ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಹೋರಾಟದಿಂದ ಮಾತ್ರ ನೀರು ಲಭ್ಯ

Last Updated 22 ಮೇ 2017, 4:55 IST
ಅಕ್ಷರ ಗಾತ್ರ

ಪಾವಗಡ: ‘ತಾಲ್ಲೂಕಿನ ಜನತೆ ಸ್ವಪ್ರತಿಷ್ಟೆ ಬದಿಗೊತ್ತಿ ಹೋರಾಟ ತೀವ್ರಗೊಳಿಸಿದರೆ ಮಾತ್ರ ತಾಲ್ಲೂಕಿಗೆ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರು ಸಿಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದರು.

‘ಕೇವಲ ಒಂದೆರೆಡು ದಿನಗಳು ಹೋರಾಟ, ಪ್ರತಿಭಟನೆಗಳು ನಡೆಸಿದರೆ ಯೋಜನೆ ಅನುಷ್ಠಾನವಾಗುವುದಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಹೋರಾಟ ರೂಪಿಸುವ ಅಗತ್ಯವಿದೆ. ಪಕ್ಷಗಳ ಮುಖಂಡರು, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು, ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುವವರೆಗೆ ನಿರಂತರವಾಗಿ ಹೋರಾಟ ನಡೆಸಬೇಕಿದೆ‘ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ಆಯವ್ಯಯದಲ್ಲಿ ₹ 1.5 ಸಾವಿರ ಕೋಟಿ ಅನುದಾನವನ್ನು ತಾಲ್ಲೂಕಿಗೆ ನದಿ ಮೂಲದಿಂದ ನೀರು ಹರಿಸಲು ಮೀಸಲಿಡಲಾಯಿತು. ಆದರೆ ಈ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಡಗಳಿಲ್ಲದ ಕಾರಣ ನಿಗದಿತ ಉದ್ದೇಶಕ್ಕೆ ಅನುದಾನ ಬಳಕೆಯಾಗಲಿಲ್ಲ. ಹೋರಾಟ, ಪ್ರತಿಭಟನೆ ಬಿಸಿ ಹೆಚ್ಚಿರುವ ಪ್ರದೇಶಗಳಿಗೆ ಪ್ರಾತಿನಿಧ್ಯ ಕೊಡಲಾಗುತ್ತಿದೆ. ಆದರೆ ಈ ಭಾಗಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದರು.

‘ಇಚ್ಚಾಶಕ್ತಿ, ನಾಯಕತ್ವದ ಕೊರತೆಯಿಂದಾಗಿ ತಾಲ್ಲೂಕು ಅಭಿವೃದ್ಧಿಯತ್ತ ಮುನ್ನಡೆಯುತ್ತಿಲ್ಲ’ ಎಂದರು. ‘ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ಮಾತನಾಡಿ, ‘ವಿ.ಎಸ್. ಉಗ್ರಪ್ಪ ಅವರ ಮಾರ್ಗದರ್ಶನದಲ್ಲಿ ನದಿ ನೀರಿಗಾಗಿ ಸಾಕಷ್ಟು ಹೋರಾಟಗಳನ್ನು ನಡೆಸಲಾಯಿತು. ಆದರೆ ಸಾರ್ವಜನಿಕರು, ಜನಪ್ರತಿನಿಧಿಗಳ ಭಾಗವಹಿಸುವಿಕೆ ಕೊರತೆ ಕಂಡು ಬರುತ್ತಿದೆ. ನಿರಂತರ ಹೋರಾಟದಿಂದ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಸಾಧ್ಯ’ ಎಂದರು.

ವಕೀಲ ನಾಗೇಂದ್ರಪ್ಪ, ಮುಖಂಡ ಕೋಟ್ರ್  ನರಸಪ್ಪ, ಮಂಜುನಾಥ್, ಜಗನ್ನಾಥ್, ರೇವಣ್ಣ, ನರಸಿಂಹರೆಡ್ಡಿ, ಮೂಡ್ಲಗಿರಿಯಪ್ಪ, ತಿಮ್ಮರಾಯಪ್ಪ, ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT