ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ: ಪಾಳು ಬಿದ್ದಿರುವ ಉದ್ಯಾನ

Last Updated 22 ಮೇ 2017, 8:31 IST
ಅಕ್ಷರ ಗಾತ್ರ

ಹೂವಿನಹಡಗಲಿ : ಪಟ್ಟಣದ ಹೊರ ವಲಯ ಮದಲಗಟ್ಟಿ ರಸ್ತೆಯಲ್ಲಿರುವ ಸಾರ್ವಜನಿಕ ಉದ್ಯಾನ ಸೂಕ್ತ ನಿರ್ವಹಣೆ ಕೊರತೆಯಿಂದ ಪಾಳು ಬೀಳುವ ಸ್ಥಿತಿ ತಲುಪಿದೆ.
ಕೆಲ ತಿಂಗಳಿಂದ ನೀರಿನ ಅಭಾವ ಉಂಟಾಗಿ ಇಡೀ ಉದ್ಯಾನ ಕಳೆ ಗುಂದಿದೆ. ಹಸಿರು ಹುಲ್ಲು ಹಾಸು, ಅಲಂಕಾರಿಕ ಗಿಡ ಮರಗಳು ಒಣಗಿ ನಿಂತಿವೆ.

ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿ ರುವ ಸಂಗೀತ ಕಾರಂಜಿಯ ಉಪಕರಣ ಗಳು ತುಕ್ಕು ಹಿಡಿದಿವೆ. ಪಾರ್ಕ್‌ ಸೌಂದರ್ಯ ಇಮ್ಮಡಿಗೊಳಿಸುವ ನೀರಿನ ಕಾರಂಜಿಗಳು ನಿರುಪಯುಕ್ತವಾಗಿವೆ. ಬಣ್ಣ ಕಳೆದುಕೊಂಡಿರುವ ಮಹಾತ್ಮ ಗಾಂಧೀಜಿ ಪ್ರತಿಮೆ, ಸುಂದರ ಕಲಾ ಕೃತಿಗಳು ಮೌನವಾಗಿ ನಿಂತಿವೆ.

ಪಟ್ಟಣದ ಏಕೈಕ ಉದ್ಯಾನ ಪ್ರತಿ ಭಾನುವಾರ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ನಿರ್ವಹಣೆ ಇಲ್ಲದೇ ಉದ್ಯಾನ ಪಾಳುಬಿದ್ದಿರುವುದರಿಂದ ಭಾನುವಾರ ವೂ ಜನರು ಇತ್ತ ಸುಳಿಯದಂತಹ ದುಸ್ಥಿತಿ ತಲುಪಿದೆ.

ಮಲ್ಲಿಗೆ ನಗರಿಯ ಪ್ರಮುಖ ಆಕರ್ಷಣೆ ಆಗಬೇಕಿದ್ದ ಸಾರ್ವಜನಿಕ ಉದ್ಯಾನವನ್ನು ಪುರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷಿಸಿದೆ. ಪಾರ್ಕ್‌ನಲ್ಲಿ ಹಸಿರು ಉಕ್ಕಿಸಿ, ಜನರನ್ನು ಸೆಳೆಯುವ ಸಣ್ಣ ಪ್ರಯತ್ನ ನಡೆದಿಲ್ಲ. ಹೊಸದಾಗಿ ಗಿಡ, ಮರಗಳನ್ನು ನೆಡುವುದಿರಲಿ, ಬೆಳೆದು ನಿಂತಿದ್ದ ಅಲಂಕಾರಿಕ ಗಿಡಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ‘ಪಾರ್ಕ್‌ ನಿರ್ವಹಣೆಗೆ ಕಿಂಚಿತ್ತೂ ಕಾಳಜಿ ವಹಿಸದ ಪುರಸಭೆ, ಅಲ್ಲಿ ಶೌಚಾಲಯದಂತಹ ಲಾಭದಾಯಕ ಕಾಮಗಾರಿಗಳನ್ನು ಕೈಗೊಂಡು ಬೀಗ ಜಡಿಯಲಾಗಿದೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಉದ್ಯಾನದಲ್ಲಿ ಕೆಲಸ ಮಾಡುವ ನಾಲ್ಕು ಜನ ದಿನಗೂಲಿ ನೌಕರರಿಗೆ ಎರಡು ವರ್ಷಗಳಿಂದ ಸಂಬಳ ನೀಡಿಲ್ಲ. ಹೀಗಾಗಿ ಅವರೂ ಕೂಡ ಒಲ್ಲದ ಮನಸ್ಸಿನಿಂದಲೇ ಕೆಲಸ ಮಾಡುತ್ತಿದ್ದಾರೆ. ‘ಪಾರ್ಕ್‌ ಸಿಬ್ಬಂದಿಗೆ ಪುರಸಭೆಯಿಂದಲೇ ಸಂಬಳ ನೀಡಬೇಕು’ ಎಂದು ಕಳೆದ ಆಗಸ್ಟ್‌ನಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸೂಚನೆ ನೀಡಿದ್ದರು. ಶಾಸಕರ ಆದೇಶಕ್ಕೆ ಮನ್ನಣೆ ನೀಡದ ಪುರಸಭೆ, ದಿನಗೂಲಿ ಕಾರ್ಮಿಕಕರಿಗೆ ವೇತನ ನೀಡದೇ ಸತಾಯಿಸುತ್ತಿದೆ.

1997ರಲ್ಲಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ನೆನಪಿಗಾಗಿ ಅಂದು ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಅವರು ‘ಆಗಸ್ಟ್‌–15 ಸ್ವಾತಂತ್ರ್ಯ ಉದ್ಯಾನವನ’ಕ್ಕೆ ಯೋಜನೆ ರೂಪಿಸಿ ಕಾಯಕಲ್ಪ ನೀಡಿದ್ದರು. ಮದಲಗಟ್ಟಿ ವೃತ್ತಕ್ಕೆ ‘ಸುವರ್ಣ ಮಹೋತ್ಸವ ವೃತ್ತ’ ಎಂದು ನಾಮಕರಣಗೊಳಿಸಿದ್ದರು.

ಪ್ರಕಾಶರ ಅಭಿರುಚಿಯಂತೆ ಕೆಲವೇ ದಿನಗಳಲ್ಲಿ ಸುಂದರ ಉದ್ಯಾನ ರೂಪುಗೊಂಡಿತ್ತು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವಗಳಂದು ಇಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಪಟ್ಟಣದ ಜನರನ್ನು ಪಾರ್ಕ್‌ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು.

‘ವಿಚಿತ್ರವೆಂದರೆ, ಅವರು ಕಾಲವಾದ ಬಳಿಕ ಅವರದೇ ಪಕ್ಷದ ಆಡಳಿತಗಾರರು ಪ್ರಕಾಶರ ಕನಸಿನ ಯೋಜನೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ’ ಎಂದು ಪಟ್ಟಣದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಪುರಸಭೆ ಈ ಕಡೆ ಗಮನಹರಿಸಿ ಉದ್ಯಾನವನ ನಿರ್ವಹಣೆಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿದಿನ ಸಂಜೆ ವಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಪಟ್ಟಣದ ಸಾರ್ವಜನಿಕರ ಆಗ್ರಹ.

* *

‘ನೆಮ್ಮದಿ ಊರು ಯೋಜನೆಯಲ್ಲಿ ಉದ್ಯಾನ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಸದ್ಯದಲ್ಲೇ ಬೋರ್‌ವೆಲ್‌ ಕೊರೆಸಲಾಗುತ್ತಿದೆ
ಪ್ರೇಮ್‌ ಚಾರ್ಲ್ಸ್‌  ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT