ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕತೆ ಅಳವಡಿಕೆಗೆ ಒತ್ತು ನೀಡಿ

Last Updated 24 ಮೇ 2017, 7:47 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಕ್ಷೇತ್ರದಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಕೃಷಿ ಇಲಾಖೆ ಆಯುಕ್ತ ಸತೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ‘ಕೃಷಿ ಭಾಗ್ಯ, ಭೂ ಸಮೃದ್ಧಿ, ಕೃಷಿ ಯಂತ್ರಧಾರೆ ಯೋಜನೆಗಳ ಅನುಷ್ಠಾನ’ ಕುರಿತ ಸಮಾಲೋಚನೆ ಹಾಗೂ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೂ ಚೇತನ ಯೋಜನೆಯಡಿ ಕಳೆದ ಬಾರಿ ನಿಗದಿಯಾಗಿದ್ದ ತಾಂತ್ರಿಕತೆಗಿಂತ ಹೆಚ್ಚಿನ ತಾಂತ್ರಿಕತೆ ಬಳಕೆ ಗುರಿಯನ್ನು ಈ ಬಾರಿ ನಿಗದಿಪಡಿಸಿಕೊಳ್ಳಿ. ಕೃಷಿ ಚಟುವಟಿಕೆಯಲ್ಲಿನ ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿ ಗಳು ರೈತಾಪಿ ವರ್ಗಕ್ಕೆ ತಿಳಿಸಬೇಕು ಎಂದು ಅವರು ತಾಕೀತು ಮಾಡಿದರು.

ನೂತನ ತಂತ್ರಜ್ಞಾನ ಕುರಿತು ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಭೂ ಸಮೃದ್ಧಿ ಯೋಜನೆಗಳನ್ನು ಸಕಾರಾತ್ಮಕ ವಾಗಿ ಬಳಸಿಕೊಳ್ಳಿ. ಕೃಷಿ ವಿಶ್ವವಿದ್ಯಾಲಯದ ಸಹಭಾಗಿತ್ವ ಪಡೆದು, ಯಂತ್ರಗಳ ಉಪಯೋಗದ ಮಾಹಿತಿ ವಿಸ್ತರಿಸುವ ಕೆಲಸ ಮಾಡಿ. ಈ ನಿಟ್ಟಿನಲ್ಲಿ ತಾಲ್ಲೂಕು ಕೃಷಿ ಅಧಿಕಾರಿಗಳ ಜತೆಯೂ ಸಮಾಲೋಚನೆ ನಡೆಸಿ ಎಂದು ತಿಳಿಸಿದರು.

ಕೃಷಿ ಭಾಗ್ಯ ಯೋಜನೆ ಕುರಿತು ಚರ್ಚೆ: ಜೌಗು ಪ್ರದೇಶವಿರುವ ಕಡೆ ಕೃಷಿಭಾಗ್ಯ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲು ಪಾಲಿಥೀನ್ ಹೊದಿಕೆಯ ಅವಶ್ಯಕತೆ ಬೇಕೆ? ಬೇಡವೇ? ಹಾಗೂ ಮಲೆನಾಡಿನಲ್ಲಿ ಚೌಕಾಕಾರ, ಕರಾವಳಿ ಭಾಗದಲ್ಲಿ ಆಯತಾಕಾರದಲ್ಲಿ ಹೊಂಡ ನಿರ್ಮಾಣದ ಕುರಿತಂತೆ ಅಧಿಕಾರಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿಹೊಂಡ ನಿರ್ಮಿಸಲು ತೋಟ ಗಾರಿಕಾ ವ್ಯಾಪ್ತಿಯ ರೈತರಿಗೆ ಅವಕಾಶ ವಿಲ್ಲ, ಇದರಿಂದ ಬಹುತೇಕ ರೈತರಿಗೆ ಈ ಪ್ರಯೋಜನವೇ ಸಿಗುವುದಿಲ್ಲ ಎಂಬ ವಿಚಾರವೂ ಕೆಲಕಾಲ ಚರ್ಚೆಯಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸತೀಶ್, ಕೃಷಿ ಭಾಗ್ಯ ಯೋಜನೆಯಡಿ ಒಂದು ವೇಳೆ ಜೂನ್ ತಿಂಗಳೊಳಗೆ ಕೃಷಿ ಹೊಂಡ ನಿರ್ಮಿಸದೆ ಇದ್ದಲ್ಲಿ, ವರ್ಷದ ಕೊನೆಯವರೆಗೂ ನಿರ್ಮಿಸಲು ಸಾಧ್ಯ ವಾಗುವುದಿಲ್ಲ. ಆದ್ದರಿಂದ ಯೋಜನೆಯ ಮೂಲ ಉದ್ದೇಶ ಈಡೇರುವುದರ ಕಡೆ ಗಮನಹರಿಸಿ ಎಂದರು.

ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಅಧಿಕಾರಿಗಳು ಭಾಗವಹಿಸಿದ್ದರು. ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಶಿವಮೂರ್ತಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ರಾಕೇಶ್ ಕುಮಾರ್, ಕೃಷಿ ವಿಶ್ವವಿದ್ಯಾಲಯ ವಿಸ್ತರಣಾಧಿಕಾರಿ ಡಾ.ಟಿ.ಎಚ್. ಗೌಡ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಾದ ಅಂಬಿಕಾ, ರೂಪಾ ಪಾಲ್ಗೊಂಡಿದ್ದರು.

* * 

ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಹಸಿರೆಲೆ ಗೊಬ್ಬರ ಬಳಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಸ್ಪಷ್ಟ ಗುರಿ ಇರಿಸಿಕೊಳ್ಳಿ
ಸತೀಶ್, ಕೃಷಿ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT