ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಾ ದಂಡೆ ಉದ್ದಕ್ಕೂ ಸೌರಶಕ್ತಿ ವಿದ್ಯುತ್ ಘಟಕ

Last Updated 21 ಮೇ 2017, 5:19 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಮುಖ ನೀರಾವರಿ ಯೋಜನೆಗಳ ಮುಖ್ಯ ನಾಲೆಗಳ ದಂಡೆಯ ಉದ್ದಕ್ಕೂ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಿ, ಆಯಾ ಭಾಗಗಳ ರೈತರಿಗೆ ಉಚಿತ, ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ.

ಭದ್ರಾ ‘ಕಾಡಾ’ ವ್ಯಾಪ್ತಿಯಲ್ಲಿ 30 ಬೃಹತ್‌ ಮತ್ತು ಮಧ್ಯಮ ನೀರಾವರಿ ಯೋಜನೆಗಳಿವೆ. ಅವುಗಳಲ್ಲಿ ತುಂಗಾ, ಭದ್ರಾ, ತುಂಗಾ ಮೇಲ್ದಂಡೆ, ಗೋಂದಿ, ಅಂಬ್ಲಿಗೊಳ್ಳ, ಅಂಜನಾಪುರ, ವಾಣಿವಿಲಾಸ ಸಾಗರ, ವರಾಹಿ ಪ್ರಮುಖ ಜಲಾಶಯಗಳು.

ತುಂಗಾ ಮೇಲ್ದಂಡೆ ಹೊರತುಪಡಿಸಿ ಎಲ್ಲ ಜಲಾಶಯಗಳಿಗೂ ತಲಾ ಎರಡು ಪ್ರಮುಖ ನಾಲೆಗಳಿವೆ. 17 ನಾಲೆಗಳ 989 ಕಿ.ಮೀ.ನಲ್ಲಿ ಇರುವ ದಂಡೆಯ ಎರಡೂ ಬದಿಯ ಖಾಲಿ ಜಾಗದ ವಿಸ್ತೀರ್ಣ 1,500 ಹೆಕ್ಟೇರ್‌.

5 ಎಕರೆ ವಿಸ್ತಾರದಲ್ಲಿ ಒಂದು ಮೆಗಾವಾಟ್‌ ಉತ್ಪಾದನಾ ಘಟಕ ಸ್ಥಾಪಿಸಬಹುದು. ಸಂಪರ್ಕ ಜಾಲವೂ ಸೇರಿ ಒಂದು ಘಟಕಕ್ಕೆ ಸುಮಾರು ₹ 5 ಕೋಟಿ ವೆಚ್ಚವಾಗುತ್ತದೆ. ನಾಲೆಗಳ ಎರಡೂ ಬದಿಯ ಜಾಗ ಬಳಸಿಕೊಂಡರೆ 600 ಮೆಗಾವಾಟ್‌ ಸಾಮರ್ಥ್ಯದ 600 ಘಟಕ ಸ್ಥಾಪಿಸಬಹುದು. ಅಷ್ಟೂ ಘಟಕ ಸ್ಥಾಪಿಸಲು ₹ 3 ಸಾವಿರ ಕೋಟಿ ವೆಚ್ಚದ ಅಗತ್ಯವಿದೆ ಎಂದು ಅಂದಾಜು ಸಿದ್ಧಪಡಿಸಲಾಗಿದೆ.

ಸರ್ಕಾರ ಈಗಾಗಲೇ ಖಾಸಗಿ ಜಮೀನುಗಳಲ್ಲಿ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಘಟಕ ಸ್ಥಾಪಿಸಲು ಆಸಕ್ತಿ ತೋರುವ ರೈತರಿಗೆ ಸಬ್ಸಿಡಿ ನೀಡುತ್ತಿದೆ. ಅವರಿಂದಲೇ ದುಬಾರಿ ಬೆಲೆ ತೆತ್ತು ವಿದ್ಯುತ್‌ ಖರೀದಿಸುತ್ತಿದೆ.

ನಾಲಾ ದಂಡೆಯ ಖಾಲಿ ಜಾಗವನ್ನೇ ಬಳಸಿಕೊಂಡರೆ ವಿದ್ಯುತ್‌ ಖರೀದಿ ವೆಚ್ಚ ಉಳಿಸುವ ಜತೆಗೆ, ಬೇಸಿಗೆಯಲ್ಲಿ ವಿದ್ಯುತ್‌ ಕೊರತೆಯನ್ನೂ ನೀಗಿಸಬಹುದು ಎಂದು ‘ಕಾಡಾ’ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವದಲ್ಲಿ ವಿವರಿಸಿದ್ದಾರೆ.

ಯೋಜನೆ ಅನುಷ್ಠಾನವಾದರೆ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ದಿನದ ಹೆಚ್ಚಿನ ಅವಧಿ ತ್ರಿಫೇಸ್‌ ವಿದ್ಯುತ್‌ ಪೂರೈಸಬಹುದು. 24 ಗಂಟೆಯೂ ಸಿಂಗಲ್‌ಫೇಸ್‌ ಇರುವಂತೆ ನೋಡಿಕೊಳ್ಳಬಹುದು.

‘ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಇತರೆ ನಾಲೆಗಳ ದಂಡೆಯ ಮೇಲೂ ಸೌರಫಲಕ ಅಳವಡಿಸಬಹುದು. ಭವಿಷ್ಯದಲ್ಲಿ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ನಾಲಾ ದಂಡೆ ಒತ್ತುವರಿಯನ್ನೂ ತಡೆಯಬಹುದು’ ಎನ್ನುತ್ತಾರೆ ಭದ್ರಾ ‘ಕಾಡಾ’ ಅಧ್ಯಕ್ಷ ಎಚ್‌.ಎಸ್.ಸುಂದರೇಶ್.

ಕೆಲವು ಖಾಸಗಿ ಕಂಪೆನಿಗಳು ಈ ಯೋಜನೆಯಲ್ಲಿ ಬಂಡವಾಳ ತೊಡಗಿಸಲು ಒಲವು ತೋರಿವೆ. ಸರ್ಕಾರಕ್ಕೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸುವ ಷರತ್ತಿನ ಮೇಲೆ ಅನುಮತಿ ನೀಡಬಹುದು. ಸರ್ಕಾರಕ್ಕೂ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

* *

ಬೇಸಿಗೆಯಲ್ಲಿ ಸೌರಶಕ್ತಿ ಘಟಕಗಳು ಹೆಚ್ಚಿನ ಪ್ರಮಾಣದ ವಿದ್ಯುತ್‌ ಉತ್ಪಾದಿಸುತ್ತವೆ. ಈ ಯೋಜನೆ ಯಶಸ್ವಿಯಾದರೆ ಜಲವಿದ್ಯುತ್‌ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಎಚ್‌.ಎಸ್.ಸುಂದರೇಶ್, ಅಧ್ಯಕ್ಷ, ಭದ್ರಾ ‘ಕಾಡಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT