ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್‌ ದಾಳಿ ತಡೆಯುವುದು ಹೇಗೆ?

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಸೈಬರ್‌ ದಾಳಿ ಕಳೆದ ವಾರ ವಿಶ್ವದಾದ್ಯಂತ  ನಡೆದಿದೆ. ಲಕ್ಷಗಟ್ಟಲೆ ಕಂಪ್ಯೂಟರ್‌ಗಳಿಗೆ ಹ್ಯಾಕರ್‌ಗಳು ಕನ್ನ ಹಾಕಿರುವ ವಿಷಯವೇ ಸದ್ಯಕ್ಕೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ.

ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಬ್ರಿಟನ್‌ ಸೇರಿದಂತೆ 150ಕ್ಕೂ ಅಧಿಕ ರಾಷ್ಟ್ರಗಳ 2ಲಕ್ಷಕ್ಕೂ ಅಧಿಕ ಕಂಪ್ಯೂಟರ್‌ಗಳು ಈ ಸೈಬರ್ ದಾಳಿಗೆ ತುತ್ತಾಗಿದ್ದವು.

ಇ–ಮೇಲ್, ವೆಬ್‌ ಲಿಂಕ್ಸ್‌ಗಳ ಮೂಲಕ ಕುತಂತ್ರಾಂಶವನ್ನು ರವಾನಿಸಿ ಕಂಪ್ಯೂಟರ್‌ಗಳಲ್ಲಿರುವ ಮಾಹಿತಿಗೆ ಕನ್ನ ಹಾಕಿದ ಹ್ಯಾಕರ್‌ಗಳು, ಕಂಪ್ಯೂಟರ್‌ಗಳನ್ನು ಸರಿಪಡಿಸಬೇಕೆಂದರೆ ಕೇಳಿದಷ್ಟು ಹಣ ಕೊಡಬೇಕೆಂದು ಒತ್ತಾಯಿಸಿದ್ದರು.

ಹ್ಯಾಕರ್‌ಗಳು ಹೆಚ್ಚಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಸಾಫ್ಟ್‌ವೇರ್‌ ಸಂಸ್ಥೆ, ಸರ್ಕಾರಿ ಕಚೇರಿಗಳ ಕಂಪ್ಯೂಟರ್‌ಗಳಿಗೆ ಕನ್ನ ಹಾಕುತ್ತಾರೆ.

ಈ ರೀತಿ ಸೈಬರ್‌ ದಾಳಿಗಳು ನಡೆದಾಗಲೆಲ್ಲಾ ಕಂಪ್ಯೂಟರ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದುರಾಗುತ್ತದೆ. ವೈರಸ್‌ ದಾಳಿಗೆ ತುತ್ತಾಗದಂತೆ ಕಂಪ್ಯೂಟರ್‌ಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಹ್ಯಾಕಿಂಗ್‌ಗೆ ಗುರಿಯಾದ ಸಂಸ್ಥೆಗಳು  ನಿರಂತರವಾಗಿ ಕಾರ್ಯಪ್ರವೃತ್ತವಾಗಿರುತ್ತವೆ. 

ಕಂಪ್ಯೂಟರ್‌ಗಳನ್ನು ಸುರಕ್ಷಿತವಾಗಿ ಇಡಲೆಂದೇ ನುರಿತ ತಂತ್ರಜ್ಞರನ್ನು ನೇಮಕ ಮಾಡಿಕೊಂಡಿರುವ ದೊಡ್ಡ ದೊಡ್ಡ ಸಾಫ್ಟ್‌ವೇರ್‌ ಉದ್ಯಮಗಳು ಸೇರಿದಂತೆ ಕೆಲವು ರಾಷ್ಟ್ರಗಳ ಸರ್ಕಾರಿ ಕಚೇರಿಗಳ ಕಂಪ್ಯೂಟರ್‌ಗಳಿಗೂ ಹ್ಯಾಕಿಂಗ್‌ ಸಮಸ್ಯೆ ಕಾಡಿದೆ. ಕಂಪ್ಯೂಟರ್‌ಗಳನ್ನು ವೈರಸ್‌ ದಾಳಿಗೆ ತುತ್ತಾಗದಂತೆ ಆನ್‌ಲೈನ್‌ನಲ್ಲೇ ಗಮನಿಸಿ ತಡೆಗಟ್ಟುವುದು ಒಳಿತು ಎಂದು ತಜ್ಞರು ಹೇಳುತ್ತಾರೆ. ಕಂಪ್ಯೂಟರ್‌ಗಳನ್ನು ಹ್ಯಾಕಿಂಗ್‌ಗೆ ಗುರಿಯಾಗದಂತೆ ಸಂರಕ್ಷಿಸಿಕೊಳ್ಳುವ ಕುರಿತು ಸೈಬರ್ ತಜ್ಞರ ಕೆಲವು ಸಲಹೆಗಳು ಇಲ್ಲಿವೆ.

* ಕಾರ್ಯನಿರ್ವಹಣಾ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸಿ

ಇತ್ತೀಚೆಗೆ ನಡೆದ ಸೈಬರ್ ದಾಳಿಯು ವನ್ನಾಕ್ರೈ ಎಂಬ ಕುತಂತ್ರಾಂಶದ ಮೂಲಕ ನಡೆಸಲಾಗಿದೆ. 

ಹ್ಯಾಕರ್‌ಗಳು ಕಳುಹಿಸುವ ಇ–ಮೇಲ್‌ ಜತೆಗೆ ಲಗತ್ತಿಸಿರುವ ಕಡತಗಳನ್ನು ಡೌನ್‌ಲೋಡ್‌ ಮಾಡುವುದರಿಂದ ಮತ್ತು  ಮೇಲ್‌ ಜತೆಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದರಿಂದ ಕುತಂತ್ರಾಂಶವು ಕಂಪ್ಯೂಟರಿಗೆ ಪ್ರವೇಶಿಸುತ್ತದೆ. ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರ್‌ಗಳೇ ಹೆಚ್ಚಾಗಿ ಹ್ಯಾಕಿಂಗ್‌ಗೆ ಗುರಿಯಾಗಿವೆ.

‘ದುರಂತವೆಂದರೆ ಎಂಟು ತಿಂಗಳ ಹಿಂದಷ್ಟೇ ಮೈಕ್ರೊಸಾಫ್ಟ್‌ ಸಂಸ್ಥೆ ‘ಸೆಕ್ಯೂರಿಟಿ ಪ್ಯಾಚ್‌’ ಅನ್ನು ಅಭಿವೃದ್ಧಿಪಡಿಸಿತ್ತು. ಆದರೆ ಇದು ವನ್ನಾಕ್ರೈ ಕುತಂತ್ರಾಂಶವನ್ನು ತಡೆಯುವಷ್ಟು ಸುರಕ್ಷಿತವಾಗಿರಲಿಲ್ಲ’ ಎಂದು ವರಕೋಡ್‌ ಅಪ್ಲಿಕೇಷನ್ ಸೆಕ್ಯೂರಿಟಿ ಸಂಸ್ಥೆಯ ಕ್ರಿಸ್‌ ವೈಸೊಪಾಲ್ ತಿಳಿಸಿದ್ದಾರೆ.

‘ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದ್ದ ಕಂಪ್ಯೂಟರ್‌ಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಸುರಕ್ಷಾ ಕ್ರಮಗಳನ್ನು ಒಳಗೊಂಡಿರದ ಕಂಪ್ಯೂಟರ್‌ಗಳ ಮಾಲೀಕರು  ಮಾತ್ರ ವೈರಸ್‌ ದಾಳಿಗೆ ತುತ್ತಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ವಿಂಡೋಸ್‌ ಸಂಸ್ಥೆ ಆಗಾಗ್ಗೆ ಬಿಡುಗಡೆ ಮಾಡುವ ಸುರಕ್ಷಾ ತಂತ್ರಾಂಶಗಳನ್ನು ಅಥವಾ ಪ್ಯಾಚ್‌ಗಳನ್ನು ತಪ್ಪದೇ ಅಳವಡಿಸಿಕೊಳ್ಳುವುದು ಒಳಿತು.
ಆದರೆ, ಲಿನಕ್ಸ್‌ ಮತ್ತು ಮ್ಯಾಕ್‌ ತಂತ್ರಾಂಶವಿರುವ ಕಂಪ್ಯೂಟರ್‌ಗಳಿಗೆ ಯಾವುದೇ ಹಾನಿ ಆಗಿಲ್ಲ.  ಹೀಗೆಂದು ನೀವು ಸುಮ್ಮನಿದ್ದರೆ ಅಪಾಯ ತಪ್ಪಿದ್ದಲ್ಲ. ನಿಮ್ಮ ಕಂಪ್ಯೂಟರ್ ಯಾವುದೇ ಕಾರ್ಯನಿರ್ವಹಣಾ ತಂತ್ರಾಂಶವನ್ನು ಹೊಂದಿದ್ದರೂ ಆಯಾ ಸಂಸ್ಥೆಗಳು ಬಿಡುಗಡೆ ಮಾಡುವ ಸೆಕ್ಯೂರಿಟಿ ಪ್ಯಾಚ್‌ಗಳನ್ನು ತಪ್ಪದೇ ಅಳವಡಿಸಿಕೊಳ್ಳುವುದು ಒಳಿತು.

* ಆ್ಯಂಟಿ ವೈರಸ್‌ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಿ
ವಿಂಡೋಸ್‌ ತಂತ್ರಾಂಶಗಳನ್ನು ಆಗಾಗ್ಗೆ ನವೀಕರಿಸುವುದರ  ಜತೆಗೆ ಹೊಸದಾಗಿ ಅಭಿವೃದ್ಧಿಪಡಿಸುವ ಆ್ಯಂಟಿ ವೈರಸ್‌ ತಂತ್ರಾಂಶಗಳನ್ನು ಅಳವಡಿಸಿಕೊಂಡರೆ ರ್‍ಯಾನ್‌ಸಮ್‌ವೇರ್ ಕುತಂತ್ರಾಂಶಗಳ ದಾಳಿಗೆ ತುತ್ತಾಗುವುದನ್ನು ಸಾಧ್ಯವಾದಷ್ಟು ತಪ್ಪಿಸಬಹುದು.

ಜಾಗತಿಕವಾಗಿ ಶೇ30ರಷ್ಟು ಬಳಕೆಯಲ್ಲಿರುವ ಆ್ಯಂಟಿವೈರಸ್‌ ತಂತ್ರಾಂಶಗಳು, ರ್‍ಯಾನ್‌ಸಮ್‌ವೇರ್ ಕುತಂತ್ರಾಂಶಗಳನ್ನು ಪತ್ತೆಹಚ್ಚಲು ಮತ್ತು ಕಾರ್ಯನಿರ್ವಹಿಸದೇ ತಟಸ್ಥವಾಗುವಂತೆ ಮಾಡಬಲ್ಲವು.

ಆ್ಯಂಟಿ ವೈರಸ್‌ ತಂತ್ರಾಂಶಗಳನ್ನೂ ಸಹ ಸೆಕ್ಯುರಿಟಿ ಪ್ಯಾಚ್‌ಗಳ ಹಾಗೆ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಿಕೊಳ್ಳುವುದನ್ನು ಮರೆಯಬಾರದು. ಜತೆಗೆ ಕ್ಯಾಸ್‌ಪರ್‌ಸ್ಕೈ ಲ್ಯಾಬ್, ಬಿಟ್‌ ಡಿಫೆಂಡರ್‌ ಅಥವಾ ಮಾಲ್‌ವೇರ್‌ ಬೈಟ್ಸ್‌ನಂತಹ  ಸಂಸ್ಥೆಗಳ   ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ಗಳನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್‌ ಮಾಡಿಕೊಂಡರೆ   ಕಂಪ್ಯೂಟರ್ ಮತ್ತಷ್ಟು ಸುರಕ್ಷಿತವಾಗಿರುತ್ತದೆ

* ಅಪರಿಚಿತ ಇ–ಮೇಲ್‌, ಸಂಶಯಾಸ್ಪದ ಲಿಂಕ್‌ಗಳನ್ನು ಮುಟ್ಟಬೇಡಿ

ನಿಮ್ಮ ಇನ್‌ಬಾಕ್ಸ್‌ಗೆ ಅಪರಿಚಿತ ಇ–ಮೇಲ್‌ಗಳು ಆಗಾಗ್ಗೆ ಬರುತ್ತಿರುತ್ತವೆ. ಆಮಿಷಗಳನ್ನು ಒಡ್ಡಿ ಇ–ಮೇಲ್‌ಗಳನ್ನು ತೆರೆಯುವಂತೆ ಹ್ಯಾಕರ್‌ಗಳು ಮಾಡುತ್ತಾರೆ.  ಆದ್ದರಿಂದ ಇ–ಮೇಲ್‌ಗಳು ಬರುತ್ತಿದ್ದಂತೇ, ಮೊದಲು ಅವುಗಳ ವಿಳಾಸವನ್ನು ತಿಳಿದುಕೊಳ್ಳಿ, ನಿಮಗೆ ಪರಿಚಯವಿರುವ ವ್ಯಕ್ತಿ ಅಥವಾ ಸಂಸ್ಥೆಯಿಂದ ಬಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

* ಇ–ಮೇಲ್‌ನಲ್ಲಿ ಅಕ್ಷರ ದೋಷ, ತಾಂತ್ರಿಕ ದೋಷಗಳು ಏನಾದರೂ ಇವೆಯೇ ಎಂಬುದನ್ನು ಪರಿಶೀಲಿಸಿ.

ಅದೇ ರೀತಿ ಮೇಲ್‌ನ ಅಟ್ಯಾಚ್‌ಮೆಂಟ್‌ನಲ್ಲಿ ಆಕರ್ಷಕವಾಗಿರುವ ಲಿಂಕ್‌ಗಳನ್ನು ಮೂಡಿಸಿ ಕ್ಲಿಕ್‌ ಮಾಡುವಂತೆ ಸೂಚಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಆ ಲಿಂಕ್‌ಗಳು ಸುರಕ್ಷಿತ ಜಾಲತಾಣಗಳನ್ನೇ ಪ್ರವೇಶಿಸಲು ಸೂಚಿಸುತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಒಂದು ವೇಳೆ ಆ ಲಿಂಕ್‌ಗಳು, ನಿಮ್ಮ ಬ್ಯಾಂಕ್‌, ಕ್ರೆಡಿಟ್‌ ಕಾರ್ಡ್‌ ಸಂಸ್ಥೆ ಅಥವಾ ಇಂಟರ್‌ನೆಟ್‌ ಸೇವೆ ಒದಗಿಸುವ ಸಂಸ್ಥೆಗಳಿಂದ ಬಂದಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಮುಟ್ಟಲು ಹೋಗಬೇಡಿ. ಏಕೆಂದರೆ ಬ್ಯಾಂಕ್‌ನವರಾಗಲಿ, ಕಂಪ್ಯೂಟರ್ ಸರ್ವಿಸ್‌ ಸಂಸ್ಥೆಗಳಾಗಲಿ, ಇಂಟರ್‌ನೆಟ್‌ ಸೇವೆ ಒದಗಿಸುವವರಾಗಲಿ ಯಾವುದೇ ಕಾರಣಕ್ಕೂ ಅಂತಹ ಲಿಂಕ್‌ಗಳನ್ನು ಕಳುಹಿಸುವುದಿಲ್ಲ. ಅಲ್ಲದೆ, ಪಾಸ್‌ವರ್ಡ್‌ ಮತ್ತು ಇ–ಮೇಲ್‌ ವಿಳಾಸದ ಬಗ್ಗೆ ಪ್ರಶ್ನೆಗಳನ್ನೂ ಕೇಳುವುದಿಲ್ಲ.

* ಡೇಟಾ ಬ್ಯಾಕಪ್‌ ಇಟ್ಟುಕೊಳ್ಳಿ

ಎಲ್ಲ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದ್ದರೂ ನಿಮ್ಮ ಕಂಪ್ಯೂಟರ್‌ಗೆ ಹ್ಯಾಕರ್‌ಗಳು ಕನ್ನ ಹಾಕುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಡೇಟಾ ಬ್ಯಾಕಪ್‌ ಇಟ್ಟುಕೊಂಡಿದ್ದರೆ ಕಂಪ್ಯೂಟರ್ ಹ್ಯಾಕ್‌ ಆದರೂ ಸಮಸ್ಯೆಯೇನೂ ಆಗುವುದಿಲ್ಲ.

ಎಕ್ಸರ್ಟನಲ್ ಹಾರ್ಡ್‌ ಡಿಸ್ಕ್‌, ಪೆನ್‌ಡ್ರೈವ್‌ಗಳಲ್ಲಿ ಮಾಹಿತಿ ನಕಲು ಇಟ್ಟುಕೊಂಡಿದ್ದರೆ, ಹ್ಯಾಕಿಂಗ್‌ ಗುರಿಯಾದ ನಿಮ್ಮ ಕಂಪ್ಯೂಟರ್ ಅನ್ನು  ಪುನಃ ರಿಸ್ಟೋರ್ ಮಾಡಿ ಎಂದಿನಂತೆ ಬಳಸಿಕೊಳ್ಳಬಹುದು.

* ನಿಮ್ಮ ವಹಿವಾಟುಗಳಿಗೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಿ

ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಒಳಗೊಂಡಿರುವ ಸಂಸ್ಥೆಗಳು ಸುರಕ್ಷಾ ಕ್ರಮಗಳನ್ನು  ಆಗಾಗ್ಗೆ ಅಳವಡಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಸಂಸ್ಥೆಯ ಒಂದು ಕಂಪ್ಯೂಟರ್‌ನಲ್ಲಿ ಸುರಕ್ಷತಾ ಲೋಪವಾದರೂ ನೆಟ್‌ವರ್ಕ್‌ನಲ್ಲಿರುವ ಎಲ್ಲ ಕಂಪ್ಯೂಟರ್‌ಗಳು ಕನ್ನಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ವನ್ನಾಕ್ರೈ ದಾಳಿ ದೊಡ್ಡ  ಸಂಸ್ಥೆಗಳಿಗೆ  ಒಂದು ಪಾಠ. ಆದ್ದರಿಂದ ಸಂಸ್ಥೆಯ ಎಲ್ಲ ಕಂಪ್ಯೂಟರ್‌ಗಳ ತಂತ್ರಾಂಶವನ್ನು ಅಪ್‌ಡೇಟ್‌ ಮಾಡಿಕೊಳ್ಳುವುದು, ಸುರಕ್ಷಾ ಪ್ಯಾಚ್‌ಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

‘ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೈಬರ್‌ ದಾಳಿ ಕುರಿತು ಹೆಚ್ಚು ಜಾಗೃತಿ ಮೂಡಿಸುವುದರ ಜತೆಗೆ  ಅಪರಿಚಿತ ಇ–ಮೇಲ್‌ಗಳನ್ನು ತೆರೆಯದಂತೆ ಸುರಕ್ಷಿತವಲ್ಲದ ಲಿಂಕ್‌ಗಳನ್ನು ಮುಟ್ಟದಂತೆ ಸೂಚಿಸುತ್ತಿರಬೇಕು’ ಎಂದು ಕ್ರೈಪ್ಸಿಸ್‌ ಸೈಬರ್ ಸೆಕ್ಯೂರಿಟಿ ಸಂಸ್ಥೆಯ ಉಪಾಧ್ಯಕ್ಷ ಮ್ಯಾಟ್‌ ಅಹ್ರೆನ್ಸ್ ತಿಳಿಸಿದ್ದಾರೆ.

**

ಏನು ಮಾಡಬೇಕು?

ಈಗಾಗಲೇ ನಿಮ್ಮ ಕಂಪ್ಯೂಟರ್ ವೈರಸ್ ದಾಳಿಗೆ ಗುರಿಯಾಗಿದ್ದರೆ. ಮೊದಲು ನಿಮ್ಮ ಕಂಪ್ಯೂಟರ್‌ಗೆ ಇರುವ ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಿ. ಇದರಿಂದ ಇತರೆ ಕಂಪ್ಯೂಟರ್‌ಗಳಿಗೆ ಅಥವಾ ಪರಿಕರಗಳಿಗೆ ವೈರಸ್‌  ವ್ಯಾಪಿಸುವುದನ್ನು ತಡೆಗಟ್ಟಬಹುದು.

ಸೈಬರ್‌ ದಾಳಿಗೆ ನಿಮ್ಮ ಕಂಪ್ಯೂಟರ್ ತುತ್ತಾಗಿರುವುದು ದೃಢವಾಗಿದ್ದರೆ ಕೂಡಲೇ ಸೈಬರ್‌ ಸೆಲ್‌ಗಳಿಗೆ ದೂರು ನೀಡಿ ತಜ್ಞರ ಸಲಹೆ ಪಡೆದುಕೊಳ್ಳಿ. ಈ ಬಗ್ಗೆ ಉದಾಸೀನ ತೋರಿದರೆ ಮುಂದೆ ಈ ರೀತಿಯ  ಘಟನೆಗಳು ನಡೆಯುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಮಾಹಿತಿಯ ಬ್ಯಾಕ್ಅಪ್‌ ಇರದಿರುವಾಗ ಮತ್ತು ಹ್ಯಾಕ್‌ ಆದ ಮಾಹಿತಿ ಮುಖ್ಯವಾಗಿವ  ಸಂದಿಗ್ಥ ಪರಿಸ್ಥಿತಿಯಲ್ಲಿ ಹ್ಯಾಕರ್‌ಗಳು ಬೇಡಿಕೆ ಇಡುವಷ್ಟು ಹಣ ಪಾವತಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೂ ಯಾವುದೇ ಕಾರಣಕ್ಕೂ ಹಣ ಪಾವತಿಸಬೇಡಿ. ಏಕೆಂದರೆ ಹಣ ಪಾವತಿಸಿದ ನಂತರ ಮಾಹಿತಿ ಸಿಗುತ್ತದೆ ಎಂಬ ಭರವಸೆಯನ್ನು ಹ್ಯಾಕರ್‌ಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ ಹಣ ಪಾವತಿಸಿರುವ ಹಲವರಿಗೆ  ಹ್ಯಾಕರ್‌ಗಳು ಮಾಹಿತಿಯನ್ನು ವಾಪಸ್‌ ನೀಡಿರದ ಅನೇಕ ನಿದರ್ಶನಗಳೂ ಇವೆ.

***

-ಬ್ರೇನ್‌ ಎಕ್ಸ್‌. ಚೆನ್‌, ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT