ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ರಹಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

Last Updated 24 ಮೇ 2017, 6:33 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಭೂಮಿ ಮತ್ತು ವಸತಿ ರಹಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜೂನ್‌ 12ರಿಂದ ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯ ಗಾಂಧೀಜಿ ಪ್ರತಿಮೆ ಬಳಿ  ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಭೂಮಿ ಮತ್ತು ವಸತಿ ವಂಚಿತರ ಸಮಿತಿಯ ಮುಖಂಡ ಸಿರಿಮನೆ ಶ್ರೀಧರ್‌ ಹೇಳಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಮಿ ಮತ್ತು  ವಸತಿರಹಿತರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು ವಿಫಲರಾಗಿದ್ದಾರೆ. ಪದೇ ಪದೇ ಮಾತು ತಪ್ಪುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಧರಣಿ ನಡೆಸಲಾಯಿತು. ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಆಗ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದರು.

ಆದರೆ ಆ ಭರವಸೆಗಳನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಅವರನ್ನು ಪ್ರತಿ ಸಲ ಭೇಟಿಯಾದಾಗಲೂ ಮರೆತವರಂತೆ ನಾಟಕವಾಡುತ್ತಾರೆ’ ಎಂದು ಆರೋಪಿಸಿದರು.
‘ಮಡಿಕೇರಿಯ ಡಿಡ್ಡಳ್ಳಿ ಆದಿವಾಸಿಗಳ ಸಮಸ್ಯೆ ಬಗೆಹರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅರಣ್ಯಾಧಿಕಾರಿಗಳನ್ನು ಹೆದರಿಸುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ.

ಆದಿವಾಸಿಗಳು ವಾಸಿಸುತ್ತಿರುವ ಜಾಗ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ನಾವುಗಳು ದಾಖಲೆ ಸಮೇತ ಮುಖ್ಯಮಂತ್ರಿ ಅವರಿಗೆ ವಿವರಿಸಿದ್ದೇನೆ. ನಮ್ಮ ಮಾತು ಒಪ್ಪುವ ಮುಖ್ಯಮಂತ್ರಿಯವರು ಹೊರಗಡೆ ಬಂದಾಗ ಬೇರೆಯದೇ ರೀತಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.

‘ಭೂಮಿ ಮತ್ತು ವಸತಿ ರಹಿತರಿಗೆಲ್ಲ ಭೂಮಿ, ವಸತಿ ನೀಡಲು ಏಕ ಗವಾಕ್ಷಿ ರಚಿಸಬೇಕು. ಸಮಸ್ಯೆಗಳನ್ನು ಬಗೆಹರಿಸಲು  ಹೋರಾಟಗಾರರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಬೇಕು. ಈ ಎರಡೂ ಬೇಡಿಕೆಗಳನ್ನು ಈಡೇರಿಸುವವರೆಗೂ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಸಮಿತಿಯ ಸಿ.ಯತಿರಾಜು ಮಾತನಾಡಿ,‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹೋರಾಟ ನಡೆಸುತ್ತಿರುವ ಎಲ್ಲ ಹೋರಾಟಗಾರರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ಐಕ್ಯ ಹೋರಾಟವಾಗಿದೆ. ಇದೊಂದು ದೊಡ್ಡ ಧ್ವನಿಯಾಗಲಿದೆ’ ಎಂದರು.

ಸಮಿತಿಯ ತಿಪಟೂರು ಕೃಷ್ಣ ಮಾತನಾಡಿ, ‘ ಕೈಗಾರಿಕೆಗಳಿಗೆ ನೂರಾರು ಎಕರೆ ಭೂಮಿಯನ್ನು ಕೊಡುವ ಸರ್ಕಾರವು ರೈತರಿಗೆ ಎರಡು– ಮೂರು ಎಕರೆ ಭೂಮಿ ಕೊಡುತ್ತಿಲ್ಲ. ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಹಾಕಿಕೊಂಡಿದ್ದರೂ ಅಧಿಕಾರಿಗಳು ಖಾತೆ ಮಾಡಿಕೊಡುತ್ತಿಲ್ಲ’ ಎಂದು ದೂರಿದರು. ಗೋಷ್ಠಿಯಲ್ಲಿ ಸಮಿತಿಯ ಕುಮಾರ ಸಮತಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT