ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಹೋರಾಡಿದವರು ಇಂದು ಮೌನ

ಹೋರಾಟದ ಕಿಡಿ ಹೊತ್ತಿದ್ದು ಕೊಪ್ಪಳದಲ್ಲಿ; ಆದರೂ ತುಂಗಭದ್ರಾ ‘ಹೂಳಿನ ಜಾತ್ರೆ’ಗೆ ಸ್ಪಂದಿಸದ ಜಿಲ್ಲೆಯ ಜನತೆ
Last Updated 25 ಮೇ 2017, 7:19 IST
ಅಕ್ಷರ ಗಾತ್ರ

ಕೊಪ್ಪಳ: ತುಂಗಭದ್ರಾ ಉಳಿಸಿ ಹೋರಾಟ ಆರಂಭವಾದದ್ದು, ಅಣೆಕಟ್ಟೆಯ ಹೂಳು ತೆಗೆಯುವ ಪ್ರಸ್ತಾವ, ಹೋರಾಟದ ಕಿಡಿ ಹೊತ್ತಿದ್ದು ಕೊಪ್ಪಳ ಜಿಲ್ಲೆಯಲ್ಲಿ.

ಅದು ವಿಸ್ತರಿಸಿದ್ದು ರಾಯಚೂರಿಗೆ. ರೈತರೇ ಹೂಳು ತೆಗೆಯುವ ಕಾರ್ಯಾಚರಣೆ ಆರಂಭವಾದದ್ದು ಬಳ್ಳಾರಿಯಲ್ಲಿ. ಕೈಜೋಡಿಸಿದ್ದು ರಾಯಚೂರಿನ ರೈತರು.

ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಜಿಲ್ಲೆಯ ರೈತರು ತಟಸ್ಥರಾಗಿದ್ದಾರೆ. ಹಿನ್ನೀರು ಪ್ರದೇಶದ ನೇರ ಫಲಾನುಭವಿಗಳು, ಹೂಳು ತೆಗೆಯಲು ಒತ್ತಾಯಿಸಿ ನಗರದಲ್ಲಿ ಧರಣಿ, ಪ್ರತಿಭಟನೆ ನಡೆಸಿದವರೆಲ್ಲರೂ ಈಗೇಕೆ ಮೌನವಾಗಿದ್ದಾರೆ? ಎಂಬ ಪ್ರಶ್ನೆ ಜನರನ್ನು ಕಾಡಿದೆ.

ರೈತ ಮುಖಂಡ ಜೆ. ಭಾರಾಧ್ವಜ್‌ ಹೇಳುವ ಪ್ರಕಾರ, ‘ಅಷ್ಟೊಂದು ಪ್ರಮಾಣದ ಹೂಳು ತೆಗೆಯುವುದು ಅಸಾಧ್ಯ. ಹೀಗಾಗಿ ಸರ್ಕಾರವೇ ಕೈಚೆಲ್ಲಿದೆ. ಬಳ್ಳಾರಿಯ ರೈತರ ಕಾಯಕಕ್ಕೆ ನಮ್ಮ ಬೆಂಬಲವಿದೆ. ಶೀಘ್ರವೇ ರೈತರನ್ನೆಲ್ಲಾ ಸಂಘಟಿಸಿ ಕೊಪ್ಪಳ ಭಾಗದಲ್ಲಿ ಹೂಳು ತೆಗೆಯುವ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ‘ಹೂಳಿನ ರೂಪದಲ್ಲಿ ಸಂಗ್ರಹವಾಗಿರುವ ಗರಸು ಮಣ್ಣನ್ನು ಯಾರು ಬೇಕಾದರೂ ತೆಗೆಯಬಹುದು. ಅದನ್ನು ರೈಲ್ವೆ, ರಸ್ತೆ ಕಾಮಗಾರಿಗೆ ಬಳಸಬಹುದು. ಈ ಬಗ್ಗೆ ಸರ್ಕಾರದ ಆದೇಶವೇ ಇದೆ. ಆದರೆ, ಕೊಪ್ಪಳ ಭಾಗದಲ್ಲಿ ಹೂಳು ತೆಗೆಯಲು ಜಿಲ್ಲಾಡಳಿತ ಬಿಡುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸ್ವಲ್ಪ ಸ್ವಲ್ಪವಾದರೂ ಹೂಳು ತೆಗೆದರೆ ಅತ್ತ ನೀರು ಸಂಗ್ರಹವೂ ಆಗುತ್ತದೆ. ಇತ್ತ ಕಾಮಗಾರಿಗಳಿಗಾಗಿ ಹೊಸ ಪ್ರದೇಶಗಳ ಮಣ್ಣು ಅಗೆಯುವುದು ತಪ್ಪುತ್ತದೆ’ ಎಂಬುದು ಹುಲಿಗಿ ಅವರ ನಿಲುವು.

ಬೇಸಾಯ, ನೀರು ಕಳ್ಳರ ಲಾಬಿ ಕಾರಣ: ಹಿನ್ನೀರು ಪ್ರದೇಶದಲ್ಲಿ ಧಾನ್ಯ, ತರಕಾರಿ ಕೃಷಿ ವ್ಯಾಪಕವಾಗಿದೆ. ಹೆಚ್ಚು ಹೂಡಿಕೆ ಮಾಡದೆ ಫಲವತ್ತಾದ ಮಣ್ಣಿನಲ್ಲಿ ಬಿತ್ತಿ ಬೆಳೆಯುವ ಕೆಲಸವಿದು. ಹೂಳಿನ ಜಾತ್ರೆ ಇಲ್ಲಿಯೂ ಆರಂಭವಾದರೆ ತಮ್ಮ ಬೇಸಾಯಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕ ರೈತರದ್ದು.

ಹಿರೇಬಗನಾಳ್‌, ಕಾಸನಕಂಡಿ ಪ್ರದೇಶದಲ್ಲಿ ಹಿನ್ನೀರು ಪ್ರದೇಶದಲ್ಲಿಯೇ ರೈತರ ಬೋರ್‌ವೆಲ್‌ಗಳನ್ನು ಪಡೆದು ಕೈಗಾರಿಕೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಲಾಬಿ ಇದೆ. ಕೆಲವು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಇದರಲ್ಲಿದ್ದಾರೆ. ನೀರು ಕಳ್ಳತನದ ಲಕ್ಷಾಂತರ ರೂಪಾಯಿಯ ವಹಿವಾಟು ಇದು. ಹೂಳಿನ ಜಾತ್ರೆ ನಡೆದರೆ ಈ ವಹಿವಾಟಿಗೂ ಕುತ್ತು ಬರಲಿದೆ ಎಂಬ ಕಳವಳ ಕೆಲವರದು.

ನಾಲ್ಕು ವರ್ಷಗಳ ಹಿಂದಿನ ಯೋಚನೆ: ರೈತರೇ ಹೂಳು ತೆಗೆಯುವ ಚಿಂತನೆ ನಾಲ್ಕು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ನಡೆದಿತ್ತು. ಆದರೆ, ಅದಕ್ಕೆ ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಭಾಗದ ರೈತರು ಕೈಜೋಡಿಸಬೇಕು.

ಆಯಾ ಭಾಗಗಳಲ್ಲಿ ರೈತರು ಕೆಲಸ ಆರಂಭಿಸಿದರೆ ವರ್ಷಕ್ಕೆ ಕನಿಷ್ಠ 1 ಟಿಎಂಸಿ ನೀರಾದರೂ ಹೆಚ್ಚು ಸಂಗ್ರಹಿಸಬಹುದು ಎಂದು ರೈತರು ಲೆಕ್ಕಾಚಾರ ಹಾಕಿದ್ದರು. ಈಗ ಬಳ್ಳಾರಿ ಭಾಗದಲ್ಲಿ ಎಲ್ಲ ರಾಜಕೀಯ ಮುಖಂಡರೂ ಈ ಕೆಲಸಕ್ಕೆ ನೆರವಾಗಿದ್ದಾರೆ.

ಸರ್ಕಾರ ಕೈಜೋಡಿಸಿದರೆ ಪರಿಣಾಮ ಏನು?
*ರೈತರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗಬಹುದು.
*ಜಿಲ್ಲೆಯ ಗಡಿ ಭಾಗಗಳಲ್ಲಿ ಡಂಪಿಂಗ್‌ ಯಾರ್ಡ್‌ ಮಾಡಿ ಅಲ್ಲಿ ಹೂಳು ಹಾಕಿದರೆ ರೈತರಿಗೆ ಒಯ್ಯಲು ಅನುಕೂಲ.
*ಇನ್ನಷ್ಟು ವೈಜ್ಞಾನಿಕವಾಗಿ ಕೆಲಸ ಮಾಡಬಹುದು.
*ಕೈಗಾರಿಕೆಗಳ ಮೂಲಕ ಯಂತ್ರೋಪಕರಣ ನೆರವು ಪಡೆಯಬಹುದು.
*ದೀರ್ಘಕಾಲದ ಯೋಜನೆ ರೂಪಿಸಬಹುದು.
*ಸರ್ಕಾರ ಈ ಯೋಚನೆಯನ್ನೇ ಕೈಬಿಟ್ಟು ನವಲಿ ಬಳಿ ₹ 5 ಸಾವಿರ ಕೋಟಿ ವೆಚ್ಚದಲ್ಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಿದೆ.  

ಹೀಗೂ ಆಗಬಹುದು
*ಕಾಮಗಾರಿ ಮಂದಗತಿಯಲ್ಲಿ ಸಾಗುವ ಸಾಧ್ಯತೆ.
*ಟಿಪ್ಪರ್‌, ಜೆಸಿಬಿ ಲಾಬಿ, ಹೂಳು ಸಾಗಾಟದಲ್ಲಿ ಅವ್ಯವಹಾರ, ಹಣ ಲೂಟಿ.
*ರಾಜಕೀಯ ಮೇಲಾಟದ ವೇದಿಕೆಯಾಗಬಹುದು.

*
ನಮ್ಮ ಭಾಗದಲ್ಲಿ ಹೂಳು ತೆಗೆಯುವ ಬಗ್ಗೆ ಬುಧವಾರ ರೈತ ಮುಖಂಡರ ಜತೆ ಚರ್ಚಿಸಿದ್ದೇನೆ. ಒಂದೆರಡು ದಿನದಲ್ಲಿ ರೈತರ ಸಭೆ ನಡೆಸಿ ಕಾರ್ಯರೂಪಕ್ಕೆ ತರಲಾಗುವುದು.
-ವಿಠ್ಠಪ್ಪ ಗೋರಂಟ್ಲಿ, ತುಂಗಭದ್ರಾ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT