ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಂದಿರನ್ನು ಉಳಿಸಲು ಎರಡು ಮಾರ್ಗಗಳು

ಆರೋಗ್ಯ ಸೂಚ್ಯಂಕಗಳಲ್ಲಿ ಪ್ರಾದೇಶಿಕ ಅಸಮಾನತೆ ಎಂಬುದು ದೇಶದುದ್ದಕ್ಕೂ  ಕಂಡುಬರುತ್ತದೆ
ಅಕ್ಷರ ಗಾತ್ರ
ಸಹಸ್ರಮಾನದ ಅಭಿವೃದ್ಧಿಗೆ ಸಂಬಂಧಿಸಿದ ಐದನೇ ಗುರಿಯು (ಎಂಡಿಜಿ 5) 1990ರಿಂದ 2015ರ ನಡುವಣ ಅವಧಿಯಲ್ಲಿ ಮಾತೃ ಮರಣ ಪ್ರಮಾಣವನ್ನು (ಎಂಎಂಆರ್) ಶೇಕಡ 70ರಷ್ಟು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದೆ. ಪ್ರತಿ ಒಂದು ಲಕ್ಷ ಶಿಶುಗಳ ಜನನದ ವೇಳೆ ತಾಯಂದಿರು ಮರಣ ಹೊಂದುವ ಪ್ರಮಾಣವನ್ನು ಎಂಎಂಆರ್ ಎನ್ನಲಾಗುತ್ತದೆ.
 
ಕೇಂದ್ರ ಸರ್ಕಾರ 2002ರಲ್ಲಿ ಹೊರತಂದ ರಾಷ್ಟ್ರೀಯ ಆರೋಗ್ಯ ನೀತಿಯು (ಎನ್‌ಎಚ್‌ಪಿ) 2010ರೊಳಗೆ ಎಂಎಂಆರ್ ಪ್ರಮಾಣವನ್ನು 100ಕ್ಕೆ ಮಿತಿಗೊಳಿಸುವ ಗುರಿ ಹೊಂದಿತ್ತು. ಆದರೆ 2010ರಿಂದ 2012ರ ನಡುವಣ ಅವಧಿಯಲ್ಲಿ ಎಂಎಂಆರ್‌ ಸಂಖ್ಯೆ 178 ಎಂದು ಇತ್ತೀಚಿನ ವರದಿ ಹೇಳಿದೆ. ಎಂಎಂಆರ್ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಆರಂಭಿಸಿತು (ಈಗ ಇದಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್ ಎಂಬ ಹೆಸರಿಡಲಾಗಿದೆ).
 
ಕರ್ನಾಟಕದಲ್ಲಿ ಎಂಎಂಆರ್ ಸಂಖ್ಯೆ 144. ಆದರೆ, ಸರಾಸರಿ ಸಂಖ್ಯೆಯ ಪರದೆಯ ಅಡಿ ರಾಜ್ಯದ ವಿವಿಧ ಜಿಲ್ಲೆಗಳ ನಡುವೆ ಇರುವ ಎಂಎಂಆರ್ ಸಂಖ್ಯೆಗಳಲ್ಲಿನ ವ್ಯತ್ಯಾಸ ಅಡಗಿದೆ.
 
ಹೆರಿಗೆ ಸಮಯದಲ್ಲಿ ತಾಯಂದಿರು ಸಾಯುವುದನ್ನು ನಿಯಂತ್ರಿಸಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಎಂಎಂಆರ್ ಪ್ರಮಾಣ 61. ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ಸರಾಸರಿ ಎಂಎಂಆರ್ ಪ್ರಮಾಣ 223. ಕೊಪ್ಪಳ, ರಾಯಚೂರು, ಯಾದಗಿರಿ ಮತ್ತ ಬಳ್ಳಾರಿ ಜಿಲ್ಲೆಗಳಲ್ಲಿನ ಎಂಎಂಆರ್ ಸಂಖ್ಯೆಯನ್ನು ರಾಜಸ್ತಾನ (255) ಹಾಗೂ ಒಡಿಶಾ (235) ರಾಜ್ಯಗಳ ಜೊತೆ ಹೋಲಿಕೆ ಮಾಡಬಹುದು.
 
ಆರೋಗ್ಯ ಮೂಲ ಸೌಕರ್ಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಮಾನವ ಸಂಪನ್ಮೂಲವು ಜಿಲ್ಲೆಗಳ ನಡುವಣ ಈ ವ್ಯತ್ಯಾಸಕ್ಕೆ ಒಂದು ಕಾರಣ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಎಂಎಂಆರ್ ಪ್ರಮಾಣ ಕಡಿಮೆ ಮಾಡುವ ಒಂದು ಮಾರ್ಗ ಹೆರಿಗೆಗಳು ಆಸ್ಪತ್ರೆಗಳಲ್ಲಿ ಆಗುವಂತೆ ಮಾಡುವುದು. ಕರ್ನಾಟಕದಲ್ಲಿ ಆಸ್ಪತ್ರೆಗಳಲ್ಲಿ ಆಗುತ್ತಿರುವ ಹೆರಿಗೆ ಪ್ರಮಾಣವನ್ನು ಅವಲೋಕಿಸಿದರೆ ಬಹುರೂಪಿ ಚಿತ್ರಣ ಸಿಗುತ್ತದೆ.
 
ರಾಜ್ಯದಲ್ಲಿ ಒಟ್ಟಾರೆಯಾಗಿ ಶೇಕಡ 90ರಷ್ಟು ಹೆರಿಗೆಗಳು ಆಸ್ಪತ್ರೆಗಳಲ್ಲಿ ಆಗುತ್ತವೆ. ಮುಂಚೂಣಿಯ ಮೂರು ಜಿಲ್ಲೆಗಳಲ್ಲಿ (ದ.ಕ., ಉಡುಪಿ ಮತ್ತು ಬೆಂಗಳೂರು) ಆಸ್ಪತ್ರೆಗಳಲ್ಲಿ ಆಗುವ ಹೆರಿಗೆ ಪ್ರಮಾಣ ಶೇಕಡ 100ಕ್ಕೆ ಹತ್ತಿರವಾಗಿದೆ. ಆದರೆ, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಇದರ ಪ್ರಮಾಣ ಶೇಕಡ 70ರಿಂದ 80ರಷ್ಟು ಮಾತ್ರ. ಅಂದರೆ ರಾಜ್ಯದ ಒಟ್ಟು ಸರಾಸರಿಗಿಂತ ಶೇಕಡ 10ರಷ್ಟು, ಉತ್ತಮ ಸಾಧನೆ ತೋರಿರುವ ಜಿಲ್ಲೆಗಳಿಗಿಂತ ಶೇಕಡ 20ರಷ್ಟು ಕಡಿಮೆ.
 
ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿರುವ ಹೆರಿಗೆ ಪ್ರಮಾಣದ ಬಗ್ಗೆಯೂ ಇಲ್ಲಿ ಉಲ್ಲೇಖಿಸಬೇಕು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂರನೆಯ ಎರಡರಷ್ಟಕ್ಕಿಂತ ಹೆಚ್ಚಿನ ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತವೆ. ಬೆಂಗಳೂರಿನಲ್ಲಿ ಶೇಕಡ 50ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಆದರೆ, ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಕಥೆ ಬೇರೆಯದೇ ಆಗಿದೆ.
 
ಇಲ್ಲಿ ಬಹುತೇಕ ಹೆರಿಗೆಗಳು ಆಗುವುದು ಸರ್ಕಾರಿ ಆಸ್ಪತ್ರೆಗಳಲ್ಲಿ (ಈ ಮಾತಿಗೆ ವಿಜಯಪುರ ಮಾತ್ರ ಅಪವಾದ). ಮೂರನೆಯ ಒಂದಕ್ಕಿಂತ ಕಡಿಮೆ ಪ್ರಮಾಣದ ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಅಲ್ಲದೆ, ಗಣನೀಯ ಸಂಖ್ಯೆಯ ಹೆರಿಗೆಗಳು ಇಂದಿಗೂ ಮನೆಗಳಲ್ಲೇ ಆಗುತ್ತಿವೆ.
 
ಇದು ಎರಡು ಸಂಗತಿಗಳನ್ನು ಹೇಳುತ್ತಿದೆ: 1) ಜನರೆದುರು ಆಯ್ಕೆಗಳಿದ್ದರೆ ಅವರು ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಜಿಲ್ಲೆಗಳ ಅಂಕಿ–ಅಂಶ ಗಮನಿಸಿದರೆ ಇದು ಗೊತ್ತಾಗುತ್ತದೆ. 2) ಉತ್ತರ ಕರ್ನಾಟಕ ಭಾಗದ ತಾಯಂದಿರಿಗೆ ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಆಯ್ಕೆಗಳು ಹೆಚ್ಚಿಲ್ಲ.
 
ಅವರಲ್ಲಿ ಹಲವರು ಸರ್ಕಾರಿ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುವುದು ಒಳಿತು ಎಂದು ಭಾವಿಸಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇಕಡ 20ರಿಂದ 30ರಷ್ಟು ಹೆರಿಗೆಗಳು ಮನೆಗಳಲ್ಲೇ ಆಗುತ್ತಿದ್ದು, ಇದು ಎಂಎಂಆರ್ ಪ್ರಮಾಣ ಹೆಚ್ಚಲು ಕಾರಣವಾಗಬಹುದು.
 
ರಾಜ್ಯದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಆಗುವ ಹೆರಿಗೆಗಳಿಗೆ ಸಂಬಂಧಿಸಿದ ಸಂಖ್ಯೆಗಳನ್ನು ಒಮ್ಮೆ ಪರಿಶೀಲಿಸೋಣ. ರಾಜ್ಯದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ನಡೆಯುವ ಹೆರಿಗೆ ಪ್ರಮಾಣ ಶೇಕಡ 10ರಿಂದ 15ರಷ್ಟು. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ‘ಮಿತಿ’ಯಲ್ಲೇ ಇದೆ. ವೈದ್ಯರು ಸೂಚಿಸಿದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು.
 
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ ಶಸ್ತ್ರಚಿಕಿತ್ಸೆಯ ಪ್ರಮಾಣ ಖಾಸಗಿ ಆಸ್ಪತ್ರೆಗಳಲ್ಲಿನ ಪ್ರಮಾಣಕ್ಕಿಂತ ಕಡಿಮೆ. ಈ ಮಾತು ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಿಗೆ ಅನ್ವಯವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ ಶಸ್ತ್ರಚಿಕಿತ್ಸೆ ಪ್ರಮಾಣ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆಗಳಿಗಿಂತ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚಿದೆ.
 
ವಾಸ್ತವವಾಗಿ, ಉತ್ತರ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯ ಪ್ರಮಾಣ ತೀರಾ ಕಡಿಮೆ. ಇದಕ್ಕೆ ಕಾರಣಗಳು ಹಲವಿರಬಹುದು. 1) ಹಣ ಸಂಪಾದನೆ ಆಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರಬಹುದು. 2) ಉತ್ತಮ ಮೂಲಸೌಕರ್ಯ ಹಾಗೂ ಉತ್ತಮ ಸಿಬ್ಬಂದಿ ಇರುವ ಕಾರಣ ಖಾಸಗಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರಬಹುದು. 3) ಮೂಲಸೌಕರ್ಯ ಹಾಗೂ ನುರಿತ ಸಿಬ್ಬಂದಿಯ ಕೊರತೆಯ ಕಾರಣದಿಂದ ಉತ್ತರ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ನಡೆಸುವ ಸಾಮರ್ಥ್ಯ ಹೊಂದಿಲ್ಲದಿರಬಹುದು.
 
ಅಗತ್ಯ ಎದುರಾದಾಗ ಶಸ್ತ್ರಚಿಕಿತ್ಸೆ ನಡೆಸುವುದು ಸೇರಿದಂತೆ ಜೀವ ಉಳಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಕೌಶಲ ಇರುವ ತಜ್ಞರ ತಂಡವನ್ನು ಹೊಂದಿರುವುದು ಎಂಎಂಆರ್ ಪ್ರಮಾಣ ಕಡಿಮೆ ಮಾಡಲು ಇರುವ ಒಂದು ಮಾರ್ಗ. ತಜ್ಞರ ತಂಡದಲ್ಲಿ ಶಸ್ತ್ರವೈದ್ಯ, ಪ್ರಸೂತಿತಜ್ಞ-ಸ್ತ್ರೀರೋಗತಜ್ಞ, ಮಕ್ಕಳ ತಜ್ಞ ಮತ್ತು ಅರಿವಳಿಕೆ ತಜ್ಞ ಇರಬೇಕು. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಿಯಮಗಳ ಅನ್ವಯ ತಜ್ಞರ ಈ ತಂಡವು ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ) ಅಥವಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರಬೇಕು.
 
ಎಂಎಂಆರ್ ಪ್ರಮಾಣ ಅತ್ಯಂತ ಕಡಿಮೆ ಇರುವ ಮೂರು ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯವು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಮೂಲ ಸೌಕರ್ಯಕ್ಕಿಂತ ಉತ್ತಮವಾಗಿಯೇನೂ ಇಲ್ಲ ಎಂಬುದು ನಾವು  ಕಂಡುಕೊಂಡ ಸಂಗತಿ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿತಜ್ಞ–ಸ್ತ್ರೀರೋಗತಜ್ಞರ ಹುದ್ದೆಗಳು ಖಾಲಿ ಇವೆ ಎಂಬುದು ಜಿಲ್ಲಾ ಮಟ್ಟದ ಕೌಟುಂಬಿಕ ಸಮೀಕ್ಷೆಯು ಕಂಡುಕೊಂಡಿದೆ.
 
ಉತ್ತರ ಕರ್ನಾಟಕದ ಬಳ್ಳಾರಿ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಜ್ಞರ ಹುದ್ದೆಗಳು ಶೇಕಡ 20ರಷ್ಟೂ ಭರ್ತಿಯಾಗಿಲ್ಲ. ಇದೇ ರೀತಿ, ಅರಿವಳಿಕೆ ತಜ್ಞರ ಕೊರತೆ ಇಡೀ ರಾಜ್ಯದಲ್ಲಿ ತೀವ್ರವಾಗಿದೆ. ಉದಾಹರಣೆಗೆ: ಉಡುಪಿ, ಬೆಂಗಳೂರು, ವಿಜಯಪುರ, ರಾಯಚೂರು ಮತ್ತು ಯಾದಗಿರಿಯ ಯಾವ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಅರಿವಳಿಕೆ ತಜ್ಞರಿಲ್ಲ.
 
ಹಾಗಾಗಿ, ಉತ್ತರ ಕರ್ನಾಟಕ ಭಾಗದ ಯಾವುದೇ ಸಮುದಾಯ ಆರೋಗ್ಯ ಕೇಂದ್ರವು ಹೆರಿಗೆ ಶಸ್ತ್ರಚಿಕಿತ್ಸೆ ಅಥವಾ ಇತರ ಹೆಚ್ಚಿನ ಸೇವೆಗಳನ್ನು ನೀಡಲು ಸಜ್ಜುಗೊಂಡಿಲ್ಲ. ಇಂಥ ಸೇವೆಗಳು ಇಲ್ಲಿ ಇರಬೇಕಿತ್ತು. ಜೀವರಕ್ಷಕ ಕ್ರಮಗಳನ್ನು ಕೈಗೊಳ್ಳುವ ಸಾಮರ್ಥ್ಯ ಇರುವ ನುರಿತ ವೈದ್ಯರು ಇಲ್ಲದ ಕಾರಣ ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಗೆ ಎಡತಾಕುವುದು ಅನಿವಾರ್ಯವಾಗುತ್ತದೆ. ಅಥವಾ ಅವರು ದೂರದ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗುತ್ತದೆ.

ಉತ್ತರ ಕರ್ನಾಟಕದ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲೂ ಎಲ್ಲ ಸೌಲಭ್ಯಗಳು ಇಲ್ಲ. ಎಂಎಂಆರ್ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಆಯ್ಕೆಯಾದರೂ ಇದೆ. ಅಲ್ಲಿನ ಸೇವಾ ವೆಚ್ಚಗಳು ದುಬಾರಿ ಆಗಿದ್ದರೂ, ಅವು ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ.
 
ಆರೋಗ್ಯ ಸೂಚ್ಯಂಕಗಳಲ್ಲಿ ಪ್ರಾದೇಶಿಕ ಅಸಮಾನತೆ ಎಂಬುದು ದೇಶದುದ್ದಕ್ಕೂ  ಕಂಡುಬರುವಂಥದ್ದು. ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಸೂಚ್ಯಂಕಗಳು ಮುಂಚೂಣಿ ಜಿಲ್ಲೆಗಳ ಸೂಚ್ಯಂಕಗಳಿಗಿಂತ ತೀರಾ ಹಿಂದಿವೆ. ಎಂಎಂಆರ್ ಸಂಖ್ಯೆಯನ್ನು ಇಂಥದ್ದೊಂದು ಸೂಚ್ಯಂಕವೆಂದು ಪರಿಗಣಿಸಿದರೆ, ವಿಶೇಷ ಆರೋಗ್ಯ ಸೇವೆಗಳ ಲಭ್ಯತೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿಸಿದರೆ ನೂರಾರು ಜನ ತಾಯಂದಿರ ಹಾಗೂ ಶಿಶುಗಳ ಜೀವ ಉಳಿಸಬಹುದು ಎಂಬುದು ನಮಗೆ ಅರಿವಾಗುತ್ತದೆ. ಮಾತೃ ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದಾದ ಅಸಾಕ್ಷರತೆ ಹಾಗೂ ಸಣ್ಣ ವಯಸ್ಸಿನಲ್ಲೇ ಮದುವೆ ಆಗುವ ಸಾಮಾಜಿಕ ಸಮಸ್ಯೆಗಳನ್ನು ಉಪೇಕ್ಷಿಸದೆಯೇ ಈ ಲೇಖನವು ನಮ್ಮ ಸರ್ಕಾರ ತಕ್ಷಣ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಗಮನ ನೀಡುತ್ತದೆ.
 
ಪ್ರಮುಖ ಹುದ್ದೆಗಳು ಖಾಲಿ ಇರುವ ಕಾರಣ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆ ಸೌಲಭ್ಯ ಉತ್ತಮವಾಗಿರುವ ಸ್ಥಳಗಳಲ್ಲಿ ಈ ಕೊರತೆಯು ಗರ್ಭಿಣಿಯರ ಜೀವಕ್ಕೆ ಅಷ್ಟೊಂದು ಅಪಾಯವಾಗಿ ಕಾಣಿಸಲಾರದೇನೋ. ಆದರೆ, ಖಾಸಗಿ ಆಸ್ಪತ್ರೆಗಳ ಆಯ್ಕೆ ಕಡಿಮೆ ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲದಿರುವುದು ಸಮಸ್ಯೆ ಸೃಷ್ಟಿಸುತ್ತದೆ. ಇಂಥ ಸ್ಥಳಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡುವುದು ಅನಿವಾರ್ಯ.
 
ಇದನ್ನು ಮಾಡುವುದು ಹೇಗೆ? ಬಳ್ಳಾರಿ, ವಿಜಯಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 44 ಸಮುದಾಯ ಆರೋಗ್ಯ ಕೇಂದ್ರಗಳಿವೆ ಎಂಬುದು ಅಂಕಿ–ಅಂಶಗಳಿಂದ ಗೊತ್ತಾಗುತ್ತದೆ. ಅಂದರೆ, ಈ ಪ್ರದೇಶದಲ್ಲಿ 44 ಜನ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರ ನೇಮಕ ಆಗಬೇಕು.
 
ಆಗ ಈ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು, ಹೆರಿಗೆಯಂತಹ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಸಾಧ್ಯ. ಇಲ್ಲಿ ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ: ವೈದ್ಯಕೀಯ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲದ ಮಾಹಿತಿ ತರಿಸಿಕೊಂಡು, ತಜ್ಞವೈದ್ಯರು ಎಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗುರುತಿಸಿ ಅವರನ್ನು ಉತ್ತರ ಕರ್ನಾಟಕದ ಕಡೆ ನಿಯೋಜಿಸಬೇಕು.
 
‘ವೈದ್ಯ ಮತ್ತು ಶಸ್ತ್ರವೈದ್ಯ ಕಾಲೇಜು’ (ಸಿಪಿಎಸ್) ಹಾಗೂ ಇದೇ ಮಾದರಿಯ ಕೋರ್ಸ್‌ಗಳಿಗೆ ಸರ್ಕಾರ ಮಾನ್ಯತೆ ನೀಡಬೇಕು. ಈ ಕೆಲಸವನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಈಗಾಗಲೇ ಮಾಡಿವೆ. ಸಿಪಿಎಸ್ ಎಂಬುದು ಎಂಬಿಬಿಎಸ್‌ ಪದವಿ ಪಡೆದವರಿಗೆ ಇರುವ ಆರು ತಿಂಗಳ ಅವಧಿಯ ಒಂದು ಡಿಪ್ಲೊಮಾ ಕೋರ್ಸ್‌. ಈ ಕೋರ್ಸ್‌ ಮುಗಿಸಿದವರನ್ನು ತಜ್ಞವೈದ್ಯರಾಗಿ ನೇಮಿಸಿಕೊಳ್ಳಬಹುದು.
 
ಸಮಸ್ಯೆಗೆ ಪರಿಹಾರ ನಮಗೆ ಕೈಗೆಟಕುವಂತೆಯೇ ಇದೆ. ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಂಡು ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಮಹಿಳೆಯರ ಆರೋಗ್ಯ ಅವಶ್ಯಕತೆಗಳನ್ನು ಪೂರೈಸಬಹುದು. ಸಾವಿರಾರು ಅಮ್ಮಂದಿರು ಹಾಗೂ ಶಿಶುಗಳ ಜೀವ ಕಾಯಲು ಇದನ್ನು ಪ್ರಥಮ ಆದ್ಯತೆಯ ಕೆಲಸವನ್ನಾಗಿ ಮಾಡಬೇಕು.
ಲೇಖಕಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಬೋಧಕಿ, ಸಂಶೋಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT