ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಳಕೆಗೆ ನಿವೃತ್ತ ಅಧಿಕಾರಿಗಳ ಮೊರೆ!

ಎಚ್‌ಕೆಆರ್‌ಡಿಬಿ: ₹1 ಸಾವಿರ ಕೋಟಿ ಇದ್ದ ಅನುದಾನ ಈ ವರ್ಷದಿಂದ ₹1,500 ಕೋಟಿಗೆ ಹೆಚ್ಚಳ
Last Updated 25 ಮೇ 2017, 7:06 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಈಗಲೂ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ. ಖಾಲಿ ಇರುವ ಹುದ್ದೆಗಳಿಗೆ ತಾಂತ್ರಿಕ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನೇಮಕಾತಿಗೆ ಸರ್ಕಾರ ಮುಂದಾಗದಿರುವುದು ಒಂದು ಕಾರಣವಾದರೆ, ಆರೋಗ್ಯ ಇಲಾಖೆ ಮೇಲಿಂದ ಮೇಲೆ ನೇರ ನೇಮಕಾತಿಗೆ ಆಹ್ವಾನಿಸಿದರೂ, ಅರ್ಹ ಒಬ್ಬ ಅಭ್ಯರ್ಥಿಗಳ ನಿರಾಸಕ್ತಿ ಮತ್ತೊಂದು ಕಾರಣ ಎನ್ನಬಹುದು.

ಹಾಗಾಗಿ, ಸಿಬ್ಬಂದಿ ಕೊರತೆಯಿಂದಾಗಿ ಇಡೀ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ. ಇದರಿಂದಾಗಿ ಅನುದಾನ ಬಳಕೆಯಾಗದೇ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಸರ್ಕಾರದ ಖಜಾನೆಗೆ ಮರಳಿ ಹೋಗಿರುವ ನಿದರ್ಶನಗಳು ಸಾಕಷ್ಟಿವೆ.

ಇಂಥದ್ದೇ ಸ್ಥಿತಿ ಅನುಭವಿಸಿದ್ದ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಈಗ ಅನುದಾನ ಬಳಕೆ ಮಾಡಲು ನಿವೃತ್ತ ಅಧಿಕಾರಿಗಳ, ಸಿಬ್ಬಂದಿಯ ನೆರವು ಪಡೆಯಲು ಮುಂದಾಗಿದೆ.

ಅನುದಾನ ವಾಪಸ್‌ ಹೋಗುತ್ತದೆ ಎಂಬ ಭಯ ಮಂಡಳಿಗೆ ಇಲ್ಲ. ಏಕೆಂದರೆ ಎಷ್ಟು ವರ್ಷಗಳ ಮಟ್ಟಿಗಾದರೂ ಅನುದಾನ ಮಂಡಳಿ ಖಾತೆಯಲ್ಲಿಯೇ ಉಳಿಯುತ್ತದೆ. ಆದರೆ, ಅನುದಾನ ಇದ್ದರೂ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ ಪದೇ ಪದೇ ಮಂಡಳಿಗೆ ಅಂಟಿಕೊಂಡಿದೆ. ಈ ಆರೋಪದಿಂದ ಮುಕ್ತವಾಗಲು ಅದು ನಿವೃತ್ತ ಅಧಿಕಾರಿಗಳ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ಮುಂದಾಗಿದೆ.

ತಾಂತ್ರಿಕ ಸಲಹೆಗಾರರ ಹುದ್ದೆಗೆ ನಿವೃತ್ತ ಮುಖ್ಯ ಎಂಜಿನಿಯರ್, ಅಧೀಕ್ಷಕರ ಎಂಜಿನಿಯರ್ ಅಥವಾ ಕನಿಷ್ಠ 15 ವರ್ಷ ಅನುಭವವುಳ್ಳ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಿಗೆ, ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕ ಅಥವಾ ಸಹ ಪ್ರಾಧ್ಯಾಪಕರಿಗೆ ₹40 ಸಾವಿರ ಗೌರವಧನ, ಪ್ರೊಜೆಕ್ಟ್ ಅನುಷ್ಠಾನ ಮತ್ತು ಸಮನ್ವಯ ಅಧಿಕಾರಿ ಹುದ್ದೆಗಳಿಗೆ ನಿವೃತ್ತ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ₹ 30 ಸಾವಿರ,

ತಾಂತ್ರಿಕ ಅಧಿಕಾರಿ ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರಿಗೆ ₹ 30 ಸಾವಿರ, ಲೆಕ್ಕ ಅಧೀಕ್ಷಕರ ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕರಿಗೆ ₹ 20 ಸಾವಿರ, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಯಾವುದೇ ಪದವಿ, ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ ಹೊಂದಿರುವರಿಗೆ ₹ 10,376 ಗೌರವಧನ ನೀಡಲು ಎಚ್‌ಕೆಆರ್‌ಡಿಬಿ ಮುಂದಾಗಿದೆ.

‘ಪ್ರತಿವರ್ಷ ₹1 ಸಾವಿರ ಕೋಟಿ ಅನುದಾನ ಪಡೆಯುತ್ತಿದ್ದ ಮಂಡಳಿಗೆ ಸರ್ಕಾರ ₹1,500 ಕೋಟಿ ಅನುದಾನ ಹೆಚ್ಚಳ ವಿಸ್ತರಿಸಿದೆ. ಅಭಿವೃದ್ಧಿ ಯೋಜನೆಗಳ ಕಾಮಗಾರಿಯ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ನೀಡಲೂ ಸಿಬ್ಬಂದಿ ಬೇಕಾಗುತ್ತದೆ. ಆದರೆ, ಈಗಿರುವ ಬೆರಳೆಣಿಕೆಯಷ್ಟು ಸಂಖ್ಯೆಯ ನೌಕರರು ಹಗಲು–ರಾತ್ರಿ ಹೆಚ್ಚುವರಿ ಕಾರ್ಯಭಾರ ಹೊತ್ತಿದ್ದಾರೆ. ಅವರ ಹೆಗಲ ಮೇಲಿನ ಸ್ವಲ್ಪ ಜವಾಬ್ದಾರಿಯನ್ನು ಕಡಿಮೆ ಮಾಡಲು ಮಂಡಳಿ ಮತ್ತೊಂದು ಹೆಜ್ಜೆ ಇಟ್ಟಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ನಿವೃತ್ತರಿಗೆ ಅವಕಾಶ ನೀಡಿ’
ಕೃಷಿ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಹೀಗೆ ನಿವೃತ್ತರಿಗೆ ಅವಕಾಶ ಕೊಡಬೇಕು. ಗೌರವಧನ ನೀಡಿ ನಿವೃತ್ತರನ್ನು ಆಯ್ಕೆ ಮಾಡುವುದರಿಂದ ಇಲಾಖೆಯಲ್ಲಿ ರೈತರ ಬಾಕಿ ಉಳಿದುಕೊಂಡಿರುವ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳುತ್ತಾರೆ.

*
ಜಿಲ್ಲೆ ಹಿಂದುಳಿಯಲು ನೌಕರರ ಕೊರತೆ ಪ್ರಮುಖ ಕಾರಣವಾಗಿದೆ. ಎಚ್‌ಕೆಆರ್‌ಡಿಬಿ ಕಾರ್ಯ ಶ್ಲಾಘನೀಯ. ನಿವೃತ್ತ ಅಧಿಕಾರಿಗಳ ಬಳಕೆ ಉತ್ತಮ ಆಲೋಚನೆ.
-ಭಾಸ್ಕರರಾವ ಮುಡಬೂಳ,
ಹಿರಿಯ ಹೋರಾಟಗಾರ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT