ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರು, ರೈತರ ಮೊಗದಲ್ಲಿ ಸಂತಸ

ವಾರದಿಂದ ಚುರುಕು ಪಡೆದ ಮುಂಗಾರು ಮಳೆ; ರೇಷ್ಮೆ ಹುಳು ಸಾಕಾಣಿಕೆ ಕಡೆಗೆ ಮುಖ ಮಾಡಿದ ರೈತರು
Last Updated 22 ಮೇ 2017, 7:32 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಬೇಸಿಗೆಯ ಬರಗಾಲದಲ್ಲಿ ಬಸವಳಿದಿದ್ದ ರೈತರ ಪಾಲಿಗೆ, ಕಳೆದ ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆ ಕೊಂಚ ನಿರಾಳ ತಂದಿದ್ದು, ರೈತರು, ರೇಷ್ಮೆಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.

ಎರಡು ತಿಂಗಳಿನಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಉಷ್ಣಾಂಶದಿಂದಾಗಿ ರೇಷ್ಮೆಹುಳುಗಳ ಸಾಕಾಣಿಕೆಯನ್ನು ಕೈಬಿಟ್ಟಿದ್ದ ರೈತರು, ಒಂದು ವಾರದಿಂದ ಪುನಃ ರೇಷ್ಮೆಹುಳು ಸಾಕಾಣಿಕೆಯ ಕಡೆಗೆ ಮುಖ ಮಾಡಿದ್ದಾರೆ.

ಫೆಬ್ರುವರಿ ತಿಂಗಳಿನಿಂದಲೇ ಬಿಸಿಲಿನ ತಾಪಮಾನ 39 ಡಿಗ್ರಿಗೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ರೇಷ್ಮೆ ಉದ್ಯಮವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ರೈತಾಪಿ ವರ್ಗದವರು, ಹಿಪ್ಪುನೇರಳೆ ಸೊಪ್ಪಿನ ಕೊರತೆ ಹಾಗೂ ಸೊಪ್ಪಿನ ಬೆಲೆ ಅಧಿಕವಾಗಿದ್ದರಿಂದ ರೇಷ್ಮೆಹುಳು ಸಾಕಾಣಿಕೆ ಮಾಡುವುದನ್ನು ಬಿಟ್ಟಿದ್ದರು. ಉಷ್ಣಾಂಶದ ಏರಿಕೆಯಿಂದ ರೈತರ ನಿರೀಕ್ಷೆ ಪ್ರಮಾಣದಲ್ಲಿ ಗೂಡು ಉತ್ಪಾದನೆ ಮಾಡಲು ಸಾಧ್ಯವಾಗದೆ ಉದ್ಯಮದಿಂದ ವಿಮುಖವಾಗಿದ್ದರು.

ಬಿಸಿಲಿನ ತಾಪಮಾನ ಕೇವಲ ರೇಷ್ಮೆಹುಳು ಸಾಕಾಣಿಕೆಯ ಮೇಲಷ್ಟೇ  ಅಲ್ಲದೆ, ಕೃಷಿ, ತೋಟಗಾರಿಕೆ ಬೆಳೆಗಳ ಮೇಲೂ ಗಂಭೀರವಾದ ಪರಿಣಾಮ ಬೀರಿತ್ತು. ರೈತರು ದನಕರುಗಳ ಮೇವು, ಕುಡಿಯುವ ನೀರಿಗೂ ಪರದಾಡುತ್ತಿದ್ದರು.

ಸತತ ನಾಲ್ಕು ವರ್ಷಗಳಿಂದ ಮಳೆಯಿಲ್ಲದ ಪರಿಣಾಮ, ಯಾವುದೇ ನದಿ ನಾಲೆಗಳ ಆಸರೆಯಿಲ್ಲದ ಈ ಭಾಗದಲ್ಲಿನ  ಕೆರೆ ಕುಂಟೆಗಳು ಒಂದು ಹನಿ ನೀರಿಲ್ಲದೆ, ಒಣಗಿಹೋಗಿವೆ.

ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ  ಹಳ್ಳಗಳಲ್ಲಿ, ಜಲಾನಯನ ಇಲಾಖೆಯಿಂದ ಮಾಡಿರುವ ಚೆಕ್ ಡ್ಯಾಂಗಳ ಸಮೀಪ,  ರೈತರು ನಿರ್ಮಾಣ ಮಾಡಿಕೊಂಡಿರುವ ಕೃಷಿ ಹೊಂಡಗಳಲ್ಲಿ ನೀರು ಶೇಖರಣೆಯಾಗಿದೆ. ಇದು ಕನಿಷ್ಠ ದನಕರುಗಳಿಗೆ ಕುಡಿಯಲಿಕ್ಕಾದರೂ ಅನುಕೂಲವಾಗಿದೆ ಎಂಬ ಆಶಾಭಾವನೆ ರೈತರದ್ದಾಗಿದೆ. ಮಳೆ ಬೀಳುತ್ತಿರುವುದರಿಂದ ಬಿಸಿಲಿನ ತಾಪಮಾನ ಕಡಿಮೆಯಾಗಿದೆ.

ರೇಷ್ಮೆ ಬೆಳೆಗಾರರು ಹುಳು ಸಾಕಾಣಿಕೆ ಮನೆಗಳನ್ನು ಸಿದ್ಧಗೊಳಿಸಿಕೊಂಡು ಪುನಃ ರೇಷ್ಮೆಹುಳುಗಳ ಚಾಕಿ ತಂದು ಮೇಯಿಸಲು ಪ್ರಾರಂಭಿಸಿದ್ದು, ಮಾರುಕಟ್ಟೆಗಳಲ್ಲಿ ಕಡಿಮೆಯಾಗಿರುವ ಗೂಡಿನ ಪ್ರಮಾಣದಲ್ಲಿ  ಏರಿಕೆಯಾಗುವ  ಸಾಧ್ಯತೆಗಳು ಇವೆ. ಅಲ್ಲಲ್ಲಿ ಹುಲ್ಲು ಚಿಗುರೊಡೆಯುತ್ತಿದ್ದು, ದನಕರುಗಳಿಗೆ ಮೇವು ಸಿಗಲಿದೆ ಎಂಬ ಸಮಾಧಾನ ರೈತರಲ್ಲಿದೆ.

ಕೆರೆ, ಕುಂಟೆಗಳಿಗೆ ಬಾರದ ನೀರು
ಒಂದೊಂದು ಹನಿ ನೀರನ್ನು ಭೂಮಿಗೆ ಇಂಗಿಸಿ, ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸರ್ಕಾರ, ಮಳೆಯಿಂದ ಬರುವ ನೀರನ್ನು ಕೆರೆ, ಕುಂಟೆಗಳ ಕಡೆಗೆ  ಹರಿಯುವ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿಲ್ಲ ಎಂಬ ಆಕ್ಷೇಪ ರೈತರದು.

ವಾರದಿಂದ ಉತ್ತಮ ಮಳೆಯಾಗುತ್ತಿದ್ದರೂ  ಯಾವುದೇ ಕೆರೆ, ಕುಂಟೆಗಳಿಗೆ ನೀರು ಬಂದಿಲ್ಲ. ರೈತರು ನಿರ್ಮಿಸಿದ ಕೃಷಿ ಹೊಂಡಗಳಿಗೆ ಬಂದಷ್ಟು ನೀರು ಕೆರೆ ಕುಂಟೆಗಳಿಗೆ ಬಂದಿಲ್ಲ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಕೆರೆ, ಕುಂಟೆಗಳಿಗೆ ನೀರು ಹರಿದು ಬರುವ ರಾಜಕಾಲುವೆಗಳನ್ನು ಜಿಲ್ಲಾಡಳಿತ ಅಭಿವೃದ್ಧಿ ಪಡಿಸಬೇಕು ಎಂಬುದು ರೈತರ ಅಭಿಪ್ರಾಯ.

*
ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸಿದರೆ ಕನಿಷ್ಠ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಲು ಅನುಕೂಲ ವಾಗಲಿದೆ.
-ಮಂಡಿಬೆಲೆ ದೇವರಾಜಪ್ಪ,
ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT