ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಬೀಸಿ ಕರೆಯುತ್ತಿದೆ ಅರಣ್ಯ ಇಲಾಖೆಯ ಉದ್ಯಾನ

ಸಿದ್ದಾಪುರ ಕುಮಟಾ ವ್ಯಾಪ್ತಿಯಲ್ಲಿ ಹಸಿರಿನ ನಡುವೆ ಮನಸು ಹಗುರ, ಮಕ್ಕಳ ಆಟಕ್ಕೂ ಸ್ಥಳ
Last Updated 25 ಮೇ 2017, 9:50 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ಕುಮಟಾ ರಸ್ತೆಯ ಪಕ್ಕದಲ್ಲಿ, ಶಂಕರ ಮಠದ ಸಮೀಪ ದಲ್ಲಿರುವ ಅರಣ್ಯ ಇಲಾಖೆಯ ‘ ಟ್ರೀ ಪಾರ್ಕ್‌’ ಎಂಬ ಹೆಸರಿನ ಉದ್ಯಾನವನ  ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ. ಮರಗಳ ನಡುವೆ ಕೆಲಕಾಲ ಕುಳಿತು ಮನಸ್ಸಿನ ಬೇಸರ ದೂರ ಮಾಡಿ ಕೊಳ್ಳಬಹುದಾದ ಅಗತ್ಯ ವಾತಾವರಣ ಇಲ್ಲಿದೆ.

1999ರಲ್ಲಿ ಅಂದಿನ ಅರಣ್ಯ ಸಚಿವ ಡಿ.ಮಂಜುನಾಥ ಅವರಿಂದ ಉದ್ಘಾಟನೆಗೊಂಡ ಈ ಉದ್ಯಾನವನ, 27 ಹೆಕ್ಟೇರ್ ಪ್ರದೇಶದಲ್ಲಿದೆ. ಹೊಸೂರು ಮತ್ತು ತ್ಯಾರ್ಸಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಈ ಉದ್ಯಾನವನದಲ್ಲಿ ಮಕ್ಕಳಿಗಾಗಿ ಜಾರು ಬಂಡಿ, ಜೋಕಾಲಿ ಮತ್ತಿತರ ಆಟಗಳ ಸೌಲಭ್ಯ ಕಲ್ಪಿಸಲಾಗಿದೆ. ಪರಿಸರ ಪ್ರಿಯರು ಕುಳಿತುಕೊಳ್ಳಲು ಬೆಂಚ್‌ಗಳಿವೆ. ಓಡಾಡಲು ದಾರಿಗಳನ್ನು ನಿರ್ಮಿಸಲಾಗಿದೆ.

ಈ ಉದ್ಯಾನವನದ ಗುಡ್ಡದ ನೆತ್ತಿಯ ಮೇಲೆ ಒಂದು ಅರಣ್ಯ ವಿಜ್ಞಾನ ಕೇಂದ್ರದ ಹೆಸರಿನ ಕಟ್ಟಡ ಮತ್ತು ಮತ್ತೊಂದು ಅರಣ್ಯ ಇಲಾಖೆಯ ಪ್ರವಾಸಿ ಗೃಹವಿದೆ. ಉದ್ಯಾನವನದಲ್ಲಿ ಅಲ್ಲಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸುವ ಫಲಕಗಳಿವೆ. ಕಸದ ತೊಟ್ಟಿಗಳಿವೆ. 

ಉದ್ಯಾನವನಕ್ಕೆ ಪ್ರವೇಶ ಮಾಡುವ ಸ್ಥಳದಲ್ಲಿ ಉದ್ಯಾನವನಕ್ಕೆ ಭೇಟಿ ನೀಡುವವರ ಹೆಸರು ವಿಳಾಸಗಳನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತು ಈ ಉದ್ಯಾನವನದಲ್ಲಿ ಸಂರಕ್ಷಿಸಲಾಗಿರುವ 222 ಸಸ್ಯ ಪ್ರಭೇದಗಳ ಫಲಕವನ್ನೂ ಈ ವನದಲ್ಲಿ ಇಡಲಾಗಿದೆ. ಈ ಉದ್ಯಾನವನದಲ್ಲಿ ಔಷಧೀಯ ಗುಣವಿರುವ ಗಿಡಗಳೂ ಇವೆ. ಅತ್ಯಂತ ಅಪರೂಪದ ಕೆಂಪು ನೆರಳೆಯಂತಹ ಮರವನ್ನು ಸಂರಕ್ಷಿಸಲಾಗಿದೆ. 

‘ಈ ಪಾರ್ಕ್‌ನಲ್ಲಿ  ಔಷಧಕ್ಕೆ ಉಪಯೋಗವಾಗುವ ಗಿಡಗಳನ್ನು ಬೆಳೆಸಲಾಗಿತ್ತು. ಅವುಗಳಲ್ಲಿ 7–8 ಜಾತಿಯ ಗಿಡಗಳು ಸತ್ತಿವೆ. ಅಂತಹ ಕೆಲವು ಔಷಧ ಗಿಡಗಳನ್ನು ಉಳಿಸುವುದು ಕಷ್ಟವಾಗುತ್ತಿದೆ’ ಎಂದು ಸಿದ್ದಾಪುರದ ವಲಯ ಅರಣ್ಯಾಧಿಕಾರಿ ಲೋಕೇಶ ಪಾಟಣಕರ್ ಹೇಳಿದರು.

‘ಇಲ್ಲಿಗೆ ದಿನ ನಿತ್ಯ ಸುಮಾರು ಐವತ್ತಕ್ಕೂ ಹೆಚ್ಚು ಜನ ಇಲ್ಲಿ ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಿ ಸಾಕಷ್ಟು ಹೆಚ್ಚು ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ’ಎಂದು ಕಾವಲುಗಾರ ಕೃಷ್ಣ ತಿಳಿಸಿದರು.

2012 ನಂತರ ಈ ಪಾರ್ಕ್‌ನ ಅಭಿವೃದ್ಧಿಗೆ ಹೆಚ್ಚಿನ ಚಾಲನೆ ದೊರೆತಿದೆ. ಇದರ ನಿರ್ವಹಣೆಗಾಗಿ ಮೂವರು ಕಾವಲುಗಾರರನ್ನು ನೇಮಿಸಲಾಗಿದೆ. ಅಭಿವೃದ್ಧಿಯ ನಂತರ ಉದ್ಯಾನವನ ಸ್ಥಳೀಯರನ್ನು ಆಕರ್ಷಿಸುತ್ತಿದೆ. ಆದರೆ ಊರಿನ ಹೊರಗೆ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಸ್ವಲ್ಪ ಕಡಿಮೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆಯ ಅಧಿಕಾರಿಗಳದ್ದು.

ಈ ಉದ್ಯಾನವನಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ಮಾಡಬೇಕಾಗಿದೆ. ಆ ಸಮಿತಿ ರಚಿಸಿದ ನಂತರ ಅರಣ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ  ಪ್ರದರ್ಶನದ ವ್ಯವಸ್ಥೆ ಮಾಡಬೇಕು. ಅದನ್ನು ನೋಡುವವರಿಗೆ ಸಣ್ಣ ಮೊತ್ತದ ಶುಲ್ಕ ಇಟ್ಟರೇ ಉತ್ತಮ ಎಂಬ ಚಿಂತನೆ ಕೂಡ ಅರಣ್ಯ ಇಲಾಖೆಯಲ್ಲಿದೆ.
-ರವೀಂದ್ರ ಭಟ್‌ ಬಳಗುಳಿ

ನೀರಿನ ಸಮಸ್ಯೆ
ಈ ಉದ್ಯಾನವನಕ್ಕೆ ನೀರಿನ ಕೊರತೆಯೇ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಇಲ್ಲಿ ಒಂದು ಕೃತಕ ಕೊಳ ನಿರ್ಮಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಆ ಕೊಳಕ್ಕೆ  ನೀರಿಲ್ಲವಾಗಿದೆ. ಇದಕ್ಕೆ ನೀರಿನ ವ್ಯವಸ್ಥೆ ಮಾಡಲು ತೆಗೆದ ಒಂದು ಕೊಳವೆಬಾವಿ ವಿಫಲವಾಗಿದೆ.

ಈಗ ಹಳ್ಳದ ಸಮೀಪ ಇರುವ ಮತ್ತೊಂದು ಕೊಳವೆಬಾವಿ ಮತ್ತು  ಬಾವಿಯೊಂದರಿಂದ ನೀರು ಪಡೆಯಲಾಗುತ್ತಿದೆ. ಎರಡು ಟ್ಯಾಂಕ್ ಹಾಕಲಾಗಿದ್ದರೂ ಒಂದು ಟ್ಯಾಂಕ್‌ ತುಂಬುವುದಕ್ಕೆ ಮಾತ್ರ ನೀರು ಸಾಕಾಗುತ್ತದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

*
ಈ ಉದ್ಯಾನವನವನ್ನು ಇನ್ನಷ್ಟು ಅಭಿವೃದ್ಧಿ ಮಾಡ ಬೇಕಾಗಿದೆ. ಇಲ್ಲಿರುವ  ವನ ವಿಜ್ಞಾನ ಕೇಂದ್ರದ ಕಟ್ಟಡದಲ್ಲಿ  ಬಟರ್ ಫ್ಲೈ ಪಾರ್ಕ್ ಮಾಡುವ  ಯೋಚನೆ ಇದೆ.
-ಲೋಕೇಶ ಪಾಟಣಕರ್,
ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT