಮನೋ ಕೊಟ್ಟಿರುವುದಕ್ಕಾಗಿಯೇ ಅಲ್ಲವೆ?
 
ಈಗ ಕುಟುಂಬದವರ ಉಡುಗೊರೆ ಹಣಕ್ಕೆ ಬಂದು ಮುಟ್ಟಿದೆ. ಐನೂರರ ನಾಲ್ಕು ನೋಟುಗಳನ್ನು ಕವರಿನೊಳಗೆ ತುರುಕಿಸಿ ಶುಭ ಹಾರೈಕೆಯ ಸಂದೇಶವನ್ನು ಮೇಲೆ ಬರೆದು, ತಮ್ಮ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಗೀಚಿ, ಗಮ್ ಸವರಿ ಕವರಿನ ಬಾಯಿ ಮುಚ್ಚಿ ಕೊಟ್ಟರಾಯ್ತು! ಅಂಗಡಿ ಅಂಗಡಿ ತಿರುಗಿ ಸೀರೆಯನ್ನೋ ಸಲ್ವಾರನ್ನೋ ಹುಡುಕುವ ಅಗತ್ಯವೇ ಇಲ್ಲ! ಸೀರೆ ಕೊಟ್ಟರೆ ಬಣ್ಣ ಇಷ್ಟವಾಗದೇ ಹೋಗಬಹುದು.
 
ಆದರೆ ಮಾಸಿದ ನೋಟು ಕೂಡಾ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ! ಹೀಗಾಗಿ ಅವರವರ ಗ್ರೇಡಿಗೆ ಸರಿಯಾಗಿ ನೋಟುಗಳನ್ನಿಟ್ಟರೂ ಸಾಕು, ಉಡುಗೊರೆ ಸಿದ್ಧವಾಗಿಬಿಡುತ್ತದೆ! ಇಲ್ಲಿ ಉಡುಗೊರೆ ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುವುದೇ ಇಲ್ಲ. ಅಷ್ಟೇ ಅಲ್ಲ, ಅವರಿವರು ಕೊಟ್ಟ ನೋಟುಗಳನ್ನೆಲ್ಲಾ ಒಟ್ಟು ಮಾಡಿದ ಮೇಲೆ ಅದು ಯಾರು ಕೊಟ್ಟ ಉಡುಗೊರೆ ಎನ್ನುವುದೂ ತಿಳಿಯುವುದಿಲ್ಲ. ಉಡುಗೊರೆ ಸಾರ್ವತ್ರಿಕವಾಗುವುದು ಹೀಗೆ! ಉಡುಗೊರೆ ಖಾಸಗೀತನವನ್ನು ಕಳಚಿಕೊಳ್ಳುವುದೂ ಹೀಗೆಯೇ!
 
ಈ ಎಲ್ಲಾ ಬದಲಾವಣೆಗಳ ನಡುವೆಯೂ ಮದುವೆ ತನ್ನ ಸೌಂದರ್ಯವನ್ನು ಇನ್ನೂ ಉಳಿಸಿಕೊಂಡಿದೆ ಎನ್ನುವುದು ಸಂತಸದ ವಿಷಯ! ಮದುವೆಯಲ್ಲಿ ದೀರ್ಘ ಕಾಲದ ಕಾಯುವಿಕೆಯಿದೆ! ಮಗಳ ಅಥವಾ ಮಗನ ವಿದ್ಯಾಭ್ಯಾಸ ಮುಗಿದು ಕೆಲಸ ಸಿಕ್ಕಿ ಸೆಟಲ್ ಆಗುವ ತನಕ ಈ ಕಾಯುವಿಕೆ ಮುಂದುವರೆಯುತ್ತದೆ! ಅಷ್ಟೇ ಅಲ್ಲ, ಮದುವೆ ನಿಶ್ಚಯವಾದ ಮೇಲೂ ಎರಡು ತಿಂಗಳುಗಳಿಂದ ಒಂದು ವರ್ಷದ ತನಕ ಕಾಯುವುದೂ ಇದ್ದೇ ಇದೆ! ಹೀಗಾಗಿ ಕಾಯುವಿಕೆಯ ಬಳಿಕ ಬರುವ ಸಮಾರಂಭಕ್ಕೊಂದು ವೈಭವ, ಮೆರಗು ಬಂದೇ ಬರುತ್ತದೆ! ಎರಡು ದೇಹ ಮತ್ತು ಮನಸು, ಎರಡು ಕುಟುಂಬಗಳ ಕನಸು ಕೂಡಿರುವ ಮದುವೆಯ ಬಂಧನವೇ ಸೊಗಸು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT