ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಾವರಣ ಭಾಗ್ಯ’ ಕಾಣದ ಪ್ರತಿಮೆ

Last Updated 22 ಮೇ 2017, 7:09 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ನಗರಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣಕ್ಕೆ ಮುಹೂರ್ತ ಕೂಡಿಬಂದಿಲ್ಲ.
15 ಅಡಿ ಎತ್ತರದ ಈ ಪ್ರತಿಮೆ­ಯನ್ನು ಬರೋಬ್ಬರಿ ₹ 29 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಇದಕ್ಕೆ ತೆಗೆದುಕೊಂಡ ಸಮಯ ಒಂದೂವರೆ ವರ್ಷ.

ಪ್ರತಿಷ್ಠಾಪಿಸುವುದಕ್ಕಾಗಿ 15 ಅಡಿ ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿದೆ. ಒಟ್ಟು 25 ಅಡಿ ಎತ್ತರವನ್ನು ಇದು ಹೊಂದಿದೆ. ಆಕರ್ಷಣೆಗಾಗಿ ಕಾರಂಜಿ ಹಾಗೂ ಸುತ್ತಲೂ ‘ಲ್ಯಾಂಡ್‌ಸ್ಕೇಪಿಂಗ್‌’ ಮಾಡಲು ₹ 10 ಲಕ್ಷಕ್ಕೂ ಹೆಚ್ಚು ವ್ಯಯಿಸ­­ಲಾಗು­ತ್ತಿದೆ. ಈ ಭಾಗದಲ್ಲಿ ಅತ್ಯಂತ ಎತ್ತರದ ವೇದಿಕೆ ಹಾಗೂ ಪ್ರತಿಮೆ ಎನ್ನುವ ಖ್ಯಾತಿ ಈ ಪ್ರತಿಮೆಯದು.

ನಗರಪಾಲಿಕೆ ಹಾಗೂ ದಲಿತ ಸಂಘಟನೆಗಳ ವತಿಯಿಂದ ಹೋದ ತಿಂಗಳು 10ರಂದು ನಗರದ ಮುಖ್ಯರಸ್ತೆಗಳಲ್ಲಿ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಸಡಗರದಿಂದ ತರಲಾಗಿತ್ತು. ಮರುದಿನ ವೇದಿಕೆ ಮೇಲೆ ಅದನ್ನು  ಪ್ರತಿಷ್ಠಾಪಿಸಲಾಗಿದೆ. ಇದಾಗಿ ಒಂದೂ­ವರೆ ತಿಂಗಳು ಸಮೀಪಿಸುತ್ತಿದ್ದರೂ ಪ್ರತಿಮೆಯು ಉದ್ಘಾಟನೆ ಭಾಗ್ಯ ಕಂಡಿಲ್ಲ. ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಬೇಕೋ, ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೇ ಸಾಕೋ ಎನ್ನುವ ಚರ್ಚೆಯಲ್ಲಿ­ಯೇ ದಿನಗಳು ಉರುಳುತ್ತಿವೆ. ಅಂಬೇಡ್ಕರ್‌ ಜಯಂತಿಯಂದೇ ಪ್ರತಿಮೆ ಅನಾವರಣಗೊಳಿಸಬೇಕು ಎನ್ನುವುದು ಸಾಧ್ಯವಾಗಲಿಲ್ಲ.

ಉಸ್ತುವಾರಿ ಸಚಿವರ ನಿರ್ಧಾರ: ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಪಡಿಸುವಂತೆ ಮೇಯರ್‌ ಸಂಜೋತಾ ಬಾಂದೇಕರ, ನಗರಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಜಿಲ್ಲಾ ಉಸ್ತು­ವಾರಿ ಸಚಿವ ರಮೇಶ ಜಾರಕಿ­ಹೊಳಿ ಅವರೊಂದಿಗೆ ಕೆಲ ದಿನಗಳ ಹಿಂದೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಅವರೇ ಸಮಾರಂಭಕ್ಕೆ ಬರಬೇಕು ಎನ್ನುವುದು ಸಂಘಟನೆಗಳ ಆಗ್ರಹವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಹಾ­ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ‘ಅಂಬೇಡ್ಕರ್‌ ಪ್ರತಿಮೆ ಅನಾವರಣದ ಸಮಾರಂಭ ಆಯೋಜಿಸುವ ಸಂಬಂಧ ದಿನಾಂಕ ಅಂತಿಮಗೊಂಡಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಯಾರನ್ನು ಆಹ್ವಾನಿಸಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ’ ಎಂದು ತಿಳಿಸಿದರು.

‘ಪ್ರತಿಮೆ ಪಕ್ಕದಲ್ಲಿ ಲಭ್ಯವಿರುವ ಜಾಗದಲ್ಲಿ ಸಂಸತ್‌ ಭವನದ ಮಾದರಿಯಲ್ಲಿ ‘ಅನೆಕ್ಸ್‌ ಕಟ್ಟಡ’ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹ 5 ಕೋಟಿಯನ್ನು ಈ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ಇದನ್ನು ಪಾಲಿಕೆ ಆದಾಯದಿಂದ ಭರಿಸಲಾಗುವುದು. ಈಗಿನ ಕಟ್ಟಡದಲ್ಲಿ ಜನಪ್ರತಿನಿಧಿಗಳು, ಸ್ಥಾಯಿ ಸಮಿತಿ, ನಾಮನಿರ್ದೇಶನ ಸಮಿತಿ ಸದಸ್ಯರು ಮೊದಲಾದವರಿಗೆ ಕೊಠಡಿ ಒದಗಿಸಲಾಗಿದೆ.

ಇದರಿಂದ, ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಜಾಗ ಸಾಲುತ್ತಿಲ್ಲ. ಈ ಕೊರತೆ ನೀಗಿಸುವುದಕ್ಕಾಗಿ ಹೊಸದಾಗಿ ಒಂದು ಮಹಡಿಯ ಕಟ್ಟಡವನ್ನು ಮುಂದಿನ ಏಪ್ರಿಲ್ ವೇಳೆಗೆ ನಿರ್ಮಿಸಲಾಗುವುದು. ಇದಕ್ಕಾಗಿ ಅಂದಾಜುಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪ್ರತಿಮೆ ಅನಾವರಣದೊಂದಿಗೆ, ಹೊಸ ಕಟ್ಟಡವೂ ನಿರ್ಮಾಣವಾದರೆ ಪಾಲಿಕೆ ಆವರಣದ ಅಂದ ಹೆಚ್ಚಲಿದೆ’ ಎನ್ನುತ್ತಾರೆ ಅವರು.

‘ಪ್ರತಿಮೆ ಅನಾವರಣಕ್ಕಾಗಿ, ಮೇ 22ರಂದು ಬೆಂಗಳೂರಿನಲ್ಲಿ ಗೃಹಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಫಿರೋಜ್‌ಸೇಠ್‌ ನೇತೃತ್ವದ ನಿಯೋಗ ಆಹ್ವಾನಿಸಲಿದೆ.

ದೊಡ್ಡಮಟ್ಟದಲ್ಲಿ ಮತ್ತು ಅರ್ಥಪೂರ್ಣವಾಗಿ ಸಮಾರಂಭ ಆಯೋಜಿಸಲು ಚರ್ಚಿಸಲಾಗಿದೆ. ಇಲ್ಲಿ ಸ್ಥಾಪಿಸಿರುವ ಅಂಬೇಡ್ಕರ್‌ ಪ್ರತಿಮೆ, ರಾಜ್ಯದಲ್ಲಿಯೇ ಅತಿಎತ್ತರದ ಕಂಚಿನ ಪ್ರತಿಮೆಯಾಗಿದೆ ಹಾಗೂ ಯಾವ ಪಾಲಿಕೆಯ ಆವರಣದಲ್ಲೂ ಇಲ್ಲ.

ಹೀಗಾಗಿ ಜನರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಅನಾವರಣ ಕಾರ್ಯ ನಡೆಯಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ, ದಲಿತ ಮುಖಂಡ ಮಲ್ಲೇಶ್‌ ಚೌಗುಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT