ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಗಳ ಸುಳಿಯಲ್ಲಿ ಹೊಸ ಬಸ್ ನಿಲ್ದಾಣ!

Last Updated 22 ಮೇ 2017, 7:06 IST
ಅಕ್ಷರ ಗಾತ್ರ

ಗದಗ: ರಾಜ್ಯದಲ್ಲಿಯೇ ಉತ್ತಮ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಯೊಂದಿಗೆ ನಗರ ದಲ್ಲಿ ನಿರ್ಮಾಣಗೊಂಡಿರುವ ಹೊಸ ಬಸ್‌ ನಿಲ್ದಾಣ ಇಂದಿಗೂ ಸೂಕ್ತ ನಿರ್ವ ಹಣೆ ಇಲ್ಲದೆ ಸೊರಗುತ್ತಿದೆ. ದಶಕದ ಹಿಂದೆ ಸಾರ್ವಜನಿಕರ ಸೇವೆಗೆ ತೆರೆದು ಕೊಂಡ ಬಸ್ ಟರ್ಮಿನಲ್ ಈಗ ಶಿಥಿಲ ಹಂತಕ್ಕೆ ತಲುಪಿದೆ. ನಗರದ ಹೊರ ವಲಯದಲ್ಲಿರುವ ಈ ಬಸ್‌ ನಿಲ್ದಾಣಕ್ಕೆ ಹಗಲು ವೇಳೆಯಲ್ಲಿ ದೂರ ಮಾರ್ಗಗಳ ಬಸ್‌ಗಳು ಬಂದು ಒಂದೆರಡು ನಿಮಿಷ ನಿಂತು ಹೋಗುತ್ತವೆ. ರಾತ್ರಿ  ಇದು ಭೂತ ಬಂಗಲೆಯಂತಾಗುತ್ತದೆ.

ನಿಲ್ದಾಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೇ ಪ್ರಯಾಣಿಕರು ಪರ ದಾಡುವಂತಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಮೂತ್ರಾ ಲಯ, ಶೌಚಾಲಯದ ಬಳಿ ಸುಳಿಯಲು ಆಗದಷ್ಟು ದುರ್ನಾತ, ಅತ್ತಿತ್ತ ಓಡಾಡಿ ಕೊಂಡಿರುವ ಹಂದಿಗಳು, ಬಿಡಾಡಿ ದನ ಗಳು ಹಾಗೂ ನಾಯಿಗಳು... ಹೀಗೆ ಹಲವಾರು ಸಮಸ್ಯೆಗಳ ನಡುವೆ ಪ್ರತಿನಿತ್ಯ ನೂರಾರು ಪ್ರಯಾಣಿಕರು ಇಲ್ಲಿ ಬಂದು ಹೋಗುತ್ತಾರೆ.

ನಿಲ್ದಾಣ ಅವ್ಯವಸ್ಥೆಯ ಆಗರವಾ ಗಿದೆ. ನಿಲ್ದಾಣದಲ್ಲಿರುವ ಅಧಿಕಾರಿಯ ಕೊಠಡಿ, ಪ್ರಯಾಣಿಕರ ವಿಶ್ರಾಂತಿ ಗೃಹ ಸಂಪೂರ್ಣ ದೂಳಿನಿಂದ ತುಂಬಿದ್ದು, ವಿಶ್ರಾಂತಿ ಗೃಹ ಪ್ರಾಣಿ– ಪಕ್ಷಿಗಳ ವಾಸ ಸ್ಥಳವಾಗಿದೆ. ನಿಲ್ದಾಣದ ತುಂಬ ಪಾರಿ ವಾಳ ಹಾಗೂ ಗಿಳಿಗಳ ಸದ್ದು ಜೋರಾ ಗಿದೆ. ಎಲ್ಲಿ ನೋಡಿದರೂ ಹಕ್ಕಿಗಳ ಹಿಕ್ಕೆ ಕಾಣುತ್ತಿದೆ. ಹೀಗಾಗಿ, ಸಾರ್ವಜನಿಕರು ಈ ಬಸ್‌ ನಿಲ್ದಾಣದತ್ತ ಸುಳಿಯಲು ಹಿಂಜರಿಯುತ್ತಿದ್ದಾರೆ.

ಬಯಲಲ್ಲೇ ಮಲ– ಮೂತ್ರ ವಿಸರ್ಜನೆ: ಬಸ್ ನಿಲ್ದಾಣದಲ್ಲಿನ ಸಾರ್ವಜನಿಕರ ಶೌಚಾಲಯಗಳು ಸ್ವಚ್ಛತೆ ಇಲ್ಲದೆ, ಗಬ್ಬೆದ್ದು ನಾರುತ್ತಿವೆ. ಬಸ್ ನಿಲ್ದಾಣದ ಕಂಪೌಂಡ್ ಒಳಗೆ ಹಾಗೂ ಸುತ್ತಲೂ ಜಾಲಿ ಗಿಡಗಳು ಬೆಳೆದಿವೆ. ಹಂದಿಗಳು ಅಲ್ಲಿ ಬೀಡು ಬಿಟ್ಟಿವೆ. ಸಾರಿಗೆ ಇಲಾಖೆ ಸಿಬ್ಬಂದಿ ಸೇರಿ ಪ್ರಯಾಣಿಕರು ಕೂಡ ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ.

ದೂಳಿನ ಮಜ್ಜನ: ಪ್ರಯಾಣಿಕರು ಕುಳಿತು ಕೊಳ್ಳುವ ಆಸನಗಳು, ಮಳಿಗೆಗಳು, ನಿಲ್ದಾಣಾಧಿಕಾರಿ, ವಿಚಾರಣೆ ಕೊಠಡಿ ಗಳು ಸೇರಿ ನಿಲ್ದಾಣ ಸಂಪೂರ್ಣ ದೂಳಿ ನಿಂದ ಕೂಡಿದೆ. ನಿಲ್ದಾಣ ತುಂಬ ಗೋಡೆಗಳಿಗೆ ಅಲ್ಲಲ್ಲಿ ನೇತು ಹಾಕಿರುವ ಧೂಮಪಾನ ಮಾಡಬೇಡಿ, ಸ್ವಚ್ಛತೆ ಕಾಪಾಡಿ ಹಾಗೂ ಗೌತಮ ಬುದ್ಧ, ದ.ರಾ. ಬೇಂದ್ರೆ, ಕಾರ್ಲ್‌ಮಾರ್ಕ್ಸ್, ಮಹಾ ವೀರ, ಡಾ.ರಾಧಾಕೃಷ್ಣನ್, ವಿವೇಕಾ ನಂದ ಸೇರಿ ಅನೇಕ ಮಹನೀಯರ ದಾರ್ಶನಿಕರ ತತ್ವಗಳು, ಹಿತನುಡಿಗಳ ಬೋರ್ಡ್‌ಗಳು ದೂಳಿನಿಂದ ಕೂಡಿದ್ದು, ಅಲ್ಲಿನ ಅಕ್ಷರಗಳೇ ಕಾಣದಂತಾಗಿವೆ.

ಸ್ವಚ್ಛತೆ ನಿರ್ವಹಣೆ ಕೊರತೆ: ಬಸ್ ನಿಲ್ದಾಣ ದಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ಹಾಳೆಗಳು ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿವೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ ಆದರೂ ಅವುಗಳನ್ನು ಸರಿಯಾಗಿ ಉಪ ಯೋಗಿಸಲಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ತೊಟ್ಟಿಗಳೇ ಇಲ್ಲ. ಕಸ ಗೂಡಿಸುವುದೇ ತುಂಬ ವಿರಳ. ಕುಡಿ ಯುವ ನೀರಿನ ಎರಡು ಟ್ಯಾಂಕ್‌ಗಳು ಸಂಪೂರ್ಣ ಬಂದ್ ಆಗಿದೆ. ಪುಂಡ ಪೋಕರಿಗಳು ಟ್ಯಾಂಕ್‌ಗಳಿಗೆ ಅಳವಡಿಸಿದ್ದ ನಲ್ಲಿಗಳನ್ನು ಕಿತ್ತುಹಾಕಿದ್ದಾರೆ.

ಪ್ಲಾಟ್‌ ಫಾರಂ ರಸ್ತೆ ತಗ್ಗುಗಳು: ಪ್ಲಾಟ್ ಫಾರಂ ರಸ್ತೆಯಲ್ಲಿನ ಡಾಂಬರು ಪೂರ್ಣ ಕಿತ್ತು ಹೋಗಿದ್ದು, ಸಣ್ಣ ಸಣ್ಣ ಕಲ್ಲುಗಳು ನಿಲ್ದಾಣವನ್ನು ಆವರಿಸಿವೆ. ಬಹುತೇಕ ಕಡೆ ತಗ್ಗು ಬಿದ್ದಿವೆ. ಬಸ್‌ಗಳು ಪ್ಲಾಟ್‌ ಫಾರಂನಲ್ಲಿ ನಿಲ್ಲುವ ಸಂದರ್ಭದಲ್ಲಿ ಬಸ್ ಗಾಲಿಗೆ ಸಿಕ್ಕ ಸಣ್ಣ ಕಲ್ಲುಗಳು ಪ್ರಯಾಣಿಕ ರಿಗೆ ಸಿಡಿದ ಉದಾಹರಣೆಗಳು ಅನೇಕ.

‘ಸಂಬಂಧಿಸಿದ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾ ಲಯ, ದೂಳು ತುಂಬಿರುವ ಬೋರ್ಡ್‌ ಗಳಿಗೆ ಸ್ವಚ್ಛತೆ ಹೊಸ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳಬೇಕಿದೆ. ಬಸ್ ನಿಲ್ದಾಣದ ಪ್ಲಾಟ್‌ ಫಾರಂ ರಸ್ತೆಯನ್ನು ದುರಸ್ತಿಗೊಳಿಸಬೇಕು. ಆವರಣದಲ್ಲಿ ಬೆಳೆದ ಜಾಲಿಗಿಡಗಳನ್ನು ತೆರವುಗೊಳಿಸಿ ನೈರ್ಮಲ್ಯ ಕಾಪಾಡಿ ಸುಸಜ್ಜಿತ, ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಉಳಿಸಿಕೊಳ್ಳ ಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯ ಕರ್ತ ಹೀರಾಲಾಲ್‌ ಸಿಂಗ್ರಿ.

‘ನಿಲ್ದಾಣದಲ್ಲಿರುವ ಎರಡು ಬೋರ್‌ ವೆಲ್‌ಗಳು ಬತ್ತಿವೆ. ಪ್ರಯಾಣಿಕರಿಗೆ ಕುಡಿ ಯುವ ನೀರಿನ ಸಮಸ್ಯೆ ಉಂಟಾಗಿದೆ. ನಿಲ್ದಾಣದ ಅವವ್ಯಸ್ಥೆಯ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಯಾವ ಪ್ರಯೋಜನವೂ ಆಗಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಹೊಸ ಬಸ್‌ ನಿಲ್ದಾಣದ ಸಿಬ್ಬಂದಿ.
ಹುಚ್ಚೇಶ್ವರ ಅಣ್ಣಿಗೇರಿ

* * 

ಹೊಸ ಬಸ್ ನಿಲ್ದಾಣದ ಪರಿಸರ ಸಂಪೂರ್ಣ ಹಾಳಾಗಿದೆ ಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು
ಕೆ. ನಾಗರಾಜ
ಗದಗ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT