ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಕ್ಕೆ ರಂಗುತಂದ ಕೆಂಪು ಸೇವಂತಿ!

Last Updated 24 ಮೇ 2017, 5:05 IST
ಅಕ್ಷರ ಗಾತ್ರ

ದಾವಣಗೆರೆ: ‘ನಾನು ಹೂವಿನ ಕೃಷಿ ಮಾಡದೇ ಇದ್ದಿದ್ದರೆ ನನ್ನ ಮೂವರು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಪುಷ್ಪಕೃಷಿಯೇ  ಇಷ್ಟು ವರ್ಷಗಳಿಂದ ನನ್ನ ಕುಟುಂಬವನ್ನು ಸಲಹಿಕೊಂಡು ಬಂದಿದೆ’ ಎಂದು ಭಾವುಕರಾಗಿ ಹೇಳಿದವರು ಕೃಷಿಕ ತಿಮ್ಮಪ್ಪ.

ತಾಲ್ಲೂಕಿನ ಕಾಡಜ್ಜಿಯ ಮೂಲಕ ಮಲ್ಲಾಪುರಕ್ಕೆ ಸಾಗಿದರೆ ಎಡಬದಿಯ ಹೊಲಗಳಲ್ಲಿ ಕೆಂಪು ಬಣ್ಣದ ಹೂಗಳು ಕೈಬೀಸಿ ಕರೆಯುತ್ತವೆ. ಅಲ್ಲೇ ಗಿಡಗಳ ಆರೈಕೆ ಮಾಡುತ್ತಿದ್ದ ತಿಮ್ಮಪ್ಪ ಪುಷ್ಪಕೃಷಿಯ ಬಗ್ಗೆ ಹೀಗೆ ಅನುಭವ ಹೇಳಿದರು.

ಆರು ಮಂದಿ ಸಹೋದರರ 10 ಎಕರೆ ಜಮೀನಿನ ಪೈಕಿ ಸುಮಾರು ಒಂದೂವರೆ ಎಕರೆಯಷ್ಟು ಪ್ರದೇಶದಲ್ಲಿ ಕೆಂಪು ಸೇವಂತಿ ಕೃಷಿ ಮಾಡಿದ್ದಾರೆ. ಕಾಲು ಎಕರೆ ಯಂತೆ ವಿಂಗಡಿಸಿ ಹೂವಿನ ಗಿಡಗಳನ್ನು ನಾಟಿ ಮಾಡಿರುವ ಅವರು 10 ವರ್ಷಗಳಿಂದ ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಕೃಷಿ ಹೇಗೆ?:   ‘ಗಿಡಗಳನ್ನು ನಾಟಿ ಮಾಡಿ ಒಂದೂವರೆ ತಿಂಗಳಿಗೆ ಹೂ ಬಿಡಲು ಆರಂಭವಾಗುತ್ತದೆ. ದಿನ ಬಿಟ್ಟು ದಿನ ಹೂ ಕೊಯ್ಯಲು ಸಿಗುತ್ತದೆ. ನಗರದಲ್ಲಿ ಹೆಚ್ಚಿನ ಬೇಡಿಕೆ ಇದೆ. ದಾವಣಗೆರೆಯೂ ಹತ್ತಿರದಲ್ಲಿರುವ ಕಾರಣ ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟವಾಗಿಲ್ಲ. ಒಂದು ಕೆ.ಜಿ ಹೂವಿಗೆ ₹ 40ರಿಂದ ₹ 100ರವರೆಗೆ ದರ ಸಿಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಹೂವಿಗೆ ಭಾರಿ ಬೇಡಿಕೆ ಇರುತ್ತದೆ. ಹಾಗಾಗಿ ನನಗೆ ಈ ಕೃಷಿಯಲ್ಲಿ ನಷ್ಟವಂತೂ ಆಗಿಲ್ಲ’ ಎಂದರು.

‘ನಮ್ಮ ಜಮೀನಿಗೆ ಬೇಕಾದ ಬಿತ್ತನೆ ಬೀಜವನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ. ಇದರಿಂದಾಗಿ ಹಣ ಉಳಿಕೆಯಾಗುತ್ತದೆ ಹಾಗೂ ಗುಣಮಟ್ಟದ ಬೀಜವೂ ಸಿಗುತ್ತದೆ. ಮೊಳಕೆಯನ್ನು ತಂದು ಬದುವಿನಲ್ಲಿ ನಾಟಿ ಮಾಡಬೇಕು.

ಅದಕ್ಕೆ ನಿಯಮಿತವಾಗಿ ನೀರು, ಗೊಬ್ಬರ ಹಾಗೂ ಕೀಟನಾಶಕ ನೀಡಬೇಕು. ಡಿಎಪಿ ಮತ್ತು ಯೂರಿಯಾ ಬಳಕೆ ಮಾಡಬಾರದು. ಉಳಿದಂತೆ ಕೊಟ್ಟಿಗೆ ಗೊಬ್ಬರ, ಪೊಟ್ಯಾಷ್ ಬಳಸಬಹುದು. ಆರೋಗ್ಯವಂತ ಗಿಡವು ಸರಾಸರಿ ಆರು ತಿಂಗಳು ಬಾಳಿಕೆ ಬರುತ್ತದೆ. ಅತ್ಯುತ್ತಮ ಆರೈಕೆಯಿದ್ದರೆ ಒಂದು ವರ್ಷದವರೆಗೂ ಹೂ ನೀಡಬಹುದು’ ಎನ್ನುತ್ತಾರೆ ಅವರು.

ನೀರಿನ ಸದ್ಬಳಕೆ: ‘ಜಮೀನಿಗೆ ಕೊಳವೆಬಾವಿ ನೀರು ಹಾಯಿಸ್ತೇವೆ. ಎರಡು ಇಂಚಿನಷ್ಟು ನೀರಿನಲ್ಲಿ 10 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಸೌರವಿದ್ಯುತ್ ಪಂಪ್‌ಸೆಟ್‌ ಕೂಡ ಅಳವಡಿಸಿಕೊಂಡಿದ್ದೇವೆ. ಹೀಗಾಗಿ ನನ್ನ ಅಣ್ಣ ತಮ್ಮಂದಿರ ಜಮೀನಿನಲ್ಲಿ ಮೆಕ್ಕೆಜೋಳ ಹಾಗೂ ರಾಗಿ ಹೊಲಗಳಿಗೆ ಬರದಲ್ಲೂ ನೀರು ಸಿಗ್ತಿದೆ’  ಎಂದು ಅವರು ಮುಗುಳ್ನಗೆ ಬೀರಿದರು.

* * 

ರೈತರು ಮಿಶ್ರಬೆಳೆಯತ್ತ ಆಸಕ್ತಿ ತೋರಬೇಕು. ಇದರಿಂದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.
ಬಿ.ದುರ್ಗಪ್ಪ
ಸಹಾಯಕ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT