ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ತನಿಖೆಗೆ ನಗರಸಭೆ ಸದಸ್ಯರ ಒತ್ತಾಯ

ಆಸ್ತಿ ತೆರಿಗೆಯಲ್ಲಿ ವಂಚನೆ ಪ್ರಕರಣ * ದೂರು ದಾಖಲಿಸದ ಬಗ್ಗೆ ಆಕ್ಷೇಪ * ಕೂಡಲೇ ಕ್ರಮಕ್ಕೆ ಸಭೆಯಲ್ಲಿ ಆಗ್ರಹ
Last Updated 25 ಮೇ 2017, 8:00 IST
ಅಕ್ಷರ ಗಾತ್ರ

ರಾಮನಗರ: ‘ನಗರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಅನಧಿಕೃತವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ವಂಚಿಸಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು’ ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

ನಗರದ ನಗರಸಭೆಯ ಪ್ರಶಸ್ತಿ ಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಈ ಆಗ್ರಹಪಡಿಸಿದರು. ‘ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸುವ ಬ್ಯಾಂಕ್‌ ಚಲನ್‌ ಮೇಲೆ ಅನಧಿಕೃತವಾಗಿ ಬ್ಯಾಂಕ್‌ ಮೊಹರು, ನಕಲು ಮೊಹರು ಹಾಗೂ ಬ್ಯಾಂಕ್ ಅಧಿಕಾರಿಗಳ ನಕಲು ರುಜುವಿನೊಂದಿಗೆ ಸಾರ್ವಜನಿಕರಿಗೆ ವಂಚಿಸಿರುವ ವ್ಯಕ್ತಿಯ ಬಗ್ಗೆ ಕೂಡಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಪ್ರಕರಣ ನಡೆದು  ಹಲವು ದಿನಗಳಾದರೂ ಇಲ್ಲಿಯವರೆಗೆ ಭ್ರಷ್ಟಾಚಾರ ಎಸಗಿರುವ ವ್ಯಕ್ತಿಯ ವಿರುದ್ಧ ನಗರಸಭೆ ಏಕೆ ದೂರು ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು.

‘ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಯಾರ ಒತ್ತಡಕ್ಕೂ ಮಣಿಯದೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆರೋಪಿ ಬಳಸಿರುವ ನಕಲಿ ಸೀಲ್‌ ಅನ್ನು ಪೊಲೀಸರು ಇಲ್ಲಿಯವರೆಗೂ ಪತ್ತೆ ಹಚ್ಚಿಲ್ಲ. ಅವರ ಮೇಲೂ ಒತ್ತಡವಿರಬಹುದು’ ಎಂದು ಸದಸ್ಯರು ದೂರಿದರು.

‘ನಗರಸಭೆ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಆರೋಪಿಯು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣ ದಿಕ್ಕು ತಪ್ಪುವ ಮುನ್ನ ಉನ್ನತ ತನಿಖೆಗೆ ಆದೇಶಿಸಬೇಕು. ಈ ಪ್ರಕರಣವನ್ನು ಸಭಾ ನಡಾವಳಿಯಲ್ಲಿ ದಾಖಲಿಸಬೇಕು’ ಎಂದರು.

ಸದಸ್ಯ ಪರ್ವೀಜ್‌ ಪಾಷಾ ಮಾತನಾಡಿ ‘ಜೆಡಿಎಸ್ ಸದಸ್ಯರು, ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ, ಕಾಂಗ್ರೆಸ್ ಸದಸ್ಯರು ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೂ ಮಾತನಾಡದೆ ಸುಮ್ಮನಿದ್ದಾರೆ’ ಎಂದರು.

ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ ‘ಆಸ್ತಿ ತೆರಿಗೆ ವಂಚನೆ ಪ್ರಕರಣವನ್ನು ಸದಸ್ಯರು ಹೇಳಿದ ರೀತಿಯಲ್ಲಿಯೇ ತನಿಖೆ ನಡೆಸಲಾಗುವುದು. ಯಾರೇ ಒತ್ತಡ ಹೇರಿದರೂ ನಾವು ಮಣಿಯುವುದಿಲ್ಲ. ಯಾವುದೇ ರೀತಿಯ ತನಿಖೆಗೂ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದರು.

ಸದಸ್ಯ ಆರೀಫ್‌ ಖುರೇಷಿ ಮಾತನಾಡಿ ‘ಮೆಹಬೂಬ್‌ ನಗರದಿಂದ ಕನಕಪುರ ರಸ್ತೆಯವರೆಗೆ ಸಂಪರ್ಕ ರಸ್ತೆಯನ್ನು ಕಲ್ಪಿಸಲು ಕೂಡಲೆ ಯೋಜನೆ ರೂಪಿಸಬೇಕು. ನಗರಸಭೆಯ ಸ್ವತ್ತುಗಳನ್ನು ಸರ್ವೇ ಮಾಡಿಸಬೇಕು. ನಗರಸಭೆಯಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಒತ್ತುವರಿಯಾಗಿದೆ. ಕೂಡಲೇ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

ಸದಸ್ಯ ಎ. ರವಿ ಮಾತನಾಡಿ ‘ಬೆಸ್ಕಾಂಗೆ ಸಂಬಂಧಿಸಿದಂತೆ ಇರುವ ಹೆಲ್ಪ್‌ಲೈನ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 27ನೇ ವಾರ್ಡಿನಲ್ಲಿ ಉದ್ಯಾನದ ಜಾಗವನ್ನು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್‌ ನವರು ಒತ್ತುವರಿ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ದೂರು ದಾಖಲಾಗಿದ್ದರೂ ಏಕೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಪ್ರಶ್ನಿಸಿದರು.

ಸದಸ್ಯ ಡಿ.ಕೆ. ಸುರೇಶ್‌ ಮಾತನಾಡಿ ‘2ನೇ ವಾರ್ಡಿನಲ್ಲಿ ನಗರಸಭೆಗೆ ಸೇರುವ ಜಾಗದಲ್ಲಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ದೂರು ದಾಖಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದರೂ ಕಾಮಗಾರಿ ಅಕ್ರಮವಾಗಿ ನಡೆಯುತ್ತಿದೆ. ಕೂಡಲೆ ಸಭೆಗೆ ಮಾಹಿತಿ ನೀಡಬೇಕು’ ಎಂದು ಧಿಕ್ಕಾರ ಕೂಗಿದರು.

ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ ‘ಸಾಮಾನ್ಯ ಸಭೆ ಮುಗಿದ ನಂತರ ಉತ್ತರ ನೀಡುವುದಾಗಿ ತಿಳಿಸಿದರು. ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ, ಉಪಾಧ್ಯಕ್ಷೆ ಸಮೀನಾತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಸಿತ್‌ ಇತರರು ಇದ್ದರು.

ಸದಸ್ಯರಿಗೆ ಬೆಲೆ ಇಲ್ಲ ; ಆರೋಪ
‘ನಗರಸಭೆಯಲ್ಲಿ ದಲ್ಲಾಳಿಗಳಿಗೆ ಇರುವ ಬೆಲೆ ಸದಸ್ಯರಿಗೆ ಇಲ್ಲ’ ಎಂದು ಸದಸ್ಯ ಅಕ್ರಂ ಷರೀಫ್‌ ಆರೋಪಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಬರುವ ಜೆಡಿಎಸ್ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಅನುದಾನ ನೀಡುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ.

ಜನರ ಕೆಲಸಗಳನ್ನು ಮಾಡಲು ಸದಸ್ಯರ ಮೂಲಕ ಬಂದರೆ ಕೆಲಸವಾಗುವುದಿಲ್ಲ, ಬದಲಿಗೆ ದಲ್ಲಾಳಿಗಳ ಮೂಲಕ ಹೋದರೆ ತಕ್ಷಣದಲ್ಲಿಯೇ ಕೆಲಸವಾಗುತ್ತಿದೆ. ನಮ್ಮ ವಾರ್ಡಿನ ವ್ಯಕ್ತಿಯೊಬ್ಬರೂ ₹30 ಸಾವಿರ ಲಂಚ ಕೊಟ್ಟು ಕೆಲಸ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದರು.

ಸದಸ್ಯ ಆರ್.ಎ. ಮಂಜುನಾಥ್‌ ಮಾತನಾಡಿ ‘ಅಧಿಕಾರಿಗಳು ಸಭೆಗೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೌರಾಯುಕ್ತರೇ ಬೆಳಿಗ್ಗೆ ಎದ್ದು ಬಂದು ಉದ್ಯಾನಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿದ್ದಾರೆ. ಕೂಡಲೆ ನಗರ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದರು.

*
ಸದಸ್ಯರು ಸೂಚಿಸಿದ ರೀತಿಯಲ್ಲಿಯೇ ಪ್ರಕರಣದ ತನಿಖೆಗೆ ಸಿದ್ಧರಿದ್ದೇವೆ, ತನಿಖಾಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
-ಪಿ. ರವಿಕುಮಾರ್, ಅಧ್ಯಕ್ಷ, ರಾಮನಗರ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT