ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಿಂಗಳಿಗೊಮ್ಮೆ ಪರಿಶಿಷ್ಟ ಪಂಗಡದ ಸಭೆ

Last Updated 24 ಮೇ 2017, 19:48 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದಲ್ಲಿರುವ ಪರಿಶಿಷ್ಟ ಪಂಗಡದ ಮುಖಂಡರ ಸಭೆಯನ್ನು ದೇಶದಾದ್ಯಂತ ಕನಿಷ್ಠ ಎರಡು ತಿಂಗಳಿಗೊಮ್ಮೆ ಏರ್ಪಡಿಸಲು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ನಿರ್ಧರಿಸಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬುಧವಾರ ಇಲ್ಲಿ ನಡೆದ ಪಕ್ಷದ ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರ ರಾಷ್ಟ್ರಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರಂತೆಯೇ ನಮ್ಮ ಸಮುದಾಯದ ಜನರೂ ಪಕ್ಷದ ಬೆಂಬಲಿಗರಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಕಡೆಗಣಿಸುವುದು ಸರಿಯಲ್ಲ’ ಎಂದು ಪರಿಶಿಷ್ಟ ಪಂಗಡದ ಮುಖಂಡರು ಸಭೆಯಲ್ಲಿ ವರಿಷ್ಠರಿಗೆ ಮನವರಿಕೆ ಮಾಡಿದರು.

ಕಾಂಗ್ರೆಸ್‌ ಸರ್ಕಾರವು ಈ ಹಿಂದೆ ಅನೇಕ ಯೋಜನೆಗಳೊಂದಿಗೆ ವಿವಿಧ ಸಮುದಾಯಗಳ ವಿಶ್ವಾಸವನ್ನು ಸಂಪಾದಿಸಿದೆ. ಪರಿಶಿಷ್ಟ ಪಂಗಡದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಣ್ಯ ಕಾಯ್ದೆಯನ್ನು ಸಮಗ್ರವಾಗಿಜಾರಿಗೊಳಿಸಿ,  ಹಾಡಿಗಳಲ್ಲಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ಭೂಮಿ ಹಂಚುವ ಮೂಲಕ ಪಕ್ಷದತ್ತಲೇ ಒಲವು ಇರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯವನ್ನು ಪ್ರತಿನಿಧಿಸಿದ್ದ ಅನೇಕ ಮುಖಂಡರು ಮನವಿ ಸಲ್ಲಿಸಿದರು.

ಪರಿಶಿಷ್ಟ ಪಂಗಡದ ಮುಖಂಡರು ಸಮುದಾಯದ ಜನರಿಂದ ದೂರ ಉಳಿಯದೆ ಅವರನ್ನು ವಿಶ್ವಾಸದಿಂದ ಕಾಣುವ ಮೂಲಕ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ರಾಹುಲ್‌ ಗಾಂಧಿ ಸೂಚಿಸಿದರು.

ರಾಜ್ಯದಲ್ಲಿ ಜುಲೈ ಅಂತ್ಯಕ್ಕೆ ಪರಿಶಿಷ್ಟ ಪಂಗಡದ ಸಮಾವೇಶ ಏರ್ಪಡಿಸಲು ನಿರ್ಧರಿಸಲಾಗಿದ್ದು, ರಾಹುಲ್‌ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ತಿಳಿಸಿದರು. ಶಾಸಕರಾದ ಸತೀಶ ಜಾರಕೊಹೊಳಿ, ತುಕಾರಾಂ, ರಾಜೇಶ, ಬಿ.ಎಂ. ನಾಗರಾಜ, ಕೆಪಿಸಿಸಿ ಎಸ್‌.ಟಿ. ವಿಭಾಗದ ಅಧ್ಯಕ್ಷ ಟಿ.ಈಶ್ವರ, ವಿ.ಎನ್‌. ಗಿರಿಮಲ್ಲಪ್ಪ, ರಘುಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಕೇವಲ ಕೌಟುಂಬಿಕ ಸಮಸ್ಯೆ: ಜಾರಕಿಹೊಳಿ
ನವದೆಹಲಿ:
‘ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಅಲ್ಲಿ ಕೇವಲ ನಮ್ಮ ಕುಟುಂಬ ಸದಸ್ಯರ ನಡುವೆ ಗೊಂದಲ ಸೃಷ್ಟಿಯಾಗಿದ್ದು, ಅದನ್ನು ಶೀಘ್ರವೇ ಬಗೆಹರಿಸಿಕೊಳ್ಳಲಾಗುವುದು’ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಎಐಸಿಸಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡದ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಕುಟುಂಬದ ಸದಸ್ಯರ ನಡುವಿನ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯನಾದ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಈ ಕುರಿತು ವರಿಷ್ಠರು ಸೋಮವಾರವೇ ಚರ್ಚಿಸಿದ್ದಾರೆ. ಯಾವುದೇ ರೀತಿಯ ಹೇಳಿಕೆ ನೀಡದಂತೆ ನಿರ್ಬಂಧ ಹೇರಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಸಮಸ್ಯೆಗಳು ಯಾವುವು ಎಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಯಾವ ಕ್ಷೇತ್ರ ದಿಂದ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT