ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ ವೇತನ ಹೆಚ್ಚಳಕ್ಕೆ ಆಕ್ಷೇಪ

Last Updated 24 ಮೇ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ನ ನಾಲ್ವರು ಉನ್ನತ ಅಧಿಕಾರಿಗಳಿಗೆ ಗಮನಾರ್ಹ ಪ್ರಮಾಣದಲ್ಲಿ ವೇತನ ಹೆಚ್ಚಿಸಿರುವುದನ್ನು  ಐ.ಟಿ ಉದ್ಯೋಗಿಗಳ ಎರಡು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಮಾಹಿತಿ ತಂತ್ರಜ್ಞಾನ ಉದ್ದಿಮೆಯಲ್ಲಿ ಉದ್ಯೋಗಗಳು ಕಡಿತಗೊಳ್ಳುತ್ತಿರುವ ಸದ್ಯದ ಸಂದರ್ಭದಲ್ಲಿ, ಸಾಫ್ಟ್‌ವೇರ್‌ ದೈತ್ಯ ಸಂಸ್ಥೆಯ ಈ ನಿರ್ಧಾರ ಸರಿಯಲ್ಲ ಎನ್ನುವ ಟೀಕೆ ವ್ಯಕ್ತವಾಗಿದೆ.

ಸಂಸ್ಥೆಯ ಅಂತರ್ಜಾಲದಲ್ಲಿ ಪ್ರಕಟಗೊಂಡಿರುವ 2017ರ ವಾರ್ಷಿಕ ವರದಿಯ ಪ್ರಕಾರ, ನಾಲ್ವರು ಉನ್ನತ ಅಧಿಕಾರಿಗಳ ವೇತನ ಭತ್ಯೆಯನ್ನು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಐ.ಟಿ ಸಂಸ್ಥೆಗಳು ಉದ್ಯೋಗಿಗಳನ್ನು ಕೈಬಿಡುವ ಇಲ್ಲವೆ ವಜಾ ಮಾಡುವ ಪ್ರಮಾಣವು ವರ್ಷದಿಂದ ವರ್ಷಕ್ಕೆ  ಹೆಚ್ಚುತ್ತಿದೆ. ಇನ್ನೊಂದೆಡೆ ಉನ್ನತ ಅಧಿಕಾರಿಗಳ  ಕಾರ್ಯಕ್ಷಮತೆ ಆಧರಿಸಿದ  ವೇತನ ಹೆಚ್ಚಳದ ಹೆಸರಿನಲ್ಲಿ  ಷೇರು ರೂಪದಲ್ಲಿ ಉತ್ತೇಜನ ನೀಡಲಾಗುತ್ತಿದೆ’ ಎಂದು ಐ.ಟಿ ಉದ್ಯೋಗಿಗಳ ವೇದಿಕೆಯ  (ಎಫ್‌ಐಟಿಇ) ಪ್ರಧಾನ ಕಾರ್ಯದರ್ಶಿ  ಎಜೆ. ವಿನೋದ್‌ ಟೀಕಿಸಿದ್ದಾರೆ.

ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರದ ರಾಜಕಾರಣಿಗಳು ತಮ್ಮ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸಿಕೊಳ್ಳುವಂತೆ, ಸಾಫ್ಟ್‌ವೇರ್‌ ಉದ್ದಿಮೆಗಳ ಪ್ರಮುಖರು ಕೂಡ ಉದ್ಯೋಗಕ್ಕೆ ಎರವಾಗುತ್ತಿರುವ ತಂತ್ರಜ್ಞರ ಸಂಕಷ್ಟಗಳನ್ನು ನಿರ್ಲಕ್ಷಿಸಿ ತಮ್ಮ ವೇತನಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದು ತುಂಬ ನೋವಿನ ಸಂಗತಿಯಾಗಿದೆ’ ಎಂದು ಅವರು ವಿಷಾದಿಸಿದ್ದಾರೆ.

‘ಸಾಫ್ಟ್‌ವೇರ್‌ ಉದ್ಯೋಗಿಗಳು  ಪ್ರತಿ ದಿನ 10 ರಿಂದ 12 ಗಂಟೆಗಳವರೆಗೆ ಕೆಲಸ ಮಾಡಿದ್ದರಿಂದಲೇ ಇನ್ಫೊಸಿಸ್‌ ಸೇರಿದಂತೆ ಸಾಫ್ಟ್‌ವೇರ್‌ ಸಂಸ್ಥೆಗಳ ಉನ್ನತ ಅಧಿಕಾರಿಗಳು ತಮ್ಮ ವೇತನ ಹೆಚ್ಚಳ  ಆಗಿರುವುದನ್ನು ಮರೆಯಬಾರದು’ ಎಂದು ನ್ಯೂ ಡೆಮಾಕ್ರಟಿಕ್‌ ಲೇಬರ್‌ ಫ್ರಂಟ್‌ನ (ಎನ್‌ಡಿಎಲ್‌ಎಫ್‌) ಕಾನೂನು ಸಲಹೆಗಾರ ಸುರೇಶ ಅಭಿಪ್ರಾಯಪಟ್ಟಿದ್ದಾರೆ.

ಇನ್ಫೊಸಿಸ್‌ನ ವಾರ್ಷಿಕ ವರದಿ ಪ್ರಕಾರ, ವಿವಿಧ ವಿಭಾಗಗಳ ಅಧ್ಯಕ್ಷರಾದ ರಾಜೇಶ್‌ ಮೂರ್ತಿ, ಸಂದೀಪ್‌ ದದ್ಲಾನಿ, ಮೋಹಿತ್‌ ಜೋಷಿ ಮತ್ತು ಉಪ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವಿ ಕುಮಾರ್‌ ಅವರ ಒಟ್ಟಾರೆ ತಲಾ ವೇತನ ಹೆಚ್ಚಳವು ₹ 14 ಕೋಟಿಗಳಿಗಿಂತ ಹೆಚ್ಚಾಗಿದೆ. ಇದು ಕಾರ್ಯಕ್ಷಮತೆ ಆಧರಿಸಿದ ಷೇರು ರೂಪದ ಉತ್ತೇಜನವಾಗಿದೆ.

‘ಎಫ್‌ಐಟಿಇ’, ಐ.ಟಿ ಉದ್ಯೋಗಿಗಳ  ವೇದಿಕೆಯಾಗಿದೆ. ಬೆಂಗಳೂರು, ಪುಣೆ, ಚೆನ್ನೈ ಸೇರಿದಂತೆ ದೇಶದ 9 ನಗರಗಳಲ್ಲಿ ಅಸ್ತಿತ್ವದಲ್ಲಿ ಇದೆ.

ವಿಶಾಲ್ ಸಿಕ್ಕಾ ವೇತನ ಕುಸಿತ
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶಾಲ್‌ ಸಿಕ್ಕಾ ಅವರ ವೇತನವು 2016–17ರಲ್ಲಿ ಕಡಿಮೆಯಾಗಿದೆ. 2015–16ರಲ್ಲಿ  ₹ 48.73 ಕೋಟಿಗಳಷ್ಟಿದ್ದ ನಗದು ವೇತನವು ₹ 16 ಕೋಟಿಗಳಿಗೆ (ಶೇ 67) ಇಳಿದಿದೆ. ಬೋನಸ್‌ ಮೊತ್ತ ಕಡಿಮೆಯಾಗಿರುವುದೇ ಇದಕ್ಕೆ ಕಾರಣ.

ಬೋನಸ್‌ ಮತ್ತು ಷೇರು ನೀಡಿಕೆಯ ಒಟ್ಟು ಮೊತ್ತವು   ₹ 48.73 ಕೋಟಿಗಳಿಂದ ₹45 ಕೋಟಿಗಳಿಗೆ (ಶೇ 7ರಷ್ಟು) ಕಡಿಮೆಯಾಗಿದೆ. 2017ರ ಹಣಕಾಸು ವರ್ಷದಲ್ಲಿ ಅವರ ಮೂಲ ವೇತನವು ಕೂಡ  ₹ 5.85 ಕೋಟಿಗಳಿಂದ  ₹ 6.50 ಕೋಟಿಗಳಿಗೆ ಇಳಿದಿದೆ. ಸಿಕ್ಕಾ ಅವರ ಈ ಹಿಂದಿನ ವೇತನ ಹೆಚ್ಚಳಕ್ಕೆ ಸಂಸ್ಥೆಯ ಸಹ ಸ್ಥಾಪಕರಾದ ಎನ್‌.ಆರ್‌. ನಾರಾಯಣಮೂರ್ತಿ ಅವರು ತೀವ್ರ ಆಕ್ಷೇಪ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT