ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರ್ಕಹೀನ ರೋಚಕತೆಯೇ ಜೀವಾಳ

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಭೂಮಿಯನ್ನು ಹೊರತುಪಡಿಸಿ ಅನ್ಯಗ್ರಹದಲ್ಲಿ  ಜೀವಿಗಳು ಇದ್ದಾವೋ ಇಲ್ಲವೋ ಎನ್ನುವುದು ಇನ್ನೂ ದೃಢವಾಗಿಲ್ಲ. ಆದರೆ ಆ ಕುರಿತು ಕಾಲ್ಪನಿಕ ಕಥೆಗಳಂತೂ ಸಾಕಷ್ಟು ಸೃಷ್ಟಿಯಾಗಿವೆ. ಮತ್ತದು ಹಾಲಿವುಡ್‌ನ ಹಲವು ಸಿನಿಮಾಗಳಿಗೆ ಆಹಾರವೂ ಆಗಿವೆ.

ಅನ್ಯಗ್ರಹದ ಜೀವಿಗಳ ಸ್ವರೂಪ–ವಿರೂಪಗಳ ಕುರಿತಾದ ಕಲ್ಪನೆ ಮತ್ತು ಅದರ ಬಗ್ಗೆ ಜನರಲ್ಲಿ ಇರುವ ಕುತೂಹಲವನ್ನೇ ಜೀವಾಳವಾಗಿಸಿಕೊಂಡಿರುವ ಸಿನಿಮಾ ರಿಡ್ಲೆ ಸ್ಕಾಟ್ ನಿರ್ದೇಶನದ ‘ಏಲಿಯನ್: ಕೊವೆನಂಟ್’. ಇದು 2012ರಲ್ಲಿ ಬಿಡುಗಡೆಯಾದ ‘ಪ್ರೊಮೊಥಿಸ್’ ಚಿತ್ರದ ಮುಂದುವರಿದ ಭಾಗ.

ಇಂಥ ಸಿನಿಮಾಗಳ ಮೂಲ ಉದ್ದೇಶ ರೋಚಕತೆಯೇ ಆಗಿರುತ್ತದೆ. ಚಿತ್ರಮಂದಿರದಲ್ಲಿ ಕೂತಿರುವ ಪ್ರೇಕ್ಷಕನ ಕಣ್ಣುಗಳಲ್ಲಿ ಬೆರಗಿನ ದೃಶ್ಯಗಳನ್ನು ಸುರಿಯುವುದು, ಆ ಮೂಲಕ ಅವನ ತರ್ಕಶಕ್ತಿಯನ್ನು ಮಸುಕಾಗಿಸಿ ಮೈಮರೆಸುವುದರಲ್ಲಿಯೇ ಈ ಸಿನಿಮಾಗಳ ಯಶಸ್ಸಿದೆ. ಈ ಉದ್ದೇಶವನ್ನು ‘ಏಲಿಯನ್: ಕೊವೆನಂಟ್’ ಸಿನಿಮಾ ಹಿಂದಿನ ಭಾಗ ‘ಪ್ರೊಮೊಥಿಸ್’ ಗಿಂತ ತುಂಬ ಸಮರ್ಥವಾಗಿ ನಿರ್ವಹಿಸಿದೆ.

ಹೊಸಗ್ರಹದ ಹುಡುಕಾಟಕ್ಕೆ ಹೊರಟ ಕೊವೆನಂಟ್ ಅಂತರಿಕ್ಷ ನೌಕೆಯಲ್ಲಿ ಹೊರಡುವ ಮನುಷ್ಯರ ತಂಡದ ಸುತ್ತಲೇ ಈ ಸಿನಿಮಾವನ್ನು ಕಟ್ಟಲಾಗಿದೆ. ಅಂತರಿಕ್ಷನೌಕೆಯ ಸದಸ್ಯರಿಗೆ ನಿರ್ಜನ ಗ್ರಹದ ಬಗ್ಗೆ ಸಂಕೇತ ಬರುತ್ತದೆ. ಅಲ್ಲಿಗೆ ತೆರಳಿದಾಗ ಅವರಿಗೆ ಅದೃಶ್ಯರೂಪದಲ್ಲಿ ಶರೀರ ಪ್ರವೇಶಿಸಿ, ಹೊಟ್ಟೆ ಸೀಳಿ ಹೊರಬರುವ ಭೀಕರ ಏಲಿಯನ್‌ಗಳ ದರ್ಶನವಾಗುತ್ತದೆ. ಈ ಏಲಿಯನ್‌ಗಳಿಂದ ಮೂರು ಜನ ಸಾಯುತ್ತಾರೆ. ಉಳಿದ ಸದಸ್ಯರು ಏಲಿಯನ್‌ಳಿಂದ ತಪ್ಪಿಸಿಕೊಂಡು ಬರುವ ಹೋರಾಟದಲ್ಲಿ ಜಯಗಳಿಸುತ್ತಾರೆಯೇ ಎಂಬ ಕತೆಯನ್ನು ಈ ಚಿತ್ರ ಒಳಗೊಂಡಿದೆ.

ಇದು ರಿಡ್ಲೆ ಸ್ಕಾಟ್ ಅವರ ಮೂರನೇ ಚಿತ್ರ. ಈ ಚಿತ್ರದ ಹಿಂದಿನ ಭಾಗವಾದ ‘ಪ್ರೊಮೊಥಿಸ್’ ನೋಡದೇ ಈ ಚಿತ್ರವನ್ನು ಮೊದಲ ಬಾರಿ ನೋಡುವವರಿಗೆ ಕೆಲ ದೃಶ್ಯಗಳಲ್ಲಿ ಕೊಂಡಿ ಸಿಗದೇ ಹೋಗಬಹುದು. ಯಾಕೆಂದರೆ ಮೊದಲನೇ ಭಾಗದಲ್ಲಿದ್ದ ಹಲವು ಪಾತ್ರಗಳು ಎರಡನೇ ಭಾಗದಲ್ಲಿ ಮುಂದುವರಿಯುತ್ತವೆ.

ಈ ಹಿಂದೆ ಬಿಡುಗಡೆಯಾಗಿದ್ದ  ಏಲಿಯನ್, ಏಲಿಯನ್ಸ್, ಪ್ರೊಮೊಥಿಸ್, ಲೈಫ್ ಈ ಎಲ್ಲ ಚಿತ್ರಗಳ ಸಮ್ಮಿಶ್ರಣದಂತೆ ಕಾಣುತ್ತದೆ ‘ಏಲಿಯನ್: ಕೊವೆನಂಟ್’.  ಅತ್ತ ಮನುಷ್ಯಾಕೃತಿಯೂ ಅಲ್ಲದ, ಕೀಟವೂ ಅಲ್ಲದ, ದೋಣಿ ಆಕಾರದ ತಲೆಯ, ಉದ್ದ ಬಾಲದ ಏಲಿಯನ್ ಹಾಗೂ ಅನಿರೀಕ್ಷಿತವಾಗಿ ಮುಖಕ್ಕೆ ಅಪ್ಪಳಿಸಿ ಹೊಡೆದಾಡುವ ಆಕ್ಟೋಪಸ್ ರೀತಿಯ ಫೇಸ್‌ಹಗ್ಗರ್ ಈ ಚಿತ್ರದಲ್ಲಿ ಹೊಸ ಸೇರ್ಪಡೆ.

ಅಂತರಿಕ್ಷನೌಕೆಯ ಸದಸ್ಯರಿಗೆ ಹೊಸ ಗ್ರಹದ ಇರುವಿಕೆಯ ಲಕ್ಷಣಗಳು ಗೋಚರಿಸುತ್ತವೆ. ನಾಯಕಿ ಕ್ಯಾಥರಿನ್ ವಾಟಸ್ಟೊರ್ನ್ ಈ ಹಿಂದಿನ ಅನುಭವಗಳನ್ನು ನೆನಪಿಸಿಕೊಂಡು ಅಪಾಯ ಎಂದು ತಿಳಿಹೇಳಿದರೂ ಯಾರೂ ಮಾತು ಕೇಳುವುದಿಲ್ಲ.

ಆರು ಮಂದಿ ಸದಸ್ಯರು  ಹೊಸ ಗ್ರಹ ಮನುಷ್ಯರಿಗೆ ವಾಸಕ್ಕೆ ಯೋಗ್ಯವೇ ಎಂದು ಪರೀಕ್ಷಿಸಲು ಹೊರಡುತ್ತಾರೆ. ಇಲ್ಲಿಂದಲೇ ಅವರ ಕೆಟ್ಟ ಗಳಿಗೆ ಪ್ರಾರಂಭಾಗುತ್ತದೆ.
ಆ ಗ್ರಹ ನೋಡಲು ಭೂಮಿಯಂತಿದೆ. ಬೆಟ್ಟ, ಕಾಡು ಎಲ್ಲಾ ಅಲ್ಲಿದೆ. ಆದರೆ ಕತ್ತಲ ಗ್ರಹ. ಕತ್ತಲಲ್ಲಿ ಮುಂದುವರಿಯುವ ಅವರು ಅಲ್ಲಿ ಕೆಲ ವಸ್ತುಗಳನ್ನು ಮುಟ್ಟುತ್ತಾರೆ. ಸಿಗರೇಟ್ ಹೊಗೆ, ಗಾಳಿಯ ಮೂಲಕ ಪ್ಲಾಸ್ಮಾದಂತಹ ಏಲಿಯನ್ ಕಣ ದೇಹಕ್ಕೆ ಸೇರಿ ಮೂವರು ಸದಸ್ಯರು ಒಬ್ಬೊಬ್ಬರಾಗಿ ರಕ್ತ ಕಾರಿಕೊಂಡು ಭೀಕರವಾಗಿ ಸಾಯುತ್ತಾರೆ.

ಅಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಡೇವಿಡ್‌ನಿಂದ ನೆರವು ಸಿಗಬಹುದೆಂದು ಪೀಟರ್ ವೇಲೆಂಡ್ ಅಂದುಕೊಂಡರೂ ಆತನೇ ಇವರ ಮೇಲೆ ಫೇಸ್‍ಹಗ್ಗರ್‌ಗಳಿಂದ ದಾಳಿ ನಡೆಸುತ್ತಾನೆ. ಹೇಗೂ ತಪ್ಪಿಸಿಕೊಂಡು ಬಂದರೂ ಅವರ ಹೋರಾಟಕ್ಕೆ ಫಲ ಸಿಗುವುದಿಲ್ಲ. ಚಿತ್ರದಲ್ಲಿ ನಾಯಕ ಮೈಕಲ್ ಪಾಸ್ಬೊಂಡರ್ ಹಾಗೂ ನಾಯಕಿ ಕ್ಯಾಥರಿನ್ ನಟನೆ ಉತ್ತಮವಾಗಿದೆ.

ಇಂಥ ಕಾಲ್ಪನಿಕ ಲೋಕದ ಕಥನವನ್ನು ಹೊಂದಿದ ಸಿನಿಮಾಗಳಲ್ಲಿ  ಕಂಪ್ಯೂಟರ್‌ ಗ್ರಾಫಿಕ್ಸ್ ಬಹುಮುಖ್ಯ ಅಂಶವಾಗಿರುತ್ತದೆ. ಈ ಸಿನಿಮಾದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವುದನ್ನು ಪ್ರತಿದೃಶ್ಯದಲ್ಲಿಯೂ ಕಾಣಬಹುದು. ಬಹುತೇಕ ಭಾಗ ನಡೆಯುವುದು ಅಂತರಿಕ್ಷ ನೌಕೆಯಲ್ಲಿಯೇ. ಇಂಥ ಸಮಯದಲ್ಲಿ ಏಕತಾನತೆ ಕಾಡದ ಹಾಗೆ, ರೋಚಕತೆಗೆ ಧಕ್ಕೆ ಬಾರದ ಹಾಗೆ ವಿನ್ಯಾಸಗೊಳಿಸುವುದು ದೊಡ್ಡ ಸವಾಲು. ಈ ಸವಾಲನ್ನು ‘ಏಲಿಯನ್: ಕೊವೆನಂಟ್’ ಸಮರ್ಥವಾಗಿ ನಿರ್ವಹಿಸಿಕೊಂಡಿದೆ.

ಪ್ರೊಡಕ್ಷನ್ ಡಿಸೈನ್ ಮಾಡಿದ ವಿನ್ಯಾಸಕಾರ ಕ್ರಿಸ್ ಸೀಗರ್ಸ್ ಅವರ ಕೈಚಳಕವನ್ನು ಸಿನಿಮಾಟೊಗ್ರಾಫರ್ ಡೇರಿಯಜ್ ವೋಸ್ಕಿ ಅವರು ಕ್ಯಾಮೆರಾ ಮೂಲಕ ಚೆನ್ನಾಗಿ ತೋರಿಸಿದ್ದಾರೆ. ಏಲಿಯನ್ ದಾಳಿ ದೃಶ್ಯಗಳು, ಆಕಾಶದಲ್ಲಿ ನಡೆಯುವ ಹೊಡೆದಾಟದ ದೃಶ್ಯಗಳು ಮೈನವಿರೇಳಿಸುತ್ತವೆ. ಸಾಮಾಜಿಕ ಮೌಲ್ಯ, ತರ್ಕಬದ್ಧತೆ ಎಂದೆಲ್ಲ ಯೋಚಿಸದೇ ಸುಮ್ಮನೇ ಚಿತ್ರಮಂದಿರದಲ್ಲಿ ಕೂತು ಹೊರಜಗತ್ತನ್ನು ಮರೆಯಲು ಬಯಸುವವರಿಗೆ ಈ ಚಿತ್ರ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ.  

ಏಲಿಯನ್‌: ಕೊವೆನಂಟ್
ನಿರ್ದೇಶನ: ರಿಡ್ಲೆ ಸ್ಕಾಟ್
ಕಲಾವಿದರು: ಮೈಕೆಲ್ ಫಾಸ್ಬೊಂಡರ್, ಕ್ಯಾಥರಿನ್ ವಾಟರ್‌ಸ್ಟೋನ್‌, ಬಿಲ್ಲಿ ಕ್ರೂಡುಪ್, ಡ್ಯಾನಿ ಮೆಕ್‌ಬ್ರೈಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT