ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಶಿವಣ್ಣ ವಜಾ

Last Updated 22 ಮೇ 2017, 6:53 IST
ಅಕ್ಷರ ಗಾತ್ರ

ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಭವನಕ್ಕೆ ಇಡಲಾಗಿದ್ದ ‘ಲೀಲಾವತಿ ಚಂದ್ರಕಾಂತ ಬೆಲ್ಲದ ನಾಮಫಲಕ’ ತೆರವಿನ ಜೊತೆ ಜಿಲ್ಲಾ ಮಹಾಸಭಾ ಅಧ್ಯಕ್ಷ ಸ್ಥಾನದಿಂದ ಶಿವಣ್ಣ ಬೆಲ್ಲದ ಅವರನ್ನು ಭಾನುವಾರ ಸದಸ್ಯರ ಒಪ್ಪಿಗೆ ಮೇರೆಗೆ ವಜಾಗೊಳಿಸಲಾಯಿತು.

ಇಲ್ಲಿನ ಸಿ.ಬಿ. ನಗರದಲ್ಲಿರುವ ವೀರಶೈವ ಲಿಂಗಾಯತ ಭವನದಲ್ಲಿ ನಡೆದ ಕಾರ್ಯಕಾರಣಿಯಲ್ಲಿ 25ಕ್ಕೂ ಅಧಿಕ ಸದಸ್ಯರು ಈ ನೀರ್ಣಯ ತೆಗೆದುಕೊಂಡರು. ಶಾಸಕ ಅರವಿಂದ ಬೆಲ್ಲದ ವಿದೇಶ ಪ್ರವಾಸದಲ್ಲಿದ್ದಾಗಲೇ ಈ ಬೆಳವಣಿಗೆ ನಡೆದಿದೆ. ಗುರುರಾಜ ಹುಣಸಿಮರದ ಹಾಗೂ ಕೆಲ ಸದಸ್ಯರು ನಾಮಫಲಕವನ್ನು ತೆರವುಗೊಳಿಸಿದರು. 

ಹಿನ್ನೆಲೆ:  ಭವನ ನಿರ್ಮಾಣಕ್ಕೆ ಚಂದ್ರಕಾಂತ ಬೆಲ್ಲದ ಹಾಗೂ ಕುಟುಂಬಸ್ಥರು ಹೆಚ್ಚಿಗೆ ದೇಣಿಗೆ ನೀಡಿದ್ದಾರೆ ಎಂದು ಶಿವಣ್ಣ ಬೆಲ್ಲದ ಅವರು ‘ಲೀಲಾವತಿ ಚಂದ್ರಕಾಂತ ಬೆಲ್ಲದ’ ಎಂದು ಏಕಪಕ್ಷೀಯವಾಗಿ ನಾಮಕರಣ ಮಾಡಿದ್ದರು ಎಂಬ ಆರೋಪವಿತ್ತು.ಇದಕ್ಕೆ ಕೇಂದ್ರ ಮಹಾಸಭಾ ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು ಸಹ ವಿರೋಧ ಮಾಡಿದ್ದರು.

ಆದಾಗ್ಯೂ ತೆರವು ಮಾಡಿಲ್ಲ ಎಂದು ಹುಣಸೀಮರದ ಹಲವು ಬಾರಿ ಪ್ರತಿಭಟಿಸಿದ್ದರು. ಈ ಬಗ್ಗೆ ರಾಷ್ಟ್ರೀಯ ಸಭಾಕ್ಕೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭವನ ಉದ್ಘಾಟನೆ ಸಹ ಗೊಂದಲಕ್ಕೆ ಬಿದ್ದಿತ್ತು.

ಭಾನುವಾರ ನಡೆದ ಕಾರ್ಯಕಾರಣಿಯಲ್ಲಿ ‘ರಾಷ್ಟ್ರೀಯ ಮಟ್ಟದಲ್ಲಿಯೇ ನಿಮ್ಮ ಸದಸ್ಯತ್ವ ರದ್ದಾಗಿದೆ. ಹೀಗಾಗಿ ನೀವು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಿರಿ’ ಎಂದು ಸದಸ್ಯರು ಶಿವಣ್ಣ ಅವರಿಗೆ ಆಗ್ರಹಿಸಿದರು. ಇದಕ್ಕೆ ಮಣಿಯದಿದ್ದಾಗ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಗುರುರಾಜ ಹುಣಸಿಮರದ ಅವರು ಶಿವಣ್ಣ ಅವರ ಕಾಲು ಹಿಡಿದು ಅಧ್ಯಕ್ಷ ಸ್ಥಾನ ತ್ಯಜಿಸಿ ಸಭಾ ಮರ್ಯಾದೆ ಕಾಪಾಡಿ ಎಂದು ಕೋರಿದರು.

ನಂತರ ಕೆಳಗೆ ಇಳಿದ ಶಿವಣ್ಣ ಸದಸ್ಯರ ಮಧ್ಯೆದಲ್ಲಿ ಬಂದು ಕುಳಿತರು. ಆದರೂ ಕೆಲ ಸದಸ್ಯರು ಶಿವಣ್ಣ ಅವರ ಕಾರ್ಯವೈಖರಿ ಪ್ರಶ್ನಿಸಿ, ಸಮುದಾಯದ ಅಭಿವೃದ್ಧಿಗೆ ಏನು ಕೆಲಸ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಸದಸ್ಯರ ಒಪ್ಪಿಗೆ ಮೇರೆಗೆ  ಉಪಾಧ್ಯಕ್ಷ ಶಿವಾನಂದ ಅಂಬಡಗಟ್ಟಿ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ ಬೆಲ್ಲದ ‘ನನ್ನ ಸದಸ್ಯತ್ವ ರದ್ದುಗೊಳಿಸಿ, ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿರುವುದು ನಿಯಮಬಾಹಿರವಾಗಿದೆ. ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತೇನೆ’ ಎಂದರು.

‘ಸಭೆಯಲ್ಲಿ ನನ್ನ ಬೆಂಬಲಿತ ಸದಸ್ಯರು ಹಾಜರಿರಲಿಲ್ಲ. ಗಲಾಟೆಗೆ ಅವಕಾಶ ನೀಡಬಾರದು ಎಂದು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿದ್ದೇನೆ’ ಎಂದರು. ‘ಮಹಾಸಭಾ ನೀರ್ಣಯದಂತೆ ಕ್ರಮಕ್ಕೆ ಮುಂದಾಗಿದ್ದೇವೆ. ಶಿವಣ್ಣ ಅವರು ನ್ಯಾಯಾಲಯದ ಮೊರೆಹೋಗಲು ಯಾವುದೇ ಅಭ್ಯಂತರವಿಲ್ಲ’ ಎಂದು ಗುರುರಾಜ ಹುಣಸಿಮರದ ಹೇಳಿದರು.

ಪ್ರಭಾರ ಅಧ್ಯಕ್ಷ  ಶಿವಾನಂದ ಅಂಬಡಗಟ್ಟಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗಾಗಿ ಪುರಸ್ಕಾರ ಕಾರ್ಯಕ್ರಮ ಮತ್ತು ಸಭಾಭವನದ ಉದ್ಘಾಟನೆ ರೂಪುರೇಷೆ ಕುರಿತು ಸಭೆ ನಡೆಸಲಾಗುವುದು’ ಎಂದರು. ಸಿ.ಬಿ.ಯಲಿಗಾರ, ಶಾಮ ಮಲ್ಲನಗೌಡರ, ಅಶೋಕ ನಿಡವಣಿ, ಬಸಣ್ಣ ತೋಟದ, ಪ್ರಭಾವತಿ ವಡ್ಡಿನ, ಮಲ್ಲಪ್ಪ ಭಾವಿ ಈ ವೇಳೆ ಹಾಜರಿದ್ದರು.

* * 

ನನ್ನ ಸದಸ್ಯತ್ವ ರದ್ದುಗೊಳಿಸಿ, ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿರುವುದು ನಿಯಮಬಾಹಿರವಾಗಿದೆ. ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತೇನೆ
ಶಿವಣ್ಣ ಬೆಲ್ಲದ, ವಜಾಗೊಂಡ ಅಧ್ಯಕ್ಷ
ವೀರಶೈವ ಮಹಾಸಭಾ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT