ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೆ ಅತಿಕ್ರಮಣ: ಪ್ರತಿಭಟನೆ

Last Updated 23 ಮೇ 2017, 7:29 IST
ಅಕ್ಷರ ಗಾತ್ರ

ಕನಕಗಿರಿ: ಸಮೀಪದ ಸೂಳೇಕಲ್ ಗ್ರಾಮದ ಹಿರೇಕೆರೆಯನ್ನು ಕೆಲವು ಪ್ರಭಾವಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಅಖಿಲ ಭಾರತ ಕೃಷಿ, ಗ್ರಾಮೀಣ ಕಾರ್ಮಿಕರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಜೆ.ಭಾರಧ್ವಜ ಮಾತನಾಡಿ, ‘ಸೂಳೇಕಲ್ ಗ್ರಾಮದ ಸರ್ವೆ ನಂಬರ್ 107, 108, 109 ಹಾಗೂ 108/2ರಲ್ಲಿ 84 ಎಕರೆ, 10 ಗುಂಟೆ ಹಿರೇಕೆರೆ ಎಂದು ಪಹಣಿಯಲ್ಲಿ ಇದೆ.  ಈಚೆಗೆ ಕೆಲವು ಭೂ ಮಾಲೀಕರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

‘ಜನ, ಜಾನುವಾರುಗಳಿಗೆ ಆಶ್ರಯ ತಾಣವಾಗಿದ್ದ ಕೆರೆಯನ್ನು 17 ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಕಲಿ ದಾಖಲಿ ಸೃಷ್ಟಿಸಿ ಅಕ್ರಮವಾಗಿ ವಶ ಪಡೆದುಕೊಂಡಿದ್ದಾರೆ. ಕೆರೆ ಪ್ರದೇಶ ಉಳ್ಳವರ ಪಾಲಾಗುತ್ತಿರುವುದರಿಂದ ಜನ, ಜಾನುವಾರುಗಳಿಗೆ ನೀರಿಲ್ಲದೆ ಸಮಸ್ಯೆಯಾಗಿದೆ’ ಎಂದು  ಹೇಳಿದರು.

ಸಿಪಿಐ(ಎಂಎಲ್)  ಜಿಲ್ಲಾ  ಕಾರ್ಯದರ್ಶಿ ಬಸನಗೌಡ ಪಾಟೀಲ ಮಾತನಾಡಿ, ‘ಕಂದಾಯ ಇಲಾಖೆ ಅಧಿಕಾರಿಗಳು ಕೆರೆ ಪ್ರದೇಶವನ್ನು ಅತಿಕ್ರಮಣ ಮಾಡಿದವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತಂದು ಅಭಿವೃದ್ಧಿಗೊಳಿಸಬೇಕು’ ಎಂದು ಒತ್ತಾಯಿಸಿದರು. 

ಉಪ ತಹಶೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ ಮಾತನಾಡಿ ‘ಹಿರೇಕೆರೆಯ ದಾಖಲೆಗಳನ್ನು ಸಮಗ್ರವಾಗಿ  ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದರು. 

ಕರ್ನಾಟಕ ರೈತ ಸಂಘದ ಅಧ್ಯಕ್ಷ ಹೇಮರಾಜ, ಪ್ರಭಾರ ಪಿಎಸ್ಐ ಶಾಂತಪ್ಪ ಮಾತನಾಡಿದರು. ಸಂಘಟನೆ ಸ್ಥಳೀಯ ಘಟಕದ ಅಧ್ಯಕ್ಷ  ಹುಸೇನಪೀರಸಾಬ ಮುದಗಲ್, ಪ್ರಮುಖರಾದ ಮಂಜುನಾಥ ಸಿಂಗ್ರಿ, ನಾಗರಾಜ ಜಂತಗಲ್, ಕೆ. ಸುಭಾಸ, ಜಗದೀಶ,  ಶರಣಪ್ಪ ಅರಳಹಳ್ಳಿ, ಲೋಕನಗೌಡ ಪೊಲೀಸ್ ಪಾಟೀಲ,  ನಾಗರಾಜ ಲಕ್ಕುಂಪುರ, ಯಲ್ಲಪ್ಪ ಸಿಂಗ್ರಿ, ಭದ್ರಪ್ಪ,  ಸಿದ್ದಣ್ಣ , ಈರಣ್ಣ ದೇಸಾಯಿ, ಈರಣ್ಣ ಆಗೋಲಿ ಇದ್ದರು. ಗ್ರಾಮದ ದುರಗಮ್ಮ ದೇವಸ್ಥಾನದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT