ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌ ಜಾಗ ರಿಯಲ್‌ ಎಸ್ಟೇಟ್‌ ಕಂಪೆನಿಗಳ ಪಾಲಾಗುವ ಆತಂಕ

Last Updated 23 ಮೇ 2017, 19:53 IST
ಅಕ್ಷರ ಗಾತ್ರ
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಕ್ಕೆ (ಕೆಎಂಎಫ್‌) ಕಚೇರಿ ನಿರ್ಮಿಸಲು ರಾಜ್ಯ ಸರ್ಕಾರ ಕೋರಮಂಗಲದಲ್ಲಿ ನೀಡಿದ್ದ ಜಾಗ ಈಗ   ರಿಯಲ್‌ ಎಸ್ಟೇಟ್‌ ಕಂಪೆನಿಗಳ ಪಾಲಾಗುತ್ತಿದೆ.
 
ಸರ್ಕಾರ 1986 ಮತ್ತು 1998ರಲ್ಲಿ ಎರಡು ಪ್ರತ್ಯೇಕ ಆದೇಶ ಮಾಡಿ ಒಟ್ಟು  4.14 ಎಕರೆ ಜಾಗವನ್ನು (ಸರ್ವೆ ಸಂಖ್ಯೆ– 71, 2, 3 ಮತ್ತು 4) ಕೆಎಂಎಫ್‌ಗೆ ನೀಡಿದೆ. ಆದರೆ, 10 ವರ್ಷ ಕಳೆದರೂ ಕೆಎಂಎಫ್‌ ಆ ಜಾಗದಲ್ಲಿ ಯಾವುದೇ ಕಚೇರಿಗಳನ್ನು ನಿರ್ಮಿಸಲಿಲ್ಲ.  
 
2007ರಲ್ಲಿ ನಡೆದ ಕೆಎಂಎಫ್‌ 189ನೇ ಆಡಳಿತ ಮಂಡಳಿ ಸಭೆಯಲ್ಲಿ, ಸರ್ಕಾರ ನೀಡಿರುವ ಜಾಗದಲ್ಲಿ 2.16 ಎಕರೆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಅದರಿಂದ ಪ್ರತಿ ತಿಂಗಳು ₹ 25 ಲಕ್ಷ ಬಾಡಿಗೆ ಪಡೆಯಲು ನಿರ್ಣಯಿಸಲಾಗಿತ್ತು. ಅನಂತರ ಒಡಂಬಡಿಕೆಯಲ್ಲಿ ಮೂರು ತಿಂಗಳಿಗೆ 35 ಲಕ್ಷ ಬಾಡಿಗೆ ಎಂದು ನಮೂದಿಸಲಾಗಿದೆ.
 
ಅದರಂತೆ ‘ಪಿವಿಕೆ ಕೋರಮಂಗಲ ಡೆವಲಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌’ಗೆ 2.16 ಎಕರೆ ಜಾಗವನ್ನು 30 ವರ್ಷಗಳವರೆಗೆ ಗುತ್ತಿಗೆ ನೀಡಲಾಗಿದೆ. ಅಗತ್ಯವಾದರೆ ಇನ್ನೂ 10 ವರ್ಷ ಗುತ್ತಿಗೆ ಅವಧಿ ವಿಸ್ತರಿಸಲು ಅವಕಾಶವಿದೆ. ಈ ಜಾಗದಲ್ಲಿ ವಾಣಿಜ್ಯ ಕಟ್ಟಡದ ನಿರ್ಮಾಣ ಇನ್ನೂ ಮುಂದುವರಿಯುತ್ತಿದೆ.
 
ಕುತೂಹಲದ ಸಂಗತಿ ಎಂದರೆ, ಪಿವಿಕೆ ಕೋರಮಂಗಲ ಡೆವಲಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಜಂಟಿ ಸಹಭಾಗಿತ್ವ ಅಭಿವೃದ್ಧಿ ಯೋಜನೆಯಡಿ (ಜೆಡಿಎ) 2011ರಲ್ಲಿ ಮತ್ತೊಂದು ಪ್ರತಿಷ್ಠಿತ ರಿಯಲ್‌ ಎಸ್ಟೇಟ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಕ್ಕಂತೆ ಆ ಕಂಪೆನಿ ₹ 9 ಕೋಟಿ ಠೇವಣಿ ಇರಿಸಿದೆ.
 
ಈ ಒಪ್ಪಂದದ ಪ್ರಕಾರ ಅಭಿವೃದ್ಧಿಪಡಿಸಿದ ವಾಣಿಜ್ಯ ಪ್ರದೇಶದಲ್ಲಿ ಶೇ 44ರಷ್ಟು ಪಿವಿಕೆ ಕೋರಮಂಗಲ ಡೆವಲಪ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮತ್ತು ಉಳಿದ ಶೇ 56ರಷ್ಟು ಠೇವಣಿ  ಇರಿಸಿದ ಮತ್ತೊಂದು ಕಂಪೆನಿಗೆ ಎಂದು ಹಂಚಿಕೆ ಮಾಡಿಕೊಳ್ಳಲಾಗಿದೆ. 
 
ಶೇ 56ರಷ್ಟು ಪ್ರದೇಶವನ್ನು ಪಡೆದ ಕಂಪೆನಿ ತನ್ನ ಜಾಗವನ್ನು ಯಾರಿಗಾದರೂ ಉಡುಗೊರೆ ಕೊಡಬಹುದು, ಮಾರಾಟ ಮಾಡಬಹುದು ಎಂಬುದೂ ಈ ಒಪ್ಪಂದಲ್ಲಿದೆ. ಆದರೆ, ಈ ಜಾಗದ ಮೂಲ ಹಕ್ಕುದಾರ ಕೆಎಂಎಫ್‌   ಸಂಸ್ಥೆ   ಒಡಂಬಡಿಕೆಯಲ್ಲಿ ಯಾವುದೇ ರೀತಿ ಭಾಗಿದಾರ ಅಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಕೆಎಂಎಫ್‌ನ ಯಾವುದೇ ಪ್ರತಿನಿಧಿಗಳು ಸಿದ್ಧರಿಲ್ಲ, ದೂರವಾಣಿ ಕರೆಯನ್ನೂ ಸ್ವಿಕರಿಸುತ್ತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT