ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಒಪ್ಪದ ಪ್ರಾಣಿಪ್ರೇಮಿ...!

Last Updated 21 ಮೇ 2017, 8:37 IST
ಅಕ್ಷರ ಗಾತ್ರ

ದಿನನಿತ್ಯದ ಜಂಜಾಟದಿಂದ ಹೊರಬರಲು ಕಳೆದ ವಾರ ಕುದುರೆಮುಖದ ರಾಷ್ಟ್ರೀಯ ಉದ್ಯಾನದ ಮೂಲಕ ಒಂದು ಸುತ್ತು ಹಾಕಲು ಪತ್ನಿ ಮತ್ತು ಮಗಳ ಜತೆ ತೆರಳಿದ್ದೆ. ಕುದುರೆಮುಖ ಪಟ್ಟಣ ಪ್ರವೇಶಿಸುವ ಮುನ್ನ ನನ್ನ ಮಗಳು ದೂರದಲ್ಲಿ ಇದ್ದ ಕಟ್ಟಡ ತೋರಿಸಿ ‘ಇಲ್ಲಿ ತುಂಬಾ ಬೆಕ್ಕುಗಳು ಇದ್ದವಲ್ಲ ಅದನ್ನು ನೋಡೋಣ’ ಎಂದು ಹಠ ಮಾಡಿದಳು. ಆಗ ನಮಗೆ ಎರಡು ವರ್ಷದ ಹಿಂದೆ ನೋಡಿದ್ದ ಪ್ರಾಣಿಪ್ರಿಯ ರೂಬನ್‌ ನೆನಪಾಯಿತು.

56 ಬೆಕ್ಕು ಸಾಕಿಕೊಂಡಿದ್ದ ಬೈಕ್‌ ಮೆಕ್ಯಾನಿಕ್‌ ರೂಬನ್‌ ಈಗ ಎಲ್ಲಿರುತ್ತಾರೆ? ಕುದುರೆಮುಖದಲ್ಲಿ ಗಣಿಗಾರಿಕೆ ನಿಂತು ಶೇ 95 ಜನರು ಸ್ಥಳಾಂತರ ಆದ ಮೇಲೆ ಇನ್ನು ರೂಬನ್‌ರಂತಹ ಮೆಕ್ಯಾನಿಕ್‌ಗೆ ಇಲ್ಲೇನು ಕೆಲಸ. ಅವರೂ ಕೂಡ ನಗರಕ್ಕೆ ಸ್ಥಳಾಂತರ ಆಗಿರಬೇಕು ಎಂದು ನಾನು ಮಗಳ ಉತ್ಸಾಹಕ್ಕೆ ತಣ್ಣೀರು ಎರಚಿದೆ. ‘ಇಲ್ಲ ಅಪ್ಪ,  ಅಲ್ಲಿ ಬೆಕ್ಕು, ಮರಿಗಳು ಇರ್ತವೆ ನೋಡೋಣ’ ಎಂದು ಪ್ರಾಣಿಪ್ರಿಯಳಾದ ಅವಳೂ ಹಠ ಮಾಡತೊಡಗಿದಳು.

ಸರಿ ಎಂದು ಆ ದಿಕ್ಕಿಗೆ ಕಾರು ತಿರುಗಿಸಿದರೆ ಹಿಂದೆ ಇದ್ದ ರಸ್ತೆಯೆಲ್ಲ ಹದಗೆಟ್ಟು ರಸ್ತೆಯ ಬದಿಯೆಲ್ಲ ಪೊದೆ ಬೆಳೆದು ಮನುಷ್ಯರು ವಾಸಿಸುವ ಲಕ್ಷಣಗಳೇ ಕಂಡುಬರಲಿಲ್ಲ. ಅಷ್ಟರಲ್ಲಿ  ಮಗಳು ‘ಅಪ್ಪಾ, ಅಲ್ಲಿ ಒಂದು ಬೆಕ್ಕು ಇದೆ. ಇಲ್ಲಿ ಮತ್ತೊಂದು, ಎರಡು, ನಾಲ್ಕು, ಎಂಟು...! ಎಂದು ಸಂಭ್ರಮದಿಂದ ಜಿಗಿಯುತ್ತಿದ್ದಳು.

ರೂಬನ್‌ ಊರು ಬಿಟ್ಟರೂ ಈ ಬೆಕ್ಕುಗಳು ಇಲ್ಲಿ ಹೇಗೆ ಜೀವನ ಮಾಡುತ್ತಿದ್ದಾವೆ ಎಂದು ನಾವು ಕುತೂಹಲದಿಂದ ಇನ್ನಷ್ಟು ಹತ್ತಿರ ಹೋದೆವು. ರೂಬನ್‌ ವಾಸವಿದ್ದ ಶೆಡ್ ಬಳಿಗೆ ಹೋಗಿ ಕಾರು ನಿಲ್ಲಿಸಿ ಸಮೀಪಕ್ಕೆ ಹೋದೆವು.

ಶೆಡ್‌ನ ಬಳಿ ದುರಸ್ತಿಗೆಂದು ಬಂದಿದ್ದ ತಲೆಮಾರು ಹಿಂದಿನ ಮಾಸಲು ಬಣ್ಣದ ಲೂನಾ, ಸ್ಕೂಟರ್‌, ಇನ್ನೆಂದೂ ದುರಸ್ತಿ ಆಗದಂತಿದ್ದ ಒಂದೆರಡು ಬೈಕ್‌ಗಳು ನಿಂತಿದ್ದವು. ನಮ್ಮ ಮಾತಿನ ಸದ್ದಿಗೆ ಶೆಡ್‌ ಒಳಗೆ ಏನೋ ಸದ್ದಾಯಿತು. ಅರೆ ಬರೆ ಬಾಗಿಲು ಹಾಕಿದ್ದ ಶೆಡ್‌ ಒಳಗೆ ಸಂಜೆಗತ್ತಲ ಸಮಯದಲ್ಲಿ ಕೇಳಿ ಬಂದ ಸದ್ದು ನನ್ನ ಪತ್ನಿಗೆ ಭಯ ತಂದಿತ್ತು. ‘ಇಲ್ಲಿಂದ ಹೋಗೋಣ ನಡೆಯಿರಿ’ ಎಂದು ಅವಳು ಕಾರು ಹತ್ತಿ ಕೂತಳು.

ಆದರೆ ನನ್ನ ಕುತೂಹಲ ಹೆಚ್ಚಾಗಿತ್ತು. ಶೆಡ್‌ ಬಳಿಗೆ ಹೋದಂತೆ ಬಾಗಿಲು ತೆರೆದು ಹೊರಬಂದರು ರೂಬನ್‌...! ಈ ಎರಡು ವರ್ಷದಲ್ಲಿ ಇನ್ನಷ್ಟು ಕೂದಲೆಲ್ಲ ಬೆಳ್ಳಗಾಗಿ ತೀರಾ ವಯಸ್ಸಾದಂತೆ ಕಂಡು ಬಂದ ರೂಬನ್‌ ಕಣ್ಣಲ್ಲಿ ಅದೇ ಹೊಳಪು, ಅದೇ ಜೀವನಪ್ರೀತಿ.

‘ರೂಬನ್‌ ನೀವಿನ್ನೂ ಇಲ್ಲೇ ಇದ್ದೀರಾ...? ’ ನನ್ನ ಪ್ರಶ್ನೆ ಮುಗಿಯುವ ಮುನ್ನವೇ, ‘ಹೌದು ಸಾರ್‌, ನಾನು ಎಲ್ಲಿಗೆ ಹೋಗಬೇಕು ಹೇಳಿ? ನನಗೆ ಇರುವುದು ಇದೊಂದೇ ಊರು. ಬೇರೆ ಯಾವ ಊರೂ ನನಗೆ ಗೊತ್ತಿಲ್ಲ. ನಾನು ಇಲ್ಲೇ ಇರೋದು...’ ದೃಢವಾದ ದನಿಯಲ್ಲಿ ರೂಬನ್‌ ಹೇಳಿ ಸುಮ್ಮನಾದರು. ನನ್ನ ಮನದಲ್ಲೂ ಕ್ಷಣವೊಂದರಲ್ಲೇ ನೂರು ಭಾವ ಮೂಡಿತು.

ಕುದುರೆಮುಖ ಗಣಿಗಾರಿಕೆ ನಿಂತ ನಂತರ ಅಲ್ಲಿನ ನೂರಾರು ನೌಕರರು ಲಕ್ಷಗಟ್ಟಲೆ ಪರಿಹಾರ, ಸ್ವಯಂನಿವೃತ್ತಿ ಪಡೆದು ದೊಡ್ಡ ನಗರಗಳಲ್ಲಿ ನೆಲೆ ಕಂಡಿದ್ದು, ಕುದುರೆಮುಖಕ್ಕೆ ಭೂಮಿ ಕೊಟ್ಟು ಜಾಂಬಳೆಯಲ್ಲಿನ ಪುನರ್ವಸತಿ ಪಡೆದಿದ್ದ ಸ್ಥಳೀಯರ ಪೈಕಿ ಅನೇಕರು ಮಂಗಳೂರಿನಲ್ಲಿ ಉದ್ಯೋಗ ಪಡೆದು ಮತ್ತೊಮ್ಮೆ ಸ್ಥಳಾಂತರ ಆದುದು, ಕುದುರೆಮುಖದಲ್ಲಿ  ವ್ಯಾಪಾರ ಮಾಡಿಕೊಂಡಿದ್ದವರು ಊರು ಬಿಟ್ಟು ಬೇರೆ ನಗರಗಳಿಗೆ ವಲಸೆ ಹೋದುದು, ಸುಸಜ್ಜಿತವಾಗಿದ್ದ ಕುದುರೆಮುಖ ಪಟ್ಟಣ ಸರ್ಕಾರಗಳ ಮತ್ತು ಗಣಿಗಾರಿಕೆ ಸಂಸ್ಥೆಯ ನಡುವಿನ ತಾಂತ್ರಿಕ ತೊಡಕುಗಳ ಕಾರಣಕ್ಕೆ, ಅರಣ್ಯ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಧೋರಣೆಯಿಂದಾಗಿ 10 ವರ್ಷದಲ್ಲೇ ಹಾಳುಬಿದ್ದ ಕೊಂಪೆ ಆದುದು, ಕುದುರೆಮುಖ ಆಸುಪಾಸಿನ ಸ್ಥಳೀಯರ ಆದಾಯ ಮೂಲಗಳೆಲ್ಲ ಬತ್ತಿಹೋದುದು  ಮನದಲ್ಲಿ ಹಾದುಹೋಯಿತು.

ಆದರೆ ಕುದುರೆಮುಖದಲ್ಲಿ ಆಗದ ಬದಲಾವಣೆ ಎಂದರೆ ಒಂದೇ. ಅದು ರೂಬನ್‌ ಮನೆ ಮತ್ತು ಮನಸ್ಸು. ‘ಕಂಪನಿಯ ಪ್ಲಾಂಟ್‌ ಒಡೆದಾಗ ಗುಜರಿ ಸಾಗಿಸಲು ಬಂದಿದ್ದ ಕೇರಳದ ಲಾರಿ ಡ್ರೈವರ್‌ಗಳು ನನ್ನ  ಬೆಕ್ಕುಗಳನ್ನು ಸಾಯಿಸಿದ್ರು. ಈಗ ಬೆಕ್ಕುಗಳು ಸ್ವಲ್ಪ ಕಡಿಮೆ ಆಗಿದ್ದಾವೆ. ಅದಕ್ಕೆ ಮೊಲಗಳನ್ನು ಸಾಕಿದ್ದೀನಿ’ ಎಂದವರೇ ಅಲ್ಲೇ ಸುಳಿಯುತ್ತಿದ್ದ ಬೆಳ್ಳಗಿನ ಮೊಲದ ಮರಿಯೊಂದನ್ನು ಎತ್ತಿಕೊಂಡರು ರೂಬನ್‌.

‘ರೂಬನ್‌ ಅವ್ರೇ, ಈಗ ಇಲ್ಲಿ ಜನರೇ ಇಲ್ಲ. ನಿಮ್‌ ಹತ್ರ ಬೈಕ್‌ ಯಾರು ರಿಪೇರಿ ಮಾಡಿಸ್ತಾರೆ. ಜೀವನಕ್ಕೆ ಏನು ಮಾಡ್ತೀರಿ ?’ ನನ್ನ ಪ್ರಶ್ನೆಗೆ ರೂಬನ್‌ ಕಿಂಚಿತ್ತೂ ಚಿಂತೆ ಪಡಲಿಲ್ಲ. ’ಯಾರೋ ಒಬ್ರಿಬ್ರು ಗಾಡಿ ರಿಪೇರಿ, ಅದೂ ಇದೂ ಅಂತ ಬರ್ತಾರೆ. ದಿನಕ್ಕೆ 50–100 ರೂಪಾಯಿ ಆಗುತ್ತೆ. ಕೆಲವು ದಿನ ಒಂದು ರೂಪಾಯಿ ದುಡಿಮೆಯೂ ಇಲ್ಲ. ಆಗ ನನಗೆ ಈ ಬೆಕ್ಕು, ಮೊಲದ್ದೇ ಚಿಂತೆ’ ಎಂದು ರೂಬನ್‌ ಬೇಸರ ಪಟ್ಟುಕೊಂಡರು.

‘ನನಗೇನು ಸಾರ್‌, ಒಂದು ಲೋಟ ಅಕ್ಕಿ ಇದ್ದರೆ ಇಡೀ ದಿನ ಗಂಜಿಗೆ ಸಾಕು. ಆದರೆ ಈ ಬೆಕ್ಕು, ಮೊಲಗಳಿಗೆ ಆಹಾರ ಕೊಡಬೇಕಲ್ಲ. ಬೆಕ್ಕು – ಮೊಲ ಅಂತ ಒಂದೈವತ್ತು ಇದಾವೆ. ಬೆಕ್ಕುಗಳಂತೂ ಚಿಕನ್ ಕೊಡದಿದ್ದರೆ ನನ್ನ ಬೆನ್ನು ಬಿಡುವುದೇ ಇಲ್ಲ...’  ರೂಬನ್‌ ಸ್ಥಿತಿ ಕಂಡು ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲ.

‘ಕಂಪನಿಯವ್ರು ಶೆಡ್‌ ಖಾಲಿ ಮಾಡಬೇಕು ಅಂತ ತುಂಬ ಸಾರಿ ಹೇಳಿದ್ದಾರೆ. ನೀರು, ಕರೆಂಟ್‌ ಕಡಿತ ಮಾಡಿದ್ರು. ನಾನೂ ಕೇಸ್‌ ಹಾಕಿದ್ದೆ. 3 ವರ್ಷದ ಹಿಂದೆ ನನ್ನ ಹತ್ರ 56 ಬೆಕ್ಕುಗಳು ಇದ್ದಾಗ ಕಂಪನಿಯ ಎಂಪ್ಲಾಯೀಸ್‌ ನನ್ನನ್ನು ಖಾಲಿ ಮಾಡಿಸಬೇಕು ಅಂತಾ ನನ್ನ ಮೇಲೆ ಕಂಪ್ಲೇಂಟ್‌ ಕೊಟ್ಟಿದ್ದರು. ಈಗ ಅವರೆಲ್ಲ ಊರು ಬಿಟ್ಟು ಹೋದ್ರು.ನಾನು ಮಾತ್ರ ನನ್ನ ಊರಲ್ಲೇ ಇದ್ದೀನಿ...’

ರೂಬನ್‌ನ ಶೆಡ್ ಒಳಗಿಂದ ಬರುತ್ತಿದ್ದ ಮೊಲದ ತ್ಯಾಜ್ಯದ ಘಾಟು ಅಲ್ಲಿ ನಮ್ಮನ್ನು ಹೆಚ್ಚು ಕಾಲ ನಿಲ್ಲಲು ಬಿಡಲಿಲ್ಲ. ‘ಬೇರೆ ಊರಲ್ಲಿ ಯಾವುದಾದ್ರೂ ಬೈಕ್‌  ಶೋರೂಮ್‌ನಲ್ಲಿ ಕೆಲ್ಸ ಮಾಡ್ತೀರಾ ಪರಿಚಯಸ್ಥರಿಗೆ ಹೇಳ್ಲಾ?’ ಎಂದು ಕೇಳಿದೆ. ‘ಇಲ್ಲಾ ಸಾರ್, ಈ ಊರು, ನನ್ನ ಮೊಲ– ಬೆಕ್ಕು ಬಿಟ್ಟು ನಾನು ಎಲ್ಲಿಗೂ ಹೋಗಲ್ಲ...’ ರೂಬನ್‌ರ ದೃಢನಿರ್ಧಾರಕ್ಕೆ ಏನು ಅನ್ನಬೇಕೋ ತಿಳಿಯಲಿಲ್ಲ.

ದಾರಿಯುದ್ದಕ್ಕೂ ವಿಚಿತ್ರ ವಿಷಾದ ನನ್ನನ್ನು ಕಾಡುತ್ತಲೇ ಇತ್ತು. ’ನಾನು 30 ವರ್ಷ ಬಾಳಿದ ಊರು ನನ್ನದೇ, ಇಲ್ಲಿಂದ ಯಾಕೆ ಸ್ಥಳಾಂತರ ಆಗಬೇಕು, ನನ್ನ ಉದ್ಯೋಗಕ್ಕೆ ಭವಿಷ್ಯಕ್ಕೆ ನನ್ನನ್ನೇ ನಂಬಿದ ಬೆಕ್ಕುಗಳು, ಮೊಲಗಳನ್ನು ನಾನು ತೊರೆಯುವುದು ಸರಿಯಲ್ಲ’ ಎಂದು ನಿಶ್ಚಯಿಸಿರುವ ವಿಚಿತ್ರ ಸ್ವಭಾವದ ರೂಬನ್‌ ಭವಿಷ್ಯ ಏನಾಗಬಹುದು ಎಂಬುದು ಸದ್ಯದ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT