ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣ ಆರೋಪ

ಎ. ಮಂಜು ವಿರುದ್ಧ ಹಾಸನ ಜಿಲ್ಲಾ ನಾಯಕರ ಆಕ್ರೋಶ
Last Updated 24 ಮೇ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಮತ್ತು ಬಳ್ಳಾರಿಯಲ್ಲಿ ಲಾಡ್‌ ಸಹೋದರರ ಭಿನ್ನಮತ ಬಯಲಿಗೆ ಬಂದ ಬೆನ್ನಲ್ಲೆ, ಸಚಿವ ಎ. ಮಂಜು, ‘ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಇತರ ನಾಯಕರನ್ನು ತುಳಿಯುತ್ತಿದ್ದಾರೆ’ ಎಂದು ಹಾಸನ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಧ್ವನಿ ಎತ್ತಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿಯಾಗಿ ದೂರು ಸಲ್ಲಿಸಲು ಬಂದ ಪ್ರಮುಖರು, ‘ಪರಿಶಿಷ್ಟರು, ಅಲ್ಪ ಸಂಖ್ಯಾತರು, ಲಿಂಗಾಯತ ಮುಖಂಡ ರನ್ನು ಮಂಜು ಕಡೆಗಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚುತ್ತಿದೆ’ ಎಂದೂ ದೂರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮೂರು ದಿನಗಳಿಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಜೊತೆ ವೇಣುಗೋಪಾಲ್‌ ಪಕ್ಷದ ಜಿಲ್ಲಾ ಪ್ರಮುಖರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಮೈಸೂರು ವಿಭಾಗದ ಜಿಲ್ಲೆಗಳ ಮುಖಂಡರ ಜೊತೆ ಬುಧವಾರ ಸಭೆ ನಡೆಯಿತು.

ಮಂಜು ವಿರುದ್ಧ ದೂರು ನೀಡಲು ಬಂದ ಸ್ಥಳೀಯ ನಾಯಕರು, ವೇಣುಗೋಪಾಲ್‌ ಅವರನ್ನು ಭೇಟಿಯಾಗಲೇ ಬೇಕು ಎಂದು ಪಟ್ಟು ಹಿಡಿದರು. ಆಗ ಸ್ಥಳದಲ್ಲಿದ್ದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಸಮಾಧಾನಪಡಿಸಲು ಯತ್ನಿಸಿದರು. ಹಾಸನ ಜಿಲ್ಲೆಯ ನಾಯಕರ ಜೊತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿಸುವುದಾಗಿ ಪರಮೇಶ್ವರ್‌ ಭರವಸೆ ನೀಡಿದರು.

ದ.ಕ ನಾಯಕರಿಗೆ ವೇಣುಗೋಪಾಲ್‌ ಸಲಹೆ
ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಮುಖಂಡರ ಮಾತು ಆಲಿಸಿದ ವೇಣುಗೋಪಾಲ್‌, ‘ಕರಾವಳಿ ಜಿಲ್ಲೆಗಳ ನಾಯಕರು ಪಕ್ಷ ಸಂಘಟನೆಯಲ್ಲಿ ವಿಫಲರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರಾವಳಿ ಭಾಗದಲ್ಲಿ ಪಕ್ಷದ ಬಲವರ್ಧನೆ ಆಗಬೇಕಾಗಿದೆ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದೇ ಆ ಭಾಗದಲ್ಲಿ. ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಇದೆ. ಅಷ್ಟರೊಳಗೆ ಸಂಘಟನೆ ಚುರುಕುಗೊಳಿಸಬೇಕು. ಶಾಸಕರು ಕ್ಷೇತ್ರದ ಜನರ ನಿರಂತರ ಸಂಪರ್ಕದಲ್ಲಿ ಇರಬೇಕು. ಬಹಿರಂಗ ಹೇಳಿಕೆ ನೀಡಬಾರದು’ ಎಂದೂ ಅವರು ಸಲಹೆ ನೀಡಿದ್ದಾರೆ.

ಬಹಿರಂಗ ಹೇಳಿಕೆ ನೀಡಿದರೆ ಕಠಿಣ ಕ್ರಮ: ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಹಾನಿ ಉಂಟು ಮಾಡುವ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು  ವೇಣುಗೋಪಾಲ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ನೀಡಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಎದುರಿನಲ್ಲೇ ಕೊಪ್ಪಳದಲ್ಲಿ ಮುಖ್ಯಮಂತ್ರಿ ವಿರುದ್ಧ ಕೆಲವರು ಘೋಷಣೆ ಕೂಗಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ‘ಏನೇ ಅಸಮಾಧಾನ, ವಿರೋಧ ಇದ್ದರೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ಘಟಕಕ್ಕೆ ಸೂಚನೆ ನೀಡಿದ್ದಾರೆ. ಕೊಪ್ಪಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಎಚ್ಚರಿಕೆ ನೋಟಿಸ್‌ ನೀಡಲು ಅವರು ಸೂಚಿಸಿದ್ದಾರೆ.

ಅಂಬರೀಷ್‌ ಗೈರು:ಮಂಡ್ಯ ಜಿಲ್ಲೆಯ ನಾಯಕರ ಜೊತೆಗಿನ ಸಭೆಯಲ್ಲಿ ಸ್ಥಳೀಯ ಶಾಸಕ ಅಂಬರೀಷ್‌ ಮತ್ತು ಮಾಜಿ ಸಂಸದೆ ರಮ್ಯಾ ಗೈರಾಗಿದ್ದರು. 
‘ಮಾಫಿಯಾಗೆ ಮಣೆ ಹಾಕಬೇಡಿ’: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಟಿಕೆಟ್‌ ನೀಡಬೇಡಿ’ ಎಂದು ವೇಣುಗೋಪಾಲ್‌ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಸರ್ಕಾರದ ಯಾವುದೇ ತೀರ್ಮಾನದಲ್ಲಿ ನಾನು ಕೈ ಹಾಕುವುದಿಲ್ಲ. ಆದರೆ, ಪಕ್ಷದ ವಿಚಾರದಲ್ಲಿ ರಾಜಿ ಮಾಡಲ್ಲ. ಹಾಲಿ ಶಾಸಕರಾಗಲಿ ಅಥವಾ ಸೋತ ಅಭ್ಯರ್ಥಿಗಳಾಗಲಿ ಟಿಕೆಟ್‌ ಕೊಡಿ ಎಂದು ಬಾಯಿಬಿಟ್ಟು ಯಾರೊಬ್ಬರೂ ಕೇಳಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೊತೆ ಚರ್ಚೆ ವೇಳೆ ವೇಣುಗೋಪಾಲ್‌ ಸೂಚಿಸಿದ್ದಾರೆ.

ಎಡವಿ ಬಿದ್ದ ಮುಖ್ಯಮಂತ್ರಿ: ಸಭೆಯಲ್ಲಿ ಭಾಗವಹಿಸಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯ ಮೆಟ್ಟಿಲ ಬಳಿ ಎಡವಿದರು.  ಕಾಲಿಗೆ ಪಂಚೆ ಸಿಲುಕಿ ಎಡವಿದ ಮುಖ್ಯಮಂತ್ರಿ ಅವರ ಸಹಾಯಕ್ಕೆ ಸಚಿವ ರೋಷನ್ ಬೇಗ್ ಮತ್ತು ಇತರ ಮುಖಂಡರು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT