ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಣತಿ; ಪ್ರಮಾಣಪತ್ರ ವಿತರಣೆ

Last Updated 21 ಮೇ 2017, 9:16 IST
ಅಕ್ಷರ ಗಾತ್ರ

ಹನೂರು: ನಾಲ್ಕು ದಿನಗಳ ಕಾಲ ಆನೆಗಣತಿಯಲ್ಲಿ ಪಾಲ್ಗೊಳ್ಳುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಿದ ಸ್ವಯಂ ಸೇವಕರು ಮುಂದೆಯೂ ಗಣತಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ. ಮಾಲತಿಪ್ರಿಯಾ ಮನವಿ ಮಾಡಿದರು.

ಕಾವೇರಿ ವನ್ಯಧಾಮದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆನೆಗಣತಿಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನೆಗಣತಿ ಕಾರ್ಯದಲ್ಲಿ ಸ್ವಯಂ ಸೇವಕರು ನಾಗರಹೊಳೆ ಮತ್ತು ಬಂಡೀಪುರ  ಅರಣ್ಯಗಳಿಗೆ ಹೋಗುವುದಕ್ಕೆ ಮುಗಿಬೀಳುತ್ತಿದ್ದರು. ಆದರೆ ಈ ಭಾರಿ ನಿರೀಕ್ಷೆಗೂ ಮೀರಿ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿನ ಗಣತಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಕೂಡ ನಾಲ್ಕು ದಿನ ಅರಣ್ಯದಲ್ಲಿ ವಾಸ್ತವ್ಯ ಹೂಡಲು ಹಿಂದೇಟು ಹಾಕಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣತಿ ಕಾರ್ಯದ ಮಾಹಿತಿಯನ್ನು ಬೆಂಗಳೂರು ಅರಣ್ಯ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು, ಎರಡು ತಿಂಗಳಲ್ಲೇ ಮಾಹಿತಿ ಬರಲಿದ್ದು ಅದನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ಕುಮಾರ್‌ ಮಾತನಾಡಿ, ಗಣತಿಯಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ಮತ್ತು ಸಿಬ್ಬಂದಿಗೆ ಎಲ್ಲ ಅಗತ್ಯ ಮೂಲಸೌಕರ್ಯ ಒದಗಿಸಲಾಗಿತ್ತು. ನಾಲ್ಕು ದಿನವೂ ಸ್ವಯಂ ಸೇವಕರು ಆರೋಗ್ಯಕರವಾಗಿ ಹಾಗೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಕಾವೇರಿ ವನ್ಯಧಾಮದಲ್ಲಿ 20 ಸ್ವಯಂ ಸೇವಕರು, 132 ಸಿಬ್ಬಂದಿ ಮತ್ತು ಇಬ್ಬರು ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಲೆಮಹದೇಶ್ವರ ವನ್ಯಧಾಮದಲ್ಲಿ 45 ಸ್ವಯಂ ಸೇವಕರು ಮತ್ತು 112 ಸಿಬ್ಬಂದಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಸ್ವಯಂ ಸೇವಕರಾಗಿ ಭಾಗವಹಿಸಿದ್ದ ಮರಿಸ್ವಾಮಿ ಮಾತನಾಡಿ, ‘ಇದುವರೆಗೂ ಯಾವ ಗಣತಿಯಲ್ಲೂ ಪಾಲ್ಗೊಂಡಿರಲಿಲ್ಲ. ಆನೆಗಣತಿ ಹೊಸ ಅನುಭವ ನೀಡಿದೆ. ಅರಣ್ಯ ಇಲಾಖೆಯೂ ಸ್ವಯಂ ಸೇವಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿತ್ತು. ಮುಂದೆಯೂ ಇಂತಹ ಯಾವುದೇ ಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ದನಿದ್ದೇನೆ’ ಎಂದರು.
ಕಾರ್ಯಕ್ರಮದಲ್ಲಿ ಎಸಿಎಫ್‌ಗಳಾದ ಅಂಕರಾಜು, ಎನ್‌. ಶಿವರಾಮ್‌ಬಾಬು, ಚಂದ್ರ, ಆರ್ಎಫ್ಓಗಳಾದ ಬಿ.ಸಿ. ಲೋಕೇಶ್, ಲೋಕೇಶ್‌ ಮೂರ್ತಿ, ಶಂಕರ್ ಅಂತರಗಟ್ಟಿ, ಸೈಯದ್‌ಸಾಬಾ ನದಾಫ್ , ರಾಜೇಶ್‌ಗವಾಲ್‌ ಇದ್ದರು.

ಭಾವುಕ ಕ್ಷಣ: ಕಂಪೆನಿ ಕೆಲಸಕ್ಕೆ ನಾಲ್ಕೈದು ದಿನಗಳ ರಜೆ ಹಾಕಿ ಬಂದು ಕಾಡಿನಲ್ಲಿ ಅಲೆದಿದ್ದ ಸ್ವಯಂಸೇವಕರ ಮುಖದಲ್ಲಿ ದಣಿವಿಗಿಂತ ತಮಗೆ ವಿಶಿಷ್ಟ ಅನುಭವ ನೀಡಿದ ಕಾಡಿನಿಂದ ದೂರಹೋಗುವ ಬೇಸರವಿತ್ತು. ಪಡೆದ ಪ್ರಮಾಣಪತ್ರಕ್ಕಿಂತಲೂ ಅರಣ್ಯ ಸಂಚಾರದ ಅನನ್ಯ ಕ್ಷಣದ ನೆನಪೇ ಹಿರಿದು ಎಂಬ ಭಾವನೆ ಅವರಲ್ಲಿತ್ತು.

ಆನೆಗಣತಿಗೆ ಬಂದು ಹುಲಿ ನೋಡಿದರು...
ಹನೂರು: 'ಚಿಕ್ಕಂದಿನಿಂದಲೂ ಆನೆ ನೋಡುವ ಬಯಕೆ. ಕಾಡಿನಲ್ಲಿಯೇ ಆನೆ ನೋಡುವ ಆಸೆಯನ್ನು ಗಣತಿ ಯೋಜನೆ ಈಡೇರಿಸಿದೆ. ಆನೆಗಣತಿಗೆ ಬಂದ ನನಗೆ ಹುಲಿಯೂ ಕಾಣಿಸಿ ಕೊಂಡಿತು’ ಎಂದು ಖುಷಿ ಹಂಚಿ ಕೊಂಡರು ಬೆಂಗಳೂರಿನಿಂದ ಬಂದ ಸ್ವಯಂ ಸೇವಕಿ ಪೂಜಾ.

ಕಾವೇರಿ ವನ್ಯಧಾಮದ ಹಲಗೂರು ವಲಯದಲ್ಲಿ ಗಣತಿಯಲ್ಲಿ ಭಾಗವಹಿಸಿದ್ದ ಪೂಜಾ, ಸಂಜೆ ವಿಹಾರಕ್ಕಾಗಿ ಕಾವೇರಿ ನದಿ ದಡಕ್ಕೆ ಬಂದಾಗ ಹನೂರು ವನ್ಯಜೀವಿ ವಲಯದಲ್ಲಿ ಹುಲಿ ಕಾಣಿಸಿಕೊಂಡ ಅನುಭವ ಹೇಳಿಕೊಂಡರು.

ಗಣತಿ ಕಾರ್ಯ
154 ಕಾವೇರಿ ವನ್ಯಧಾಮದಲ್ಲಿ ಭಾಗವಹಿಸಿದವರು

157 ಮಲೆಮಹದೇಶ್ವರ ವನ್ಯಧಾಮದಲ್ಲಿ ಪಾಲ್ಗೊಂಡವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT