ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ್ ಸಮಸ್ಯೆ: ಕಾಯುವ ಸ್ಥಿತಿ

ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ನಲ್ಲಿ ಪಡಿತರ ವಿರಣೆಗೆ ಸೂಚನೆ
Last Updated 22 ಮೇ 2017, 7:37 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಪಡಿತರ (ರೇಷನ್‌) ಪಡೆಯುವಾಗ ಬಯೋಮೆಟ್ರಿಕ್ ನೀಡುವ ಪದ್ಧತಿ ಜಾರಿಯಾಗಿದ್ದು, ಈ ಮೂಲಕವೇ ರೇಷನ್ ಪಡೆಯಬೇಕಿದೆ. ಆದರೆ, ಪ್ರತಿನಿತ್ಯ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಗಂಟೆಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.

ಏನಿದು ವ್ಯವಸ್ಥೆ: ನ್ಯಾಯಬೆಲೆ ಅಂಗಡಿಯ ಮಾಲೀಕರು ಮೊದಲು ತಮ್ಮ ಐಡಿ ಮತ್ತು ಬಯೋಮೆಟ್ರಿಕ್ ನೀಡಿ ಆಹಾರ ಇಲಾಖೆಯ ವೆಬ್‌ಗೆ ಲಾಗಿನ್ ಆಗಬೇಕು. ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡಿದ್ದು, ಪಡಿತರದಾರರ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಕುಟುಂಬದ ಯಾರಾದರೂ ಒಬ್ಬ ಸದಸ್ಯರ ಬಯೋಮೆಟ್ರಿಕ್ ನೀಡಿದಾಗ ಮಾತ್ರ ರೇಷನ್ ನೀಡುವ ವಿವರ ತೆರೆದುಕೊಳ್ಳುತ್ತದೆ. ಆ ನಂತರ ಅಂಗಡಿಯವರು ಪಡಿತರದಾರರಿಗೆ ಎಷ್ಟು ರೇಷನ್ ನೀಡಬೇಕು ಎನ್ನುವ ಸೂಚನೆ ಅನುಸರಿಸಿ ರೇಷನ್ ನೀಡಬೇಕಾಗುತ್ತದೆ.

ವ್ಯವಸ್ಥೆ ಸರಿಪಡಿಸಿ: ಸರ್ಕಾರ ಸಮರ್ಪಕ ವ್ಯವಸ್ಥೆ ಮಾಡಿಕೊಳ್ಳದೇ ತರುವ ಹೊಸ ನಿಯಮಗಳಿಂದಾಗಿ ಸಾರ್ವಜನಿಕರು ಬಲಿಪಶುಗಳಾಗುತ್ತಿದ್ದಾರೆ. ಕುಟುಂಬದ ಸದಸ್ಯರು ಬರಬೇಕೆನ್ನುವ ನಿಯಮವೇನೋ ಸರಿ. ಆದರೆ ಅನಿವಾರ್ಯ ಕಾರಣಗಳಿಂದ ಬರಲಾಗದಿದ್ದರೆ ಬದಲಿ ವ್ಯವಸ್ಥೆ ಮಾಡಿ ಕೊಡಬೇಕು ಎಂಬ ಒತ್ತಾಯ ನಾಗರಿಕರದು.

ಅಂಗಡಿ ಮಾಲೀಕ ಅನಿವಾರ್ಯವಾಗಿ ಬರದೇ ಇದ್ದರೆ  ಕಂಪ್ಯೂಟರನ್ನು ಬೇರೆಯವರು ಮುಟ್ಟುವಂತಿಲ್ಲ. ಈಗ ಇಲಾಖೆಯ ಸರ್ವರ್ ಕೈ ಕೊಡುತ್ತಿರುವುದರಿಂದ ಮೊದಲು ಅಲ್ಲಿ ಸರಿಪಡಿಸಲಿ. ಅಲ್ಲಿಯವರೆಗೆ, ಪಡಿತರದಾರರಿಗೆ ಕೂಪನ್ ನೀಡಿ ಪಡಿತರ ವಿತರಿಸಲಿ ಎಂದು ಒತ್ತಾಯಿಸಿದ್ದಾರೆ.

ಕೆಲಸ ಕಾರ್ಯ ಬಿಟ್ಟು ಪಡಿತರದಾರರು ದಿನಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎನ್ನುತ್ತಾರೆ ಪಡಿತರದಾರರು.

ಹೀಗಿವೆ ಹಲವು ಸಮಸ್ಯೆ
ನ್ಯಾಯಬೆಲೆ ಅಂಗಡಿಯ ಮಾಲೀಕರಲ್ಲಿ ಆಹಾರ ಇಲಾಖೆಗೆ ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅವರೇ ಕಂಪ್ಯೂಟರ್ ನಿರ್ವಹಿಸಬೇಕು. ಅಥವಾ ಬಯೋಮೆಟ್ರಿಕ್ ನೀಡಲು ಸ್ಥಳದಲ್ಲಿ ಇರಲೇ ಬೇಕು. ಈ ಮೊದಲು, ಅಂಗಡಿಯಲ್ಲಿ ಬದಲಿ ವ್ಯವಸ್ಥೆ ಮಾಡಿಯಾದರೂ ಪಡಿತರ ಪಡೆಯಬಹುದಿತ್ತು.

ಲಾಗಿನ್ ಆಗುವಾಗ ಕಂಪ್ಯೂಟರ್‌ ಕೈಕೊಟ್ಟರೆ ಮೊದಲ ಹಂತದಿಂದಲೇ ಮತ್ತೆ ಪ್ರಕ್ರಿಯೆ ಆರಂಭಿಸಬೇಕು. ನಂತರ ಪಡಿತರದಾರರು ಬಯೋಮೆಟ್ರಿಕ್ ನೀಡಬೇಕು. ಪಡಿತರದಾರರ ಬಯೋಮೆಟ್ರಿಕ್ ಹೊಂದಾಣಿಕೆ ಆಗದಿದ್ದರೆ ಮತ್ತೆ  ಮೊದಲಿನಿಂದ ಪ್ರಕ್ರಿಯೆ ಮಾಡಬೇಕು.

ಅದೂ ಆಗದಿದ್ದರೆ ಕುಟುಂಬದ ಬೇರೆ ಸದಸ್ಯರನ್ನು ಕರೆಸಿ, ಬಯೋಮೆಟ್ರಿಕ್ ಪಡೆಯಬೇಕಾಗಿದೆ ಎಂದು ನ್ಯಾಯಬೆಲೆ ಅಂಗಡಿಗೆ ಬಂದಿದ್ದ ಮುನಿಯಪ್ಪ ಹೇಳಿದ್ದಾರೆ. ಸರ್ವರ್ ಡೌನ್ ಆಗಿ ಪ್ರಕ್ರಿಯೆ ಬೇಗ ಆಗದಿದ್ದರೆ, 10 ರಿಂದ 15 ನಿಮಿಷ ಕಾಯಬೇಕಿದೆ. ಅಲ್ಲಿಯವರೆಗೆ ಹಿಂದೆ ನಿಂತಿರುವ ಪಡಿತರದಾರರು ಕಾಯುತ್ತಾ ನಿಂತಿರಬೇಕು ಎಂದಿದ್ದಾರೆ.

ಎಷ್ಟೋ ಬಾರಿ ಸರ್ವರ್ ಸರಿಹೋಗದೇ ಪಡಿತರದಾರರು ಮನೆಗೆ ವಾಪಸ್‌ ಹೋಗಿ ಐದಾರು ದಿವಸ ಅಂಗಡಿಗೆ ಹೋದ ಉದಾಹರಣೆಗಳೂ ಇವೆ. ಇದರೊಂದಿಗೆ ವಿದ್ಯುತ್ ಸಮಸ್ಯೆ ಇವೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT