ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶದ ಯುವಕ ಕಾರಾಗೃಹದಿಂದ ಪರಾರಿ

Last Updated 23 ಮೇ 2017, 6:27 IST
ಅಕ್ಷರ ಗಾತ್ರ

ಶಿವಮೊಗ್ಗ:  ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಶಿವಮೊಗ್ಗ ಕಾರಾಗೃಹದಿಂದ ಭಾನುವಾರ ಪರಾರಿಯಾಗಿದ್ದಾನೆ. ಬಾಂಗ್ಲಾದೇಶದ ಮೊಹಮ್ಮದ್ ರೋಹನ್ ಹುಸೇನ್ (25) ಪರಾರಿಯಾದವನು.

ಬಾಂಗ್ಲಾದೇಶದ ಮುನ್ಶಿಗಂಜ್‌ ಜಿಲ್ಲೆಯ ಬಾರಖಾಲಿ ಗ್ರಾಮದ ನಿವಾಸಿಯಾಗಿರುವ ಆರೋಪಿ ಕಾರಾಗೃಹ ಸಮೀಪದ ತೋಟದಲ್ಲಿ ಕೆಲಸಕ್ಕೆ ಕರೆದೊಯ್ಯುವ ವೇಳೆ ಮುಖ್ಯದ್ವಾರದಿಂದಲೇ ಪರಾರಿ ಯಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ವಿವರ: ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಬೇಸರ ಗೊಂಡು ಗ್ರಾಮದ ಮನೆ ಬಿಟ್ಟಿದ್ದ ಆರೋಪಿ, ಕೂಲಿ ಮಾಡುತ್ತಿದ್ದ. ನಂತರ ದೇಶ ತೊರೆದು ಹಡಗಿನ ಮೂಲಕ ಚೆನ್ನೈಗೆ ಬಂದು, ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿದ್ದಾನೆ. ಬೆಂಗಳೂರಿನಿಂದ ರೈಲಿನಲ್ಲಿ ಭದ್ರಾವತಿಗೆ ಬಂದಿದ್ದ.

‌ಏ. 15ರಂದು ಪಟ್ಟಣದ ಹಳೇನಗರದ ಬಳಿ ಸುತ್ತಾಡುತ್ತಿದ್ದಾಗ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು. ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಯುವಕನ ಬಳಿ ಯಾವುದೇ ವೀಸಾ, ಪಾಸ್‌ಪೋರ್ಟ್ ಸಿಗದಿದ್ದ ಕಾರಣ ನ್ಯಾಯಾಲಯದ ಸೂಚನೆಯಂತೆ, ಶಿವಮೊಗ್ಗ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ನಾಲ್ವರ ಅಮಾನತು
ಕೈದಿ ಪರಾರಿ ಪ್ರಕರಣಕ್ಕೆ ಸಂಬಂಧಿಸಿ ಬಂದೀಖಾನೆಯ ನಾಲ್ವರು ಸಿಬ್ಬಂದಿಯನ್ನು ಸೋಮವಾರ ಅಮಾನತು ಮಾಡಲಾಗಿದೆ. ಹೆಚ್ಚುವರಿ ಐಜಿಪಿ ವೀರಭದ್ರಸ್ವಾಮಿ ಹಾಗೂ ಉತ್ತರ ವಲಯದ ಐಜಿಪಿ ಟಿ.ಪಿ. ಸ್ವಾಮಿ ಅವರು ಬೆಳಿಗ್ಗೆ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

‘ಜೈಲು ಗೋಡೆಗಳಿಂದ ಹಾರಿ, ಕೈದಿ ಪರಾರಿಯಾಗಿರುವ ಸಾಧ್ಯತೆ ಕಡಿಮೆ. ಮುಖ್ಯ ದ್ವಾರದಿಂದ ಓಡಿಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಕಾರಾಗೃಹ ಪ್ರಧಾನ ಮೇಲ್ವಿಚಾರಕರಾದ ಜಿ.ಎಂ. ಮಹೇಶ್, ಎ.ಎಸ್. ಕೌಟ್ಕರ್, ಮುಖ್ಯ ವಾರ್ಡನ್‌ಗಳಾದ ಆರ್.ಎಂ. ಪಾಟೀಲ್, ನಂದೀಶ್ ಅವರನ್ನು ಅಮಾನತು ಮಾಡಿದ್ದಾರೆ’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮರಿಗೌಡ  ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT