ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ಇರಲಿ

ಅತಿಸಾರ ಭೇದಿ ನಿಯಂತ್ರಣ ಪೂರ್ವಭಾವಿ ಸಭೆಯಲ್ಲಿ ಡಿಎಚ್‌ಒ ಡಾ.ನರಸಿಂಹಲು ಹೇಳಿಕೆ
Last Updated 25 ಮೇ 2017, 7:02 IST
ಅಕ್ಷರ ಗಾತ್ರ

ಯಾದಗಿರಿ: ‘ಅತಿಸಾರ ಭೇದಿ ನಿಯಂತ್ರಣಕ್ಕೆ ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಊಟಕ್ಕೆ ಮೊದಲು ಕೈತೊಳೆಯುವುದು, ಶೌಚದ ನಂತರ ಕೈತೊಳೆಯುವ ಕುರಿತು ಸಾರ್ವಜನಿಕರು ಅತ್ಯಂತ ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನರಸಿಂಹಲು ಎಚ್ಚರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ತೀವ್ರವಾದ ಅತಿಸಾರ ಭೇದಿ ನಿಯಂತ್ರಣ (ಐಡಿಸಿಎಫ್) ಕಾರ್ಯಕ್ರಮದ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಮೇಲ್ವಿಚಾರಕರಿಗಾಗಿ ಕರೆದ
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ತೀವ್ರವಾದ ಭೇದಿಯಿಂದ ಜಿಲ್ಲೆಯಲ್ಲಿ ಶೇ 5ರಷ್ಟು ಮಕ್ಕಳು ಸಾವನ್ನಪ್ಪುತ್ತಿವೆ. ಹಾಗಾಗಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಕಾರ್ಯಕ್ರಮ ಅಧಿಕಾರಿಗಳು ಅಗತ್ಯವಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಎಲ್ಲರೂ ಇದರ ನಿಯಂತ್ರಣಕ್ಕೆ ಶ್ರಮವಹಿಸಬೇಕು’ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

‘ತೀವ್ರವಾದ ಅತಿಸಾರ ಭೇದಿಯಿಂದ ರಾಜ್ಯದಲ್ಲಿ 1.2 ಲಕ್ಷಗಳಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಜೂನ್12ರಿಂದ ಜೂನ್ 24ರ ವರೆಗೆ ಜಿಲ್ಲೆಯಲ್ಲಿಯೂ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೂಡಿ ಮಾಡಬೇಕಿದೆ’ ಎಂದು ತಿಳಿಸಿದರು.

ಆರ್.ಸಿ.ಎಚ್ ಅಧಿಕಾರಿ ಡಾ.ವಿವೇಕಾನಂದ ಟೆಂಗೆ ಮಾತನಾಡಿ, ‘ಸಾರ್ವಜನಿಕರಲ್ಲಿ ಶುದ್ಧ ಕುಡಿಯುವ ನೀರು ಸೇವನೆ, ಊಟಕ್ಕೆ ಮೊದಲು ಕೈತೊಳೆಯುವುದು, ಕಡ್ಡಾಯವಾಗಿ ಶೌಚಾಲಯವನ್ನು ಬಳಸಬೇಕು. ಅದನ್ನು ಬಿಟ್ಟು ಬಯಲಿಗೆ ತೆರಳುವುದರ ಕುರಿತು ಜಾಗೃತಿ ಮೂಡಿಸಬೇಕಿದೆ. ವಿಶೇಷವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೈತೊಳೆದು ಊಟ ಮಾಡುವುದರ ಕುರಿತು ತಿಳಿ ಹೇಳಬೇಕು’ ಎಂದರು.

‘ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಪೋಸ್ಟರ್‌ಗಳನ್ನು ಮುದ್ರಿಸಲಾಗುವುದು. ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕೈಗೊಳ್ಳುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾಗಳನ್ನು ನಡೆಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಸಹಕಾರ ನೀಡಬೇಕು’ ಎಂದರು.

‘ಜಿಲ್ಲೆಯಲ್ಲಿ 1.73ಲಕ್ಷಕ್ಕೂ ಹೆಚ್ಚು 5 ವರ್ಷದೊಳಗಿನ ಮಕ್ಕಳು ಇದ್ದಾರೆ. ಎಲ್ಲಾ ಮಕ್ಕಳಿಗೆ ಓಆರ್‌ಎಸ್ ಪುಡಿ ಸೇವನೆ ಮತ್ತು ಜಿಂಕ್ ಮಾತ್ರೆಗಳ ಸೇವಿಸಲು ಅರಿವು ಮೂಡಿಸಬೇಕು. ಮನೆ- ಮನೆಗೆ ತೆರಳಿ ಓಆರ್‌ಎಸ್ ಪುಡಿ ವಿತರಣೆ ಮಾಡುವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದರು.

ಯುನಿಸೆಫ್ ಆರ್‌ಎಂಎನ್‌ಸಿ ಅಧಿಕಾರಿ ಡಾ.ಮೈಲಾರಪ್ಪ ಮಾತನಾಡಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣ ಮತ್ತು ಮನೋರೋಗ ಅಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಲಕ್ಷ್ಮೀಕಾಂತ ವೇದಿಕೆಯಲ್ಲಿದ್ದರು. ಜಿಲ್ಲೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT